samachara
www.samachara.com
‘ಭಾರತ ಹಿಂದುಳಿಯಲು ಈ ಐದು ರಾಜ್ಯಗಳೇ ಕಾರಣ’: ನೀತಿ ಆಯೋಗದ ಸಿಇಓ
ಸುದ್ದಿ ಸಾರ

‘ಭಾರತ ಹಿಂದುಳಿಯಲು ಈ ಐದು ರಾಜ್ಯಗಳೇ ಕಾರಣ’: ನೀತಿ ಆಯೋಗದ ಸಿಇಓ

ಸಾಮಾಜಿಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ನೋಡುವಾಗ ಭಾರತ ಹಿಂದುಳಿಯಲು ಈ ಐದು ರಾಜ್ಯಗಳೇ ಕಾರಣ ಎಂದು ನೀತಿ ಆಯೋಗದ ಸಿಇಓ ಅಭಿಪ್ರಾಯಪಟ್ಟಿದ್ದಾರೆ. ಆ ರಾಜ್ಯಗಳು ಯಾವುವು ಗೊತ್ತಾ? 

“ಭಾರತ ಹಿಂದುಳಿಯಲು ಪ್ರಮುಖವಾಗಿ ದೇಶದ ಐದು ರಾಜ್ಯಗಳು ಕಾರಣ. ಈ ಐದು ರಾಜ್ಯಗಳಿಂದಲೇ ಭಾರತ ದೇಶದ ಸಾಮಾಜಿಕ ಅಭಿವೃದ್ಧಿಯು ಕುಂಠಿತವಾಗುತ್ತಿದೆ,” ಹೀಗಂತ ಹೇಳಿದದವರು ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್‌ ಕಾಂತ್.

ಜಾಮಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ‘ಗಡಿನಾಡ ಗಾಂಧಿ’ ಎಂದೇ ಹೆಸರಾಗಿದ್ದ ಖಾನ್‌ ಅಬ್ದುಲ್‌ ಗಫ‌ರ್‌ ಖಾನ್‌ ಮೆಮೋರಿಯಲ್‌ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನೀತಿ ಆಯೋಗದ ಸಿಇಓ ಅಮಿತಾಭ್‌ ಕಾಂತ್, “ಭಾರತದ ಪೂರ್ವ ರಾಜ್ಯಗಳಾದ ಉತ್ತರ ಪ್ರದೇಶ, ಛತ್ತೀಸ್‌ಗಡ, ಮಧ್ಯ ಪ್ರದೇಶ, ಬಿಹಾರ ಮತ್ತು ರಾಜಸ್ತಾನದಂತಹ ರಾಜ್ಯಗಳೇ ಭಾರತ ದೇಶ ಹಿಂದುಳಿಯಲು ಪ್ರಮುಖ ಕಾರಣವಾಗಿವೆ,” ಎಂದಿದ್ದಾರೆ.

ಸಾಮಾಜಿಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮಾತನಾಡುವಾಗ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಭಾರತವು ಉದ್ಯಮ ಸೇರಿದಂತೆ ಇತರೆ ಅರ್ಥಿಕ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ತೋರಿಸುತ್ತಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ (ಹ್ಯುಮನ್ ಡೆವೆಲಪ್‌ಮೆಂಟ್ ಇಂಡೆಕ್ಸ್)ನಲ್ಲಿ ಹಿಂದುಳಿದಿದ್ದು, ಭಾರತವು 188 ರಾಷ್ಟ್ರಗಳ ಪಟ್ಟಿಯಲ್ಲಿ 131ನೇ ಸ್ಥಾನದಲ್ಲಿದೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದ ಪರಿವರ್ತನೆಗೆ ಇರುವ ಸವಾಲುಗಳು (ಚಾಲೆಂಜಸ್‌ ಆಫ್‌ ಟ್ರಾನ್ಸಫರ್ಮಿಂಗ್ ಇಂಡಿಯಾ) ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅಮಿತಾಬ್ ಕಾಂತ್, “ಭಾರತದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ವೇಗವಾಗಿಯೂ ಬೆಳೆಯುತ್ತಿವೆ,” ಎಂದಿದ್ದಾರೆ.

“ಒಟ್ಟಿನಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಸುಧಾರಣೆ ತರಬೇಕಿದೆ. ಈ ಕುರಿತು ಹೆಚ್ಚು ಗಮನ ಹರಿಸಬೇಕಿದೆ. ಜಿಲ್ಲಾವಾರು ಕಾರ್ಯಕ್ರಮಗಳ ಮೂಲಕ ಇದನ್ನು ಸಾಧಿಸಲು ಕಾರ್ಯತಂತ್ರ ರೂಪಿಸಿದ್ದೇವೆ," ಎಂದಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ:

“ಭಾರತವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚು ಹಿಂದುಳಿಯುತ್ತಿದೆ. ದೇಶದ ಸದೃಢ ಬೆಳವಣಿಗೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ವಿಚಾರಗಳು. ಈ ಎರಡೂ ಕ್ಷೇತ್ರಗಳಲ್ಲಿ ದೇಶ ಹಿಂದುಳಿದಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಬಂದರೆ ಭಾರತದ ಸಾಧನೆ ಹೇಳಿಕೊಳ್ಳುವಷ್ಟೇನಿಲ್ಲ. ಇದಕ್ಕೆ ಸಾಕ್ಷಿಯಾಗಿ 5ನೇ ತರಗತಿಯ ಬಾಲಕ 2ನೇ ತರಗತಿಯ ಗಣಿತದ ಸಮಸ್ಯೆಯನ್ನು ಪರಿಹರಿಸಲು ಸಾದ್ಯವಾಗುತ್ತಿಲ್ಲ. ಅಲ್ಲದೇ ಆತ ಮಾತೃಭಾಷೆಯ ಪಠ್ಯ ಪುಸ್ತಕವನ್ನೇ ಓದಲು ಕಷ್ಟ ಪಡುತ್ತಾನೆ,” ಎಂದು ಭಾರತದ ಶೈಕ್ಷಣಿಕ ಗುಣಮಟ್ಟದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಶಿಶು ಮರಣ ಮತ್ತು ಮಹಿಳೆಯರಿಗೆ ದೊರೆಯಬೇಕಾದ ಸ್ಥಾನಮಾನಗಳ ಬಗ್ಗೆ ಮಾತನಾಡಿದ ಅವರು, “ಶಿಶು ಮರಣ ಪ್ರಮಾಣವೂ ಭಾರತದಲ್ಲಿ ಹೆಚ್ಚಾಗುತ್ತಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ನಾವು ಸುಧಾರಣೆ ತರಬೇಕಿದೆ. ಒಂದುವೇಳೆ ನಾವು ಇದರ ಕುರಿತು ಗಮನ ಹರಿಸದಿದ್ದರೆ ಅಭಿವೃದ್ಧಿ ಕಠಿಣವಾಗುತ್ತದೆ. ಜೊತೆಗೆ ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಮಹಿಳೆಯರು ಬರಬೇಕು. ಅವರಿಗೆ ಸಂಬಂಧಿಸಿದಂತೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ,” ಎಂದು ನೀತಿ ಆಯೋಗದ ಸಿಇಓ ಅಮಿತಾಭ್‌ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.