ಯುಪಿಯಲ್ಲಿ ಮತ್ತೆ ದೌರ್ಜನ್ಯಕ್ಕೆ ತುತ್ತಾದ ದಲಿತ: ಎತ್ತ ಸಾಗುತ್ತಿದೆ ವಿಶ್ವಗುರು ಭಾರತ?
ಸುದ್ದಿ ಸಾರ

ಯುಪಿಯಲ್ಲಿ ಮತ್ತೆ ದೌರ್ಜನ್ಯಕ್ಕೆ ತುತ್ತಾದ ದಲಿತ: ಎತ್ತ ಸಾಗುತ್ತಿದೆ ವಿಶ್ವಗುರು ಭಾರತ?

ಎಗ್ಗಿಲ್ಲದೆ ಸಾಗುತ್ತಿರುವ ಜಾತಿ ದೌರ್ಜನ್ಯಗಳು ದೇಶದ ಘನತೆ ಎಷ್ಟು ಎನ್ನುವುದನ್ನು ಸಾರಿ ಹೇಳುತ್ತಿವೆ. ಏನೇ ಅಭಿವೃದ್ಧಿ ಅಂದರೂ, ದೇಶ ಜಾತಿ ಸಂಘರ್ಷವನ್ನು ನಿಭಾಯಿಸುವಲ್ಲಿ ಪದೇ ಪದೇ ಸೋಲುತ್ತಿರುವುದಕ್ಕೆ ಇಂತಹ ಘಟನೆಗಳು ಸಾಕ್ಷಿಗಳಾಗಿವೆ.

ಇಡೀ ಭಾರತೀಯ ಸಮುದಾಯ ತಲೆ ತಗ್ಗಿಸುವಂತ ಮತ್ತೊಂದು ಘಟನೆಗೆ ಉತ್ತರ ಪ್ರದೇಶದ ಬದೌನ್‌ ಜಿಲ್ಲೆ ಸಾಕ್ಷಿಯಾಗಿದೆ. ತಮ್ಮ ಹೊಲದಲ್ಲಿ ಕೆಲಸ ಮಾಡಲು ನಿರಾಕರಿಸಿದ ದಲಿತನೊಬ್ಬನಿಗೆ ಮನ ಬಂದಂತೆ ಥಳಿಸಿರುವ ಮೇಲ್‌ ಜಾತಿಯ ಜನ, ಮೂತ್ರ ಕುಡಿಸಲು ಮುಂದಾಗಿದ್ದಾರೆ.

ದಲಿತ ಸಮುದಾಯದ ಇಳಿವಯಸ್ಸಿನ ವ್ಯಕ್ತಿ ಸಿತಾರಾಮ್‌ ವಾಲ್ಮೀಕಿ ಮೇಲೆ ಇಂತಹದ್ದೊಂದು ಅಮಾನವೀಯ ಕೃತ್ಯ ನಡೆದಿದೆ. ಈ ಕೃತ್ಯ ನಡೆದ ಬೆನ್ನಲ್ಲೇ, ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿ ರಾಜೇಶ್‌ ಕಶ್ಯಪ್‌ರನ್ನು ಇಂತಹ ನೀಚ ಘಟನೆ ನಡೆಯಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.

ನಡೆದಿದ್ದೇನು?:

ಸೀತಾರಾಮ್‌ ವಾಲ್ಮಿಕಿ ಬದೌನ್‌ ಜಿಲ್ಲೆಯ ಅಜಮ್‌ಪುರ ಬಿಸೌಲಿಯಾ ಗ್ರಾಮದವರು. 43 ವರ್ಷ ಪ್ರಾಯದ ಸೀತರಾಮ್‌ ಸ್ಥಳೀಯ ದಲಿತ ಸಮುದಾಯದಲ್ಲಿ ಒಳ್ಳೆ ಹೆಸರನ್ನೂ ಕೂಡ ಗಳಿಸಿಕೊಂಡಿದ್ದವರು.

ಏಪ್ರಿಲ್‌ 24ರಂದು ಸೀತರಾಮ್‌ ವಾಲ್ಮಿಕಿ ತಮ್ಮ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಮೇಲ್ಜಾತಿಯ ಜನ ತಮ್ಮ ಹೊಲದಲ್ಲಿ ಗೋಧಿ ಬೆಳೆಯ ಕೊಯ್ಲು ಮಾಡುವಂತೆ ಕರೆದಿದ್ದರು. ಪ್ರತಿಫಲವಾಗಿ ಹುಲ್ಲನ್ನು ನೀಡುವುದಾಗಿ ತಿಳಿಸಿದ್ದರು. ಈ ಕರೆಗೆ ನಿರಾಕರಣೆಯನ್ನು ವ್ಯಕ್ತಪಡಿಸಿದ್ದ ಸೀತಾರಾಮ್‌ ವಾಲ್ಮೀಕಿ, ತಮಗೆ ಅಗತ್ಯವಾದ ಮೇವನ್ನು ತಾವೇ ಸಂಪಾದಿಸಿಕೊಳ್ಳುವುದಾಗಿ ತಿಳಿಸಿದ್ದರು.

ಈ ಪ್ರತ್ಯುತ್ತರದಿಂದ ಕಂಗೆಟ್ಟ ಮೇಲ್ಜಾತಿಯ ಜನ ಸೀತಾರಾಮ್‌ ವಾಲ್ಮಿಕಿಗೆ ಮನಬಂದತೆ ತಳಿಸಲು ಪ್ರಾರಂಭಿಸಿದ್ದರು. ನಂತರದಲ್ಲಿ ಸನಿಹದಲ್ಲೇ ಇದ್ದ ಹುಲ್ಲಿನ ಬಣವೆಯ ಬಳಿಗೆ ಸೀತಾರಾಮ್‌ರನ್ನು ಎಳೆದೊಯ್ದು ಬೇವಿನ ಮರಕ್ಕೆ ಕಟ್ಟಿ ಮೂತ್ರ ಕುಡಿಸಲು ಪ್ರತ್ನಿಸಿದ್ದಾರೆ.

ಮೇಲ್ಜಾತಿಯ ಜನ ನನ್ನ ಮೀಸೆಯನ್ನು ಹಿಡಿದು ಎಳೆದಾಡಿದ್ದರು. ಮೂತ್ರವನ್ನು ಕುಡಿಯುವಂತೆ ಒತ್ತಾಯಿಸಿದ್ದರು. ಜತೆಗೆ ನನ್ನ ಮೇಲೆ ಒಂದರ ಹಿಂದೆ ಒಂದರಂತೆ ಚಪ್ಪಲಿ ಹಾಗೂ ಬೂಟುಗಳು ಬೀಳುತ್ತಿದ್ದವು. 
ಸೀತರಾಮ್‌ ವಾಲ್ಮೀಕಿ, ಹಲ್ಲೆಗೆ ಒಳಪಟ್ಟವರು.

ಹತ್ತಿರದ ಹಜ್ರತ್‌ಪುರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಮೊಖದ್ದಮೆ ದಾಖಲಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 308, 332, 504 ಹಾಗೂ 506ರ ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ ಬೆಳಗ್ಗೆ 4 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಜಯ್‌ ಸಿಂಗ್‌, ಶೈಲೇಂದ್ರ ಸಿಂಗ್‌, ವಿಕ್ರಮ್‌ ಸಿಂಗ್‌ ಹಾಗೂ ಪಿಂಕು ಸಿಂಗ್‌ ಎಂದು ಗುರುತಿಸಲಾಗಿದೆ. ಈ 4 ಜನರೂ ಕೂಡ ಅಜಮ್‌ಪುರ ಬಿಸೌಲಿಯಾ ಎಂಬ ಗ್ರಾಮದ ನಿವಾಸಿಗಳಾಗಿದ್ದಾರೆ.

ಸೋಮವಾರ ಇನ್ಸ್‌ಪೆಕ್ಟರ್‌ ಜನರಲ್‌ ದೃವಕಾಂತ್‌ ಠಾಕೂರ್‌ ಸೀತಾರಾಮ್‌ ವಾಲ್ಮೀಕಿ ಹಾಗೂ ಅವರ ಮನೆಯವರನ್ನು ಭೇಟಿಯಾಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಘಟನೆ ನಡೆಯುತ್ತಿದ್ದ ಸಂಧರ್ಭದಲ್ಲಿ ಪರಿಚಿತರಿಂದ ಸುದ್ದಿ ತಿಳಿದ ಸೀತಾರಾಮ್‌ ವಾಲ್ಮೀಕಿಯವರ ಪತ್ನಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ದೌರ್ಜನ್ಯ ನಡೆಯುತ್ತಿರುವ ವಿಷಯವನ್ನು ತಿಳಿಸಿದರು. ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿ ರಾಜೇಂದ್ರ ಕಶ್ಯಪ್‌ ಕಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿರಲಿಲ್ಲ. ಪಟ್ಟು ಬಿಡದ ಅವರು ಪೊಲೀಸರ ತುರ್ತು ಕರೆ ಸಂಖ್ಯೆ 100ಗೆ ಕರೆ ಮಾಡಿ ತನ್ನ ಗಂಡನನ್ನು ರಕ್ಷಿಸುವಂತೆ ಬೇಡಿಕೊಂಡಿದ್ದರು. ಎಪ್ರಿಲ್‌ 29, ಭಾನುವಾರದಂದು ಪ್ರಥಮ ತನಿಖಾ ವರದಿಯನ್ನು ದಾಖಲಿಸಲಾಗಿತ್ತು.

ಕಳೆದ ವರ್ಷ ಮೇ 7ರಂದು ಮಧ್ಯ ಪ್ರದೇಶದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಒರ್ವ ಮದುವೆಯ ಸ್ಥಳಕ್ಕೆ ಅಲಂಕೃತಗೊಂಡಿದ್ದ ಕಾರಿನಲ್ಲಿ ಬಂದ ಕಾರಣಕ್ಕಾಗಿ ಥಳಿತಕ್ಕೆ ಒಳಗಾಗಿದ್ದ. ಅದೇ ತಿಂಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಖುಷಿನಗರಕ್ಕೆ ಭೇಟಿ ನೀಡುವ ವೇಳೆಯಲ್ಲಿ ಸ್ಥಳೀಯ ಅಡಳಿತ ದಲಿತ ಸಮುದಾಯದವರಿಗೆ ಸೋಪು ಹಾಗೂ ಶಾಂಪೂಗಳನ್ನು ವಿತರಿಸಿ ಶುಭ್ರವಾಗಿ ಬರುವಂತೆ ತಿಳಿಸಿ ಅವಮಾನ ಎಸಗಿತ್ತು.

ಮಹಾರಾಷ್ಟ್ರದಲ್ಲಿ ದಲಿತನೊಬ್ಬನ ಹೆಣವನ್ನು ಹೂಳಲು ಅವಕಾಶ ನೀಡಿರಲಿಲ್ಲ. ಗುಜರಾತ್‌ನಲ್ಲಿ ಪಿಯುಶ್‌ ಕುಮಾರ್‌ ಎಂಬ ದಲಿತ ವ್ಯಕ್ತಿಯ ಮೇಲೆ ರಜಪೂತ್‌ ಸಮುದಾಯದ ಜನರು ವಿನಾಕಾರಣವಾಗಿ ಹಲ್ಲೆ ನಡೆಸಿದ್ದರು. ಇದೇ ರಾಜ್ಯದ ಹಳ್ಳಿಯೊಂದರಲ್ಲಿ 30 ವರ್ಷದ ದಲಿತ ವ್ಯಕ್ತಿಯೊಬ್ಬ ದೊಡ್ಡದಾಗಿ ಮೀಸೆ ಬಿಟ್ಟದ್ದ ಕಾರಣಕ್ಕಾಗಿ ಹಲ್ಲೆಗೆ ಒಳಗಾಗಿದ್ದ.

ಕರ್ನಾಟಕದ ಬೇಲೂರಿನಲ್ಲಿ ವಿಜದ ದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ 5 ಜನ ದಲಿತರ ಮೇಲೆ ದೌರ್ಜನ್ಯ ಎಸಗಲಾಗಿತ್ತು. ಕೆಲ ದಿನಗಳ ಹಿಂದೆ ವರನೊಬ್ಬ ಕುದುರೆಯನ್ನು ಏರಿ ಬರುತ್ತಿದ್ದ ಕಾರಣಕ್ಕಾಗಿ ಮೇಲ್ಜಾತಿಯ ಜನರಿಂದ ಹಲ್ಲೆಗೆ ಒಳಗಾಗಿದ್ದ.

ಹೀಗೆ ಎಗ್ಗಿಲ್ಲದೆ ಸಾಗುತ್ತಿರುವ ಜಾತಿ ದೌರ್ಜನ್ಯಗಳು ದೇಶದ ಘನತೆ ಎಷ್ಟು ಎನ್ನುವುದನ್ನು ಸಾರಿ ಹೇಳುತ್ತಿವೆ. ವಿಶ್ವದ ಮುಂದೆ ಭಾರತ ತಲೆ ತಗ್ಗಿಸುವಂತೆ ಮಾಡಿವೆ. ಏನೇ ಅಭಿವೃದ್ಧಿ ಅಂದರೂ, ದೇಶ ಜಾತಿಯ ವಿಷಮ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪದೇ ಪದೇ ಸೋಲುತ್ತಿರುವುದಕ್ಕೆ ಇಂತಹ ಘಟನೆಗಳು ಸಾಕ್ಷಿಗಳಾಗಿವೆ.