ಉತ್ತರ ಪ್ರದೇಶದಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿ: 13 ಮಕ್ಕಳ ಸಾವು
ಸುದ್ದಿ ಸಾರ

ಉತ್ತರ ಪ್ರದೇಶದಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿ: 13 ಮಕ್ಕಳ ಸಾವು

ಖುಷಿನಗರ ಜಿಲ್ಲೆಯ ದೂಧಿ ಎಂಬಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಡಿವೈನ್ ಪಬ್ಲಿಕ್ ಶಾಲಾ ವಾಹನಕ್ಕೆ ತವೇ-ಕಪಟಂಗಂಜ್ ಪ್ರಯಾಣಿಕರ ರೈಲು (55075) ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.

ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ ನೆಡೆದಿದೆ. ಶಾಲಾ ವಾಹನಕ್ಕೆ ರೈಲು ಢಿಕ್ಕಿ ಹೊಡೆದ ಪರಿಣಾಮವಾಗಿ ಸುಮಾರು 13 ಮಕ್ಕಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಖುಷಿನಗರದಲ್ಲಿ ಗುರುವಾರ ಬೆಳಗ್ಗೆ ಅಪಘಾತ ಸಂಭವಿಸಿದೆ.

ಖುಷಿನಗರ ಜಿಲ್ಲೆಯ ದೂಧಿ ಎಂಬಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಡಿವೈನ್ ಪಬ್ಲಿಕ್ ಶಾಲಾ ವಾಹನಕ್ಕೆ ತವೇ-ಕಪಟಂಗಂಜ್ ಪ್ರಯಾಣಿಕರ ರೈಲು (55075) ಡಿಕ್ಕಿ ಹೊಡೆದಿದೆ.

ಉತ್ತರ ಪ್ರದೇಶದ ಸಿವಾನ್‌ನಿಂದ ಗೋರಕ್‌ಪುರಕ್ಕೆ ರೈಲು ತೆರಳುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದ್ದು, ತೀವ್ರ ಗಾಯಗೊಂಡಿರುವ ಎಂಟು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಒಟ್ಟು 25 ಮಕ್ಕಳಿದ್ದ ಶಾಲಾ ವಾಹನದಲ್ಲಿ 10 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳೇ ಹೆಚ್ಚಾಗಿದ್ದರು. ಅದರಲ್ಲಿ “13 ಮಕ್ಕಳು ಸಾವಿಗೀಡಾಗಿ, ಉಳಿದವರು ಗಂಭಿರವಾಗಿ ಗಾಯಗೊಂಡಿದ್ದಾರೆ,” ಎಂದು ರೈಲ್ವೆ ವಕ್ತಾರ ವೇದ್ ಪ್ರಕಾಶ್ ತಿಳಿಸಿದ್ದಾರೆ.

ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ಥಳಕ್ಕೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಪಘಾತಕ್ಕೀಡಾದ ಕುಟುಂಬಗಳಿಗೆ 2 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಜತೆಗೆ ವೈದ್ಯಕೀಯ ನೆರವು ನೀಡಬೇಕೆಂದು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯೂ 13 ಶಾಲಾ ಮಕ್ಕಳ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಸರಕಾರ ಮತ್ತು ಮತ್ತು ರೈಲ್ವೆ ಇಲಾಖೆಯು ಈ ವಿಷಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಇನ್ನು ರೈಲ್ವೆ ಸಚಿವ ಪಿಯುಶ್ ಗೋಯಲ್ ಮೃತಪಟ್ಟ ಮಕ್ಕಳ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಜೊತೆಗೆ ಅಪಘಾತದ ಕಾರಣಕ್ಕಾಗಿ ತನಿಖೆಗೆ ನಿರ್ದೇಶನ ನೀಡಲಾಗಿದೆ.