samachara
www.samachara.com
ಪೋಸ್ಟರ್‌ ರಾಜಕಾರಣ; ಕಾಂಗ್ರೆಸಿಗರಿಗೆ ಪ್ರವೇಶ ನಿರಾಕರಿಸಿದ ಬಂಟ್ವಾಳದ ‘ಹಿಂದೂಗಳು’
ಸುದ್ದಿ ಸಾರ

ಪೋಸ್ಟರ್‌ ರಾಜಕಾರಣ; ಕಾಂಗ್ರೆಸಿಗರಿಗೆ ಪ್ರವೇಶ ನಿರಾಕರಿಸಿದ ಬಂಟ್ವಾಳದ ‘ಹಿಂದೂಗಳು’

ಸ್ಥಳೀಯರ ನಡುವೆ ವೈಮನಸ್ಯಕ್ಕೂ ಈ ಪೋಸ್ಟರ್‌ ರಾಜಕಾರಣ ದಾರಿಯಾಗಿತ್ತು. ಈ ಪೋಸ್ಟರ್‌ಗಳನ್ನು ತೆರವು ಮಾಡಿಸಲು ಸ್ಥಳೀಯ ಪೊಲೀಸರು ಮುಂದಾಗಿದ್ದರು. ಮನೆಗಳ ಮುಂದೆ ಪ್ರದರ್ಶಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಹೆಜ್ಜೆ ಇಟ್ಟಿದ್ದರು.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಮನೆಗಳ ಮುಂದೆ ‘ನಾಯಿ ಇದೆ, ಎಚ್ಚರಿಕೆ’ ಎಂಬ ಫಲಕ ಕಾಣುವುದು ಸಾಮಾನ್ಯ. ಇಂತಹ ಫಲಕಗಳನ್ನು ಹಾಕುವ ಮೂಲಕ ಮನೆಗೆ ಬರುವವರಿಗೆ ಮುನ್ನೆಚ್ಚರಿಕೆ ನೀಡುವ ಸಾಧ್ಯತೆಯನ್ನು ಜನ ಕಂಡುಕೊಂಡಿದ್ದರು. ಈಗ ಅದೇ ಐಡಿಯಾ ರಾಜಕೀಯ ಪಕ್ಷಗಳ ವಿರುದ್ಧ ಜನ ಪ್ರಯೋಗಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಕೇರಳದಲ್ಲಿ ನಡೆದ ಈ ಬೆಳವಣಿಗೆ ಗಮನ ಸೆಳೆದಿತ್ತು. ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣ ನಂತರ ಬಿಜೆಪಿ ವಿರುದ್ಧ ಫಲಕ ಪ್ರತಿಭಟನೆಯೊಂದು ನಡೆದಿತ್ತು. ನಮ್ಮ ಮನೆಯಲ್ಲಿ ಪುಟ್ಟ ಮಕ್ಕಳಿದ್ದಾರೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ನಮ್ಮ ಮನೆಯನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂಬ ಭಾವಾರ್ಥವನ್ನು ಹೊಂದಿರುವ ಫಲಕಗಳನ್ನು ತಮ್ಮ ಮನೆಯ ಬಾಗಿಲು, ಗೇಟುಗಳಿಗೆ ತೂಗಿ ಬಿಟ್ಟಿದ್ದರು.

ಈ ಬೋರ್ಡುಗಳು ಸಾಮಾಜಿಕ ಜಾಲತಾಣಗಳ ತುಂಬಾ ಹರಿದಾಡಿದ್ದವು. ಈ ಬೋರ್ಡುಗಳಿಂದ ಪ್ರೇರೇಪಣೆಗೊಂಡಿದ್ದ ಜನ ತಮ್ಮ ಮನೆಯ ಮುಂದೆಯೂ ಈ ರೀತಿಯ ಬೋರ್ಡುಗಳನ್ನು ಬರೆದುಹಾಕಿ, ಆ ಫೋಟೊಗಳನ್ನು ಫೇಸ್‌ಬುಕ್‌, ವಾಟ್ಸ್‌ಆಪ್‌ಗಳಲ್ಲಿ ಪಸರಿಸಿದ್ದರು. ಕೆಲವು ದಿನಗಳಿಂದ ಈ ಕ್ರಿಯೆ ತಣ್ಣಾಗಿತ್ತು.

ಈಗ ದಕ್ಷಿಣ ಕನ್ನಡದ ಸರದಿ. ಕಾಂಗ್ರೆಸ್‌ ವಿರೋಧಿಗಳು ಈ ಬೋರ್ಡ್‌ ಬರೆದು ಹಾಕುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಬಂಟ್ವಾಳ ಸುತ್ತ ಮುತ್ತಲಿನ ಸಹಸ್ರಾರು ಗ್ರಾಮಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರ ಪ್ರವೇಶವನ್ನು ನಿಷೇಧಿಸುವ ಬಿತ್ತಿ ಫಲಕಗಳು ರಾರಾಜಿಸುತ್ತಿವೆ. ನೂರು, ಇನ್ನೂರು ಮನೆಗಳಿಗೆ ಸೀಮಿತವಾಗಿದ್ದ ಈ ಬೋರ್ಡ್‌ಗಳು ಹಲವು ಸಾವಿರಗಳನ್ನು ದಾಟಲು ಪೊಲೀಸರೂ ಕೂಡ ಕಾರಣವಾಗಿದ್ದಾರೆ.

“ಇದು ಹಿಂದೂ ಮನೆ. ಬಡ ಮಕ್ಕಳ ಅನ್ನ ಕದ್ದವರಿಗೆ ಮತ್ತು ಅಲ್ಲಾಹುವಿನ ಕೃಪೆಯಿಂದ ಗೆದ್ದ ಕಾಂಗ್ರೆಸ್‌ ಪಕ್ಷದವರಿಗೆ ಈ ಮನೆ ಪ್ರವೇಶ ಇಲ್ಲ,” ಎಂಬ ಸಂದೇಶ ಈ ಬೋರ್ಡ್‌ಗಳಲ್ಲಿದೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಲ್ಲಿ ಎದ್ದು ನಿಂತಿರುವ ಈ ಬೋರ್ಡ್‌ ರಾಜಕಾರಣ ಸ್ಥಳೀಯ ಕಾಂಗ್ರೆಸ್‌ ಪಕ್ಷದವರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಪೋಸ್ಟರ್‌ ರಾಜಕಾರಣ ಆರಂಭವಾಗಿದ್ದು ಬಂಟ್ವಾಳ ಸಮೀಪದ ಕನ್ಯಾನ ಎಂಬ ಗ್ರಾಮದಿಂದ. ಮೊದಲು ಕೆಲವು ಮನೆಗಳ ಮುಂದೆ ಈ ಬೋರ್ಡ್‌ ಕಾಣಿಸಿತ್ತು. ಕೆಲವರಡು ದಿನಗಳಲ್ಲಿ ಹಲವು ನೂರು ಮನೆಗಳ ಮುಂದೆ ಇಂತಹ ಬೋರ್ಡ್‌ಗಳು ಕಾಣಿಸಿಕೊಂಡಿದ್ದವು. ‘ಇದು ಹಿಂದೂ ಮನೆ. ಕಾಂಗ್ರೆಸಿಗರು ದೂರವಿರಿ’ ಎನ್ನುವ ಸಂದೇಶವನ್ನು ಈ ಬೋರ್ಡ್‌ಗಳು ಹೊತ್ತು ನಿಂತಿದ್ದವು.

ಸ್ಥಳೀಯರ ನಡುವೆ ವೈಮನಸ್ಯಕ್ಕೂ ಈ ಪೋಸ್ಟರ್‌ ರಾಜಕಾರಣ ದಾರಿಯಾಗಿತ್ತು. ಈ ಪೋಸ್ಟರ್‌ಗಳನ್ನು ತೆರವು ಮಾಡಿಸಲು ಸ್ಥಳೀಯ ಪೊಲೀಸರು ಮುಂದಾಗಿದ್ದರು. ಈ ರೀತಿಯಾಗಿ ಬೋರ್ಡ್‌ಅನ್ನು ಮನೆಗಳ ಮುಂದೆ ಪ್ರದರ್ಶಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಹೆಜ್ಜೆ ಇಟ್ಟಿದ್ದರು. ಪೊಲೀಸರ ಈ ನಡೆಗೆ ವಿರೋಧ ವ್ಯಕ್ತವಾಗಿತ್ತು. ಪೋಸ್ಟರ್‌ ಪ್ರದರ್ಶನ ನಮ್ಮ ಅಭಿವ್ಯಕ್ತಿಯ ಹಕ್ಕಿನ ಭಾಗ ಎಂಬ ವಾದ ಕೇಳಿ ಬಂದಿತ್ತು.

ಈಗ ಪೊಲೀಸರ ಮಧ್ಯ ಪ್ರವೇಶಿಕೆಯಿಂದ ಕೋಪಗೊಂಡಿರುವ ಹಲವಾರು ಜನ ಪೋಸ್ಟರ್‌ ರಾಜಕಾರಣಕ್ಕೆ ಬೆಂಬಲವಾಗಿ ನಿಂತಿದ್ದಾರೆ. ತಮ್ಮ ಮನೆಗಳ ಮುಂದೆಯೂ ಸಹ ಕಾಂಗ್ರೆಸ್‌ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿ, ಪ್ರಕರಣ ದಾಖಲಿಸಿಕೊಳ್ಳಲು ಮುಂದಾದ ಪೊಲೀಸರಿಗೆ ಎದೆ ಸೆಟಿಸಿ ನಿಂತಿದ್ದಾರೆ. ಪೋಲೀಸರ ತೆಗೆದುಕೊಳ್ಳಲು ಮುಂದಾದ ಕ್ರಮ ಎನೋ ಮಾಡಲು ಹೋಗಿ ಮತ್ಯಾವುದಕ್ಕೋ ಅವಕಾಶ ಕೊಟ್ಟಂತಾಗಿದೆ.

ಸಾರ್ವಜನಿಕರ ಈ ನಡೆ ಕಾಂಗ್ರೆಸ್ಸಿಗರಿಗೆ ಕಂಟಕಪ್ರಾಯವಾಗಿದೆ. ಈ ಪೋಸ್ಟರ್‌ ರಾಜಕಾರಣದ ಅಭಿಯಾನ ಮತ್ತಿನ್ನೆಷ್ಟು ಮನೆಗಳ ಮುಂದೆ ಕಾಣಸಿಗುವುದೋ ಎನ್ನುವ ಭಯ ಈಗ ಸ್ಥಳೀಯ ಕಾಂಗ್ರೆಸ್‌ ವಲಯದಲ್ಲಿ ಮೂಡಿದೆ. ಪೊಲೀಸರಿಗೆ ಎಸದಿರುವ ಈ ಸವಾಲು ಸಚಿವ ರಮಾನಾಥ್‌ ರೈ ಕುತ್ತಿಗೆಯನ್ನೂ ಬಿಗಿಯುತ್ತಿದೆ.

ಇತ್ತೀಚಿಗಷ್ಟೇ ಬೆಳಗಾವಿ ಜಿಲ್ಲೆಯ ಹಾರೋಗೋರಿ ಪಟ್ಟಣದ ಜೈ ಭೀಮ್‌ ನಗರದಲ್ಲಿ ಬಿಜೆಪಿ ವಿರೋಧಿ ಬ್ಯಾನರ್‌ಒಂದನ್ನು ಕಟ್ಟಲಾಗಿತ್ತು. ದಲಿತ ವಿರೋಧಿ ಬಿಜೆಪಿಗರಿಗೆ ಪ್ರವೇಶ ನಿಷಿದ್ಧ ಎಂದು ಬ್ಯಾನರ್‌ ಸಾರುತ್ತಿತ್ತು. ಆದರೆ ಚುನಾವಣಾ ಆಯೋಗದ ಅನುಮತಿಯಿಲ್ಲದೆ ಬ್ಯಾನರ್‌ ಕಟ್ಟಿದ್ದ ಕಾರಣಕ್ಕಾಗಿ ಸ್ಥಳೀಯ ಸಿಬ್ಬಂಧಿಗಳು ಬ್ಯಾನರ್‌ಅನ್ನು ತೆರವುಗೊಳಿಸಿದ್ದರು. ಅಯೋಗದಿಂದ ಅನುಮತಿ ಪಡೆದು ಮತ್ತೆ ಬ್ಯಾನರ್‌ ಕಟ್ಟುವುದಾಗಿ ಸ್ಥಳೀಯ ಯುವಕರು ತಿಳಿಸಿದ್ದರು.

ಚುನಾವಣೆಗೆ ಇನ್ನೇನು ಕೆಲವೇ ದಿನಗಳಿದೆ ಎನ್ನುವಾಗಲೇ ಹೊಸ ಮಾದರಿಯ ಈ ಪೋಸ್ಟರ್‌/ಬ್ಯಾನರ್‌ ರಾಜಾಕಾರಣ ಹಲವಾರು ಪ್ರದೇಶಗಳಲ್ಲಿ ವ್ಯಾಪಕವಾಗಿ ಕಾಣಸಿಗುತ್ತಿದೆ. ಜತೆಗೆ, ಚುನಾವಣೆ ಆಚೆಗೂ ಮುಗಿಯದ ವೈಮಸ್ಯವನ್ನೂ ಹುಟ್ಟುಹಾಕುತ್ತಿವೆ.