ಕಾಬೂಲ್ ಅವಳಿ ಸ್ಫೋಟ: 9 ಪತ್ರಕರ್ತರು ಸೇರಿ 29 ಬಲಿ
ಸುದ್ದಿ ಸಾರ

ಕಾಬೂಲ್ ಅವಳಿ ಸ್ಫೋಟ: 9 ಪತ್ರಕರ್ತರು ಸೇರಿ 29 ಬಲಿ

2018ರ ಅಕ್ಟೋಬರ್‌ ತಿಂಗಳಿನಲ್ಲಿ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಹಾಗೂ ಜಿಲ್ಲಾ ಆಡಳಿತಕ್ಕೆ ಚುನಾವಣೆ ನಡೆಯಲಿದೆ. ಹಲವು ಅಡೆತಡೆಗಳ ಹಿನ್ನೆಲೆಯಲ್ಲಿ 2017ರಲ್ಲಿಯೇ ನಡೆಯಬೇಕಾದ ಚುನಾವಣೆ ಮುಂದೂಡಲ್ಪಡುತ್ತಿದೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸೋಮವಾರ ನಡೆದ ಅವಳಿ ಬಾಂಬ್‌ ಸ್ಫೋಟದಲ್ಲಿ 29 ಜನ ಸಾವನ್ನಪ್ಪಿದ್ದಾರೆ. ಇದರಲ್ಲಿ 9 ಪತ್ರಕರ್ತರೂ ಸೇರಿದ್ದಾರೆ.

ರಾಜಧಾನಿಯ ಶಾಶ್ದರಕ್ ಪ್ರದೇಶದಲ್ಲಿರುವ ರಾಷ್ಟ್ರೀಯ ರಕ್ಷಣಾ ನಿರ್ದೇಶನಾಲಯದ ಸಮೀಪದಲ್ಲಿಯೇ ಸೂಸೈಡ್‌ ಬಾಂಬರ್‌ ಒಬ್ಬ ಮೊದಲು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.

ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಕಟ್ಟಡಗಳು ನಲುಗಿದ್ದು ರಕ್ಷಣಾ ಸಿಬ್ಬಂದಿ, ಪತ್ರಕರ್ತರು ಸ್ಥಳಕ್ಕೆ ಆಗಮಿಸಿದ್ದಾರೆ. ರಕ್ಷಣಾ ಕಾರ್ಯಚರಣೆ ಆರಂಭವಾಗಿದೆ.

ಸುಮಾರು 20 ನಿಮಿಷಗಳ ನಂತರ ಅದೇ ಸ್ಥಳದ ಸಮೀಪದಲ್ಲಿ ಮತ್ತೊಬ್ಬ ಸೂಸೈಡ್‌ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಪರಿಣಾಮ ಪತ್ರಕರ್ತರೂ ಸೇರಿದಂತೆ 29 ಜನ ಸಾವಿಗೀಡಾದರು. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚು ಸಾಧ್ಯತೆಯೂ ಇದೆ. ಸ್ಪೋಟದ ಪರಿಣಾಮವಾಗಿ ಹಲವಾರು ಜನ ಗಾಯಗೊಂಡಿದ್ದಾರೆ. ಎರಡೂ ಸ್ಫೋಟಗಳ ಹೊಣೆಯನ್ನು ಐಎಸ್‌ಐಎಸ್‌ ಹೊತ್ತುಕೊಂಡಿದೆ.

ಎಎಫ್‌ಪಿ ಸುದ್ದಿ ಸಂಸ್ಥೆ ತನ್ನ ಒಬ್ಬರು ಫೊಟೋ ಜರ್ನಲಿಸ್ಟ್ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿಕೊಂಡಿದೆ. ಟೊಲೊ ನ್ಯೂಸ್‌ ಕೂಡ, ತನ್ನಿಬ್ಬರು ಸಿಬ್ಬಂದಿಗಳು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಬಾಂಬ್ ಸ್ಫೋಟಗೊಂಡ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಕ್ಷತಾ ಪಡೆಗಳ ಗಸ್ತು ಹೆಚ್ಚಾಗಿತ್ತು. ನ್ಯಾಟೋ ಪಡೆಗಳು ಕೂಡ ಇಲ್ಲಿಯೇ ವಾಸ್ತವ್ಯ ಹೂಡಿದ್ದವು. ಇಷ್ಟಾದರೂ, ಅವಳಿ ಸ್ಫೋಟಗಳು ನಡೆದಿರುವುದು ಸಹಜವಾಗಿಯೇ ಸುರಕ್ಷತಾ ಕ್ರಮಗಳ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಕಳೆದ ವಾರವಷ್ಟೆ ಕಾಬೂಲಿನ ಮತದಾರರ ನೋಂದಾವಣಿ ಕೇಂದ್ರದ ಮೇಲೆ ಭೀಕರ ಬಾಂಬ್ ದಾಳಿ ನಡೆದಿತ್ತು. ಈ ಸಮಯದಲ್ಲಿ ಸುಮಾರು 63 ಜನ ಸಾವಿಗೀಡಾಗಿದ್ದರು. ನೂರಾರು ಜನ ಗಾಯಗೊಂಡಿದ್ದರು.

2018ರ ಅಕ್ಟೋಬರ್‌ ತಿಂಗಳಿನಲ್ಲಿ ಅಫ್ಘಾನಿಸ್ತಾನದ ಪಾರ್ಲಿಮೆಂಟ್ ಹಾಗೂ ಜಿಲ್ಲಾ ಆಡಳಿತಕ್ಕೆ ಚುನಾವಣೆ ನಡೆಯಲಿದೆ. ಹಲವು ಅಡೆತಡೆಗಳ ಹಿನ್ನೆಲೆಯಲ್ಲಿ 2017ರಲ್ಲಿಯೇ ನಡೆಯಬೇಕಾದ ಚುನಾವಣೆ ಮುಂದೂಡಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ದಾಳಿಗಳು ಹೆಚ್ಚಿದ್ದು, ಇತ್ತೀಚಿನ ದಿನಗಳಲ್ಲಿ ಹತೋಟಿ ಮೀರಿ ಸ್ಫೋಟಗಳು ನಡೆಯುತ್ತಿವೆ.