ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ: ಸಿದ್ದರಾಮಯ್ಯ 
ಸುದ್ದಿ ಸಾರ

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ: ಸಿದ್ದರಾಮಯ್ಯ 

ಕಾಂಗ್ರೆಸ್‌ನ 78 ಶಾಸಕರ ಬೆಂಬಲ ಜೆಡಿಎಸ್‌ಗಿದೆ ಎಂದಿರುವ ಸಿದ್ಧರಾಮಯ್ಯ, ಕುಮಾರಸ್ವಾಮಿ ಸರಕಾರ ರಚಿಸಲಿದ್ದಾರೆ ಎಂದಿದ್ದಾರೆ. ಈ ಮೂಲಕ ಸಮ್ಮಿಶ್ರ ಸರಕಾರಕ್ಕೆ ಕೈ ಸಮ್ಮತಿ ಇದೆ ಎಂದಿದ್ದಾರೆ. 

ರಾಜ್ಯದ ಚುನಾವಣೆ ನಡೆದು ಅಂತಂತ್ರ ಫಲಿತಾಂಶ ಹೊರಬಂದಿರುವ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ ಪಕ್ಷಗಳು ಜಂಟಿ ಸುದ್ದಿಗೋಷ್ಠಿ ನಡೆಸಿವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದಿದ್ದ ಸಿದ್ಧರಾಮಯ್ಯ, ಈಗ ತಾವೇ ಖುದ್ದಾಗಿ ಜೆಡಿಎಸ್‌ ಜತೆಗಿನ ಮೈತ್ರಿ ಮಾಡಿಕೊಂಡು, ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ.

ರಾಜ್ಯ ಚುನಾವಣೆ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಭಾರತೀಯ ಜನತಾ ಪಾರ್ಟಿಗಳ ನಡುವಿನ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿತ್ತು. ಇಡೀ ದೇಶದ ಕಣ್ಣು ರಾಜ್ಯದ ಮೇಲೆ ಬಿದ್ದಿತ್ತು.

ಎರಡು ಪಕ್ಷಗಳ ಗುದ್ದಾಟದ ನಡುವೆ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳವನ್ನು ಗಮನಿಸುವವರೇ ಇಲ್ಲದಂತಾಗಿತ್ತು. ಮೋದಿ ತಮ್ಮ ಪ್ರಚಾರ ಭಾಷಣದ ನಡುವೆ ದೇವೇಗೌಡರನ್ನು ಹೊಗಳಿ ಜೆಡಿಎಸ್‌ಅನ್ನು ಮುನ್ನಲೆಗೆ ತಂದಿದ್ದರಾದರೂ, ನಂತರದಲ್ಲಿ ಮೋದಿಯೇ ಜೆಡಿಎಸ್‌ಗೆ ಮತ ಹಾಕಬೇಡಿ ಎಂದು ಹೇಳಿ ಮತ್ತೆ ಹಿಂದಕ್ಕೆ ಸರಿಸಿದ್ದರು. ಕಾಂಗ್ರೆಸ್‌ ಕೂಡ ಜೆಡಿಎಸ್‌ ಪಕ್ಷವನ್ನು ಮುಖ್ಯವಾಗಿ ಪರಿಗಣಿಸಿರಲಿಲ್ಲ.

ಮಂಗಳವಾರ ಬಹಿರಂಗಗೊಂಡ ಚುನಾವಣಾ ಫಲಿತಾಂಶ ಇಡೀ ರಾಜ್ಯದಲ್ಲಿದ್ದ ರಾಜಕಾರಣವನ್ನೇ ಬದಲಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳು ಸರಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತವನ್ನು ಗಳಿಸಲಾಗದೇ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಹಿಂದೆ ಬಿದ್ದಿವೆ. ಬಿಜೆಪಿಯ ಕೈಗೆ ಸಿಗದಿರುವ ಜೆಡಿಎಸ್‌ ಈಗ ಕಾಂಗ್ರೆಸ್‌ ಜತೆಗಿನ ಮೈತ್ರಿಗೆ ಮನಸು ಮಾಡಿದೆ. ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್‌ನ ಸಿದ್ಧರಾಮಯ್ಯ ಹಾಗೂ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ರಾಜಭವನದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿರುವ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಸಮಿತಿ ಜೆಡಿಎಸ್‌ಗೆ ಬೆಂಬಲವನ್ನುನ ನೀಡಿ, ಸರಕಾರ ರಚನೆಗೆ ಮುಂದಾಗಲು ತೀರ್ಮಾನಿಸಿದೆ ಎಂದಿದ್ದಾರೆ.

“ಪಕ್ಷದ ಈ ತೀರ್ಮಾನವನ್ನು ಇದೀಗ ಪತ್ರದ ಮೂಲಕ ರಾಜ್ಯಪಾಲರಿಗೆ ತಿಳಿಸಿದ್ದು, ಜೆಡಿಎಸ್‌ನ ವರಿಷ್ಠರಾದ ದೇವೇಗೌಡರಿಗೂ ಪತ್ರದ ಮೂಲಕ ಈ ವಿಷಯವನ್ನು ತಿಳಿಸಿಲಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಗುಲಾಂ ನಬೀ ಆಜಾದ್‌, ಡಿ.ಕೆ.ಶಿವಕುಮಾರ್‌ ಸೇರಿದಂತೆ ಇನ್ನಿತರರ ನಿಯೋಗದಿಂದ ರಾಜ್ಯಪಾಲರಿಗೆ ಪತ್ರ ಸಲ್ಲಿಸಲಾಗಿದೆ. ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲವು ಜೆಡಿಎಸ್‌ ನಾಯಕರ ನಿಯೋಗವೂ ಕೂಡ ರಾಜ್ಯಪಾಲರನ್ನು ಭೇಟಿಯಾಗಿ ವಿಷಯವನ್ನು ತಿಳಿಸಿದೆ,” ಎಂದು ಸಿದ್ಧರಾಮಯ್ಯ ಪತ್ರಕರ್ತರಿಗೆ ತಿಳಿಸಿದ್ದಾರೆ.

ಮುಂದುವರಿದು, ಕಾಂಗ್ರೆಸ್‌ನ 78 ಶಾಸಕರ ಬೆಂಬಲ ಜೆಡಿಎಸ್‌ಗಿದೆ ಎಂದಿರುವ ಸಿದ್ಧರಾಮಯ್ಯ 2 ಪಕ್ಷೇತರ ಅಭ್ಯರ್ಥಿಗಳ ಬೆಂಬಲವನ್ನೂ ಕೂಡ ಪಡೆದು ಕುಮಾರಸ್ವಾಮಿ ಅಧಿಕಾರ ರಚಿಸಲಿದ್ದಾರೆ ಎಂದಿದ್ದಾರೆ. ಈಗ ರಚಿಸಲಿರುವ ಸರಕಾರ ಸಂಪೂರ್ಣವಾಗಿ ಜೆಡಿಎಸ್‌ ಪಕ್ಷದ್ದೇ ಎಂದು ಕೂಡ ತಿಳಿಸಿದ್ದಾರೆ.

ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆ, ಅಷ್ಟೇ ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡಿದೆ. ಚುನಾವಣೆಯ ಆರಂಭದಿಂದ ಮತದಾನ ಮುಗಿಯುವವರೆಗಿನ ಹಲವಾರು ಸಮೀಕ್ಷೆಗಳನ್ನು ತಿರುವುಮುರುವಾಗಿಸಿರುವ ಕರ್ನಾಟಕ ಫಲಿತಾಂಶ ಸರಕಾರ ರಚಿಸುವ ಖಚಿತತೆಯಲ್ಲಿದ್ದ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.