ನಾಲ್ವರ ಬಲಿ ಪಡೆದ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣೆ
ಸುದ್ದಿ ಸಾರ

ನಾಲ್ವರ ಬಲಿ ಪಡೆದ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣೆ

ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದಾನ ಅಷ್ಟೇ ಅಲ್ಲದೇ ಬಲಿದಾನವನ್ನೂ ಪಡೆದುಕೊಂಡಿದೆ. ನಡೆಯುತ್ತಿರುವ ಗಲಭೆಯಲ್ಲಿ 4 ಜನ ಮೃತಪಟ್ಟಿದ್ದು ಹಲವಾರು ಜನ ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸೋಮವಾರ ಸ್ಥಳೀಯ ಪಂಚಾಯತ್ ಸಂಸ್ಥೆಗಳ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಮತದಾನ ಬೆಳಗಿನಿಂದ ನಡೆಯುತ್ತಿದ್ದರೂ ಕೂಡ ಬಿರುಸನ್ನೇನು ಪಡೆದುಕೊಂಡಿಲ್ಲ. ಆದರೆ ಸದ್ದು ಗದ್ದಲ ಗಲಾಟೆಗಳ ಬಿರುಸು ಹೆಚ್ಚಾಗಿಯೇ ಇದೆ.

ಮತದಾನ ಆರಂಭವಾದಾಗಿನಿಂದ ಇಲ್ಲಿಯವರೆಗೆ ನಾಲ್ಕು ಜನರ ಕೊಲೆಗಳಾಗಿವೆ. ಮತ ಚಲಾವಣೆ ಪ್ರಾರಂಭವಾದ ಎರಡು ಗಂಟೆಗಳೊಳಗೆ ರಾಜ್ಯದ ಹಲವೆಡೆಗಳಿಂದ ಹಿಂಸಾಚಾರಗಳ ಸುದ್ಧಿಗಳು ಬಂದಿವೆ. ದಕ್ಷಿಣ 24 ಪರಗಣ, ಬರ್ದ್ವಾನ್, ಕೂಚ್ ಬಹಾರ್ ಮತ್ತು ಉತ್ತರ 24 ಪರಗಣ ಜಿಲ್ಲೆಗಳಲ್ಲಿ ಹಿಂಸಾಚಾರ ಹೆಚ್ಚಾಗಿದೆ. ರಾಜ್ಯಾದ್ಯಂತ ಒಂದೇ ಹಂತದಲ್ಲಿ ಚುನಾವಣೆಗಳು ನಡೆಯುತ್ತಿದ್ದು ಪ್ರಕ್ಷುಬ್ಧತೆಯಿಂದ ಕೂಡಿದೆ. ಹಲವಾರು ಕಡೆಗಳಲ್ಲಿ ಮತದಾರರಿಗೆ ನೇರ ಬೆದರಿಕೆ, ಮತಗಟ್ಟೆ ಲೂಟಿಗಳು ನಡೆದಿವೆ. ಮತ ಚಲಾವಣೆಗೆ ಸಂಬಂಧಿಸಿದ ಗಲಭೆಗಳಲ್ಲಿ ಹತ್ತಾರು ಜನರಿಗೆ ಗಾಯಗಳಾಗಿ, 4 ಜನ ಅಸುನೀಗಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಸಿಪಿಎಮ್, ಬಿಜೆಪಿ ಪಕ್ಷಗಳು ಪರಸ್ಪರರ ಮೇಲೆ ಬೆಟ್ಟು ತೋರಿಸುತ್ತಿವೆ. ಪಶ್ಚಿಮ ಬಂಗಾಳದ ಅಧಿಕಾರ ರಾಜಕಾರಣದಲ್ಲಿ ಹಿಂಸಾಚಾರಕ್ಕೆ ಪ್ರಮುಖ ಸ್ಥಾನವಿದೆ. ಸಿಪಿಎಮ್ ಪಕ್ಷ ಅಧಿಕಾರದಲ್ಲಿದ್ದಾಗಲೂ ಸಹ ಹಿಂಸಾಚಾರ ನಿರಂತರವಾಗಿತ್ತು. ಸಿಂಗೂರ್ ಮತ್ತು ನಂದಿಗ್ರಾಮ್ ಹೋರಾಟಗಾರರ ಮೇಲೆ ಸಿಪಿಎಮ್ ನಡೆಸಿದ್ದ ವ್ಯಾಪಕ ಹಿಂಸಾಚಾರಗಳು ಇಡೀ ದೇಶದ ಗಮನವನ್ನೇ ಸೆಳೆದಿದ್ದವು.

ನಂತರದ ಚುನಾವಣೆಯಲ್ಲಿ ಸಿಪಿಎಮ್‌ ಚಾರಿತ್ರಿಕ ಸೋಲನ್ನು ಅನುಭವಿಸಿತ್ತು. ಈಗ ಅಧಿಕಾರ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್‌ ಅಂದಿನ ನಿರ್ವಾತವನ್ನು ತುಂಬಲು ಪ್ರಯತ್ನಿಸುತ್ತಿದೆ. ಅಲ್ಲದೆ ಬಿಜೆಪಿ ಹೇಗಾದರೂ ಪಶ್ಚಿಮ ಬಂಗಾಲದಲ್ಲಿ ನೆಲೆಯೂರಲು ಶತಾಯ ಗತಾಯ ತನ್ನ ಪ್ರಯತ್ನಗಳಲ್ಲಿ ತೊಡಗಿದೆ. ಈಗಾಗಲೇ ಅಲ್ಲಿನ ಒಂದು ಜನಪ್ರಿಯ ಆಚರಣೆಯಾದ ಕಾಳಿ ಪೂಜೆಯನ್ನು ಕೋಮು ಬಣ್ಣದಲ್ಲಿ ಅದ್ದಿ ಜನಸಾಮಾನ್ಯರ ರಕ್ತ ಹರಿಸಲು ಬಿಜೆಪಿ ಪ್ರಯತ್ನ ನಡೆಸಿದೆ.

ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ಕೇರಳ ರಾಜ್ಯವನ್ನು ಹೊರತುಪಡಿಸಿ ಬಂಗಾಳದಲ್ಲಿ ಪಂಚಾಯತ್ ಸಂಸ್ಥೆಗಳು ಬಲಿಷ್ಠವಾಗಿವೆ. ಪಶ್ಚಿಮ ಬಂಗಾಳದ ಚುನಾವಣೆಗಳಿಗೆ ದೇಶದ ಇತರೆಡೆಗಳಿಗಿಂತಲೂ ಪ್ರಾಮುಖ್ಯತೆ ಹೆಚ್ಚಾಗಿದೆ. ಅಲ್ಲಿ ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುವವರು ರಾಜ್ಯದ ಮೇಲೆ ಹಿಡಿತ ಸಾಧಿಸುತ್ತಾರೆ. ಈ ಕಾರಣಕ್ಕಾಗಿಯೇ ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ ಹೇಗಾದರೂ ತಮ್ಮ ಹಿಡಿತ ಸಾಧಿಸಲು ಪ್ರಮುಖ ಮೂರು ಪಕ್ಷಗಳು ಎಲ್ಲಾ ತಂತ್ರ ಕುತಂತ್ರಗಳನ್ನೂ ಬಳಸುತ್ತಿವೆ.

ತೃಣಮೂಲ ಕಾಂಗ್ರೆಸ್‌ಅನ್ನು ಸೋಲಿಸಲು ಬರ್ದ್ವಾನ್ ಜಿಲ್ಲೆಯಲ್ಲಿ ಸಿಪಿಎಂ ಪಕ್ಷವು ಬಿಜೆಪಿಯೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಆಂಗ್ಲ ದೈನಿಕ ಪತ್ರಿಕೆಯಲ್ಲಿ ವರದಿಯಾಗಿತ್ತು. ಸಿಪಿಎಮ್‌ ಪಕ್ಷ ನಂತರ ಅದನ್ನು ಅಲ್ಲಗೆಳೆದಿತ್ತು.

ದಕ್ಷಿಣ 24 ಪರಗಣ ಜಿಲ್ಲೆಯ ಬಸಂತಿ ಬ್ಲಾಕ್ ನಲ್ಲಿ ಶಸ್ತ್ರಸಜ್ಜಿತ ಮುಸುಕುಧಾರಿಗಳು ಎಗ್ಗಿಲ್ಲದೇ ಸುತ್ತಾಡುತ್ತಿರುವ ದೃಶ್ಯಗಳನ್ನು ಕೆಲವು ಟಿವಿ ಮಾಧ್ಯಮಗಳು ಪ್ರಸಾರ ಮಾಡಿವೆ. ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಪ್ರಕಾರ ಅಲ್ಲಿನ 621 ಜಿಲ್ಲಾ ಪರಿಷತ್ ಗಳು, 6157 ಪಂಚಾಯತಿ ಸಮಿತಿಗಳು, 31827 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುತ್ತಿದೆ.

ಕುತೂಹಲ ಮತ್ತು ಆಶ್ಚರ್ಯ ಮೂಡಿಸುವ ವಿಷಯವೆಂದರೆ ಒಟ್ಟು 3358 ಗ್ರಾಮ ಪಂಚಾಯತ್‌ಗಳ 48,650 ಸ್ಥಾನಗಳಲ್ಲಿ 16814 ಸ್ಥಾನಗಳಿಗೆ, ಒಟ್ಟು 20 ಜಿಲ್ಲಾ ಪಂಚಾಯತಿಗಳ 825 ಸ್ಥಾನಗಳಲ್ಲಿ 203 ಸ್ಥಾನಗಳಿಗೆ ವಿರೋಧಿ ಸ್ಪರ್ಧಿಗಳಿಲ್ಲದೇ ಅವಿರೋಧ ಆಯ್ಕೆಗಳು ಈಗಾಗಲೇ ನಡೆದಿವೆ. ಮುಂದೆ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ದಿಕ್ಸೂಚಿಯನ್ನಾಗಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನೋಡಲಾಗುತ್ತಿದೆ.