ಸಾವಿನ ಅಂಚಿನಲ್ಲಿ 4 ಲಕ್ಷ ಮಕ್ಕಳು: ನೆರವಿಗೆ ಮೊರೆ ಇಟ್ಟ ಯುನಿಸೆಫ್
ಸುದ್ದಿ ಸಾರ

ಸಾವಿನ ಅಂಚಿನಲ್ಲಿ 4 ಲಕ್ಷ ಮಕ್ಕಳು: ನೆರವಿಗೆ ಮೊರೆ ಇಟ್ಟ ಯುನಿಸೆಫ್

ಸರಕಾರ ಹಾಗೂ ಸ್ಥಳೀಯ ಬಂಡುಕೋರರ ನಡುವೆ ಇಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಲಕ್ಷಾಂತರ ಮಕ್ಕಳು ಭೀಕರ ಅಂತ್ಯ ಕಾಣುವ ಸಾಧ್ಯತೆ ಇದೆ.

ಸಕಾಲದಲ್ಲಿ ಸೂಕ್ತ ನೆರವು ಲಭ್ಯವಾಗದಿದ್ದರೆ ಸುಮಾರು 4 ಲಕ್ಷ ಮಕ್ಕಳು ಹಸಿವಿನಿಂದ ಸಾಯಲಿದ್ದಾರೆ. ಇದು ಆಫ್ರಿಕಾ ಖಂಡದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಸದ್ಯದ ಸ್ಥಿತಿ.

ಸರಕಾರ ಹಾಗೂ ಸ್ಥಳೀಯ ಬಂಡುಕೋರರ ನಡುವೆ ಇಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಲಕ್ಷಾಂತರ ಮಕ್ಕಳು ಭೀಕರ ಅಂತ್ಯ ಕಾಣುವ ಸಾಧ್ಯತೆ ಇದೆ. ಹೀಗಾಗಿ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ತಿಳಿಸಿದೆ.

ಶುಕ್ರವಾರ ವರದಿಯೊಂದನ್ನು ಬಿಡುಗಡೆ ಮಾಡಿರುವ ಯುನಿಸೆಫ್, “ಇಲ್ಲಿ ಹಸಿವಿನ ಬಿರುಗಾಳಿ ಎದ್ದಿದೆ. ಅದು ಮೊದಲು ಮಕ್ಕಳನ್ನು ಬಲಿ ತೆಗೆದುಕೊಳ್ಳಲಿದೆ,’’ ಎಂದು ಆತಂಕ ವ್ಯಕ್ತಪಡಿಸಿದೆ.

ದೇಶದೊಳಗೆ ನಡೆಯುತ್ತಿರುವ ಯುದ್ಧದಲ್ಲಿ ಮಕ್ಕಳಿಗೆ ಹಾನಿಯಾಗಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ನೆರವಿಗಾಗಿ ಯುನಿಸೆಫ್ ಕೋರಿಕೆ ಮುಂದಿಟ್ಟಿದೆ.

2016ರ ಆಗಸ್ಟ್‌ ತಿಂಗಳಿನಿಂದ ಡಿಆರ್ ಕಾಂಗೋ ದೇಶದ ಕಸಾಯ್‌ ಪ್ರದೇಶದ ಆಳ್ವಿಕೆಗೆ ಸಂಬಂಧಪಟ್ಟಂತೆ ಆಂತರಿಕ ಯುದ್ಧ ಶುರುವಾಗಿದೆ. ಅಧಿಕಾರ ಚಲಾವಣೆಗೆ ಸಂಬಂಧಪಟ್ಟಂತೆ ಸ್ಥಳೀಯ ಮುಖ್ಯಸ್ಥ ಹಾಗೂ ಸರಕಾರದ ನಡುವೆ ಕಿತ್ತಾಟದ ಫಲ ಭೀಕರ ಕಾಳಗಕ್ಕೆ ನಾಂದಿ ಹಾಡಿತ್ತು. ಇದೇ ದೇಶ ಹಿಂದೊಮ್ಮೆ ಆಂತರಿಕ ಜನಾಂಗೀಯ ಕಹಲಕ್ಕೆ ತುತ್ತಾಗಿದ್ದನ್ನು ಸ್ಮರಿಸಬಹುದು.

ಕಸಾಯ್ ಪ್ರದೇಶವೊಂದರಿಂದಲೇ ಸುಮಾರು 13 ಲಕ್ಷ ಕುಟುಂಬಗಳು ತಮ್ಮ ನೆಲೆಯನ್ನು ಕಳೆದುಕೊಂಡು ಹೊರಬಿದ್ದಿವೆ. ಯುನಿಸೆಫ್‌ ಅಂದಾಜು ಮಾಡಿರುವ ಪ್ರಕಾರ, ನೆಲೆ ಕಳೆದುಕೊಂಡ ಕುಟುಂಬಗಳು ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗಿವೆ. ಆದರೆ ಅವುಗಳಿಗೆ ಸೂಕ್ತ ಆಹಾರದ ವ್ಯವಸ್ಥೆ ಸಿಗುತ್ತಿಲ್ಲ. ಹೀಗಾಗಿ ಮಕ್ಕಳ ಆದಿಯಾಗಿ ಎಲ್ಲರಲ್ಲೂ ಪೌಷ್ಠಿಕಾಂಶದ ಕೊರತೆ ಎದ್ದುಕಾಣಿಸುತ್ತಿದೆ. ಪರಿಣಾಮ ಸುಮಾರು 4 ಲಕ್ಷ ಮಕ್ಕಳು ಹಸಿವಿನ ಕಾರಣಕ್ಕೆ ಸಾವಿನ ಅಂಚಿಗೆ ಬಂದು ನಿಂತಿವೆ.

“ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಆಂತರಿಕ ಯುದ್ಧ ಈಗ ಒಂದು ಹಂತಕ್ಕೆ ತಹಬಂಧಿಗೆ ಬಂದಿದೆ. ಆದರೆ ಗ್ರಾಮೀಣ ಪ್ರದೇಶಗಳಿಂದ ಮರಳುತ್ತಿರುವ ಕುಟುಂಬಗಳ ಸ್ಥಿತಿ ಹೀನಾಯವಾಗಿದೆ,’’ ಎಂದು ಯುನಿಸೆಫ್ ವಕ್ತಾರರು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನಮ್ಮ ಸಮೀಕ್ಷೆಯ ಪ್ರಕಾರ ಸುಮಾರು 7. 70 ಲಕ್ಷ ಮಕ್ಕಳು ಪೌಷ್ಠಿಕಾಂಶ ಕೊರತೆಯನ್ನು ಎದುರಿಸುತ್ತಿದ್ದಾರೆ. 4 ಲಕ್ಷ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ,’’ ಎಂದು ಅವರು ಹೇಳಿದ್ದಾರೆ.