samachara
www.samachara.com
ಕಸ ಮುಕ್ತ ಗ್ರಾಮ ನಿರ್ಮಿಸಿ, ಇಲ್ಲವೇ ಉಚಿತ ಅಕ್ಕಿ ನಿಲ್ಲಿಸಿ: ಪುದುಚೇರಿಯಲ್ಲಿ ಕಿರಣ್ ಬೇಡಿ ಸದ್ದು
ಸುದ್ದಿ ಸಾರ

ಕಸ ಮುಕ್ತ ಗ್ರಾಮ ನಿರ್ಮಿಸಿ, ಇಲ್ಲವೇ ಉಚಿತ ಅಕ್ಕಿ ನಿಲ್ಲಿಸಿ: ಪುದುಚೇರಿಯಲ್ಲಿ ಕಿರಣ್ ಬೇಡಿ ಸದ್ದು

ಬಯಲಿನಲ್ಲಿ ಶೌಚ ಮಾಡುವ, ಕಸವನ್ನು ಬೇಕಾಬಿಟ್ಟಿ ರಸ್ತೆ ಬದಿ ಬಿಸಾಡುತ್ತಿರುವ ನಾಗರಿಕಗೆ ಪಾಠ ಕಲಿಸಲು ಹೋದ ಪುದುಚೇರಿ ಲೆಫ್ಟಿನೆಂಟ್ ಗೌವರ್ನರ್ ಕಿರಣ್ ಬೇಡಿ ಟೀಕೆಗೆ ಗುರಿಯಾಗಿದ್ದಾರೆ. ಯಾಕೆ? ವಿವರ ಇಲ್ಲಿದೆ. 

samachara

samachara

“ಬಯಲು ಶೌಚಾಲಯ ಮುಕ್ತ ಹಾಗೂ ಕಸ ಮತ್ತು ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂಬ ಪ್ರಮಾಣ ಪತ್ರವನ್ನು ಪದುಚೇರಿಯ ಪ್ರತಿ ಹಳ್ಳಿಗಳೂ ಮೇ 31ರ ಒಳಗೆ ಪಡೆಯಬೇಕು. ಇಲ್ಲವಾದರೆ ಜೂನ್ 1ರಿಂದ ಆಯಾ ಹಳ್ಳಿಗಳ ಜನರಿಗೆ ಉಚಿತ ಅಕ್ಕಿ ವಿತರಣೆಯನ್ನು ನಿಲ್ಲಿಸಲಾಗುವುದು,” ಎಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಲೆಫ್ಟಿನಂಟ್ ಗವರ್ನರ್‌ ಕಿರಣ್ ಬೇಡಿ ಆದೇಶ ಹೊರಡಿಸಿದ್ದಾರೆ. ಅದೀಗ ವಿವಾದಕ್ಕೀಡಾಗಿದೆ.

ಪದುಚೇರಿ ಕೇಂದ್ರಾಡಳಿತ ಪ್ರದೇಶದ ಗ್ರಾಮೀಣ ಭಾಗದ ಅರ್ಧದಷ್ಟು ಜನರು ಉಚಿತ ಅಕ್ಕಿ ಪಡೆಯುತ್ತಿದ್ದಾರೆ. ಆದರೆ ಈ ಸೌಲಭ್ಯ ಅವರಿಗೆ ಮುಂದುವರೆಯಬೇಕಾದರೆ ಆ ಗ್ರಾಮದ ಜನರು ಪ್ರಮಾಣ ಪತ್ರವನ್ನು ನೀಡಬೇಕು ಎಂಬ ಷರತ್ತನ್ನು ಮಾಜಿ ಐಪಿಎಸ್‌ ಅಧಿಕಾರಿ ಕಿರಣ್ ಬೇಡಿ ಹಾಕಿದ್ದಾರೆ.

ಕಿರಣ್ ಬೇಡಿ ಒಟ್ಟಾರೆ ನಾಲ್ಕು ವಾರಗಳ ಕಾಲದ ಅವಧಿಯನ್ನು ಗ್ರಾಮಗಳ ಜನರಿಗೆ ನೀಡಿದ್ದು, ಪ್ರಮಾಣ ಪತ್ರ ಪಡೆಯಲು ಮೇ 31 ಕೊನೆಯ ದಿನವಾಗಿದೆ. ಅಷ್ಟರೊಳಗಡೆ ಬಯಲು ಶೌಚ ಮುಕ್ತ, ಕಸ ಮುಕ್ತ ಹಳ್ಳಿ ಎಂಬ ದೃಢೀಕರಣ ಪತ್ರವನ್ನು ಸಲ್ಲಿಸಬೇಕಿದೆ. ಹೀಗಾದರೆ ಮಾತ್ರವೇ ಉಚಿತ ಅಕ್ಕಿ ಯೋಜನೆ ಮುಂದುವರೆಯಲಿದೆ. ಇಲ್ಲವಾದರೆ ಯೋಜನೆಗೆ ಕಡಿವಾಣ ಬೀಳಲಿದೆ.

ಒಂದು ವೇಳೆ ಈ ಪ್ರಮಾಣ ಪತ್ರ ಸಲ್ಲಿಸುವುದು ವಿಳಂಬವಾದರೆ ಅಕ್ಕಿಯನ್ನು ಸುರಕ್ಷಿತವಾಗಿ ಶೇಖರಿಸಿ ಇಡಲಾಗುವುದು. ಯಾವಾಗ ಪ್ರಮಾಣ ಪತ್ರ ಸಲ್ಲಿಸುತ್ತಾರೆ ಆವತ್ತು ಫಲಾನುಭವಿಗಳಿಗೆ ಅಕ್ಕಿಯನ್ನು ವಿತರಿಸಲಾಗುವುದು. ಜೊತೆಗೆ ಹಳ್ಳಿಯನ್ನು ಮತ್ತೊಮ್ಮೆ ಪರಿವೀಕ್ಷಣೆಗೆ ಒಡ್ಡಲಾಗುವುದು,” ಎಂದಿದ್ದಾರೆ.

ಆದರೆ ಪುದುಚೇರಿಯಲ್ಲಿ ಅರ್ಧಕ್ಕೂ ಹೆಚ್ಚಿನ ಹಳ್ಳಿಗಳು ಉಚಿತ ಅಕ್ಕಿ ಯೋಜನೆ ಮೇಲೆ ಅವಲಂಭಿತವಾಗಿವೆ. ಅದರಲ್ಲೂ ಬಡ ವರ್ಗದ ಜನ ಮಾತ್ರವೇ ಇಂತಹ ಸರಕಾರಿ ಯೋಜನೆಯನ್ನು ನಂಬಿ ಬದುಕುತ್ತಿದ್ದಾರೆ. ಹೀಗೆ ಏಕಾಏಕಿ ಗಡುವು ಹಾಕಿದರೆ ಗ್ರಾಮಸ್ಥರ ಹೊಟ್ಟೆಯ ಮೇಲೆ ನೇರ ಬರೆ ಬಿದ್ದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಕಿರಣ್ ಬೇಡಿ ನಿರ್ಧಾರ ಟೀಕೆಗೆ ಗುರಿಯಾಗಿದೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯನ್ನು ವಿ.ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರಕಾರ ಆಳ್ವಿಕೆ ನಡೆಸುತ್ತಿದೆ. ಪೂರ್ಣ ಪ್ರಮಾಣ ರಾಜ್ಯ ಸ್ಥಾನಮಾನ ಇಲ್ಲದ ಕಾರಣ, ಲೆಫ್ಟಿನೆಂಟ್ ಗೌವರ್ನರ್ ಹುದ್ದೆಗೆ ಎಲ್ಲಿಲ್ಲದ ಅಧಿಕಾರ ಇದೆ. ಆ ಸ್ಥಾನದಲ್ಲಿರುವ ಕಿರಣ್ ಬೇಡಿ, ಸರಕಾರಕ್ಕೆ ಪತ್ರ ಬರೆಯುವ ಮೂಲಕ ಜನರ ನಡವಳಿಕೆಯನ್ನು ಏಕಾಏಕಿ ಬದಲಿಸುವಂತೆ ಹೇಳಿದ್ದಾರೆ.

ಸದ್ಯ ದೊರೆಯುತ್ತಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ನಾರಾಯಣಸ್ವಾಮಿಯಿಂದ ಬೇಡಿ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

“ಗ್ರಾಮೀಣ ಭಾಗ ನೈರ್ಮಲೀಕರಣದ ಪ್ರಗತಿ ನಿಧಾನಗತಿಯಲ್ಲಿದೆ. ಇದರಿಂದ ನಾನು ತುಂಬಾ ದುಃಖಿತಳಾಗಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ಗ್ರಾಮೀಣ ಭಾಗದ ಪುದುಚೇರಿಯನ್ನು ಕಾಲಮಿತಿಯೊಳಗೆ ಸ್ವಚ್ಛಗೊಳಿಸಲು ಯಾವುದೇ ಸ್ಥಳೀಯ ಪ್ರತಿನಿಧಿಗಳನ್ನು ಮತ್ತು ಸಂಬಂಧಪಟ್ಟ ಸಾರ್ವಜನಿಕ ಅಧಿಕಾರಿಗಳೂ ಮುಂದೆ ಬಂದಿದ್ದನ್ನು ನಾನು ನೋಡಿಲ್ಲ. ಕ್ಷಮಿಸಿ, ಇದು ಹೀಗೆ ಮುಂದುವರೆಯಲು ಬಿಡಬಾರದು," ಎಂದಿದ್ದಾರೆ ಕಿರಣ್ ಬೇಡಿ.