ಸ್ಪರ್ಧಿಸದಂತೆ ನ್ಯಾಯಾಲಯ ತಡೆ: ಶಿವಮೊಗ್ಗ ಗ್ರಾಮಾಂತರಕ್ಕೂ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲ
ಸುದ್ದಿ ಸಾರ

ಸ್ಪರ್ಧಿಸದಂತೆ ನ್ಯಾಯಾಲಯ ತಡೆ: ಶಿವಮೊಗ್ಗ ಗ್ರಾಮಾಂತರಕ್ಕೂ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲ

ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದ ಕೊತ್ತನೂರು ಮಂಜು ಈಗ ಕಣದಿಂದ ಹೊರಗುಳಿಯುವಂತಾಗಿದೆ. ಈಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶ್ರೀನಿವಾಸ್‌ಗೂ ಕೂಡ ಇದೇ ಗತಿ ಒದಗಿ ಬಂದಿದೆ.

ಕರ್ನಾಟಕದಲ್ಲಿ ಚುನಾವಣಾ ಬಿಸಿ ಏರುತ್ತಿರುವ ಹೊತ್ತಿನಲ್ಲೇ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಖಾಡಕ್ಕಿಳಿದಿದ್ದ ಕೊತ್ತನೂರು ಮಂಜು ಅವರು ಸ್ವರ್ಧೆಗಿಳಿಯುವುದನ್ನು ಹೈಕೋರ್ಟ್‌ ನಿಷೇಧಿಸಿದೆ. ಇದರ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್‌ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತಾಗಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಿಂತಿದ್ದ ಡಾ. ಎಸ್‌. ಕೆ ಶ್ರೀನಿವಾಸ್‌ ಚುನಾವಣೆ ಸ್ಪರ್ಧೆಯೊಡ್ಡುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಡಾ. ಎಸ್‌. ಕೆ. ಶ್ರೀನಿವಾಸ್‌ ಮಾಜಿ ಶಾಸಕ ಕರಿಯಣ್ಣನವರ ಪುತ್ರ. ವೃತ್ತಿಯಲ್ಲಿ ವೈದ್ಯರಾಗಿದ್ದ ಶ್ರೀನಿವಾಸ್‌ ಬೌರಿಂಗ್‌ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದವರು. ಸರಕಾರಿ ನೌಕರಿಯಲ್ಲಿದ್ದ ಡಾ. ಎಸ್. ಕೆ. ಶ್ರೀನಿವಾಸ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು.

ಚುನಾವಣೆ ಘೋ‍ಷಣೆಯಾದ ನಂತರ ಶಿವಮೊಗ್ಗ ಗ್ರಾಮಾಂತರ (ಮೀಸಲು) ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು ನಾಮಪತ್ರ ಸಲ್ಲಿಸಿದ್ದರು. ತಮಗೆ ಕಾಂಗ್ರೆಸ್‌ ಟಿಕೆಟ್‌ ಖಚಿತವಾದ ಬೆನ್ನಲ್ಲೇ ಎಸ್. ಕೆ. ಶ್ರೀನಿವಾಸ್‌ ತಮ್ಮ ಸರಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಶಿವಮೊಗ್ಗ ಗ್ರಾಮಾಂತರ (ಮೀಸಲು) ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಚುನಾವಣಾ ಕಣಕ್ಕಿಳಿಯಬೇಕು ಎಂಬ ಪ್ರಬಲ ಆಕಾಂಕ್ಷೆಯನ್ನು ಹೊಂದಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಶ್ರೀ. ಎಂ. ಕೆ. ಬಲರಾಮ್‌ ಕೃಷ್ಣ ಶ್ರೀನಿವಾಸ್‌ ವಿರುದ್ಧ ಹೈ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಶ್ರೀನಿವಾಸ್‌ರ ರಾಜೀನಾಮೆಯ ವಿಷಯವನ್ನಿಡಿದು ಅವರ ಸ್ಪರ್ಧೆಗೆ ತಡೆಯೊಡ್ಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಚುನಾವಣೆ ಜಾರಿಯಾದ ನಂತರ ಎಸ್‌.ಕೆ.ಶ್ರೀನಿವಾಸ್‌ ತಮ್ಮ ಸರಕಾರಿ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದರು. ನೀತಿ ಸಂಹಿತೆ ಜಾರಿಯಾದ ನಂತರ ರಾಜೀನಾಮೆ ಅಂಗೀಕಾರಗೊಂಡಿತ್ತು. ಇದು ಕಾನೂನು ಸಮ್ಮತವಲ್ಲ ಎಂದು ಎಂ.ಕೆ. ಬಲರಾಮ್‌ ಕೃಷ್ಣ ವಾದಿಸಿದ್ದರು.

ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಡಾ. ಎಸ್‌. ಕೆ. ಶ್ರೀನಿವಾಸ್‌ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಹೈ ಕೋರ್ಟ್‌ ನ್ಯಾಯಾದೀಶರು ತಡೆ ಒಡ್ಡಿದ್ದಾರೆ. ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಶ್ರೀನಿವಾಸ್‌ ಸ್ಪರ್ಧೆಗಿಳಿಯುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯ ಅವಧಿಯೂ ಕೂಡ ಮಂಗಳವಾರಕ್ಕೆ ಕೊನೆಗೊಂಡಿದೆ. ಈಗ ಕೋರ್ಟ್‌ ನೀಡಿರುವ ಈ ತಡೆಯಾಜ್ಞೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಿಲ್ಲದಂತೆ ಮಾಡಿದೆ.

ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ರಾಜ್ಯದ ವಿಧಾನಸಭಾ ಚುನಾವಣೆ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಭಾರತೀಯ ಜನತಾ ಪಕ್ಷಗಳಿಗೆ ಜಿದ್ದಾಜಿದ್ದಿನ ಕಣವಾಗಿ ಪರಿಣಮಿಸಿದೆ. ರಾಜ್ಯದ ಅಧಿಕಾರ ಚುಕಾಣಿಯನ್ನು ಹಿಡಿಯಬೇಕು ಎಂದು ಎಲ್ಲಾ ಪಕ್ಷಗಳೂ ಶತಾಯಗತಾಯ ಪ್ರಯತ್ನಿಸುತ್ತಿವೆ. ಆದರೆ ಈಗ 224 ಕ್ಷೇತ್ರಗಳ ಪೈಕಿ 2ರಲ್ಲಿ ಕೊನೆಕ್ಷಣದ ಬದಲಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಇಲ್ಲದಂತಾಗಿದೆ.