ವಿವಾದಿತ ಕೆಂಬ್ರಿಜ್‌ ಅನಾಲಿಟಿಕಾ ಸ್ಥಗಿತ
ಸುದ್ದಿ ಸಾರ

ವಿವಾದಿತ ಕೆಂಬ್ರಿಜ್‌ ಅನಾಲಿಟಿಕಾ ಸ್ಥಗಿತ

ಭಾರತದ ಜತೆ ಕೆಂಬ್ರಿಜ್‌ ಅನಾಲಿಟಿಕಾ ನಂಟು 15 ವರ್ಷ ಹಳೆಯದು, 8 ವರ್ಷಗಳ ಹಿಂದೆಯೇ ಭಾರತೀಯ ಪಕ್ಷಗಳ ಕಾರ್ಯತಂತ್ರವನ್ನು ರೂಪಿಸಿದ್ದಾಗಿ ತಿಳಿಸಿತ್ತು. ಈಗ ಗ್ರಾಹಕರಿಲ್ಲದೆ ಬಾಗಿಲು ಮುಚ್ಚಲು ಕೆಂಬ್ರಿಜ್‌ ಅನಾಲಿಟಿಕಾ ಮುಂದಾಗಿದೆ.

‘ಕೆಂಬ್ರಿಜ್‌ ಅನಾಲಿಟಿಕಾ’ – ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೇಳಿರುವ ಹೆಸರು. ವಿಶ್ವದ ಕೋಟ್ಯಾಂತರ ಫೇಸ್‌ಬುಕ್‌ ಖಾತೆದಾರರ ವೈಯಕ್ತಿಕ ಮಾಹಿತಿಯನ್ನು ಕದ್ದ ಆರೋಪವನ್ನು ಹೊತ್ತಿದ್ದ ಇಂಗ್ಲೆಂಡ್‌ ಮೂಲದ ಈ ಕಂಪನಿ ಈಗ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿದೆ. 

ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಈಗಲೂ ಸಮರ್ಥಿಸಿಕೊಳ್ಳುತ್ತಿರುವ ಈ ಕಂಪನಿಗೆ ಸದ್ಯ ಯಾವುದೇ ಗ್ರಾಹಕರಿಲ್ಲ. ಫೇಸ್‌ಬುಕ್‌ ಡಾಟಾ ಕಳವಿನ ಆರೋಪದ ಸುದ್ದಿ ಈ ಕಂಪನಿಯ ಬೆನ್ನಿಗೆ ಬೀಳುತ್ತಿದ್ದಂತೆ ಕೆಂಬ್ರಿಜ್‌ ಅನಾಲಿಟಿಕಾ ವಿವಾದದ ಕೇಂದ್ರಬಿಂದುವಾಗಿತ್ತು. ಈ ಮೂಲಕ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಕೆಂಬ್ರಿಜ್‌ ಅನಾಲಿಟಿಕಾ ಬಳಿ ಹಣವಿಲ್ಲದಂತಾಗಿದೆ. ದಿವಾಳಿಯಾಗಿರುವ ಕಂಪನಿ ಅನಿವಾರ್ಯವಾಗಿ ಕಾರ್ಯ ಸ್ಥಗಿತಗೊಳಿಸುತ್ತಿದೆ.

ಮುಂದುವರಿಸಿದರೂ ಸಹ ಕೆಂಬ್ರಿಜ್‌ ಅನಾಲಿಟಿಕಾ ಹೆಚ್ಚು ದಿನಗಳ ಕಾಲ ಕಾರ್ಯ ನಿರ್ವಹಿಸುವಂತೆ ಕಾಣುತ್ತಿಲ್ಲ. ವ್ಯವಹಾರವನ್ನು ನಡೆಸುವುದೂ ಕೂಡ ದುಸ್ಥರವಾಗಿದೆ. ಅಡಳಿತವನ್ನು ನಡೆಸಲು ಪೂರಕವಾದ ಯಾವ ಪರ್ಯಾಯಗಳೂ ದೊರೆಯುತ್ತಿಲ್ಲ. ಆದ ಕಾರಣ ಕಂಪನಿಯ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಂಬ್ರಿಜ್‌ ಅನಾಲಿಟಿಕಾ ಆಡಳಿತ ಮಂಡಳಿ ತಿಳಿಸಿದೆ.

ರಾಜಕೀಯ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿ ಕೊಟ್ಟು ದುಡ್ಡು ಮಾಡುತ್ತಿದ್ದ ಕೆಂಬ್ರಿಜ್‌ ಅನಾಲಿಟಿಕಾ, ಕಾರ್ಯತಂತ್ರ ರೂಪಿಸುವ ಸಲುವಾಗಿ 87 ಮಿಲಿಯನ್‌ ಫೇಸ್‌ಬುಕ್‌ ಖಾತೆದಾರರ ವೈಯಕ್ತಿಕ ಮಾಹಿತಿಯನ್ನು ಕದ್ದಿತ್ತು. ರಾಜಕೀಯದಲ್ಲಿ ಆಸಕ್ತಿ ಹೊಂದಿರದಿದ್ದ ಜನರ ಮನಸನ್ನು ಅರ್ಥೈಸಿಕೊಂಡು, ಅವರಿಗೆ ಹತ್ತಿರವಾಗುವಂತ ಕಾರ್ಯತಂತ್ರವನ್ನು ರೂಪಿಸಿಕೊಡುವ ಕೆಲಸದಲ್ಲಿ ಕೆಂಬ್ರಿಜ್‌ ಅನಾಲಿಟಿಕಾ ನಿರತವಾಗಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಫೇಸ್‌ಬುಕ್‌ ಸಂಸ್ಥೆ ತನ್ನೊಳಗೆ ಕೆಂಬ್ರಿಲ್‌ ಅನಾಲಿಟಿಕಾ ಕಾರ್ಯ ಚಟುವಟಿಕೆಯನ್ನು ನಿಷೇಧಿಸಿತ್ತು. ತನ್ನಿಂದ ಅಕ್ರಮವಾಗಿ ಕದ್ದಿರುವ ಮಾಹಿತಿಯನ್ನು ಅಳಿಸಿಹಾಕುವಂತೆ ಕೆಂಬ್ರಿಜ್‌ ಅನಾಟಿಕಾ ಕಂಪನಿಗೆ ಫೇಸ್‌ಬುಕ್‌ ಆಗ್ರಹಿಸಿತ್ತು. ಆದರೂ ಕೂಡ ಕೆಂಬ್ರಿಜ್‌ ಅನಾಲಿಟಿಕಾ ಖಾತೆದಾರರ ಮಾಹಿತಿಯನ್ನು ಅಳಿಸಿ ಹಾಕಿರಲಿಲ್ಲ. ಫೇಸ್‌ಬುಕ್‌ನ ಗೌಪ್ಯತಾ ನೀತಿಯನ್ನು ಕೆಂಬ್ರಿಜ್‌ ಅನಾಲಿಟಿಕಾ ಉಲ್ಲಂಘಿಸಿದೆ ಎಂದು ಫೇಸ್‌ ಬುಕ್‌ ಸಂಸ್ಥೆ ಬೊಬ್ಬೆ ಹೊಡೆಯಿತಾದರೂ ಕೊನೆಗೆ ಇದರಿಂದಾಗಿ ಕಷ್ಟ ಅನುಭವಿಸಿದ್ದು ಫೇಸ್‌ಬುಕ್‌ ಸಂಸ್ಥೆಯೇ. ಅದುವರೆಗೂ ಉಳಿಸಿಕೊಂಡು ಬಂದಿದ್ದ ವಿಶ್ವಾಸಾರ್ಹತೆಯನ್ನು ಫೇಸ್‌ಬುಕ್‌ ಕಳೆದುಕೊಂಡಿತ್ತು.

ಫೇಸ್‌ಬುಕ್‌ ಖಾತೆದಾರರ ವೈಯಕ್ತಿಕ ಮಾಹಿತಿಯನ್ನು ಕದ್ದು, ಕಾನೂನು ಉಲ್ಲಂಘನೆ ಆರೋಪವನ್ನು ಹೊತ್ತುಕೊಂಡ ಕೆಂಬ್ರಿಜ್‌ ಅನಾಲಿಟಿಕಾ ಕಂಪನಿ ಈಗ ಮುಚ್ಚುವ ಹಂತಕ್ಕೆ ಬಂದಿದೆ. ಕೆಂಬ್ರಿಜ್‌ ಅನಾಲಿಟಿಕಾದ ಮಾತೃಸಂಸ್ಥೆ ಎಸ್‌ಸಿಎಲ್‌ ಎಲೆಕ್ಷನ್ಸ್‌ನ ಕಾರ್ಯ ಚಟುವಟಿಕೆಗಳ ಮೇಲೆ ಇಂಗ್ಲೆಂಡ್‌ ಸರಕಾರ ಕಣ್ಣಿರಿಸಿದ್ದು, ಅದು ಕೂಡ ತನ್ನ ಗ್ರಾಹಕರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.

ಅಮೆರಿಕಾದಲ್ಲಿ 2016ರ ವೇಳೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲ್ಲಲು ಇದೇ ಕಂಪನಿ ರೂಪಿಸಿಕೊಟ್ಟ ಚುನಾವಣಾ ತಂತ್ರಗಾರಿಕೆಗಳು ಕೆಲಸ ಮಾಡಿದ್ದವು. ಫೇಸ್‌ಬುಕ್‌ನಿಂದ ಮಾಹಿತಿ ಕದಿದ್ದ ಕೆಂಬ್ರಿಜ್‌ ಅನಾಲಿಟಿಕಾ, ದೊಡ್ಡ ಸಂಖ್ಯೆಯ ಜನರ ಮನಸ್ಸನ್ನು ಟ್ರಂಪ್‌ ಕಡೆಗೆ ತಿರುಗಿಸಿತ್ತು.

ಆಪ್‌ ಮೂಲಕ ಜನರ ಮೂಲ ಮಾಹಿತಿಯನ್ನು ಪಡೆಯುತ್ತಿದ್ದ ಕೆಂಬ್ರಿಜ್‌ ಅನಾಲಿಟಿಕಾ, ಆಪ್‌ ಒಳಗೆ ಸೈನ್‌ ಇನ್‌ ಆಗಬಯಸುವವರಿಗೆ ಫೇಸ್‌ಬುಕ್‌ ಜತೆ ಲಿಂಕ್‌ ಮಾಡುವಂತೆ ಸೂಚಿಸುತ್ತಿತ್ತು. ನಂತರ ಆಪ್‌ಅನ್ನು ಫೇಸ್‌ಬುಕ್‌ ಜತೆಗೆ ಲಿಂಕ್‌ ಮಾಡಿದವರ ಮಾಹಿತಿಯಷ್ಟೇ ಅಲ್ಲದೇ ಖಾತೆದಾರ ಹೊಂದಿದ್ದ ಫೇಸ್‌ಬುಕ್‌ ಸ್ನೇಹಿತರ ವೈಯಕ್ತಿಕ ಮಾಹಿತಿಗಳೂ ಕೂಡ ಕೆಂಬ್ರಿಜ್‌ ಅನಾಲಿಟಿಕಾಗೆ ದೊರೆತಿತ್ತು. ಕಳ್ಳತನ ನಡೆದಿದೆ ಎಂದು ತಿಳಿದ ಕೂಡಲೇ ಫೇಸ್‌ಬುಕ್‌ ತನ್ನ ಖಾಸಗಿ ನಿರ್ಬಂಧಗಳನ್ನು ಬಲಗೊಳಿಸಿತ್ತು.

ಭಾರತದೊಂದಿಗಿನ ಕೆಂಬ್ರಿಜ್‌ ಅನಾಲಿಟಿಕಾನ ನಂಟು 15 ವರ್ಷಗಳಷ್ಟು ಹಳೆಯದು ಎಂದಿದ್ದ ಸಂಸ್ಥೆ, 8 ವರ್ಷಗಳ ಹಿಂದೆಯೇ ಭಾರತೀಯ ಪಕ್ಷಗಳ ಕಾರ್ಯತಂತ್ರವನ್ನು ರೂಪಿಸಿಕೊಟ್ಟಿದೆ ಎಂದು ತಿಳಿಸಿತ್ತು. ಆದರೆ ಈಗ ಗ್ರಾಹಕರೇ ಇಲ್ಲದೆ ಬಾಗಿಲು ಮಕುಚ್ಚುವ ಪರಿಸ್ಥಿತಿಗೆ ಕೆಂಬ್ರಿಜ್‌ ಅನಾಲಿಟಿಕಾ ಬಂದಿದೆ.