ಬಿಜೆಪಿ ಶಾಸಕರು, ಸಂಸದರೇ ಹೆಚ್ಚು ಪ್ರಚೋದನಕಾರಿ ಭಾಷಣಕಾರರು: ಎಡಿಆರ್‌ ವರದಿ
ಸುದ್ದಿ ಸಾರ

ಬಿಜೆಪಿ ಶಾಸಕರು, ಸಂಸದರೇ ಹೆಚ್ಚು ಪ್ರಚೋದನಕಾರಿ ಭಾಷಣಕಾರರು: ಎಡಿಆರ್‌ ವರದಿ

ಇದು ನಮ್ಮ ಜನಪ್ರತಿನಿಧಿಗಳು ಚುನಾವಣೆಗೂ ಮುಂಚೆ ಸಲ್ಲಿಸಿದ ನಾಮಪತ್ರದಲ್ಲಿ ಸಿಕ್ಕ ವಿವರಗಳು. ಶಾಸಕರ, ಸಂಸದರ ಮೇಲಿನ ಮೊಕದ್ದಮೆಗಳ ಪೈಕಿ ‘ಪ್ರಚೋದನಾಕಾರಿ ಭಾಷಣ’ ಪ್ರಕರಣಗಳ  ಪರೀಕ್ಷೆಯನ್ನು ಎಡಿಆರ್‌ ಮಾಡಿದೆ. 

ರಾಜಕಾರಣಿಗಳು ಚುನಾವಣೆ ಹತ್ತಿರ ಬಂದಾಗ, ಅಧಿಕಾರದ ತಿಕ್ಕಾಟದ ಸಮಯಗಳಲ್ಲಿ ನಾಲಿಗೆ ಹರಿಯ ಬಿಡುವುದು ಸಾಮಾನ್ಯ. ಈ ಸಮಯದಲ್ಲಿ ಒಂದಷ್ಟು ಚರ್ಚೆ ನಡೆದು ತಣ್ಣಗಾಗುತ್ತದೆ. ಆದರೆ, ಇದೀಗ ಜನಪ್ರತಿನಿಧಿಗಳು ಆಡಿದ ಮಾತಿನ ಲೆಕ್ಕವನ್ನು ಸರಕಾರೇತರ ಸಂಸ್ಥೆ ಪಟ್ಟಿ ಮಾಡಿದೆ.

ಜನರಿಂದ ಚುನಾಯಿತರಾದವರು ಎಷ್ಟು; ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ? ಅದರಲ್ಲಿ ಯಾವ ಪಕ್ಷದ ಜನಪ್ರತಿನಿಧಿಗಳು ಹೆಚ್ಚಾಗಿದ್ದಾರೆ? ಎನ್ನುವ ಮಾಹಿತಿಯನ್ನು ಅಸ್ಸೋಸಿಯಶನ್ ಫಾರ್ ಡೆಮೋಕ್ರಾಟಿಕ್ ರೀಫಾರ್ಮ್ಸ್ (ಎಡಿಆರ್) ವರದಿಯೊಂದು ಬಹಿರಂಗಪಡಿಸಿದೆ.

ಈ ವರದಿಯ ಪ್ರಕಾರ, ಸಂಸದರು ಮತ್ತು ಶಾಸಕರು ಸೇರಿದಂತೆ ಒಟ್ಟಾರೆಯಾಗಿ 58 ಜನಪ್ರತಿನಿಧಿಗಳು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಇದು ಅವರು ಚುನಾವಣೆಗೆ ಸ್ಪರ್ಧಿಸುವ ವೇಳೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರುಗಳೇ ಸ್ವತಃ ಘೋಷಣೆ ಮಾಡಿಕೊಂಡಿದ್ದಾರೆ.

ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಭಾಷಣ ಮಾಡಿ ಕೇಸು ಹಾಕಿಸಿಕೊಂಡ ಒಟ್ಟು 15 ಜನ ಸಂಸದರ ಪೈಕಿ 10 ಜನ ಸಂಸದರು ಬಿಜೆಪಿಯವರಾಗಿದ್ದಾರೆ. ಅಸಾದುದ್ದೀನ್‌ ಒವೈಸಿ (ಎಐಎಂಐಎಂ), ಬದ್ರುದ್ದೀನ್‌ ಅಜ್ಮಲ್‌ (ಎಐಯುಡಿಎಫ್‌) ಮುಂತಾದ ರಾಜಕೀಯ ಪಕ್ಷಗಳ ಮುಖಂಡರ ವಿರುದ್ಧ ಪ್ರಕರಣಗಳಿವೆ. ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವೆ ಉಮಾ ಭಾರತಿ ಹಾಗೂ ಇತರ ಎಂಟು ಸಹಾಯಕ ಸಚಿವರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಎಡಿಆರ್ ವರದಿ ತಿಳಿಸಿದೆ.

ಎಐಯುಡಿಎಫ್‌, ಟಿಆರ್‌ಎಸ್‌ ಪಿಎಂಕೆ, ಎಐಎಂಐಎಂ ಮತ್ತು ಎಸ್‌ಎಚ್‌ಎಸ್‌ (ಶಿವ ಸೇನಾ) ಪಕ್ಷದ ತಲಾ ಒಬ್ಬರು ಸದಸ್ಯರ ಮೇಲೆ ಪ್ರಚೋದನಾಕಾರಿ ಭಾಷಣದ ಪ್ರಕರಣ ದಾಖಲಾಗಿದೆ.

ಪ್ರಚೋದನಾಕಾರಿ ಭಾಷಣ ಮಾಡಿದ ಸಂಸದ ಮತ್ತು ಶಾಸಕರ ರಾಜ್ಯವಾರು ಪಟ್ಟಿಯಲ್ಲಿ ಉತ್ತರ ಪ್ರದೇಶದಿಂದ (15), ತೆಲಂಗಾಣದ (13), ಕರ್ನಾಟಕ (5) ಮಹಾರಾಷ್ಟ್ರ (5) ಜನಪ್ರತಿನಿಧಿಗಳು ಇದ್ದಾರೆ.

ಶಾಸಕರು ಕಮ್ಮಿ ಇಲ್ಲ:

ಇನ್ನು ಶಾಸಕರ ಪಟ್ಟಿಗೆ ಬರುವುದಾದರೆ, ಪ್ರಚೋದನಾಕಾರಿ ಮಾತುಗಳ ಕಾರಣಕ್ಕೆ ಪ್ರಕರಣ ದಾಖಲಾಗಿರುವುದರಲ್ಲಿ ಒಟ್ಟು 17 ಶಾಸಕರು ಬಿಜೆಪಿಯವರಾಗಿದ್ದಾರೆ. ಉಳಿದಂತೆ ಟಿಆರ್‌ಎಸ್‌ ಮತ್ತು ಎಐಎಂಐಎಂ ಪಕ್ಷಗಳ ತಲಾ 5, ಟಿಡಿಪಿ ಪಕ್ಷದ 3, ಕಾಂಗ್ರೆಸ್‌, ಎಐಟಿಸಿ, ಜೆಡಿ(ಯು) ಮತ್ತು ಎಸ್‌ಎಚ್‌ಎಸ್‌ ಪಕ್ಷಗಳ ತಲಾ 2 ಹಾಗೂ ಡಿಎಂಕೆ, ಬಿಎಸ್‌ಪಿ, ಎಸ್‌ಪಿ ಮತ್ತು ಇಬ್ಬರು ಪಕ್ಷೇತರ ಶಾಸಕರ ವಿರುದ್ಧ ದ್ವೇಷ ಭಾಷಣ ಪ್ರಕರಣಗಳು ದಾಖಲಾಗಿವೆ.

ಸಂಸದರು ಮತ್ತು ಶಾಸಕರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಸಲ್ಲಿಸಿದ್ದ ಅಫಿಡವಿಟ್‌ಗಳ ಆಧಾರದಲ್ಲಿ ಈ ವಿಶ್ಲೇಷಣೆ ಮಾಡಲಾಗಿದೆ.