samachara
www.samachara.com
ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್‌- ಜೆಡಿಎಸ್‌ ಶಾಸಕರ ಪ್ರತಿಭಟನೆ
ಸುದ್ದಿ ಸಾರ

ಯಡಿಯೂರಪ್ಪ ಸಿಎಂ ಕಚೇರಿ ಪ್ರವೇಶ; ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್‌- ಜೆಡಿಎಸ್‌ ಪ್ರತಿಭಟನೆ

ಕರ್ನಾಟಕದ ರಾಜ್ಯ ರಾಜಕಾರಣ ಎಲ್ಲಾ ನಿರೀಕ್ಷೆಗಳನ್ನು ಮೀರಿ ಸಾಗುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತುಗಳು ತೇಲುತ್ತಿದ್ದ ಬೆನ್ನಲ್ಲೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚುನಾವಣಾ ಫಲಿತಾಂಶ ಬಳಿಕ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಗುರುವಾರ ಬೆಳಿಗ್ಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸೌಧದ ಮುಖ್ಯಮಂತ್ರಿ ಕೊಠಡಿ ಪ್ರವೇಶಿಸಿದ್ದಾರೆ. ಅತ್ತ ಯಡಿಯೂರಪ್ಪ ಸಿಎಂ ಕುರ್ಚಿಯಲ್ಲಿ ಕೂರುತ್ತಿದ್ದರೆ, ಇತ್ತ ವಿಧಾನಸೌಧದ ಆವರಣದಲ್ಲೇ ಇರುವ ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.

ದೇಶದೆಲ್ಲೆಡೆ ಕುತೂಹಲ ಮೂಡಿಸಿ, ಪ್ರತಿಷ್ಟೆಯ ಕಣವಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಯಾವ ಪಕ್ಷಕ್ಕೂ ಕೂಡ ಅಧಿಕೃತವಾಗಿ ಸರಕಾರ ರಚಿಸುವ ಬಹುಮತ ನೀಡಿಲ್ಲ. ಆದರೆ ಪ್ರತಿಷ್ಠೆಯನ್ನು ಬಿಟ್ಟುಕೊಡಲು ಸಿದ್ಧವಿಲ್ಲದ ಪಕ್ಷಗಳು ಹೇಗಾದರೂ ಮಾಡಿ ಸರಕಾರವನ್ನು ರಚಿಸುವ ಜಿದ್ದಾಜಿದ್ದಿಗೆ ಬಿದ್ದಿದ್ದವು. ಏನದರೂ ಸರಿ ಸರಕಾರವನ್ನು ರಚಿಸಿಯೇ ತೀರಬೇಕು ಎಂದು ಬಿಜೆಪಿ ಪಕ್ಷ ಕೂತಿತ್ತು. ನಮಗೆ ಅಧಿಕಾರವಿಲ್ಲದಿದ್ದರೂ ಪರವಾಗಿಲ್ಲ, ಬಿಜೆಪಿ ಅಧಿಕಾರಕ್ಕೇರಬಾರದು ಎಂಬ ಪ್ರತಿಜ್ಞೆಯನ್ನು ಕಾಂಗ್ರೆಸ್‌ ಪಕ್ಷ ತೊಟ್ಟಿತ್ತು. ಈ ಎರಡೂ ಪಕ್ಷಗಳ ಮಧ್ಯೆ ಅಧಿಕಾರಕ್ಕೆ ಏರುವ ಕನಸನ್ನು ಜೆಡಿಎಸ್‌ ಕಾಣುತ್ತಿತ್ತು.

ಆದರೆ, ಕಾಂಗ್ರೆಸ್‌- ಜೆಡಿಎಸ್‌ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿರುವ ರಾಜ್ಯಪಾಲ ವಜೂಭಾಯ್ ವಾಲ ತಮ್ಮ ‘ವಿವೇಚನಾಧಿಕಾರ’ ಬಳಸಿ ಬಿಜೆಪಿ ಪಕ್ಷದ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನೇನು ಅಧಿಕಾರ ಕೈತಪ್ಪಿತು ಎಂದುಕೊಂಡಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಗುರುವಾರ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ದೊಡ್ಡದಾಗಿ ನೆರವೇರಬೇಕಿದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಚಿಕ್ಕದಾಗಿ ರಾಜಭವನದಲ್ಲಿಯೇ ನೆರವೇರಿದೆ.

“ಮೇ 17ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದಿದ್ದ ಯಡಿಯೂರಪ್ಪ ತಮ್ಮ ಮಾತನ್ನು ಒಂದರ್ಥದಲ್ಲಿ ನಿಜವಾಗಿಸಿದ್ದಾರೆ. ಆದರೆ, ವಿಶ್ವಾಸಮತ ಯಾಚನೆಯ ಭವಿಷ್ಯ ಏನಾಗಲಿದೆಯೋ ಎಂಬ ಆತಂಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಖುಷಿಯನ್ನು ಮರೆಮಾಚಿಸಿದೆ.

ಅಧಿಕಾರಕ್ಕೇರಿದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದ ಯಡಿಯೂರಪ್ಪ 24 ಗಂಟೆಯೊಳಗೆ ಅದು ಸಾಧ್ಯವಿಲ್ಲ ಎಂಬುದನ್ನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದಾರೆ. ಒಂದೆಡೆ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸುತ್ತಿದ್ದರೆ, ಇನ್ನೊಂದೆಡೆ ವಿಧಾನಸೌಧದ ಆವರಣದಲ್ಲೇ ಇರುವ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಶಾಸಕರು, ಮುಖಂಡರು ಪ್ರತಿಭಟನೆ ನಡೆಸಿದರು.

ಕಾಂಗ್ರಸ್‌ನ ಗುಲಾಂ ನಭಿ ಆಜಾದ್, ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಆಪರೇಷನ್‌ ಕಮಲದ ಕಪಿಮುಷ್ಟಿಯೊಳಗೆ ತಮ್ಮ ಶಾಸಕರು ಸಿಲುಕುವುದನ್ನು ತಡೆಗಟ್ಟುವ ಸಲುವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತಮ್ಮ ಶಾಸಕರನ್ನು ರೆಸಾರ್ಟ್‌ಗಳಿಗೆ ಕಳುಹಿಸಿದ್ದವು. ಕೆಲವೇ ದಿನಗಳಲ್ಲಿ ಸರಕಾರ ರಚಿಸುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳು ಇದ್ದವು. ಆದರೆ, ಎರಡೂ ಪಕ್ಷಗಳ ನಿರೀಕ್ಷೆಗೆ ಹೊಸ ರಾಜಕೀಯ ಬೆಳವಣಿಗೆ ತಾತ್ಕಾಲಿಕ ನಿರಾಸೆ ಮೂಡಿಸಿದೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಎರಡೂ ಪಕ್ಷಗಳು ಹೋಟೆಲ್‌, ರೆಸಾರ್ಟ್‌ಗಳಲ್ಲಿದ್ದ ತಮ್ಮ ಶಾಸಕರನ್ನು ಹಿಂದಕ್ಕೆ ಕರೆಸಿಕೊಂಡು ಪ್ರತಿಭಟನೆ ಮುಗಿದ ಬಳಿಕ ಮತ್ತೆ ರೆಸಾರ್ಟ್‌, ಹೋಟೆಲ್‌ಗಳಿಗೆ ಕಳಿಸಿವೆ.

ಎಲ್ಲಾ ನಿರೀಕ್ಷೆ, ಸಮೀಕ್ಷೆಗಳನ್ನು ಸುಳ್ಳಾಗಿಸಿ ಸಾಗುತ್ತಿರುವ ಸರಕಾರ ರಚನೆ ಕಾರ್ಯ ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ. ಕೆಲ ಪ್ರಗತಿಪರ ಸಂಘಟನೆಗಳೂ ಕೂಡ ಮಧ್ಯಾಹ್ನದ ವೇಳೆಗೆ ‘ರಾಜಭವನ ಚಲೋ’ ಹೆಸರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜ್ಯ ರಾಜಕಾರಣ ಯಾವ ಹಾದಿ ತುಳಿಯುವುದೋ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.