ನೀಟ್ ಪರೀಕ್ಷೆಯ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ತಮಿಳುನಾಡಿಗೆ ನೋಟೀಸ್
ಸುದ್ದಿ ಸಾರ

ನೀಟ್ ಪರೀಕ್ಷೆಯ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ತಮಿಳುನಾಡಿಗೆ ನೋಟೀಸ್

ಮಾನವ ಹಕ್ಕುಗಳನ್ನು ಉಲ್ಲಂಘಿಸುವ, ಪರೀಕ್ಷಾರ್ಥಿಗಳಿಗೆ ಸಂಕಷ್ಟವನ್ನು ತಂದೊಡ್ಡುವ ನಡೆಗಳನ್ನು ತಡೆಯಲು ನಿಂತಿರುವ ಮಾನವ ಹಕ್ಕುಗಳ ಆಯೋಗ, ಮೊದಲ ಭಾಗವಾಗಿ ನೋಟೀಸ್‌ ಜಾರಿಗೊಳಿಸಿದೆ. 6 ವಾರದೊಳಗೆ ವರದಿಯನ್ನು ತಯಾರಿಸಿ ನೀಡುವಂತೆ ಸೂಚಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಮಿಳುನಾಡು ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಸರಕಾರದ ಜತೆಗೆ ತಮಿಳು ನಾಡಿನ ಸಿಬಿಎಸ್‌ಇ(ಸೆಂಟ್ರಲ್‌ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್‌) ಮಂಡಳಿಯೂ ಕೂಡ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್‌ ಪಡೆದಿದೆ. ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಅಂಶದ ಮೇಲೆ ನೋಟಿಸ್‌ ಜಾರಿಯಾಗಿದೆ.

ದೆಹಲಿಯಲ್ಲಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಪತ್ರಿಕಾ ವರದಿಗಳ ಆಧಾರದ ಮೇಲೆ ಸ್ವಯಂ ಪ್ರೇರಿತವಾಗಿ ನೋಟಿಸ್‌ ನೀಡಿದೆ. ನೀಟ್‌ ಪರೀಕ್ಷೆಯನ್ನು ಬರೆಯುವ ಮುನ್ನ ನಡೆಸುವ ತಪಾಸಣೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯಲು ಮಾನವ ಹಕ್ಕುಗಳ ಆಯೋಗ ಇಂತಹದ್ದೊಂದು ಹೆಜ್ಜೆಯಿಟ್ಟಿದ್ದು, ಇದು ಸ್ವಾಗತಾರ್ಹ ನಡೆಯಾಗಿ ಕಂಡಿದೆ.

ತಪಾಸಣೆ ನಡೆಸಬೇಕು ಎನ್ನುವುದೇನೋ ನಿಜ. ಆದರೆ ತಪಾಸಣೆ ನಡೆಸುವ ವೇಳೆ ವಿದ್ಯಾರ್ಥಿಗಳಿಗೆ ಮುಜುಗರವಾಗುವಂತೆ ಮಾಡುವುದು ಸರಿಯಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಿಳಿಸಿದೆ. ಪರೀಕ್ಷಾ ಕೇಂದ್ರಗಳ ಬಳಿ ಪರೀಕ್ಷಾರ್ಥಿಗಳ ಅಂಗಿಯ ತೋಳುಗಳನ್ನು ಹರಿಯುವುದು, ಪ್ಯಾಂಟ್‌ಗಳನ್ನು ಹರಿಯುವುದು, ಬಟ್ಟೆ ಬಿಚ್ಚಿಸುವುದು ಇತ್ಯಾದಿಗಳಲ್ಲಾ ಅನೈತಿಕ ನಡೆಗಳು ಎಂದು ಆಯೋಗ ಹೇಳಿದೆ. ಇಂತಹ ಕ್ರಮಗಳು ಎಷ್ಟು ಸರಿ ಎನ್ನುವುದರ ಕುರಿತು ಮರು ಚಿಂತನೆ ನಡೆಸಿ, ಗೌರವಾನ್ವಿತ ರೀತಿಯಲ್ಲಿ ತಪಾಸಣೆ ನಡೆಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಸಿಬಿಎಸ್‌ಇ ಮಂಡಳಿಗೆ ಸೂಚಿಸಿದೆ.

ಈ ಮುಂಚೆ ಪರೀಕ್ಷೆಗೆಂದು ಹಾಜಾರಾಗಿದ್ದ ಯುವತಿಯ ಹೇರ್‌ ಬ್ಯಾಂಡ್‌ಗಳನ್ನು ಬಿಚ್ಚಿಸಲಾಗಿತ್ತು. ಮುಸ್ಲಿಂ ಯುವತಿಯರು ತಮ್ಮ ಸಾಂಪ್ರದಾಯಿಕ ಉಡುಗೆಯಾದ ಬುರ್ಖಾವನ್ನು ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಯುವಕರಿಗೆ ತಮ್ಮ ಕೈಗೆ, ಕುತ್ತಿಗೆಗೆ ಕಟ್ಟಿದ್ದ ದಾರಗಳನ್ನು ಬಿಚ್ಚುವಂತೆ ಹೇಳಲಾಗಿತ್ತು.

ಕೇವಲ ತಪಾಸಣೆಯಷ್ಟೇ ಅಲ್ಲದೇ ಪರೀಕ್ಷಾರ್ಥಿಗಳನ್ನು ಇತರೆ ರಾಜ್ಯಗಳಿಗೆ ಕಳಿಸುವ ಕ್ರಮವನ್ನೂ ಕೂಡ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವಿರೋಧಿಸಿದೆ. ತಮಿಳುನಾಡು ರಾಜ್ಯ ಸರಕಾರ ಹಾಗೂ ಸಿಬಿಎಸ್‌ಇ ಮಂಡಳಿಯು ರಾಜ್ಯದಲ್ಲಿ ನೀಟ್‌ ಬರೆಯಲು ಇಚ್ಚಿಸಿದ ಪರೀಕ್ಷಾರ್ಥಿಗಳಿಗೆ, ರಾಜ್ಯದಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂದು ಆಯೋಗ ತಿಳಿಸಿದೆ. ಇದು ಪರೀಕ್ಷಾರ್ಥಿಗಳಿಗಷ್ಟೇ ಅಲ್ಲದೇ ಅವರ ಪೋಷಕರಿಗೂ ಸಂಕಷ್ಟವನ್ನು ತಂದೊಡ್ಡಿದೆ ಎನ್ನುವುದು ಆಯೋಗದ ಅಭಿಪ್ರಾಯ.

ಏಕೆ ವಿದ್ಯಾರ್ಥಿಗಳಿಗೆ ತಮ್ಮರಾಜ್ಯದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡದೆ ಬೇರೆ ರಾಜ್ಯಗಳಲ್ಲಿ ಪರೀಕ್ಷೆ ಬರೆಯುವ ಒತ್ತಡವನ್ನು ಹೇರಲಾಗುತ್ತಿದೆ ಎಂದು ಮಾನವ ಹಕ್ಕುಗಳ ಆಯೋಗ ತಮಿಳುನಾಡು ಸರಕಾರವನ್ನು ಪ್ರಶ್ನಿಸಿದೆ. ಜತೆಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಬೀಳುವ ಇಂತಹ ಹೆಚ್ಚುವರಿ ಒತ್ತಡಗಳನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ವಿಸ್ತೃತ ವರದಿಯನ್ನು ನೀಡುವಂತೆ ಸಿಬಿಎಸ್‌ಇ ಅಧ್ಯಕ್ಷರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಆಯೋಗ ಸೂಚಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹೇಳುವಂತೆ ತಮಿಳುನಾಡಿನ 3,685 ವಿದ್ಯಾರ್ಥಿಗಳಿಗೆ ಹೊರರಾಜ್ಯಗಳಲ್ಲಿ ಪರೀಕ್ಷೆ ಬರೆಯುವಂತೆ ಸೂಚಿಸಲಾಗಿತ್ತು. ಹೊರರಾಜ್ಯಗಳಿಂದ ಪರೀಕ್ಷೆ ಬರೆಯಲೆಂದು ಹೊರಟಿದ್ದ ವಿದ್ಯಾರ್ಥಿಗಳು ರೈಲು ತಡವಾಗಿ ಸ್ಥಳವನ್ನು ತಲುಪಿದ ಕಾರಣ ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕೆಲವು ನಿಮಿಷಗಳಷ್ಟು ತಡವಾಗಿ ಬಂದ ಕೇರಳ ಹಾಗೂ ಕರ್ನಾಟಕದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಿರಲಿಲ್ಲ.

ಹಿಂದೊಮ್ಮೆ ತಮಿಳುನಾಡಿನ ವ್ಯಕ್ತಿಯೊಬ್ಬರು ನೀಟ್‌ ಪರೀಕ್ಷೆ ಬರೆಯಬೇಕಿದ್ದ ತಮ್ಮ ಮಗನನ್ನು ಕೇರಳದಲ್ಲಿನ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದಿದ್ದರು. ಮಗ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿ ಹೊರಗೆ ಕಾಯುತ್ತಾ ಕುಳಿತದ್ದ ವ್ಯಕ್ತಿ ಹೃದಯಾಘಾತದಿಂದ ಅಲ್ಲೇ ಮೃತಪಟ್ಟಿದ್ದರು.

ಹೀಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸುವಂತಹ, ಪರೀಕ್ಷಾರ್ಥಿಗಳಿಗೆ ಸಂಕಷ್ಟವನ್ನು ತಂದೊಡ್ಡುವಂತಹ ನಡೆಗಳನ್ನು ತಡೆಗಟ್ಟುವಲ್ಲಿ ಮುಂದಡಿಯಿಟ್ಟಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಅದರ ಮೊದಲ ಭಾಗವಾಗಿ ನೋಟೀಸ್‌ ಜಾರಿಗೊಳಿಸಿದೆ. 6 ವಾರದೊಳಗೆ ವರದಿಯನ್ನು ತಯಾರಿಸಿ ನೀಡುವಂತೆ ಸೂಚಿಸಿದೆ. ಇನ್ನಾದರೂ ಸಿಬಿಎಸ್‌ಸಿ ಮಂಡಳಿ ನೀಟ್‌ ಪರೀಕ್ಷಾರ್ಥಿಗಳನ್ನು ಗೌರವಾನ್ವಿತವಾಗಿ ನಡೆಸಿಕೊಳ್ಳುತ್ತದೆಯೇ ಎನ್ನುವುದನ್ನು ಕಾದುನೋಡಬೇಕಿದೆ.