ವೇಮುಲ ನೆನಪು ಮಾಸುವ ಮುನ್ನವೇ ಮತ್ತೊಂದು ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ
ಸುದ್ದಿ ಸಾರ

ವೇಮುಲ ನೆನಪು ಮಾಸುವ ಮುನ್ನವೇ ಮತ್ತೊಂದು ದಲಿತ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಭೀಮ್‌ ಸಿಂಗ್‌ ಸಾವಿನ ಬಗ್ಗೆ ಈಗಾಗಲೇ ಅನುಮಾನಗಳು ಹುಟ್ಟಿಕೊಂಡಿವೆ. ಸಾವಿಗೆ ಕಾರಣವನ್ನು ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೈದರಾಬಾದ್‌ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲನ ನೆನಪು ಮಾಸುವ ಮುನ್ನವೇ ಮತ್ತೊಬ್ಬ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶ ರಾಜ್ಯದ ಕಾನ್ಪುರದಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಓದುತ್ತಿದ್ದ ಸಂಶೋಧನಾ ವಿದ್ಯಾರ್ಥಿ ಭೀಮ್‌ ಸಿಂಗ್‌ ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿ. ವಿದ್ಯಾರ್ಥಿ ನಿಲಯದ ಕೋಣೆಯಲ್ಲಿ ಬುಧವಾರ ಯಾರೂ ಇಲ್ಲದ ವೇಳೆ ಬೆಡ್‌ಶೀಟ್‌ಅನ್ನು ಕತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಭೀಮ್‌ ಸಿಂಗ್‌ ಸಾವಿನ ಬಗ್ಗೆ ಈಗಾಗಲೇ ಅನುಮಾನಗಳು ಹುಟ್ಟಿಕೊಂಡಿವೆ. ಸಾವಿಗೆ ಕಾರಣವನ್ನು ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಲ್ಯಾಣಪುರ ಪೋಲಿಸ್ ಠಾಣೆಯ ಪೊಲೀಸರು ಹಾಸ್ಟೆಲ್ ಕೋಣೆಯ ಬಾಗಿಲು ಒಡೆದು ಮೃತ ದೇಹದ ಪರಿಶೀಲನೆ ನಡೆಸಿದ್ದಾರೆ. ಭೀಮ್‌ ಸಿಂಗ್‌ ಪೋಷಕರು ಬಂದ ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮ್‌ ಸಿಂಗ್‌ ಮೂಲತಃ ಹರಿಯಾಣದ ಫರೀದಾಬಾ‍‍‍‍ದ್‌ ಊರಿನವನಾಗಿದ್ದು, ಪೋಷಕರಿಗೆ ವಿಷಯ ತಿಳಿಸಲಾಗಿದೆ ಎಂದು ಐಐಟಿ ಆಡಳಿತ ಮಂಡಳಿ ತಿಳಿಸಿದೆ. ಕಾನ್ಪುರಕ್ಕೆ ಬರುವ ಮೊದಲು ವಾರಂಗಲ್‌ನಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಭೀಮ್‌ ಸಿಂಗ್, ನಂತರ 2015ರಲ್ಲಿ ಖಾನ್‌ಪುರ್‌ನ ಐಐಟಿಗೆ ಪಿಎಚ್‌ಡಿ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದ.

ಭೀಮ್‌ಸಿಂಗ್ ಉಳಿದುಕೊಂಡಿದ್ದ ವಿದ್ಯಾರ್ಥಿ ನಿಲಯವನ್ನು ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದು, ಈ ಸಂದರ್ಭದಲ್ಲಿ ಅವರಿಗೆ ಡೆಥ್ ನೋಟ್ ಸಿಕ್ಕಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆಕಳುಹಿಸಲಾಗಿದೆ.

“ವಿದ್ಯಾರ್ಥಿಯು ಆತ್ಮಹತ್ಯೆಗೆ ಶರಣಾಗಿದ್ದು ಯಾವಾಗ ಎನ್ನುವುದು ನಿಗೂಢವಾಗಿ ಉಳಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಬಹಿರಂಗವಾಗಲಿದೆ,” ಎಂದು ಪೊಲೀಸರು ತಿಳಿಸಿದ್ದಾರೆ.

“ಭೀಮ್ ಸಿಂಗ್‌ನ ಆತ್ಮಹತ್ಯೆಗೆ ಸರಿಯಾದ ಕಾರಣಗಳು ತಿಳಿದು ಬಂದಿಲ್ಲ. ಜತೆಗೆ ಆತ್ಮಹತ್ಯೆ ಮಾಡಿಕೊಂಡ ನಿಖರ ಸಮಯವೂ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈ ಕುರಿತು ಖಚಿತ ಮಾಹಿತಿ ದೊರೆಯುತ್ತದೆ,” ಎಂದು ಐಐಟಿಯ ಉಪ ನಿರ್ದೇಶಕ ಮನಿಂದ್ರ ಅಗರ್ವಾಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಭೀಮ್‌ಸಿಂಗ್ ಒಬ್ಬ ವಿದ್ಯಾರ್ಥಿ ಪ್ರತಿನಿಧಿಯಾಗಿದ್ದ. ಅವನ ಪೋಷಕರು ಬಂದ ನಂತರವಷ್ಟೇ ಮುಂದಿನ ವಿಧಿ ವಿಧಾನಗಳು ಜರುಗುತ್ತವೆ ಎಂದು ಕಲ್ಯಾಣಪುರ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ದಲಿತ ವಿರ್ದಾರ್ಥಿಗಳ ಸಾವು ದಿನದಿಂದ ದಿನಕ್ಕೆ ಹೆಚ್ಚುತಲೇ ಇವೆ. ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಆಸೆಯಿಂದ ಬರುವ ದಲಿತ ವಿದ್ಯಾರ್ಥಿಗಳು ನಿರಾಶಾದಾಯಕ ಸಂಗತಿಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಸವರ್ಣೀಯ ಮನೋಭಾವ ಸಹ ಕಾರಣವಿರಬಹುದು. ಕಾಲೇಜು, ಹಾಸ್ಟೆಲ್‌ಗಳಲ್ಲಿನ ಉಸಿರುಗಟ್ಟಿಸುವ ವಾತವರಣವೂ ಕಾರಣವಾಗಿರಬಹುದು. ಆದರೆ ರೋಹಿತ್‌ ವೇಮುಲ ಮಾನಸಿಕ ಹಿಂಸೆಗೆ ಒಳಗಾದಂತೆ ಭೀಮ್‌ ಸಿಂಗ್‌ ಕೂಡ ಮಾನಸಿಕ ಹಿಂಸೆ ಅನುಭವಿಸಿದ್ದನೇ ಎಂಬ ಬಗ್ಗೆ ತನಿಖೆಯೇ ದೃಢಪಡಿಸಬೇಕಿದೆ.

'ಹೈದಾರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ದಲಿತ ಹಾಗೂ ದಲಿತೇತರ ವಿಚಾರವಲ್ಲ. ಕೆಲವರು ಈ ವಿಷಯದಲ್ಲಿ ಭಾವೋದ್ವೇಗಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ,' ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದು ಈ ಸಂದರ್ಭಕ್ಕೆ ನೆಪಾಗುತ್ತದೆ.

ಕೇಂದ್ರೀಯ ವಿಶ್ವ ವಿದ್ಯಾಲಯದ ಹಾಸ್ಟೆಲ್‌ನಿಂದ ಹೊರ ಹಾಕಲ್ಪಟ್ಟ ಐವರು ವಿದ್ಯಾರ್ಥಿಗಳಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಸಹ ಒಬ್ಬರಾಗಿದ್ದರು. ನಂತರದ ದಿನಗಳಲ್ಲಿ ಮನನೊಂದ ವೇಮುಲಾ, ಕೊಠಡಿಯಲ್ಲಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು.

ವೇಮುಲಾ ತನ್ನ ಡೆತ್‌ನೋಟ್‌ನಲ್ಲಿ ಎಲ್ಲಿಯೂ ಕೂಡ ಯಾವುದೇ ರಾಜಕಾರಣಿ ಅಥವಾ ಪಕ್ಷವನ್ನು ಹೊಣೆಗಾರರನ್ನಾಗಿಸಿಲ್ಲ ಎಂದಿದ್ದ ಸ್ಮೃತಿ ಇರಾನಿ, ಪ್ರಕರಣವನ್ನು ಜಾತಿ ಸಮರವನ್ನಾಗಿ ಮಾಡಲು ಯತ್ನಿಸುತ್ತಿದ್ದು ಸತ್ಯವನ್ನು ತಿರುಚಲಾಗುತ್ತಿದೆ ಎಂದಿದ್ದರು. ಮುಂದುವರಿದು, ತಾಯಿಯಾಗಿ ಹಾಗೂ ಸಚಿವೆಯಾಗಿ ವಿದ್ಯಾರ್ಥಿಯ ಸಾವಿಗೆ ಸಂತಾಪ ಸೂಚಿಸುವೆ ಎಂದು ಸುದ್ದಿಗಾರರ ಮುಂದೆ ಸಮರ್ಥಿಸಿಕೊಂಡಿದ್ದರು.

ತನಗಾದ ಹಿಂಸೆ ಅನ್ಯಾಯಗಳಿಗೆ ಯಾರನ್ನೂ ದೂರದ ರೋಹಿತ್‌ ವೇಮುಲಾ, ಹಾದಿ ತಪ್ಪಿದ ವ್ಯವಸ್ಥೆಯಿಂದ ತಾವೇ ದೂರಾಗಿದ್ದರು. ವೇಮುಲಾರ ನೆನಪು ಮಾಸುವ ಮೊದಲೇ ಈಗ ಕಾನ್ಪುರದ ಐಐಟಿಯ ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾರ್ಥಿಯ ಈ ಅಸಹಜ ಸಾವಿಗೆ ಇದುವರೆಗೂ ಕಾರಣಗಳು ತಿಳಿದು ಬಂದಿಲ್ಲ.