ರಸ್ತೆ ಅಪಘಾತ: ಚೆಲ್ಲಿದ್ದು ರಕ್ತ ಅಲ್ಲ; ಚಾಕಲೇಟ್!
ಸುದ್ದಿ ಸಾರ

ರಸ್ತೆ ಅಪಘಾತ: ಚೆಲ್ಲಿದ್ದು ರಕ್ತ ಅಲ್ಲ; ಚಾಕಲೇಟ್!

ರಸ್ತೆಯ ಮೇಲೆ ದೊಡ್ಡ ದೊಡ್ಡ ವಾಹನಗಳು ಅಪಘಾತಕ್ಕೀಡಾಗಿ ನೆಲಕ್ಕುರುಳಿದಾಗ ರಕ್ತ ಹರಿಯುವುದು ಸಾಮಾನ್ಯ ಸಂಗತಿ. ಆದರೆ ಇಲ್ಲಿ ಮಾತ್ರ ಹಾಗಾಗಿಲ್ಲ. ಅಪಘಾತ ನಡೆದರೂ ರಸ್ತೆಗೆ ಚೆಲ್ಲಿದ್ದು ರಕ್ತ ಅಲ್ಲ, ಬದಲಿಗೆ ಚಾಕಲೇಟ್‌. 

ಅದು ವಾರದ ಮಧ್ಯದ ದಿನ ಬುಧವಾರ. ರಸ್ತೆಗಳೆಲ್ಲವೂ ತರಹಾವೇರಿ ವಾಹನಗಳಿಂದ ಭರ್ತಿಯಾಗಿದ್ದವು. ಪೋಲ್ಯಾಂಡ್‌ನ ಪ್ರಮುಖವಾದ ರಸ್ತೆ ಏ2ನಲ್ಲಿ ಕೂಡ ವಾಹನಗಳೇನು ಕಡಿಮೆ ಇರಲಿಲ್ಲ. ಇದ್ದಕ್ಕಿದ್ದಂತೆಯೇ ರಸ್ತೆಯ ಮೇಲಿದ್ದ ದೊಡ್ಡ ಟ್ಯಾಂಕರ್‌ ಒಂದು ಚಾಲಕನ ಕೈತಪ್ಪಿ ನೆಲಕ್ಕೆ ಉರುಳಿತು.

ದೊಡ್ಡದೊಂದು ವಾಹನ ನೆಲಕ್ಕುರುಳಿ ಬಿದ್ದ ಕೂಡಲೇ ರಸ್ತೆ ಟ್ರಾಫಿಕ್‌ ಜಾಮ್‌ನಿಂದ ತುಂಬಿ ಹೋಗಿತ್ತು. ಹೀಗೆ ವಾಹನ ನಿಭಿಡ ರಸ್ತೆಯಲ್ಲಿ ಭಾರಿ ತೂಕದ ಟ್ಯಾಂಕರ್ ಉರುಳಿ ಬಿದ್ದ ಮರುಕ್ಷಣವೇ ದ್ರವ ರೂಪದಲ್ಲಿದ್ದ ಚಾಕಲೇಟ್ ರಸ್ತೆಯಲ್ಲಿ ಚೆಲ್ಲಿ ಹೋಯಿತು.

ಪಶ್ಚಿಮ ಪೋಲ್ಯಾಂಡ್‌ನ ಸ್ಲುಪ್ಕಾ ನಗರದ ಬಳಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್‌ನಲ್ಲಿ ಕಡಿಮೆಯೆಂದರೂ ಸುಮಾರು 12 ಟನ್‌ ಚಾಕಲೇಟ್‌ ದ್ರಾವಣವಿತ್ತು. ಟ್ಯಾಂಕರ್‌ ನೆಲಕ್ಕುರುಳುತ್ತಿದ್ದಂತೆಯೇ ಅದರೊಳಗಿದ್ದ ಚಾಲಕ ಹೇಗೋ ಬಚಾವಾದ. ಚಿಕ್ಕ ಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ದೊಡ್ಡದೇನೂ ಆಗಿರಲಿಲ್ಲ. ಆತನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.

ನೆಲಕ್ಕೆ ಬಿದ್ದ ಕೂಡಲೇ ಟ್ಯಾಂಕರ್‌ನ ಹೊಟ್ಟೆಯೊಳಗಿದ್ದ ಟಾಕಲೇಟ್‌ ದ್ರಾವಣ ದ್ವಿಪಥ ರಸ್ತೆಯ ಎರಡೂ ಕಡೆಗಳಲ್ಲೂ ಹರಿದಿತ್ತು. ಸೂರ್ಯನ ಬಿಸಿಲಿಗೆ ಬಿಸಿಯಾಗಿದ್ದ ರಸ್ತೆ ತನ್ನಮೈಮೇಲೆ ಟಾಕಲೇಟ್‌ ಹರಿಸಿಕೊಂಡು ಸಿಹಿಯಾಗಿತ್ತು.

ಸ್ಥಳದಲ್ಲಿದ್ದವರಿಗೆ ಮೊದಲು ಟ್ಯಾಂಕರ್‌ನಿಂದ ಹೊರಬಂದ ದ್ರಾವಣ ಏನು ಎಂಬುದು ಗೊತ್ತಾಗಲಿಲ್ಲ. ನಂತರದಲ್ಲಿ ಮುಂದೆ ಹರಿಯುತ್ತಿರುವುದು ಟಾಕಲೇಟ್‌ನ ನದಿ ಎಂದು ತಿಳಿದಾಗ ಎಲ್ಲರ ಮುಖದ ಮೇಲೂ ಮಂದಹಾಸ ಮೂಡಿತ್ತು. ಸ್ಥಳಿಯ ಮಾಧ್ಯಮಗಳು ರಸ್ತೆಯುದ್ಧಕ್ಕೂ ಹರಿದ ಚಾಕಲೇಟ್‌ ನದಿಯನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದವು.

ರಸ್ತೆಯಲ್ಲಿ ಹರಿಯುತ್ತಿದ್ದ ಚಾಕಲೇಟ್‌ ನದಿಯನ್ನು ತೆರವುಗೊಳಿಸಲು ಅಗ್ನಿ ಶಾಮಕ ಸಿಬ್ಬಂದಿಯೇ ಬರಬೇಕಾಯಿತು. ರಸ್ತೆಯನ್ನು ಸ್ವಚ್ಛಗೊಳಿಸಲು ಚಾಕಲೇಟ್‌ ನದಿಗಿಳಿದ ಅಗ್ನಿಶಾಮಕ ಸಿಬ್ಬಂದಿಗಳ ಬೂಟುಗಳು ಸಂಪೂರ್ಣವಾಗಿ ಚಾಕಲೇಟ್‌ನಲ್ಲಿ ಮುಳುಗಿ ಹೋಗಿದ್ದವು. ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಚಾಕಲೇಟ್‌ ದ್ರಾವಣ ಸ್ವಲ್ಪ ಸ್ವಲ್ಪವೇ ಒಣಗತೊಡಗಿತ್ತು. ಒಣಗುವುದರ ಜತೆಗೆ ಅಂಟಂಟಾಗತೊಡಗಿತ್ತು. ಆ ಅಂಟು ಅಂಟು ಚಾಕಲೇಟ್‌ ಮಧ್ಯೆಯೇ ಸುಮಾರು ಗಂಟೆಗಳ ಕಾಲ ಕಸರತ್ತು ನಡೆಸಿದ ಅಗ್ನಿಶಾಮಕ ಸಿಬ್ಬಂದಿ, ಕೊನೆಗೂ ಚಾಕಲೇಟ್‌ ನದಿಯನ್ನು ತೆರವುಗೊಳಿಸಿದರು.

ಅಗ್ನಿ ಶಾಮಕ ದಳದ ಸದಸ್ಯರೊಬ್ಬರು ಸ್ಥಳೀಯ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ ಪ್ರಕಾರ, ರಸ್ತೆಯನ್ನು ಚಾಕಲೇಟ್‌ ಮುಕ್ತವನ್ನಾಗಿಸಲು ಹಲವು ಗಂಟೆಗಳೇ ಬೇಕಾಯಿತು. ಪಾದಚಾರಿ ರಸ್ತೆಯ ಮೇಲೆಲ್ಲಾ ಹರಿದು ಹೆಪ್ಪುಗಟ್ಟಿದ್ದ ಚಾಕಲೇಟ್‌ಅನ್ನು ತೆರವುಗೊಳಿಸುವುದು ಅಷ್ಟು ಸುಲಭವೇನೂ ಆಗಿರಲಿಲ್ಲ. ಚಾಕಲೇಟ್‌ಗಿಂತ ಹಿಮವನ್ನು ತೆರವುಗೊಳಿಸುವುದೇ ಸುಲಭ ಎಂದು ಆ ಸದಸ್ಯರಿಗೆ ಅನಿಸಿತ್ತು.

ಅದುವರೆಗೂ ರಸ್ತೆ ಅಫಘಾತಗಳಾದಾಗ ಜನ ಸಹಜವಾಗಿಯೇ ಭಯಗೊಳ್ಳುತ್ತಾರೆ. ಆದರೆ ಇದೇ ಮೊದಲ ಭಾರಿಗೆ ಅಪಘಾತವೊಂದು ಜನರ ಮುಖದಲ್ಲಿ ನಗು ಮೂಡಿಸಿದೆ.