ಸ್ವಾಮಿ ಅಸೀಮಾನಂದ ತಪ್ಪಿತಸ್ಥ: ಕೋರ್ಟ್‌ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಓವೈಸಿ
ಸುದ್ದಿ ಸಾರ

ಸ್ವಾಮಿ ಅಸೀಮಾನಂದ ತಪ್ಪಿತಸ್ಥ: ಕೋರ್ಟ್‌ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಓವೈಸಿ

ಹೈದರಾಬಾದ್‌ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೋರ್ಟ್‌ ಖುಲಾಸೆಗೊಳಿಸಿತ್ತು. ಈಗ ಅಸಾದುದ್ದೀನ್‌ ಓವೈಸಿ ಕೋರ್ಟ್‌ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದ ಮತ್ತು ಇತರರನ್ನು ಹೈದರಾಬಾದ್ ವಿಶೇಷ ನ್ಯಾಯಾಲಯ ಖುಲಾಸೆ ಗೊಳಿಸಿತ್ತು. ಪ್ರಕರಣದಲ್ಲಿ ಅಗತ್ಯ ಸಾಕ್ಷಾಧಾರದ ಕೊರತೆ ಕಾರಣವನ್ನು ನೀಡಿ ಕೋರ್ಟ್ ಆದೇಶಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸುರವ ಆಲ್ ಇಂಡಿಯಾ ಮಜ್ಲಿಸ್-ಎ-ಇಥೇಹಾದ್-ಉಲ್ ಮುಸ್ಲಿಮೀನ್ (ಎಐಎಂಐಎಂ)ನ ಅಧ್ಯಕ್ಷ ಅಸಾದುದ್ದೀನ್ ಒವೈಸಿ ತೀರ್ಪಿನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೈದರಾಬಾದ್ನ ಮೆಕ್ಕಾ ಮಸೀದಿ ಸ್ಪೋಟ ಪ್ರಕರಣದಲ್ಲಿ ಖುಲಾಸೆಯಾದ ಆರೋಪಿಗಳು ತಪ್ಪಿತಸ್ಥರು ಎಂದು ಓವೈಸಿ ಆರೋಪಿಸಿದ್ದಾರೆ. ಜತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆ ಬಗ್ಗೆಯೂ ಓವೈಸಿ ಕಿಡಿಕಾರಿದ್ದಾರೆ.

ಎನ್ಐಎ ಸಂಸ್ಥೆ ಕಿವುಡು ಮತ್ತು ಕುರುಡಾಗಿದೆ, ಸ್ಟೋಟದಲ್ಲಿ ಬಲಿಯಾದ ಕುಂಟುಂಬಗಳಿಗೆ ವಿರುದ್ಧವಾದ ತೀರ್ಪು ಕೋರ್ಟ್ ನೀಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

“ಸ್ಟೋಟದಲ್ಲಿ ಬಲಿಯಾದವರ ಕುಟುಂಬಸ್ಥರು ಇಚ್ಛಿಸಿದರೆ ಕಾನೂನು ಹೋರಾಟಕ್ಕೆ ನೆರವು ನೀಡಲು ಇಷ್ಟ ಪಡುತ್ತೇನೆ. ನಾನು ಮೊದಲೇ ಹೇಳಿದಂತೆ ಎನ್ಐಎ ಪಂಜರದ ಗಿಳಿ, ತನ್ನ ಅಸ್ತಿತ್ವವನ್ನು ಕಳೆದುಕೊಂಡು ಪಂಚೇಂದ್ರಿಯಗಳಿಲ್ಲದೆ ನಿಷ್ಕ್ರಿಯಗೊಂಡಿದೆ,” ಎಂದು ಅಸಾದುದ್ದೀನ್ ಓವೈಸಿ ಹೇಳಿದರು.

ಕಳೆದ ಸೋಮವಾರ (15 ಏಪ್ರಿಲ್) ಎನ್ಐಎ ವಿಶೇಷ ನ್ಯಾಯಾಲಯವು ಮೆಕ್ಕಾ ಮಸೀದಿ ಬಾಂಬ್ ಸ್ಟೋಟ ಪ್ರಕರಣದ ಐದು ಆರೋಪಿಗಳನ್ನು ಮೊಕದ್ದಮೆಯಿಂದ ಖುಲಾಸೆಗೊಳಿಸಿ ಆದೇಶ ನೀಡಿತ್ತು. ಪ್ರಕರಣದ ಇನ್ನೂ ಐವರು ಆರೋಪಿಗಳು ಇಂದಿನವರೆಗೂ ತಲೆಮರೆಸಿಕೊಂಡಿದ್ದಾರೆ.

2007ರ ಮೇ 18ರಂದು ಹೈದ್ರಾಬಾದ್ ಮೆಕ್ಕಾ ಮಸೀದಿಯ ಮೇಲೆ ವಿಧ್ವಂಸಕಾರಿ ದಾಳಿ ನಡೆದಿತ್ತು. ಪ್ರಕರಣದಲ್ಲಿ 5 ಜನ ಮೃತಪಟ್ಟಿದ್ದರು. ಸುಮಾರು 58 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಕೃತ್ಯದ ಹಿಂದೆ ಬಲ ಪಂಥೀಯ ಭಯೋತ್ಪಾದಕ ಸಂಘಟನೆಯೊಂದರ ಕೈವಾಡವಿದೆ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣದ ತೀರ್ಪು ರಾಜಕೀಯ ಮೇಲಾಟಕ್ಕೂ ಈಗ ಸಾಕ್ಷಿಯಾಗಿದೆ. ಬಿಜೆಪಿ ಬಲಪಂಥೀಯ ಸಂಘಟನೆಗಳ ಪರ ನಿಂತು ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲಿಸುತ್ತಿದೆ ಎಂದು ಕಾಂಗ್ರೆಸ್ ಹಲವು ವರ್ಷಗಳಿಂದ ಆರೋಪಿಸುತ್ತಿದೆ. ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ಬಿಜೆಪಿ, “ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷ”, ಎಂದು ಹೇಳಿದೆ.

“ರಾಜಕೀಯ ಹಿತ್ತಾಸಕ್ತಿಯಿಂದ ಕಾಂಗ್ರೆಸ್ ಪಕ್ಷವು ಹಿಂದೂ ಧರ್ಮವನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಿಂದುಗಳಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು,” ಎಂದು ಬಿಜೆಪಿ ಕೇಳಿದೆ.

ಹೈದರಾಬಾದ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ. ರವೀಂದರ್ ರೆಡ್ಡಿ, ಪ್ರಕರಣದ ತೀರ್ಪು ನೀಡಿದ ಬೆನ್ನಲ್ಲೇ ನ್ಯಾಯಾಧೀಶ ಪದವಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ.

ಸ್ವಾಮಿ ಅಸೀಮಾನಂದ ತನ್ನ ಸ್ವ ಇಚ್ಛಾ ಹೇಳಿಕೆಯಲ್ಲಿ ಮೆಕ್ಕಾ ಮಸೀದಿ ಬಾಂಬ್ ಸ್ಪೋಟವನ್ನು ಒಪ್ಪಿಕೊಂಡಿದ್ದ. ಸಮರ್ಪಕ ಸಾಕ್ಷಿಗಳು ಇದ್ದರೂ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಜತೆಗೆ ಓವೈಸಿ ಕುಟುಂಬಸ್ಥರು ಇಚ್ಛಿಸಿದರೆ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ ಹೇಳಿರುವುದರಿಂದ ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಕೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕು. ಎನ್ಐಎ ಕೂಡ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.