#answermadimodi ಟ್ವೀಟಿಗೆ ಸಿಟ್ಟಾದ ಯಡ್ಡಿ: ಸಿದ್ದು ವಿರುದ್ಧ ಏಕವಚನ ಪ್ರಯೋಗ
ಸುದ್ದಿ ಸಾರ

#answermadimodi ಟ್ವೀಟಿಗೆ ಸಿಟ್ಟಾದ ಯಡ್ಡಿ: ಸಿದ್ದು ವಿರುದ್ಧ ಏಕವಚನ ಪ್ರಯೋಗ

ಕೊನೆಯ ಹಂತದ ಹೋರಾಟಕ್ಕೆ ಅಣಿಯಾಗಿರುವ ಬಿಜೆಪಿ ಮೋದಿ ಪ್ರಚಾರ ಸಭೆಗಳನ್ನೇ ನೆಚ್ಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೀವಿ ಎನ್ನುವುದನ್ನು ಯಡಿಯೂರಪ್ಪ ತೋರಿಸಿಕೊಟ್ಟಿದ್ದಾರೆ. 

ಕರ್ನಾಟಕ ವಿಧಾನಸಭೆಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇನ್ನು 12 ದಿನಗಳಷ್ಟೆ ಬಾಕಿ ಇದೆ. ಪ್ರಧಾನಿ ಮೋದಿ ಕೊನೆಯ ಹಂತದಲ್ಲಿ ರಾಜ್ಯದಲ್ಲಿ ಐದು ದಿನಗಳ ಚುನಾವಣಾ ಪ್ರಚಾರ ಮಾಡಲಿದ್ದಾರೆ.

ಮೇ. 1ರಂದು ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಆರಂಭಿಸುವ ಮೋದಿ, ಮುಂದಿನ ಐದು ದಿನಗಳಲ್ಲಿ ಒಟ್ಟು 15 ಪ್ರಚಾರ ಸಭೆಗಳನ್ನು ಭಾಷಣ ಮಾಡಲಿದ್ದಾರೆ.

ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಜಗಳ ತಾರಕಕ್ಕೇರಿದೆ. ಏಕವಚನದ ಪ್ರಯೋಗ ಶುರುವಾಗಿದೆ. ಹೀಗೊಂದು ಕಿತ್ತಾಟಕ್ಕೆ ಮುನ್ನುಡಿ ಬರೆದಿದ್ದು ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‌ಗಳು.

ರಾಜ್ಯಕ್ಕೆ ಆಗಮಿಸುವ ಮೋದಿ ಮುಂದೆ ಸಿಎಂ ಸಿದ್ದರಾಮಯ್ಯ ಒಂದಷ್ಟು ಪ್ರಶ್ನೆಗಳನ್ನು ಇಟ್ಟಿದ್ದಾರೆ. #answermadimodi ಎಂಬ ಹ್ಯಾಶ್‌ ಟ್ಯಾಗ್‌ ಮೂಲಕ ಸಿದ್ದರಾಮಯ್ಯ ಅವರು ಮಾಡಿರುವ ಟ್ವೀಟ್‌ಗಳು ಬಿಜೆಪಿಯನ್ನು ಕೆರಳಿಸಿದೆ.

ಕೆಲವು ದಿನಗಳ ಹಿಂದೆ, ನಮೋ ಆಪ್‌ ಮೂಲಕ ಬಿಜೆಪಿ ಕಾರ್ಯಕರ್ತರ ಜತೆ ಮಾತನಾಡಿದ ಮೋದಿ, ‘ನಾನೂ ಕೂಡ ಕನ್ನಡಿಗ’ ಎಂದಿದ್ದರು. ಈ ಎಳೆಯನ್ನೇ ಇಟ್ಟುಕೊಂಡ ಸಿದ್ದರಾಮಯ್ಯ, ಮೇಲಿನ ಪ್ರಶ್ನೆಗಳನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದಾರೆ.

Also read: ಮೋದಿ ‘ನೇರ ಪ್ರಸಾರ’: ಅಭಿವೃದ್ಧಿಯ ಜಪ; ಉಳಿದ ವಿಚಾರಗಳ ಬಗ್ಗೆ ಇಲ್ಲ ಪ್ರಸ್ತಾಪ

ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಅಭ್ಯರ್ಥಿ ಏಕವಚನ ಪ್ರಯೋಗದ ಮೂಲಕ ಸಿದ್ದರಾಮಯ್ಯ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಮೋದಿಯನ್ನು ಪ್ರಶ್ನೆಮಾಡಲು ಅವನಿಗೆ ಯಾವ ನೈತಿಕತೆ ಇದೆ. ನಿಂತ ನೆಲ ಕುಸಿಯುತ್ತಿದೆ ಎಂದು ಗೊತ್ತಾದ ಮೇಲೆ ಬಾದಾಮಿಗೆ ಓದಿಹೋಗಿದ್ದಾನೆ,’’ ಎಂದು ಎಂದಿದ್ದಾರೆ.

ಮೋದಿ ಚಾಮರಾಜನಗರದಿಂದ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ಹಳೆ ಮೈಸೂರು ಭಾಗದ ಒಕ್ಕಲಿಗರು ಹಾಗೂ ದಲಿತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಸಭೆಯನ್ನು ಸಂತೆಮಾರನಹಳ್ಳಿಯಲ್ಲಿ ಆಯೋಜಿಸಲಾಗಿದೆ. ನಂತರ ಉಡುಪಿ ಜಿಲ್ಲೆಗೆ ಹೋಗಲಿರುವ ಮೋದಿ, ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಉತ್ತರ ಕರ್ನಾಟಕದ ಕಡೆ ಪ್ರಯಾಣ ಬೆಳೆಸಲಿದ್ದಾರೆ.

ಇನ್ನೊಂದೆಡೆ, ಅಮಿತ್ ಶಾ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದಾರೆ. ಜತೆಗೆ, ಬಹಿರಂಗ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. “ರಾಜ್ಯ ಬಿಜೆಪಿಗೆ ಕೊನೆಯ ಹಂತದ ಹೋರಾಟ ಅನಿವಾರ್ಯವಾಗಿದೆ. ಮೋದಿ ಪ್ರಚಾರ ಸಭೆಗಳ ಪರಿಣಾಮಗಳ ಮೇಲೆ ಮುಂದಿನ ದಿನಗಳಲ್ಲಿ ಬಿಜೆಪಿ ಭವಿಷ್ಯ ನಿರ್ಧಾರವಾಗಲಿದೆ,’’ ಎನ್ನುತ್ತಾರೆ ರಾಜ್ಯ ಬಿಜೆಪಿ ನಾಯಕರೊಬ್ಬರು.