ಗಂಡ ಹೆಂಡತಿ ಜಗಳದಲ್ಲಿ ಬಡವಾದ ಕೂಸಿಗೆ ‘ನಾಮಕರಣ’ ಮಾಡಿದ ಕೇರಳ ಹೈಕೋರ್ಟ್!
ಸುದ್ದಿ ಸಾರ

ಗಂಡ ಹೆಂಡತಿ ಜಗಳದಲ್ಲಿ ಬಡವಾದ ಕೂಸಿಗೆ ‘ನಾಮಕರಣ’ ಮಾಡಿದ ಕೇರಳ ಹೈಕೋರ್ಟ್!

ಹುಟ್ಟಿದ ಮಗುವಿಗೆ ಅಪ್ಪ ಅಮ್ಮನೋ ಅಥವಾ ಮನೆಯವರೋ ಹೆಸರಿಡುವುದು ವಾಡಿಕೆ. ಆದರೆ ಕೇರಳದ ಈ ಮಗುವಿಗೆ ಹೆಸರಿಟ್ಟಿರುವುದು ಅಲ್ಲಿನ ಹೈಕೋರ್ಟ್‌. ಕುತೂಹಲಕಾರಿ ಬೆಳವಣಿಗೆಯ ಮಾಹಿತಿ ಇಲ್ಲಿದೆ. 

ಹುಟ್ಟಿದ ಮಗುವಿಗೆ ಅಪ್ಪ ಅಮ್ಮನೋ ಅಥವಾ ಮನೆಯವರೋ ಹೆಸರಿಡುವುದು ವಾಡಿಕೆ. ಆದರೆ ಕೇರಳದ ಈ ಮಗುವಿಗೆ ಹೆಸರಿಟ್ಟಿರುವುದು ಅಲ್ಲಿನ ಹೈಕೋರ್ಟ್‌. ಸೋಜಿಗವೆನಿಸಿದರೂ ಕೂಡ ಇದು ಸತ್ಯ.

ಅವರಿಬ್ಬರು ಪ್ರೇಮಿಗಳು. ಪ್ರಿಯಕರ ಹಿಂದೂ ಸಮುದಾಯದವನು. ಪ್ರಿಯತಮೆ ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವಳು. 2010ರ ಆಗಸ್ಟ್ 29ರಂದು ಕ್ರೈಸ್ತ ಸುಮುದಾಯದ ಆಚರಣೆಗಳಂತೆ ಈ ಪ್ರೇಮಿಗಳಿಬ್ಬರು ಮದುವೆಯಾಗಿದ್ದರು. ಮಾರನೇ ದಿನ ಹಿಂದೂ ಸಂಪ್ರದಾಯದಂತೆ ಮದುವೆ ಸಮಾರಂಭ ನೆರವೇರಿತ್ತು. ಮದುವೆಯಾಗಿ ವರ್ಷ ಕಳೆಯುವುದರಲ್ಲಿ ಮುದ್ದಾದ ಮಗುವೂ ಜನಿಸಿ, ಕುಟುಂಬ ಆನಂದ ಸಾಗರದಂತಿತ್ತು.

ಅದು 2013ರ ಅವಧಿ. ಅಂತರ್ಧಮೀಯ ದಂಪತಿಗಳಿಗೆ ಗಂಡು ಮಗು ಹುಟ್ಟಿತ್ತು. ಹೆಂಡತಿ ಎರಡನೇ ಈ ಮಗುವಿಗೆ ‘ಜಾನ್‌ ಮಣಿ ಸಚಿನ್‌’ ಎಂಬ ಹೆಸರಿಡೋಣವೆಂದು ತನ್ನ ಪತಿಗೆ ಸೂಚಿಸಿದ್ದಳು. ಆದರೆ ಗಂಡನಿಗೆ ಆ ಹೆಸರು ಸರಿ ಕಾಣದೆ ‘ಅಭಿನವ್‌ ಸಚಿನ್‌’ ಎಂಬ ಹೆಸರಿಡೋಣ ಎಂದು ಪತ್ನಿಯ ಮನವೊಲಿಸಲು ಪ್ರಯತ್ನಿಸಿದ್ದ. ಹೆಂಡತಿಗೂ ಕೂಡ ಗಂಡ ಸೂಚಿಸಿದ ಈ ಹೆಸರು ಇಷ್ಟವಾಗಿರಲಿಲ್ಲ. ಈ ಹೆಸರಿಡುವ ವಿಷಯವೇ ದಂಪತಿಗಳ ನಡುವೆ ವೈಮನಸ್ಯವನ್ನು ಹುಟ್ಟುಹಾಕಿತ್ತು.

ಗಂಡ ಹೆಂಡತಿ ಜತೆಗಿದ್ದರಾದರೂ ಕೂಡ ಸಂಬಂಧ ಹಳಸಿತ್ತು. ಎಷ್ಟರ ಮಟ್ಟಿಗೆ ಎಂದರೆ ಹೆಸರಿನ ಕಾರಣಕ್ಕಾಗಿಯೇ ಗಂಡ ಹೆಂಡತಿ ಪರಸ್ಪರ ವಿಚ್ಚೇಧನ ಪಡೆಯಬೇಕೆಂಬ ಹಂತವನ್ನು ತಲುಪಿತ್ತು. ಇಬ್ಬರೂ ಕೂಡ ಪ್ರತ್ಯೇಕ ವಿಚ್ಚೇಧನ ಮನವಿಯನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚ್ಚೇಧನದ ವಿಚಾರಣೆ ಮಧ್ಯದ ಹಂತ ತಲುಪಿದ್ದ ಬೆನ್ನಲ್ಲೇ ಗಂಡ ಹೆಂಡತಿಯ ಮಧ್ಯೆ ಮತ್ತೊಂದು ಜಗಳ ಕಾಣಿಸಿಕೊಂಡಿತ್ತು. ತಂದೆ ತಾಯಿಗಳ ಜಗಳದ ನಡುವೆ ನಿರ್ದಿಷ್ಟ ಹೆಸರಿಲ್ಲದ ಮಗು ಆಟವಾಡುತ್ತಲೇ 5 ವರ್ಷಗಳನ್ನು ಪೂರೈಸಿತ್ತು. ಈಗ ಆ ಮುಗುವನ್ನು ಶಾಲೆಗೆ ಸೇರಿಸಬೇಕಿತ್ತು. ಶಾಲೆಗೆ ಸೇರಿಸಲು ಜನನ ಪ್ರಮಾಣ ಪತ್ರದ ಅಗತ್ಯ ಬಿದ್ದಿತ್ತು.

ಆದರೆ ಹೆಸರೇ ಇಲ್ಲದ ಮಗುವಿಗೆ ಯಾವ ಹೆಸರಿನ ಮೇಲೆ ಪ್ರಮಾಣ ಪತ್ರ ನೀಡಲು ಸಾಧ್ಯ? ನಿರ್ದಿಷ್ಟ ಹೆಸರಿಲ್ಲದ ಕಾರಣ ಜನನ ಪ್ರಮಾಣ ಪತ್ರ ನೀಡಲು ಸಾಧ್ಯವಿಲ್ಲ ಎಂದು ಕೊಟ್ಟಾಯಂ ನಗರ ಪಾಲಿಕೆ ಕೈಚೆಲ್ಲಿತ್ತು. ಹೆಸರಿನ ವಿಷಯ ಈ ಹಂತ ತಲುಪಿದರೂ ಕೂಡ ತಂದೆ ತಾಯಿಗಳು ಪಟ್ಟು ಬಿಡಲಿಲ್ಲ.

ಅಂತರ್ಧಮೀಯ ದಂಪತಿಗಳಿಬ್ಬರೂ ಮಗುವಿನ ಜನನ ಪ್ರಮಾಣ ಪತ್ರ ಕೊಡಿಸುವಂತೆ ಕೇರಳದ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದರು. ಗಂಡ ತನ್ನ ಮಗ ಜನಿಸಿ 28 ದಿನಗಳಾದ ನಂತರ ‘ಅಭಿನವ್‌ ಸಚಿನ್‌’ ಎಂಬ ಹೆಸರಿಟ್ಟು ನಾಮಕರಣ ಮಾಡಿದ್ದಾಗಿ ವಾದಿಸಿದ್ದ. ಅದನ್ನು ತಿರಸ್ಕರಿಸಿದ ತಾಯಿ ಮಗುವಿನ ಕ್ರೈಸ್ತಸ್ನಾನ ಮಾಡಿಸಿದ ಪ್ರಮಾಣ ಪತ್ರವನ್ನು ನ್ಯಾಯಾಲಯದ ಮುಂದಿಟ್ಟು, ಮಗುವಿನ ಹೆಸರು “ಜೊಹನ್‌ ಮಣಿ ಸಚಿನ್‌’ ಎಂದು ಪ್ರತಿವಾದ ಹೂಡಿದ್ದಳು.

ನ್ಯಾಯಸ್ಥಾನದಲ್ಲಿ ಕೂತಿದ್ದ ನ್ಯಾಯಮೂರ್ತಿ ಎ.ಕೆ. ಜಯಸಂಕರನ್‌ ನಂಬಿಯಾರ್‌ಗೆ ಇದೊಂದು ಹೊಸ ಅನುಭವವಾಗಿ ಕಂಡಿತ್ತು. ಇದುವರೆಗೂ ನ್ಯಾಯ ತೀರ್ಮಾನಿಸುತ್ತಿದ್ದ ನ್ಯಾಯಮೂರ್ತಿಗಳ ಹೆಗಲ ಮೇಲೆ ಮಗುವಿಗೆ ಹೆಸರಿಡುವ ಜವಾಬ್ದಾರಿ ಬಿದ್ದಿತ್ತು. ಯಾವ ಹೆಸರಿಡುವುದಂದು ಒಂದಷ್ಟು ಸಮಯ ತಲೆಕೆಡಿಸಿಕೊಂಡ ನ್ಯಾಯಮೂರ್ತಿಗಳು ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದರು. ಮಗುವಿಗೆ “ಜೋಹನ್‌ ಸಚಿನ್‌” ಎಂದು ಹೆಸರಿಟ್ಟು, ಈ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನು ನೀಡುವಂತೆ ಕೊಟ್ಟಾಯಂ ನಗರ ಪಾಲಿಕೆಗೆ ಸೂಚಿಸಿದರು.

ತಂದೆ ತಾಯಿಯರಿಬ್ಬರಿಗೂ ಸಮಾಧಾನವಾಗುವಂತ ಹೆಸರು ಮಗುವಿನದಾಗಬೇಕು. ತಾಯಿ ಇಚ್ಛಿಸಿರುವ ‘ಜೋಹನ್’ ಮತ್ತು ತಂದೆಯ ಇಷ್ಟ ಪಟ್ಟಿರುವ ಉಪನಾಮ ‘ಸಚಿನ್’ ಎರಡೂ ಪದಗಳನ್ನು ಮಗುವಿನ ಹೆಸರು ಹೊಂದಿರಬೇಕಾಗಿತ್ತು. ಈ ಎರಡೂ ಅಂಶಗಳನ್ನು ಒಳಗೊಂಡಿರುವ ‘ಜೋಹನ್‌ ಸಚಿನ್‌’ ಎಂಬ ಹೆಸರನ್ನು ಮಗುವಿಗೆ ನಾಮಕರಣ ಮಾಡಲಾಗಿದೆ. ಮಗುವಿನ ಭವಿಷ್ಯದ ದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಅಪ್ಪರ ಅಮ್ಮರ ಜಗಳದ ಮಧ್ಯೆ ಇಷ್ಟು ದಿನ ಬಡವಾಗಿದ್ದ ಕೂಸಿಗೆ ಹೊಸ ಹೆಸರಿಟ್ಟಿರುವ ನ್ಯಾಯಾಲಯ, ಮಗುವಿನ ಜನನ ಪ್ರಮಾಣ ಪತ್ರ ನೀಡುವಂತೆ ಸೂಚಿಸಿದೆ. ಈ ಮೂಲಕ ಅಪ್ಪ ಅಮ್ಮರ ಕಾದಾಟಕ್ಕೆ ತೆರೆ ಎಳೆದಿದೆ.