ಪಿಯುಸಿ ವಿಧ್ಯಾರ್ಥಿಗಳ ಫಲಿತಾಂಶ ಪ್ರಕಟ: ಉಡುಪಿಯನ್ನು ಹಿಂದಿಕ್ಕಿದ ದಕ್ಷಿಣ ಕನ್ನಡ
ಸುದ್ದಿ ಸಾರ

ಪಿಯುಸಿ ವಿಧ್ಯಾರ್ಥಿಗಳ ಫಲಿತಾಂಶ ಪ್ರಕಟ: ಉಡುಪಿಯನ್ನು ಹಿಂದಿಕ್ಕಿದ ದಕ್ಷಿಣ ಕನ್ನಡ

ಸೋಮವಾರ ಬೆಳಗ್ಗೆ 11 ಗಂಟೆಯಿಂದ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಿದೆ. ಮಂಗಳವಾರ ಆಯಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ಫಲಿತಾಂಶಕ್ಕಾಗಿ kar.nic.in, karresults.in ಹಾಗೂ pue.kar.nic.in ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು. 

ಮಾರ್ಚ್‌ ತಿಂಗಳ 1ರಿಂದ 17ರವರೆಗೂ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಹಾಗೂ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿದೆ. 2017-18ರ ಸಾಲಿನಲ್ಲಿ ಪರೀಕ್ಷೆಗೆ ಹಾಜಾರಾಗಿರುವ ಒಟ್ಟು 6. 90 ಲಕ್ಷ ವಿದ್ಯಾರ್ಥಿಗಳ ಹಾಜರಾಗಿದ್ದರು. ಇವರಲ್ಲಿ 3.50 ಲಕ್ಷ ವಿದ್ಯಾರ್ಥಿಗಳಿದ್ದರೆ 3.34 ಲಕ್ಷ ಜನ ವಿದ್ಯಾರ್ಥಿನಿಯರಿದ್ದರು. 

ರಾಜ್ಯಾದ್ಯಂತ 1,004 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಾವು ಓದಿದ ಕಾಲೇಜನ್ನು ಬಿಟ್ಟು ಬೇರೆ ಕಾಲೇಜಿನ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆಸುವ ವ್ಯವಸ್ಥೆಯಾಗಿತ್ತು. ಎಲ್ಲಾ ಪರೀಕ್ಷಾ ಕೊಠಡಿಗಳು ಸಿಸಿಟಿವಿ ಕಣ್ಗಾವಲಿನಲ್ಲಿದ್ದವು. ಪ್ರಶ್ನೆ ಪತ್ರಿಕೆಯನ್ನು ರವಾನಿಸುವ ವಾಹನಗಳಿಗೂ ಕೂಡ ಜಿಪಿಎಸ್‌ ಅಳವಡಿಸಲಾಗಿತ್ತು. ಕಟ್ಟುನಿಟ್ಟಾಗಿ ನಡೆದಿರುವ ಈ ಬಾರಿಯ ಪಿಯುಸಿ ಪರೀಕ್ಷೆಗಳು ಕೆಲವರಲ್ಲಿ ಸಂತಸವನ್ನು, ಕೆಲವರೊಳಗೆ ಭಯವನ್ನೂ ತುಂಬಿದ್ದವು. ಇಂದು ಇವಕ್ಕೆಲ್ಲಾ ತೆರೆ ಬೀಳಲಿದೆ.

ಸೋಮವಾರ ಬೆಳಗ್ಗೆ 11 ಗಂಟೆಯಿಂದ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಮಂಗಳವಾರ ಆಯಾ ಕಾಲೇಜುಗಳಲ್ಲಿ ಫಲಿತಾಂಶ ದೊರೆಯಲಿದೆ. ಫಲಿತಾಂಶಕ್ಕಾಗಿ kar.nic.in, karresults.in ಹಾಗೂ pue.kar.nic.in ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಕಿದೆ. http://karresults.nic.in ಜಾಲತಾಣದಲ್ಲಿ ಅಗತ್ಯವಿರುವ ಮಾಹಿತಿಯನ್ನು ತುಂಬಿ ಸಬ್‌ಮಿಟ್‌ ಎಂದು ಕ್ಲಿಕ್ಕಿಸಿದರೆ ಫಲಿತಾಂಶ ತೆರೆದುಕೊಳ್ಳುತ್ತದೆ. ಫಲಿತಾಂಶದ ಮಾಹಿತಿಯನ್ನು ಪ್ರಿಂಟ್‌ಔಟ್‌ ತೆಗೆದುಕೊಳ್ಳಬಹುದು.

ಎಸ್‌ಎಂಎಸ್‌ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಪಡೆಯಬಹುದು. ಮೊಬೈಲ್‌ನಲ್ಲಿ KAR12 ಎಂದು ಟೈಮ್‌ ಮಾಡಿ ಸ್ಪೇಸ್‌ ಕೊಟ್ಟು ನಿಮ್ಮ ನೊಂದಣಿ ಸಂಖ್ಯೆಯನ್ನು ಬರೆದು 56263 ನಂಬರ್‌ಗೆ ಎಸ್‌ಎಂಎಸ್‌ ಕಳಿಸಬೇಕು. ನಿಮ್ಮ ಮೊಬೈಲ್‌ಗೆ ನಿಮ್ಮ ಫಲಿತಾಂತ ಬರುತ್ತದೆ.

ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪಡೆಯಲು, ಮರು ಎಣಿಕೆ ಹಾಗೂ ಮರು ಮೌಲ್ಯಮಾಪನಕ್ಕೆ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸುವುದಾಗಿ ಮಂಡಳಿ ತಿಳಿಸಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.90ರಷ್ಟು ಫಲಿತಾಂಶವನ್ನು ಪಡೆದಿದ್ದ ಉಡುಪಿ ಜಿಲ್ಲೆ ಮೊದಲನೇ ಸ್ಥಾನವನ್ನು ಗಳಿಸಿತ್ತು. ನಂತರದ ಸ್ಥಾನಗಳು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಪಾಲಾಗಿದ್ದವು. ಶೇ.42.05ರಷ್ಟು ಫಲಿತಾಂಶವನ್ನು ಪಡೆದು ಕೊನೆಯ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. 132 ಕಾಲೇಜುಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಕೂಡ ತೇರ್ಗಡೆಯಾಗಿರಲಿಲ್ಲ. ಈ ಬಾರಿ ಉಡುಪಿಯನ್ನು ಹಿಂದಿಕ್ಕಿರುವ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದೆ.