ಮಹಿಳಾ ಪತ್ರಕರ್ತೆಯ ಕೆನ್ನೆ ಸ್ಪರ್ಷಿಸಿ, ಕ್ಷಮೆ ಯಾಚಿಸಿದ ತಮಿಳು ನಾಡು ರಾಜ್ಯಪಾಲರು
ಸುದ್ದಿ ಸಾರ

ಮಹಿಳಾ ಪತ್ರಕರ್ತೆಯ ಕೆನ್ನೆ ಸ್ಪರ್ಷಿಸಿ, ಕ್ಷಮೆ ಯಾಚಿಸಿದ ತಮಿಳು ನಾಡು ರಾಜ್ಯಪಾಲರು

ಮಂಗಳವಾರ ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಭಾಗವಹಿಸಿದ್ದರು. ಪತ್ರಿಕಾ ಗೋಷ್ಠಿಯ ನಂತರ ಪ್ರಶ್ನೆ ಕೇಳುತ್ತಿದ್ದ ವೇಳೆ ಮಹಿಳಾ ಪತ್ರಕರ್ತೆಯೊಬ್ಬರ ಕೆನ್ನೆ ಸವರಿ, ತೀವ್ರ ಮುಖಭಂಗ ಅನುಭವಿಸಿದ್ದಾರೆ

ತಮಿಳು ನಾಡಿನ ರಾಜ್ಯಪಾಲ ಆಗಿರುವ ಬನ್ವರಿಲಾಲ್‌ ಪುರೋಹಿತ್‌ ತಮಿಳು ನಾಡಿನ ಹಿರಿಯ ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್‌ರವರನ್ನು ಮಿಂಚಂಚೆ ಮೂಲಕ ಕ್ಷಮೆ ಯಾಚಿಸಿದ್ದಾರೆ. ಪತ್ರಿಕಾಗೋಷ್ಠಿಯ ವೇಳೆ ಲಕ್ಷ್ಮಿಯವರ ಕೆನ್ನೆಯನ್ನು ಸ್ಪರ್ಷಿಸಿದ್ದಕ್ಕಾಗಿ ಕೋಪಗೊಂಡಿದ್ದ ಲಕ್ಷ್ಮಿ, ರಾಜ್ಯಪಾಲರು ಬೇಶರತ್ತಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು.

ರಾಜ್ಯಪಾಲರ ಈ ನಡೆಯನ್ನು ಪ್ರಶ್ನಿಸಿ 200ಕ್ಕೂ ಹೆಚ್ಚು ಪತ್ರಕರ್ತರು ರಾಜ್ಯಪಾಲರಿಗೆ ಪತ್ರಗಳನ್ನು ಬರೆದಿದ್ದರು. ಬೇಷರತ್ತಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಪತ್ರದ ಮುಖಾಂತರ ರಾಜ್ಯಪಾಲರಿಗೆ ತಿಳಿಸಿದ್ದರು.

ತಮಿಳುನಾಡಿನ ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯದ ಮಹಿಳಾ ಪ್ರಧ್ಯಾಪಕರೊಬ್ಬರು ವಿದ್ಯಾರ್ಥಿನಿಯರಿಗೆ ಆಮಿಷವನ್ನು ಒಡ್ಡಿದ್ದರು. ಶೈಕ್ಷಣಿಕ ಮತ್ತು ಆರ್ಥಿಕ ಸಹಾಯಗಳಿಗೆ ಪ್ರತಿಫಲವಾಗಿ ಲೈಂಗಿಕ ಕಾಮನೆಗಳನ್ನು ಪೂರೈಸುವಂತೆ ವಿದ್ಯಾರ್ಥಿನಿಯನ್ನು ಒತ್ತಾಯಿಸಿದ್ದರು. ಈ ಅಂಶ ತಮಿಳುನಾಡಿನಲ್ಲಿ ವಿವಾದವನ್ನು ಸೃಷ್ಟಿಸಿತ್ತು.

ಮಂಗಳವಾರ ಸಂಜೆ ಈ ಕುರಿತು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಪ್ರತಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಪತ್ರಿಕಾಗೋಷ್ಠಿ ಮುಗಿದ ನಂತರ ‘ದಿ ವೀಕ್‌’ ಪತ್ರಿಕೆಯ ಲಕ್ಷ್ಮಿ ಸುಬ್ರಮಣಿಯನ್‌ ರಾಜ್ಯಪಾಲರಿಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಈ ವೇಳೆ ರಾಜ್ಯಪಾಲರು ಮಹಿಳಾ ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್‌ರ ಕೆನ್ನೆಯನ್ನು ಸ್ಪರ್ಷಿಸಿದ್ದರು. ಇದರಿಂದ ಕೋಪಗೊಂಡಿದ್ದ ಲಕ್ಷ್ಮಿ ರಾಜ್ಯಪಾಲರು ಕ್ಷಮಾಪಣೆಯನ್ನು ಕೇಳಬೇಕೆಂದು ಹೇಳಿದ್ದರು.

ನಂತರ ಹಲವಾರು ಪ್ರತಕರ್ತರು ಲಕ್ಷ್ಮಿ ಜತೆ ಕೈಜೋಡಿಸಿದ್ದರು. ತಮಿಳು ನಾಡಿನಲ್ಲಿರುವ 1998ರ ಮಹಿಳಾ ದೌರ್ಜನ್ಯ ನಿಷೇಧ ಕಾಯ್ದೆ, ಮಹಿಳಾ ದೌರ್ಜನ್ಯ ಎಂದರೇನೆಂದು ವಿವರಿಸುತ್ತದೆ. ಅದನ್ನೊಮ್ಮೆ ಓದಿ ಎಂದು ಪತ್ರಕರ್ತರು ಪತ್ರ ಮುಖೇನ ರಾಜ್ಯಪಾಲರಿಗೆ ತಿಳಿಸಿದ್ದರು. ಕಾಯ್ದೆ ಹೇಳುವಂತೆ ಶಿಕ್ಷಣ ಸಂಸ್ಥೆ, ದೇವಸ್ಥಾನ, ಚಿತ್ರ ಮಂದಿರ, ಉದ್ಯಾನವನ,ರಸ್ತೆ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸಂಚಾರಿ ವಾಹನ, ಎಲ್ಲಿಯಾದರೂ ಸಹ ದೌರ್ಜನ್ಯ ನಡೆದರೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 10,000ಕ್ಕಿಂತಲೂ ಹೆಚ್ಚಿನ ದಂಡ ವಿಧಿಸಿಬಹುದು. ಈ ಅಂಶವನ್ನೂ ಕೂಡ ಪತ್ರಕರ್ತರು ರಾಜ್ಯಪಾಲರ ಗಮನಕ್ಕೆ ತಂದಿದ್ದರು.

ಹಿರಿಯ ಮಹಿಳಾ ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್‌ ಕೂಡ ಟ್ವಿಟ್ಟರ್‌ ಮೂಲಕ ರಾಜ್ಯಪಾಲರನ್ನು ಖಂಡಿಸಿದ್ದರು. ಮಿಂಚಂಚೆಯ ಮೂಲಕವೂ ಕೂಡ ರಾಜ್ಯಪಾಲರು ಬೇಶರತ್ತಾಗಿ ಕ್ಷಮೆ ಯಾಚಿಸಬೇಕು ಎಂದಿದ್ದರು.

ವಿವಾದ ದೊಡ್ಡದಾಗುತ್ತಿದ್ದ ಬೆನ್ನಲ್ಲೇ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಲಕ್ಷ್ಮಿ ಸುಬ್ರಮಣಿಯನ್‌ಗೆ ಮಿಂಚಂಚೆಯ ಮೂಲಕ ಕ್ಷಮೆ ಯಾಚಿಸಿದ್ದಾರೆ. ಈ ವೇಳೆ, ನನ್ನ ಮೊಮ್ಮಗಳು ಎಂದು ಭಾವಿಸಿ ಕೆನ್ನೆಯನ್ನು ಸ್ಪರ್ಷಿಸಿದ್ದಾಗಿ ಬನ್ವರಿಲಾಲ್‌ ತಿಳಿಸಿದ್ದಾರೆ. ಪತ್ರಕರ್ತೆ ಕೇಳಿದ ಪ್ರಶ್ನೆ ಉತ್ತಮವಾದದ್ದು ಎನಿಸಿ, ಪ್ರೋತ್ಸಾಹಿಸುವ ಕಾರಣಕ್ಕಾಗಿ ಕೆನ್ನೆ ತಟ್ಟಿದ್ದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ನೀಡಿರುವ ಕ್ಷಮಾಪಣಾ ಪತ್ರ.
ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ನೀಡಿರುವ ಕ್ಷಮಾಪಣಾ ಪತ್ರ.

ರಾಜ್ಯಪಾಲರು ಕ್ಷಮೆ ಯಾಚಿಸಿದ ನಂತರವೂ ಕೂಡ ಲಕ್ಷ್ಮಿ ಸುಬ್ರಮಣಿಯನ್‌ ಸಮಾಧಾನಗೊಂಡಿಲ್ಲ. “ನಾನು ನಿಮ್ಮ ಕ್ಷಮಾಪಣೆಯನ್ನು ಸ್ವೀಕರಿಸಿದ್ದೇನೆ. ಆದರೆ ನನ್ನ ಪ್ರಶ್ನೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಕೆನ್ನೆ ಸ್ಪರ್ಶಿಸಿದ್ದೆ ಎಂಬ ನಿಮ್ಮ ಹೇಳಿಕೆಯಿಂದ ನನಗೆ ಸಮಾಧಾನ ದೊರೆತಿಲ್ಲ,” ಎಂದು ಲಕ್ಷ್ಮಿ ಸುಬ್ರಮಣಿಯನ್‌ ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ರಾಜ್ಯಪಾಲರು ಮಹಿಳಾ ಪತ್ರಕರ್ತೆಯೊಬ್ಬರ ಕೆನ್ನೆಯನ್ನು ಸ್ಪರ್ಷಿಸಿದ ಸುದ್ದಿ ಇಡೀ ದೇಶದ ತುಂಬ ಹರಿದಾಡಿತ್ತು. ರಾಜ್ಯಪಾಲರ ವಿರುದ್ಧ ಪತ್ರಕರ್ತರು ತಿರುಗಿ ಬೀಳುವಂತೆ ಮಾಡಿತ್ತು. ಈಗ ರಾಜ್ಯಪಾಲರು ಕ್ಷಮೆ ಯಾಚಿಸಿದ ನಂತರ, ಪರಿಸ್ಥಿತಿ ಶಾಂತಗೊಂಡಿದೆ.