‘ಅಂಬೇಡ್ಕರ್ ಓರ್ವ ಬ್ರಾಹ್ಮಣ’: ಗುಜರಾತ್ ವಿಧಾನಸಭೆ ಸ್ವೀಕರ್ ಬಾಲಿಷ ಹೇಳಿಕೆ
ಸುದ್ದಿ ಸಾರ

‘ಅಂಬೇಡ್ಕರ್ ಓರ್ವ ಬ್ರಾಹ್ಮಣ’: ಗುಜರಾತ್ ವಿಧಾನಸಭೆ ಸ್ವೀಕರ್ ಬಾಲಿಷ ಹೇಳಿಕೆ

ಸಾಲು ಸಾಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ನಾಯಕರ ಸಾಲಿಗೆ ಹೊಸ ಸೇರ್ಪಡೆ ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ.

ಸಾಲು ಸಾಲು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವವರ ಬಿಜೆಪಿ ನಾಯಕರ ಸಾಲಿಗೆ ಹೊಸ ಸೇರ್ಪಡೆ ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ.

ಡಾ. ಬಿ. ಆರ್. ಅಂಬೇಡ್ಕರ್ ಓರ್ವ ಬ್ರಾಹ್ಮಣ ಎನ್ನುವ ಮೂಲಕ ಬಿಜೆಪಿ ಹುಟ್ಟುಹಾಕುತ್ತಿರುವ ‘ಹೇಳಿಕೆ ಚರ್ಚೆ’ಗೆ ಹೊಸ ಆಯಾಮವನ್ನೇ ನೀಡಿದ್ದಾರೆ. ಗಾಂಧಿನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮೆಘಾ ಬ್ರಾಹ್ಮಿನ್ ಬಿಸಿನೆಸ್ ಸಮ್ಮಿತ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಭಗವಾನ್ ಕೃಷ್ಣ ಹಿಂದುಳಿದ ಸಮುದಾಯಕ್ಕೆ ಸೇರಿದವರು ಎಂದಿದ್ದಾರೆ.

“ಅಂಬೇಡ್ಕರ್ ಬ್ರಾಹ್ಮಣ ಎಂದು ಹೇಳಲು ನನಗೆ ಯಾವ ಅಂಜಿಕೆಯೂ ಇಲ್ಲ. ಅವರ ಹೆಸರು ಬ್ರಾಹ್ಮಣ ಸಮುದಾಯದ ಜಾತಿ ಸೂಚಕವಾಗಿದೆ. ಅಂಬೇಡ್ಕರ್‌ಗೆ ಈ ಹೆಸರನ್ನು ಅವರ ಗುರುಗಳೇ ನೀಡಿದ್ದರು. ಹೀಗಾಗಿ ಓದಿನಲ್ಲಿ ಈ ಹೆಚ್ಚಿನ ಸಾಧನೆ ಮಾಡಿದ ವ್ಯಕ್ತಿಯನ್ನು ಬ್ರಾಹ್ಮಣ ಎಂದು ಕರೆಯಬಹುದು. ಇಂಥ ಸಾಧನೆ ಮಾಡಿದ ಮತ್ತೊಬ್ಬ ನಾಯಕ ನರೇಂದ್ರ ಮೋದಿ ಕೂಡ ಬ್ರಾಹ್ಮಣರೇ,” ಎಂದು ಅವರು ವ್ಯಾಖ್ಯಾನಿಸಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ತ್ರಿವೇದಿ, “ಭಗವಾನ್ ಕೃಷ್ಣ ಒಬ್ಬ ಒಬಿಸಿ ಆಗಿದ್ದ. ರಾಮ ಒಬ್ಬ ಕ್ಷತ್ರಿಯನಾಗಿದ್ದ. ಈ ಇಬ್ಬರನ್ನೂ ದೇವರನ್ನಾಗಿ ಮಾಡಿದ ಹೆಗ್ಗಳಿಕೆ ಬ್ರಾಹ್ಮಣ ಋಷಿ ಸಂದೀಪಿನಿಗೆ ಮಾತ್ರ ಸಲ್ಲಬೇಕು,” ಎಂದು ಹೇಳಿದ್ದಾರೆ.

“ವಿದ್ಯಾವಂತ ಬ್ರಾಹ್ಮಣ ಸಮುದಾಯ ಎಂದೂ ಅಧಿಕಾರದ ಹಸಿವು ಅನುಭವಿಸಿಲ್ಲ. ಚಂದ್ರಗುಪ್ತ ಮೌರ್ಯ, ಭಗವಾನ್ ಕೃಷ್ಣರ ಸಾಧನೆಗೆ ಬ್ರಾಹ್ಮ ಣ ಸಮುದಾಯ ಬಹುದೊಡ್ಡ ಕೊಡುಗೆ ನೀಡಿದೆ,” ಎಂದಿರುವ ಅವರು “ದೇವರುಗಳನ್ನು ಸೃಷ್ಟಿಸಿದ್ದೇ ಬ್ರಾಹ್ಮಣರು. ಗೋವು ಮೇಯಿಸಿಕೊಂಡಿದ್ದ ಕೃಷ್ಣನನ್ನೂ ದೇವರನ್ನಾಗಿ ಮಾಡಿದ್ದು ಕೂಡ ಬ್ರಾಹ್ಮಣ ಋಷಿ ಸಂದೀಪಿನಿ,” ಎಂದು ಹೇಳಿಕೊಂಡಿದ್ದಾರೆ.

ಗುಜರಾತ್ ಕೈಗಾರಿಕಾ ಅಭಿವೃದ್ದಿ ಮಂಡಳಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಹಾಜರಿದ್ದರು. ಅಂಬೇಡ್ಕರ್, ಮೋದಿ, ಕೃಷ್ಣನ ಕುರಿತ ಸ್ಪೀಕರ್ ರಾಜೇಂದ್ರ ಭಾಯ್ ಹೇಳಿಕೆ ಸರಿ ಎಂದು ಈ ಇಬ್ಬರೂ ನಾಯಕರು ಸಮರ್ಥಿಸಿಕೊಂಡಿದ್ದಾರೆ.

“ಜಾತಿ ವ್ಯಕ್ತಿ ಮಾಡುವ ಕೆಲಸದಿಂದ ನಿರ್ಧರಿಸಲ್ಪಡುತ್ತದೆ ಹೊರತು ಹುಟ್ಟಿನಿಂದ ಅಲ್ಲ. ತಮ್ಮ ಕೆಲಸದಿಂದ ಬ್ರಾಹ್ಮಣರು ಗುರುತಿಸಿಕೊಂಡಿದ್ದಾರೆ. ಓದು ಮತ್ತು ಜ್ಞಾನವನ್ನು ಗಳಿಸಿದಾತ ಬ್ರಾಹ್ಮಣನಾಗಿರುತ್ತಾನೆ ಎಂದು ಗೀತೆಯೇ ಹೇಳುತ್ತದೆ,” ಎಂದು ತ್ರಿವೇದಿ ಸಿದ್ಧಮಾದರಿಯ ಸನಾತನವಾದಿಗಳ ಹೇಳಿಕೆಯನ್ನು ಮುಂದಿಟ್ಟಿದ್ದಾರೆ.

ವಿಶೇಷ ಅಂದರೆ, ದೆಹಲಿ ಬಿಜೆಪಿ ಸಂಸದ ಹಾಗೂ ದಲಿತ ಮುಖಂಡ ಉದಿತ್ ರಾಜ್ ಗುಜರಾತ್ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ತ್ರಿವೇದಿಯ ಇಂಥ ಕಲ್ಪಿತ ಹೇಳಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ. ಅವರ ಕಲ್ಪಿತ ಹೇಳಿಕೆಗಳು ಪಕ್ಷವನ್ನು ಸಾಕಷ್ಟು ಒಡೆದಿದೆ,” ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಕೆಲ ದಿನಗಳ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಸರ್ಕಾರ, ಅಂಬೇಡ್ಕರ್ ತಂದೆ ರಾಮ್ ಜಿ ಹಿಂದೂ ಆಗಿದ್ದರು. ಹೀಗಾಗಿ ಅಂಬೇಡ್ಕರ್ ಕೂಡ ಹಿಂದೂ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದಲ್ಲದೆ, ಅಂಬೇಡ್ಕರ್ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯುವ ಮೂಲಕ ಬಾರಿ ವಿವಾದ ಸೃಷ್ಟಿಸಿತ್ತು.

‘ಅಂಬೇಡ್ಕರ್ ಓರ್ವ ಬ್ರಾಹ್ಮಣ’: ಗುಜರಾತ್ ವಿಧಾನಸಭೆ ಸ್ವೀಕರ್ ಬಾಲಿಷ ಹೇಳಿಕೆ

ಇತ್ತೀಚೆಗೆ, ಮಧ್ಯ ಪ್ರದೇಶ ಸರ್ಕಾರ ಪೊಲೀಸ್ ಪೇದೆಗಳ ನೇಮಕಕ್ಕಾಗಿ ಸಾಮರ್ಥ್ಯ ಪರೀಕ್ಷೆ ಮಾಡುವ ವೇಳೆ ದಲಿತ ಅಭ್ಯರ್ಥಿಗಳ ಎದೆಯ ಮೇಲೆ ಎಸ್ಸಿ, ಎಸ್‌ಟಿ ಎಂದು ಕಪ್ಪು ಶಾಹಿಯಲ್ಲಿ ಬರೆದಿದ್ದ ಚಿತ್ರಗಳು ಸುದ್ದಿಕೇಂದ್ರಕ್ಕೆ ಬಂದಿದ್ದವು. ದಲಿತ ಪದವನ್ನೇ ನಿಷೇಧಿಸಬೇಕು ಎಂದು ಹೇಳುವ ಬಿಜೆಪಿಯೇ ಹೀಗೆ ಜಾತಿ ಸೂಚಕ ಫಲಕವನ್ನು ಬಳಸಿದ್ದು ಟೀಕೆಗೆ ಗುರಿಯಾಗಿತ್ತು.