samachara
www.samachara.com
ಕೊನೆಗೊಂಡ ಕ್ಯಾಸ್ಟ್ರೋ ಅಧ್ಯಾಯ; ಕ್ಯೂಬಾದ ಹೊಸ ಅಧ್ಯಕ್ಷರಾಗಿ ಮಿಗುಯಲ್‌ ಡಯಾಜ್‌ ಕ್ಯಾನಲ್‌ ಆಯ್ಕೆ
ಸುದ್ದಿ ಸಾರ

ಕೊನೆಗೊಂಡ ಕ್ಯಾಸ್ಟ್ರೋ ಅಧ್ಯಾಯ; ಕ್ಯೂಬಾದ ಹೊಸ ಅಧ್ಯಕ್ಷರಾಗಿ ಮಿಗುಯಲ್‌ ಡಯಾಜ್‌ ಕ್ಯಾನಲ್‌ ಆಯ್ಕೆ

ಸತತ 6 ದಶಕಗಳ ಕಾಲ ಕ್ಯೂಬಾವನ್ನು ಆಳ್ವಿಕೆ ನಡೆಸಿದ ಕ್ಯಾಸ್ಟ್ರೋ ಕುಟುಂಬ ಈಗ ಅಧಿಕಾರದಿಂದ ಹಿಂದೆ ಸರಿದಿದೆ. 86 ವರ್ಷಗಳ ರೌಲ್‌ ಕ್ಯಾಸ್ಟ್ರೋ ಕ್ಯೂಬಾ ಉಪಾಧ್ಯಕ್ಷರಾಗಿದ್ದ  ಡಯಾಜ್‌ ಕ್ಯಾನಲ್‌ರ ಹೆಗಲಿಗೆ ಅಧಿಕಾರವನ್ನು ಹಸ್ತಾಂತರಿಸಲಿದ್ದಾರೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಕ್ಯೂಬಾದಲ್ಲಿ ಕ್ಯಾಸ್ಟ್ರೋ ಕಾಲ ಗುರುವಾರಕ್ಕೆ ಮುಕ್ತಾಯಗೊಳ್ಳಲಿದೆ. ಕೊನೆಯ ಕಮ್ಯುನಿಸ್ಟ್‌ ಕೊಂಡಿ ಎಂದು ಕರೆಸಿಕೊಂಡಿರುವ ಕ್ಯೂಬಾವನ್ನು ಸತತ ಆರು ದಶಕಗಳ ಕಾಲ ಆಳ್ವಿಕೆ ಮಾಡಿಕೊಂಡು ಬಂದಿದ್ದ ಕ್ಯಾಸ್ಟ್ರೋ ವಂಶ ಈಗ ಅಧಿಕಾರದಿಂದ ಕೆಳಗಿಳಿದಿದೆ. ಕ್ಯೂಬಾದ ಅಧ್ಯಕ್ಷ ಸ್ಥಾನವನ್ನು ಮಿಗುಯೆಲ್‌ ಡಯಾಜ್‌ ಕ್ಯಾನೆಲ್‌ ವಹಿಸಿಕೊಳ್ಳಲಿದ್ದಾರೆ.

ಕ್ಯೂಬಾ ಅಮೆರಿಕಾದ ಅಧಿಕಾರವನ್ನು ಕಿತ್ತೊಗೆದು ಸ್ವತಂತ್ರ ಘೋಷಿಸಿಕೊಂಡ ನಂತರ ಕ್ಯೂಬಾದ ತಂದೆ ಎನಿಸಿಕೊಂಡಿದ್ದ ಫಿಡೆಲ್‌ ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡಿದ್ದರು. ಕ್ಯೂಬಾವನ್ನು ಕಮ್ಯುನಿಸ್ಟ್‌ ರಾಷ್ಟ್ರವಾಗಿ ಕಟ್ಟಿ ನಿಲ್ಲಿಸಿದ್ದರು. ರಷ್ಯಾ ಸಂಯುಕ್ತ ಸಂಸ್ಥಾನದ ಬೆಂಬಲ ಪಡೆದು, ಕೇವಲ 90 ಮೈಲಿ ದೂರದ ಅಮೆರಿಕಾವನ್ನು ಎದುರು ಹಾಕಿಕೊಂಡಿದ್ದರು.

ಫಿಡೆಲ್‌ ಕ್ಯಾಸ್ಟ್ರೋ
ಫಿಡೆಲ್‌ ಕ್ಯಾಸ್ಟ್ರೋ
ಆರ್‌ಟಿ.ಕಾಂ

ರಷ್ಯಾ ಸಂಯುಕ್ತ ಸಂಸ್ಥಾನ ಕುಸಿದು ಬೆಂಬಲವಿಲ್ಲದಂತಾದಾಗಲೂ ಕೂಡ ಫಿಡೆಲ್‌ ಕ್ಯಾಸ್ಟ್ರೋ ಎದೆಗುಂದಿರಲಿಲ್ಲ. ಅಮರಿಕಾ ಹೇರಿದ ಆರ್ಥಿಕ ದಿಗ್ಭಂದನವನ್ನು ಕ್ಯಾಸ್ಟ್ರೋ ಸವಾಲಾಗಿ ಸ್ವೀಕರಿಸಿದ್ದರು. ಕ್ಯಾಸ್ಟ್ರೋರ ಧೃಡ ನಿರ್ಧಾರವನ್ನು ಜನಗತ್ತಿನ ಹಲವಾರು ರಾಷ್ಟ್ರಗಳು ಮೆಚ್ಚಿಕೊಂಡಿದ್ದವು. ನೆರವಿನ ಮಹಾಪೂರವೇ ಕ್ಯೂಬಾದತ್ತ ಹರಿದು ಬಂದಿತ್ತು. ಭಾರತದ ಸಾವಿರಾರು ಟನ್‌ ಗೋಧಿ ಕ್ಯೂಬಾದ ಮಡಿಲು ಸೇರಿತ್ತು.

ಧಿಗ್ಭಂಧನ ವಿಧಿಸಿದ್ದ ಅಮೆರಿಕಾ ಸರಕಾರದ ವಿರುದ್ಧ ಅಮೆರಿಕಾದ ಜನರೇ ಬೀದಿಗಿಳಿದ್ದರು. ಹಳೆ ಕಂಪ್ಯೂಟರ್‌ ಮಕ್ಕಳ ಆಟಿಕೆಗಳು, ಆಹಾರ ಪದಾರ್ಥಗಳು ಸೇರಿದಂತೆ ಹಲವಾರು ನೆರವುಗಳನ್ನು ಅಮೆರಿಕಾದ ಜನತೆ ನೀಡಿತ್ತು. ಸರಕಾರಗಳ ಬದಲು ಜನರ ಬೆಂಬಲವನ್ನು ಗಳಿಸಿದ ಕ್ಯಾಸ್ಟ್ರೋರ ಉಕ್ಕಿನ ಭಾಷಣ, ಜಗತ್ತಿನ ಜನರ ಎದೆಯಲ್ಲಿ ಭೋರ್ಗರೆದಿತ್ತು.

ಹಲವಾರು ಬಾರಿ ಫಿಡೆಲ್‌ ಕ್ಯಾಸ್ಟ್ರೋರನ್ನು ಕೊಲ್ಲುವ ಪ್ರಯತ್ನ ಮಾಡಿದ್ದ ಅಮೆರಿಕಾ, ನಂತರದ ದಿನಗಳಲ್ಲಿ ಕ್ಯಾಸ್ಟ್ರೋರ ಸಹಜ ಸಾವಿಗಾಗಿ ಕಾದುಕುಳಿತ್ತಿತ್ತು. ವಿಶ್ವದ ಪ್ರಮುಖ ನಾಯಕರ ಸಾಲಿನಲ್ಲಿ ಶಾಶ್ವತ ಸ್ಥಾನವನ್ನು ಗಳಿಸಿಕೊಂಡ ಫಿಡೆಲ್‌ ಕ್ಯಾಸ್ಟ್ರೋ 2008ರಲ್ಲಿ ಅಧಿಕಾರದಿದ ಸ್ವಯಂ ನಿವೃತ್ತಿ ಪಡೆದುಕೊಂಡರು.

ಫಿಡೆಲ್‌ ಕ್ಯಾಸ್ಟ್ರೋ ನಂತರ ಅವರ ತಮ್ಮ ರೌಲ್‌ ಕ್ಯಾಸ್ಟ್ರೋ ಅಧಿಕಾರ ಗಾದಿ ಹಿಡಿದಿದ್ದರು. ಇದು ಕುಟುಂಬ ರಾಜಕಾರಣ ಎಂದು ಅಮೆರಿಕಾ ಬೊಬ್ಬೆ ಹೊಡೆದಿತ್ತು. ಕ್ಯಾಸ್ಟ್ರೋ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿತ್ತು. ಆದರೆ ಕ್ಯೂಬಾದ ಜನ ಅಮೆರಿಕಾದ ಮಾತುಗಳಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಫಿಡೆಲ್‌ ಕ್ಯಾಸ್ಟ್ರೋಗೆ ನೀಡುತ್ತಿದ್ದಷ್ಟೇ ಗೌರವವನ್ನು ರೌಲ್‌ ಕ್ಯಾಸ್ಟ್ರೋಗೂ ನೀಡಿದ್ದರು. ಅಣ್ಣ ಹಾಕಿಕೊಟ್ಟ ದಾರಿಯಲ್ಲೇ ದೇಶವನ್ನು ಮುನ್ನಡೆಸಿಕೊಂಡು ಬಂದ 86 ವರ್ಷದ ರೌಲ್‌ ಕ್ಯಾಸ್ಟ್ರೋ, ಈಗ ಕ್ಯೂಬಾದ ಅಧಿಕಾರವನ್ನು ಡಯಾಜ್‌ ಕ್ಯಾನಲ್‌ರ ಹೆಗಲಿಗೆ ವರ್ಗಾಯಿಸುತ್ತಿದ್ದಾರೆ.

ರೌಲ್‌ ಕ್ಯಾಸ್ಟ್ರೋ
ರೌಲ್‌ ಕ್ಯಾಸ್ಟ್ರೋ
KESQ

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ 57 ವರ್ಷದ ಡಯಾಜ್‌ ಕ್ಯಾನೆಲ್‌, 2013ರಿಂದ ಕ್ಯೂಬಾದ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ಯೂಬಾದ ಅಧಿಕಾರ ಗಾದಿ ಹಿಡಿಯುವಲ್ಲಿ ಕ್ಯಾಸ್ಟ್ರೋ ಕುಟುಂಬದ ಹೊರತಾಗಿ ಕೇಳಿಬಂದಿರುವ ಮೊದಲ ಹೆಸರು ಡಯಾಜ್‌ ಕ್ಯಾನೆಲ್‌ರವರದ್ದು. ಜತೆಗೆ 1959ರ ಕ್ಯೂಬಾ ಕ್ರಾಂತಿಯ ನಂತರ ಜನಿಸಿ, ಕ್ಯೂಬಾ ಅಧಿಕಾರವನ್ನು ಹಿಡಿಯುತ್ತಿರುವ ಮೊದಲಿಗ ಎಂಬ ಹೆಗ್ಗಳಿಕೆ ಕೂಡ ಡಯಾಜ್‌ ಕ್ಯಾನಲ್‌ ಮುಡಿಗೇರಿದೆ. ಯಾವುದೇ ಪ್ರತಿ ಸ್ಪರ್ಧಿಯಿಲ್ಲದೇ ಕ್ಯಾನಲ್‌ ಅಧ್ಯಕ್ಷೀಯ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗುರುವಾರ ಡಯಾಜ್‌ ಕ್ಯಾನಲ್‌ ಅಧಿಕೃತವಾಗಿ ಅಧ್ಯಕ್ಷೀಯ ಪದವಿಯನ್ನು ವಹಿಸಿಕೊಳ್ಳಲಿದ್ದಾರೆ. 1961ರ ಏಪ್ರಿಲ್‌ 19ರಂದು ಕ್ಯೂಬಾದಲ್ಲಿ ಬೇ ಆಫ್‌ ಪಿಗ್ಸ್‌ ಹೆಸರಿನಲ್ಲಿ ದಾಳಿ ನಡೆದಿತ್ತು. ಅಮೆರಿಕಾ ಕಳಿಸಿದ್ದ 1,400 ಜನ ಸೈನಿಕರನ್ನು ಕ್ಯೂಬಾ ಸೈನ್ಯ ನೆಲಕ್ಕುರುಳಿಸಿತ್ತು. ಈ ವಿಜಯದ 59ನೇ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಕ್ಯಾನೆಲ್‌ ಅಧಿಕಾರ ಸ್ವೀಕರಿಸಲಿದ್ದಾರೆ.

ಬುಧವಾರ 605 ಸದಸ್ಯ ಸಂಖ್ಯೆಯ ಕ್ಯೂಬಾ ಸಂಸತ್ತಿನಲ್ಲಿ ನೇರ ಹಾಗೂ ಗುಪ್ತ ಮತದಾನ ನಡೆದಿದೆ. ಕ್ಯೂಬಾದ ಸಂಸತ್‌ ಸದಸ್ಯರು ಅಧ್ಯಕ್ಷೀಯ ಹುದ್ದೆ ಮತ್ತು ಇನ್ನಿತರ ರಾಷ್ಟ್ರದ ಪ್ರಮುಖ ಆಡಳಿತ ಸ್ಥಾನಗಳಿಗೆ ಹೊಸ ನಾಯಕರನ್ನು ಆರಿಸಿದ್ದಾರೆ. ಡಯಾಜ್‌ ಕ್ಯಾನೆಲ್‌ ಅಧಿಕಾರ ವಹಿಸುವುದರಲ್ಲಿ ಯಾವುದೇ ಸಂಶಯವಿಲ್ಲದಿದ್ದರೂ, ಅಧಿಕೃತ ಫಲಿತಾಂಶ ಗುರುವಾರ ಹೊರಬೀಳಲಿದೆ.

ಡಯಾಜ್‌ ಕ್ಯಾನೆಲ್‌ ಅಧಿಕಾರ ಸ್ವೀಕರಿಸಿದ ನಂತರ ಅವರ ಮುಂದಿರುವ ದೊಡ್ಡ ಹೊಣೆಯೆಂದರೆ ಫಿಡೆಲ್‌ ಕ್ಯಾಸ್ಟ್ರೋ ಕಟ್ಟಿರುವ ದೇಶವನ್ನು ಹಾಗೇ ಉಳಿಸಿಕೊಂಡು ಸಾಗುವುದು. ಜತೆಗೆ ಮಗ್ಗಲ ಶತ್ರುವಾಗಿರುವ ಅಮೆರಿಕಾದೊಂದಿಗೆ ಕಡಿದುಕೊಂಡಿರುವ ಮೈತ್ರಿಯನ್ನು ಪುನರ್‌ರೂಪಿಸಿಕೊಳ್ಳುವ ಸಲುವಾಗಿ ಕ್ಯಾಸ್ಟ್ರೋ ತಂದ ಸಣ್ಣ ಮಟ್ಟದ ಖಾಸಗೀ ಕಂಪನಿಗಳ ಸ್ಥಾಪನೆಗೆ ಅವಕಾಶ ನೀಡುವ ನೀತಿಯನ್ನು ಮುಂದುವರೆಸುವುದು. ಈ ಅಂಶಗಳ ಜತೆಗೆ ಡಯಾಜ್‌ ಕ್ಯಾನೆಲ್‌ ಮುಂದೆ ತರಲಿರುವ ನೀತಿಗಳು ಕ್ಯೂಬಾದ ಮೇಲೆ ಬೀರುಬಹುದಾದ ಪರಿಣಾಮಗಳನ್ನು ಕಾಲವೇ ತಿಳಿಸಲಿದೆ.