ಕಾಗೆ ಕೂತಿದ್ದು; ಕೊಂಬೆ ಮುರಿದಿದ್ದು: ‘ಹಿಂದೂ ಹುಲಿ’ ಹೆಗಡೆಗಿದು ಕಾಕತಾಳೀಯವಲ್ಲ! 
ಸುದ್ದಿ ಸಾರ

ಕಾಗೆ ಕೂತಿದ್ದು; ಕೊಂಬೆ ಮುರಿದಿದ್ದು: ‘ಹಿಂದೂ ಹುಲಿ’ ಹೆಗಡೆಗಿದು ಕಾಕತಾಳೀಯವಲ್ಲ! 

ಅನಂತ್ ಕುಮಾರ್ ಹೆಗಡೆ ತಮ್ಮ ಕೊಲೆಗೆ ಪ್ರಯತ್ನ ನಡೆದಿತ್ತು ಎನ್ನುವ ಆರೋಪ ಬಿದ್ದು ಹೋಗಿದೆ. ಅಲ್ಲದೇ ಇದು ಚುನಾವಣಾ ಸಮಯವೂ ಆಗಿದ್ದರಿಂದ ‘ರಾಜಕೀಯ ಮೈಲೇಜ್’ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳು ಬಂದಿವೆ

ಕಳೆದ ಮಂಗಳವಾರ ರಾತ್ರಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಬೆಂಗಾವಲು ವಾಹನದ ಅಪಘಾತದ ಕುರಿತು 'ತಮ್ಮ ವಿರುದ್ಧ ನಡೆದ ಕೊಲೆ ಪ್ರಯತ್ನವಿದು' ಎಂದು ಅವರು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಪೊಲೀಸರು ಅಲ್ಲಗಳೆದಿದ್ದಾರೆ.

“ಟ್ರಕ್ ಡ್ರೈವರ್ ತಪ್ಪಾಗಿ ತಿರುವು ತೆಗೆದುಕೊಂಡು ಎದುರು ಮಾರ್ಗದಲ್ಲಿ ಟ್ರಕ್ ಚಲಾಯಿಸುತ್ತಿರುವಾಗ ಸಚಿವರ ಬೆಂಗಾವಲಿನ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದಿದೆ,” ಎಂದು ಪೊಲೀಸರು ತಿಳಿಸಿದ್ದಾರೆ. ಜತೆಗೆ “ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಹತ್ಯೆಗೈಯಲು ಉದ್ದೇಶಪೂರ್ವಕವಾಗಿ ನಡೆದ ಅಪಘಾತವಿದು ಎಂದು ಸಾಬೀತು ಪಡಿಸಲು ಯಾವುದೇ ಸಾಕ್ಷಾಧಾರಗಳಿಲ್ಲ,” ಎಂದಿದ್ದಾರೆ.

ಈ ಮೂಲಕ ಅನಂತ್ ಕುಮಾರ್ ಹೆಗಡೆ ಮಾಡಿದ್ದ ‘ತಮ್ಮ ಕೊಲೆಗೆ ಪ್ರಯತ್ನ ನಡೆದಿತ್ತು’ ಎನ್ನುವ ಆರೋಪ ಬಿದ್ದು ಹೋಗಿದೆ. ಅಲ್ಲದೇ ಇದು ಚುನಾವಣಾ ಸಮಯವೂ ಆಗಿದ್ದರಿಂದ ‘ರಾಜಕೀಯ ಮೈಲೇಜ್’ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳು ಬಂದಿವೆ.

ಆವತ್ತು ನಡೆದಿದ್ದೇನು?

ಮಂಗಳವಾರ ರಾತ್ರಿ ಅನಂತ ಕುಮಾರ್ ಹೆಗಡೆ ಶಿರಸಿಯಿಂದ ಬೆಂಗಳೂರಿಗೆ ಹೊರಟಿದ್ದರು. ಆಗ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹಲಗೇರಿ ಕ್ರಾಸ್ ಬಳಿ ಲಾರಿಯೊಂದು ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮವಾಗಿ ಬೆಂಗಾವಲು ವಾಹನದ ಸಿಬ್ಬಂಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಈ ಅಪಘಾತದಲ್ಲಿ ಸಚಿವರ ಕಾರು ಕೂದಲೆಳೆಯಲ್ಲಿ ಪಾರಾಗಿತ್ತು ಎನ್ನುವ ಮಾತುಗಳೂ ಕೇಳಿ ಬಂದಿದ್ದವು, ಅದನ್ನೇ ಅನಂತ್ ಕುಮಾರ್ ಹೆಗಡೆ ತಾವು ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಅಲ್ಲದೇ ಸರಣಿ ಟ್ವೀಟ್ ಮಾಡಿ, “ಲಾರಿ ಚಾಲಕನ ಗುರಿ ನನ್ನ ಕಾರೇ ಆಗಿತ್ತು. ನಮ್ಮ ಕಾರು ವೇಗವಾಗಿದ್ದರಿಂದ ಅದೃಷ್ಟವಶಾತ್‌ ನಾನು ಪಾರಾದೆ. ಇದೊಂದು ಉದ್ದೇಶಪೂರ್ವಕ ಅಪಘಾತದ ಪ್ರಯತ್ನ,” ಎನ್ನುವ ಗಂಭಿರ ಆರೋಪವನ್ನೂ ಮಾಡಿದ್ದರು.

ಅಲ್ಲದೇ ಅಪಘಾತದ ವೀಡಿಯೋ ಮತ್ತು ಫೋಟೋಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಕೂಡ ಮಾಡಿದ್ದರು.

ನಂತರ “ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಘಟನೆಯ ಹಿಂದೆ ದೊಡ್ಡ ಷಡ್ಯಂತ್ರವಿದೆ,” ಎಂದು ಸಚಿವ ಅನಂತ್ ಕುಮಾರ್ ಹೆಗಡೆ ಪೊಲೀಸರನ್ನು ಒತ್ತಾಯಿಸಿದ್ದರು.

ಲಾರಿ ಚಾಲಕ ನಾಸೀರ್‌ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ವಿಚಾರಣೆ ನಡೆಸಿದ ಬಳಿಕ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆಯವರ ಆರೋಪವನ್ನು ಅಲ್ಲಗಳೆದಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಎನ್.ಪರಶುರಾಮ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. “ಅನಂತ ಕುಮಾರ್ ಹೆಗಡೆ ಅವರು ಆರೋಪಿಸಿದಂತೆ ಅವರನ್ನು ಕೊಲ್ಲಲು ನಡೆದ ಉದ್ದೇಶ ಪೂರ್ವಕ ಅಪಘಾತವಿದು ಎನ್ನಲು ಯಾವುದೇ ಸಾಕ್ಷಾಧಾರಗಳು ತನಿಖೆಯಲ್ಲಿ ಕಂಡು ಬಂದಿಲ್ಲ,” ಎಂದಿದ್ದಾರೆ.

ಜತೆಗೆ, “ಟ್ರಕ್ ಡ್ರೈವರ್ ನಾಸಿಕ್ ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಟ್ರಕ್ ಓಡಿಸುತ್ತಿದ್ದ. ಆದರೆ ಆತ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಬದಿಯಲ್ಲಿ ತಿರುವು ತೆಗೆದುಕೊಳ್ಳಬೇಕಾಗಿತ್ತು, ಅದನ್ನು ಮಿಸ್ ಮಾಡಿಕೊಂಡಿದ್ದ. ಹೀಗಾಗಿ ಹುಬ್ಬಳ್ಳಿ ಕಡೆಗೆ ಯೂ-ಟರ್ನ್ ತೆಗೆದುಕೊಳ್ಳಲು ಮುಂದಾದ. ಈ ಸಮಯದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದು ಸಚಿವರ ಬೆಂಗಾವಲಿನ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆಸಿದ್ದಾನೆ. ಇದು ಒಂದು ಅಪಘಾತವಷ್ಟೇ,” ಎಂದಿದ್ದಾರೆ.