samachara
www.samachara.com
‘ಅಪ್ಪ ಐದು ವರ್ಷಗಳಲ್ಲಿ ಏನು ಮಾಡಿದರು ಎಂಬುದು ಗೊತ್ತಿಲ್ಲ, ಈಗ ಮಗಳ ಸರದಿ’
ಸುದ್ದಿ ಸಾರ

‘ಅಪ್ಪ ಐದು ವರ್ಷಗಳಲ್ಲಿ ಏನು ಮಾಡಿದರು ಎಂಬುದು ಗೊತ್ತಿಲ್ಲ, ಈಗ ಮಗಳ ಸರದಿ’

ಚುನಾವಣೆ ಹತ್ತಿರವಾಗುತ್ತಿದ್ದಂತೆ ರವಿಕೃಷ್ಣಾ ರೆಡ್ಡಿ ಅವರು ಚುನಾವಣಾ ಪ್ರಚಾರದ ಬರಾಟೆಯನ್ನು ಹೆಚ್ಚಿಸಿದ್ದಾರೆ. ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ವಿವಿಧ ಬಡಾವಣೆಗಳಲ್ಲಿ ತಿರುಗಿ ಪ್ರಚಾರ ಮಾಡಿದರು.

samachara

samachara

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಈಗ ಮೂರೂ ಪಕ್ಷಗಳ ಅಭ್ಯರ್ಥಿಗಳು ರಸ್ತೆಗಿಳಿದಿದ್ದಾರೆ. ಆದರೆ ಇಡೀ ಕ್ಷೇತ್ರದ ವಿಶೇಷತೆ ಮತ್ತು ಕುತೂಹಲ ಎಂದರೆ ಸೀಟಿ ( ವಿಜಲ್) ಗುರುತಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ರವಿ ಕೃಷ್ಣಾರೆಡ್ಡಿ.

‘ಲಂಚಮುಕ್ತ ಕರ್ನಾಟಕ’ ಎಂಬ ವೇದಿಕೆಯನ್ನು ಮಾಡಿಕೊಂಡು ಸಾರ್ವಜನಿಕ ಆಸ್ಪತ್ರೆಗಳು, ನ್ಯಾಯಬೆಲೆ ಅಂಗಡಿಗಳು, ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದವರು. ಉಳಿದ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹಾಕುವುದಕ್ಕೆ ಆರು ತಿಂಗಳ ಮೊದಲೇ ರೆಡ್ಡಿ ಇಲ್ಲಿ ಕೆಲಸ ಮಾಡುತ್ತಾ ಕ್ಷೇತ್ರದಲ್ಲೀಗ ಚಿರಪರಿಚಿತರಾಗಿದ್ದಾರೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ರವಿಕೃಷ್ಣಾರೆಡ್ಡಿ ಅವರು ಚುನಾವಣಾ ಪ್ರಚಾರದ ಬರಾಟೆಯನ್ನು ಹೆಚ್ಚಿಸಿದ್ದಾರೆ. ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಜಯನಗರದ ಮಯ್ಯಾಸ್ ಹೊಟೆಲ್ ಬಳಿಯಿಂದ ಬೆಂಬಲಿಗರು, ಅಭಿಮಾನಿಗಳೊಂದಿಗೆ ನಾಲ್ಕನೇ ಹಂತ, ಗುರಪ್ಪನ ಪಾಳ್ಯ, ಬಿಸ್ಮಿಲ್ಲಾ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ತಿರುಗಿ ಪ್ರಚಾರ ಮಾಡಿದರು. ಅವರಿಗೆ ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್. ಆರ್. ಹಿರೇಮಠ್, ಹೋರಾಟಗಾರ ವೆಂಕಟೇಶ್ ಮತ್ತಿತರರು ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ರವಿ ಕೃಷ್ಣಾರೆಡ್ಡಿ, “ಜಯನಗರದಲ್ಲಿ ನಾವು ಪ್ರಾಮಾಣಿಕ ಪ್ರಚಾರ ಮಾಡುತ್ತಿದ್ದೇವೆ. ಎಲ್ಲೆಡೆ ಕುಕ್ಕರ್ರು ಲಿಕ್ಕರ್ರು ಹಂಚುತ್ತಿರುವಾಗ ನಾವು ಜನರಿಂದಲೇ ಒಂದು ಓಟು ನೋಟು ಆಶಯದಲ್ಲಿ ಪ್ರಚಾರ ಆರಂಭಿಸಿದ್ದೇವೆ. ನಾವು ಉಳಿದವರಂತೆ ಭ್ರಷ್ಣ ಹಣದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಬದಲಿಗೆ ಜನರೇ ಈವರೆಗೆ ಸುಮಾರು ಐದು ಲಕ್ಷ ರೂಪಾಯಿ ನೀಡಿದ್ದಾರೆ,” ಎಂದರು.

ಇಂದಿನವರೆಗೂ ಜಯನಗರದಲ್ಲಿ ಸ್ಪರ್ಧಿಸುತ್ತಾ ಬಂದಿರುವ ಶಾಸಕರು ಒಂದು ದಿನವೂ ವಿಧಾನಸಭೆಯಲ್ಲಿ ಜಯನಗರ, ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದನ್ನು ನೀವು ಕಂಡಿದ್ದೀರಾ? ಏಳು ಮಂದಿ ಪಾಲಿಕೆ ಸದಸ್ಯರಿದ್ದಾರೆ. ಅವರೆಂದೂ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿದಿಲ್ಲ ಎಂದು ಅವರು ಹಾಲಿ ಶಾಸಕ ಬಿ. ಎನ್. ಜಯ ಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.

“ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ, ಟಿ. ಬಿ. ಜಯಚಂದ್ರ ಸೇರಿದಂತೆ ಕಾಂಗ್ರೆಸ್ಸಿರು ತಮ್ಮ ಮಕ್ಕಳಿಗೆ ರಾಜಕೀಯ ಸ್ಥಾನ ಕಲ್ಪಿಸಲು ಕರ್ನಾಟಕವನ್ನ ತಮ್ಮ ಜಾಹೀರು ಮಾಡಿದ್ದಾರೆ. ಪ್ರಜಾಪ್ರಭುತ್ವ ಎಂದರೆ ಇದೇನಾ?,” ಎಂದು ಪ್ರಶ್ನಿಸಿದರು.

“ಅಪ್ಪ ಐದು ವರ್ಷಗಳಿಂದ ಏನು ಮಾಡಿದರು ಎಂದು ಗೊತ್ತಿಲ್ಲ. ಈಗ ಮಗಳಿಗೂ ರಾಜಕೀಯ ಆಶ್ರಯ ಕಲ್ಪಿಸಲು ಜಯನಗರಕ್ಕೆ ಬರುತ್ತಿದ್ದಾರೆ. ಪ್ರಜಾಪ್ರಭುತ್ವ ಎಂದರೆ ಅಪ್ಪ ಮಕ್ಕಳ ಪಕ್ಷವೇ?,” ಎಂದು ಪರೋಕ್ಷವಾಗಿ ರಾಮಲಿಂಗಾರೆಡ್ಡಿ ಹಾಗೂ ಮಗಳು ಸೌಮ್ಯ ರೆಡ್ಡಿ ಉಮೇದುವಾರಿಕೆಯನ್ನು ಪ್ರಶ್ನಿಸಿದರು.

“ಜಯನಗರದ ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಮೆರೆಯುತ್ತಿದೆ. ಒಂದೇ ತಿಂಗಳಲ್ಲಿ ಜಯನಗರವನ್ನು ಲಂಚಮುಕ್ತ ಮಾಡುವುದು ನಮ್ಮ ಮುಖ್ಯ ಗುರಿ. 500 ಕೋಟಿ ರೂಪಾಯಿಗಳಷ್ಟು ಬೆಂಗಳೂರಲ್ಲಿ ಕಸದ ಮಾಫಿಯಾ ನಡೀತಿದೆ. ಅದಕ್ಕೆ ಕಡಿವಾಣ ಹಾಕಲು ಮಾದರಿಯಾಗುವಂತ ತ್ಯಾಜ್ಯ ವಿಂಗಡಣೆ ಘಟಕವನ್ನು ಜಯನಗರದಲ್ಲೇ ನಿರ್ಮಿಸಿ ಇಲ್ಲೇ ರೀ ಸೈಕಲ್ ಮಾಡುತ್ತೇವೆ. ಮಂಡೂರಿನ ಜನ ಶಾಪ ಹಾಕುವುದನ್ನ ತಪ್ಪಿಸುತ್ತೇವೆ. ಉತ್ತಮ ಶಿಕ್ಷಣ ಜಯನಗರದ ಜನರ ಮೊದಲ ಆದ್ಯತೆಯಾಗಬೇಕು. ಖಾಸಗಿ ಕಾಲೇಜುಗಳಲ್ಲಿ ಇಲ್ಲಿನ ಮಕ್ಕಳಿಗೆ ಪ್ರಥಮ ಆದ್ಯತೆ ಆಗುವಂತೆ ಮಾಡುತ್ತೇವೆ,” ಎಂದು ರವಿಕೃಷ್ಣಾ ರೆಡ್ಡಿ ತಮ್ಮ ಪ್ರಣಾಳಿಕೆ ಹಾಗೂ ಯೋಜನೆಗಳನ್ನು ಹೇಳಿದರು.

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ್ ಮಾತನಾಡಿ, “ರವಿಕೃಷ್ಣಾರೆಡ್ಡಿಯವರು ಪರ್ಯಾಯದ ರಾಜಕೀಯವನ್ನು ಶುರುಮಾಡುವ ಸಲುವಾಗಿ ಹೋರಾಟ ಆರಂಭಿಸಿದ್ದಾರೆ. ಅಕ್ರಮ ಹಣ ಸಂಪಾದಿಸಿಕೊಂಡು ವಿಧಾನಸಭೆಗಳಲ್ಲಿ ಮೂಗರಂತೆ ಕೂತಿದ್ದಾರೆ. ಇಂಥ ಭ್ರಷ್ಟರು ನಮಗೆ ಬೇಕಾಗಿಲ್ಲ. ಅದರ ಬದಲು ಹೊಸ ಆಶಾಕಿರಣವಾದ ರವಿಕೃಷ್ಣಾರೆಡ್ಡಿ ಅಂಥವರನ್ನು ಬೆಂಬಲಿಸಿ ಗೆಲ್ಲಿಸಿ,” ಎಂದು ಕರೆ ನೀಡಿದರು.

ಹೋರಾಟಗಾರ ವೆಂಕಟೇಶ್ ಮಾತನಾಡಿ, “ನಾನು ಶಾಂತವೇರಿ ಗೋಪಾಲಗೌಡರೊಂದಿಗೆ ಕೆಲಸ ಮಾಡಿದವನು.ಆದರೆ ಆ ನಂತರ ಯಾರ ಪರವಾಗಿಯೂ ಚುನಾವಣಾ ಪ್ರಚಾರ ಮಾಡಿದವನಲ್ಲ. ಆದರೆ ರವಿಕೃಷ್ಣಾರೆಡ್ಡಿಯಂಥ ಪ್ರಮಾಣಿಕ ಅಭ್ಯರ್ಥಿಗಳನ್ನು ಕಂಡು ಪ್ರಚಾರ ಮಾಡಲು ಬಂದಿದ್ದೇನೆ, ರವಿಕೃಷ್ಣಾರೆಡ್ಡಿಯಂಥ ವ್ಯಕ್ತಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನರು ಜಯನಗರದತ್ತ ನೋಡುವಂಥೆ ಮಾಡೋಣ,” ಎಂದು ಕಿವಿಮಾತು ಹೇಳಿದರು.