samachara
www.samachara.com
ಭಿತ್ತಿ ಪತ್ರ ಬಿಡುಗಡೆ ಮಾಡಿದ ಉದ್ಯೋಗಕ್ಕಾಗಿ ಯುವ ಜನರು
ಭಿತ್ತಿ ಪತ್ರ ಬಿಡುಗಡೆ ಮಾಡಿದ ಉದ್ಯೋಗಕ್ಕಾಗಿ ಯುವ ಜನರು
ಸುದ್ದಿ ಸಾರ

‘ನೋಟು ಹಿಡಿದು ಓಟು ಕೇಳಲು ಬರಬೇಡಿ’: ಉದ್ಯೋಗಕ್ಕಾಗಿ ಯುವ ಜನರ ವೇದಿಕೆ

ಉದ್ಯೋಗಕ್ಕಾಗಿ ಯುವಜನರ ವೇದಿಕೆ ವತಿಯಿಂದ ‘ನೋಟು ಹಿಡಿದು ಓಟು ಕೇಳಲು ಬರಬೇಡಿ’ ಎಂಬ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. 

samachara

samachara

ಕಾರ್ಮಿಕರನ್ನು ನೇಮಿಸಿಕೊಳ್ಳಲು ಕೈಗಾರಿಕೆಗಳ ಮಾಲೀಕರಿಗೆ ಮುಕ್ತ ಅವಕಾಶ ನೀಡಿ ಕೇಂದ್ರ ಸರಕಾರ ಹೊರಡಿಸಿದ ಆದೇಶದ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ‘ಫಿಕ್ಸ್ಡ್‌ಟರ್ಮ್‌ ಎಂಪ್ಲಾಯ್‌ಮೆಂಟ್’ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿವೆ.

ಇದೀಗ ‘ಉದ್ಯೋಗಕ್ಕಾಗಿ ಯುವಜನರ ವೇದಿಕೆ’ಯು ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದೆ.

ಯುವಜನರು ಮತ್ತು ಗುತ್ತಿಗೆ ನೌಕರರು ಸೇರಿದಂತೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಎಸ್.ಎಲ್. ಚೌಕಿಯಲ್ಲಿರುವ ಭಾವೈಕ್ಯತಾ ಸಭಾಂಗಣದಲ್ಲಿ ಈ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವುದರಿಂದ ಉದ್ಯೋಗಕ್ಕಾಗಿ ಯುವಜನರ ವೇದಿಕೆಯ ವತಿಯಿಂದ ‘ನೋಟು ಹಿಡಿದು ಓಟು ಕೇಳಲು ಬರಬೇಡಿ’ ಎಂಬ ಭಿತ್ತಿ ಪತ್ರವನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಈ ಕಾಯ್ದೆಯ ತಿದ್ದುಪಡಿಯ ಪ್ರಕಾರ ಯಾವುದೇ ಕ್ಷಣದಲ್ಲಾದರೂ ನಮ್ಮನ್ನು ತೆಗೆದು ಹಾಕಬಹುದು. ಹೀಗಾಗಿ ಇದೀಗ ಗುತ್ತಿಗೆ ನೌಕರರು ಅಭದ್ರ ಸ್ಥಿತಿಯಲ್ಲಿದ್ದಾರೆ. ಅಲ್ಲದೇ ‘ಸಮಾನ ಕೆಲಸಕ್ಕೆ ಸಮಾನ ವೇತನ’ ಎನ್ನುವುದನ್ನು ಸರಕಾರಗಳು ಗಾಳಿಗೆ ತೂರಿ ಗುತ್ತಿಗೆ ನೌಕರರನ್ನು ದುಡಿಸಿಕೊಳ್ಳುತ್ತಿದ್ದಾರೆ. ಹಳೆಯ ಕಾಲದ ಜೀತ ಪದ್ದತಿಯನ್ನೇ ಆಧುನಿಕವಾಗಿ ಈ ತರಹ ಮಾಡುತ್ತಿದ್ದಾರೆಯಷ್ಟೇ. ಹೀಗಾಗಿ ಎಲ್ಲ ಗುತ್ತಿಗೆ ನೌಕರರಿಗೆ ಭದ್ರತೆ ಒದಗಿಸಬೇಕು ಎನ್ನುವುದೇ ನಮ್ಮ ಒತ್ತಾಯವಾಗಿದೆ. 
ಬಸವರಾಜು, ಗುತ್ತಿಗೆ ನೌಕರ

ಉದ್ಯೋಗಕ್ಕಾಗಿ ಯುವಜನರ ವೇದಿಕೆಯ ಸಂಚಾಲಕ ಚಂದನ್ ಕುಮಾರ್ ಮಾತನಾಡಿ, “ಈಗಾಗಲೇ ಉದ್ಯೋಗಕ್ಕಾಗಿ ಯುವಜನರ ವೇದಿಕೆಯು ಯುವಜನರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಅದನ್ನು ನೀಡಿದೆ. ಇದರ ಉದ್ದೇಶ ಯುವಜನರ ಪ್ರಣಾಳಿಕೆಯನ್ನು ಅವರ ಪಕ್ಷದ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳಬೇಕು. ಜತೆಗೆ ಗುತ್ತಿಗೆ ಮತ್ತು ಇತರೆ ತಾತ್ಕಾಲಿಕ ನೌಕರರ 60 ವರ್ಷ ಸೇವಾ ಭದ್ರತೆ ಖಾತರಿ ಮಾಡಲು ದಿನಗೂಲಿ ನೌಕರರ 2013ರ ಕಾಯ್ದೆ ಮಾದರಿಯಲ್ಲಿ ಕಾಯ್ದೆ ಜಾರಿ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು,” ಎಂದು ಒತ್ತಾಯಿಸಿದರು.

“ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 1946ರಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ತಂದಿದ್ದ ನೌಕರರ ಕಾಯ್ದೆ ಕೇಂದ್ರ ನಿಯಮದ ಉನ್ನತ ಆದೇಶವನ್ನೇ ಇಂದು ಪೂರ್ಣ ಪ್ರಮಾಣದಲ್ಲಿ ಕೇಂದ್ರ ಸರಕಾರ ತಿದ್ದುಪಡಿ ಮಾಡಿದೆ. ಅಲ್ಲದೇ ಈ ತಿದ್ದುಪಡಿಯು ಗುತ್ತಿಗೆ ನೌಕರರ ವಿರುದ್ಧವಿದೆ,” ಎಂದರು ಚಂದನ್ ಕುಮಾರ್.

ನಂತರ ಗುತ್ತಿಗೆ ನೌಕರ ಬಸವರಾಜು ಮಾತನಾಡಿ, “ಎಲ್ಲಾ ಉದ್ಯೋಗಗಳನ್ನು ಅಭದ್ರ ಮಾಡುವ ಅಪಾಯಕಾರಿಯಾದ ಈ ಫಿಕ್ಡ್ಸ್ ಟರ್ಮ್ ಎಂಪ್ಲಾಯ್‌ಮೆಂಟ್ ತಿದ್ದುಪಡಿಯನ್ನು ನಾವು ನೇರವಾಗಿ ವಿರೋಧಿಸುತ್ತೇವೆ. ಕೇಂದ್ರ ಸರಕಾರ ಈ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ,” ಎಂದರು.

ಜೊತೆಗೆ, “ ವಿರೋಧ ಪಕ್ಷಗಳೂ ಈ ತಿದ್ದುಪಡಿಯನ್ನು ವಿರೋಧಿಸಿ ಮಾತನಾಡಿ, ಕೇಂದ್ರ ಸರಕಾರವನ್ನು ತಿದ್ದುಪಡಿ ಹಿಂಪಡೆಯಬೇಕೆಂದು ಒತ್ತಾಯಿಸಬೇಕು. ಇಲ್ಲದಿದ್ದರೆ ಉಳಿದ ಪಕ್ಷಗಳಿಗೂ ಈ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಈ ಬಾರಿಯ ಚುನಾವಣೆಯು ಹಣ, ಹೆಂಡ, ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ನಡೆಯುವುದಿಲ್ಲ. ಬದಲಾಗಿ ಉದ್ಯೋಗ ಮತ್ತು ಉದ್ಯೋಗ ಭದ್ರತೆಯ ಮೇಲೆ ನಡೆಯುತ್ತದೆ,” ಎಂದು ಅವರು ತಿಳಿಸಿದರು.

ಇರುವ ಒಂದು ಕೋಟಿ ಉದ್ಯೋಗಗಳನ್ನು ಸುಭದ್ರಗೊಳಿಸುವ, 50 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಯುವಜನರ ಪ್ರಣಾಳಿಕೆ ಜಾರಿ ಮಾಡಲು ‘ಉದ್ಯೋಗ ಆಯೋಗ’ ನೇಮಿಸಬೇಕು. ಜೊತೆಗೆ ಗುತ್ತಿಗೆ ನೌಕರರಿಗೆ 60 ವರ್ಷಗಳವರೆಗೆ ಸೇವಾ ಭದ್ರತೆ ಮತ್ತು ಸಮಾನ ವೇತನ ಖಾತರಿಗೊಳಿಸಲು ‘ಕರ್ನಾಟಕ ರಾಜ್ಯ ಗುತ್ತಿಗೆ ಮತ್ತು ಇತರ ತಾತ್ಕಾಲಿಕ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ- 2018’ ಜಾರಿಗೆ ತರಬೇಕು ಎಂದು ಉದ್ಯೋಗಕ್ಕಾಗಿ ಯುವಜನರ ವೇದಿಕೆಯ ವತಿಯಿಂದ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಲಾಯಿತು.