samachara
www.samachara.com
ಧೂಳು ಮಿಶ್ರಿತ ಬಿರುಗಾಳಿ ಮತ್ತು ಮಳೆ; ಮುಂದುವರಿದ ಉತ್ತರ ಭಾರತದ ತತ್ತರ
ಸುದ್ದಿ ಸಾರ

ಧೂಳು ಮಿಶ್ರಿತ ಬಿರುಗಾಳಿ ಮತ್ತು ಮಳೆ; ಮುಂದುವರಿದ ಉತ್ತರ ಭಾರತದ ತತ್ತರ

ಧೂಳು ಮಿಶ್ರಿತ ಗಾಳಿ ಮಳೆಯಿಂದಾಗಿ ಈಗಾಗಲೇ 53ಕ್ಕೂ ಹೆಚ್ಚು ಜನರು ತಮ್ಮ ಪ್ರಾಣಗಳನ್ನು ಕಳೆದು ಕೊಂಡಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 150 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಸಾವು ನೋವುಗಳಿಗೆ ಕಾರಣವಾಗುತ್ತಿದೆ. 

ಉತ್ತರ ಭಾರತದಲ್ಲಿ ಭಾರಿ ವೇಗದ ಗಾಳಿ, ಧೂಳು ಮಳೆಯಿಂದಾಗಿ ಈಗಾಗಲೇ 53ಕ್ಕೂ ಹೆಚ್ಚು ಜನರು ತಮ್ಮ ಪ್ರಾಣಗಳನ್ನು ಕಳೆದು ಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ನಷ್ಟವಾಗಿವೆ. ಅಂದಾಜಿನ ಪ್ರಕಾರ ಸುಮಾರು 150 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ ಜನರ ಸಾವು ನೋವುಗಳಿಗೆ ಕಾರಣವಾಗುತ್ತಿದೆ.

ಗಾಳಿಯಿಂದಾಗಿ ಇದುವರೆಗೆ ಉತ್ತರ ಪ್ರದೇಶವೊಂದರಲ್ಲೇ 39 ಜನರು ಸಾವಿಗೀಡಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ 9 ಜನ , ಪಶ್ಚಿಮ ಬಂಗಾಳದಲ್ಲಿ 4, ದೆಹಲಿಯಲ್ಲಿ 1 ವ್ಯಕ್ತಿ ದೂಳು ಮಿಶ್ರಿತ ಬಿರುಗಾಳಿಯಿಂದಾಗಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಜನರು ಅಂದರೆ 53 ಜನರು ಗಾಯಗೊಂಡಿದ್ದರೆ, ದೆಹಲಿಯಲ್ಲಿ 11 ಜನರು ಗಾಯಗೊಂಡಿದ್ದಾರೆಂದು ಪತ್ರಿಕಾ ವರದಿಗಳು ತಿಳಿಸುತ್ತವೆ.

ಉತ್ತರ ಭಾರತದ ದೆಹಲಿ, ಉತ್ತರ ಪ್ರದೇಶ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳು ಕಳೆದ ಕೆಲವು ದಿನಗಳಿಂದ ಭೀಕರ ಬಿರುಗಾಳಿಗೆ ತುತ್ತಾಗಿವೆ. ಬಿರುಗಾಳಿಯೊಟ್ಟಿಗೆ ಧೂಳು ಸಹ ಜನರನ್ನು ಕಂಗೆಡಿಸಿದೆ. ಜೊತೆಗೆ ಮಳೆ ಕೂಡ ಸೇರಿಕೊಂಡಿದೆ. ಭಾರಿ ಸಿಡಿಲು ಗುಡುಗುಗಳು ಸೇರಿಕೊಂಡು ಲಕ್ಷಾಂತರ ಜನರ ಜೀವನ ಆಪತ್ತಿಗೀಡಾಗಿವೆ.

ಭಾನುವಾರದಂದು ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆಯಾಗಿದೆ. ಇದರಿಂದಾಗಿ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ದೆಹಲಿ ಮೆಟ್ರೋಗಳು ತಮ್ಮ ಕಾರ್ಯವನ್ನು ನಿಲ್ಲಿಸಿವೆ. ಹವಾಮಾನ ಇಲಾಖೆ ಬಿರುಗಾಳಿಯಿಂದ ಕೂಡಿದ ಮಳೆ ಸಾಧ್ಯತೆಗಳ ಬಗ್ಗೆ ಮುನ್ನೆಚ್ಚರಿಕೆ ಕೊಟ್ಟಿತ್ತಾದರೂ ಆಡಳಿತ ವ್ಯವಸ್ಥೆಯಿಂದ ಈ ಮಟ್ಟದ ಜೀವಹಾನಿಗಳನ್ನು ತಡೆಯುವ ಕಾರ್ಯ ಸರಿಯಾಗಿ ನಡೆದಿಲ್ಲವೆಂದೇ ಹೇಳಬೇಕು.

ಮಳೆ ಮತ್ತು ಬಿರುಗಾಳಿಯ ಪರಿಣಾಮವಾಗಿ ಹಿಮಾಚಲ ಪ್ರದೇಶ, ಉತ್ತರ ಖಂಡ್, ಪಂಜಾಬ್, ಜಾರ್ಖಂಡ್, ಚಂಡಿಗಡ್, ಮಧ್ಯಪ್ರದೇಶ, ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡುಗಳ ಬೇರೆ ಬೇರೆ ಕಡೆಗಳಲ್ಲಿ ಚದುರಿದಂತೆ ಮಿಂಚು ಗುಡುಗುಗಳಿಂದ ಕೂಡಿದ ಮಳೆಯಾಗಿರುವುದಾಗಿ ಭಾರತದ ಹವಾಮಾನ ಇಲಾಖೆ ಹೇಳಿದೆ.

ಹಲವು ರಾಜ್ಯಗಳಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಹಲವಾರು ರಾಜ್ಯಗಳಲ್ಲಿ ಬಸ್ಸು, ರೈಲು, ಹಾಗೂ ವಾಯು ಸಂಚಾರ ಗಂಭೀರವಾಗಿ ಅಸ್ತವ್ಯಸ್ತಗೊಂಡು ಜನ ಪರದಾಡುವಂತಾಗಿದೆ. ಅವರಿಗೆ ಯಾವ ರೀತಿಯಲ್ಲಿ ಪರ್ಯಾಯ ಕಲ್ಪಿಸಲಾಗಿದೆ ಎಂಬ ಬಗ್ಗೆ ವಿವರಗಳಿಲ್ಲ. ಹಲವರು ವಿಮಾನ, ರೇಲ್ವೇ, ಬಸ್ ನಿಲ್ದಾಣಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನೂ ಎರಡು ದಿನಗಳು ಇದೇ ರೀತಿಯ ಬಿರುಗಾಳಿ ಮಳೆ ಬರುವ ಸಾಧ್ಯತೆಗಳಿವೆಯೆಂದು ಹವಾಮಾನ ಇಲಾಖೆ ಹೇಳಿದೆ.

ಭಾರತದಲ್ಲಿ ಇಂತಹದ್ದೊಂದು ಧೂಳಿನ ಬಿರುಗಾಳಿ ಅಪರೂಪವಾದದ್ದು. ಹಿಂದೆಯೂ ಕೂಡ ಹಲವಾರಿ ಬಾರಿ ಭಾರತದಲ್ಲಿ ಬಿರುಗಳಾಗಳು ಉಂಟಾಗಿದ್ದವು. ಆದರೆ ಇಷ್ಟು ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿರಲಿಲ್ಲ. ಈಗ ಬೀಸುತ್ತಿರುವ ಬೀಕರ ಬಿರುಗಾಳಿ ಇಡೀ ದೇಶವನ್ನು ಭಯದೊಳಗೆ ನೂಕಿದೆ.