ದೇಶದ ಸ್ಥಿತಿ ನೋಡಿದರೆ ನಾಚಿಕೆಯಾಗುತ್ತದೆ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌
ಸುದ್ದಿ ಸಾರ

ದೇಶದ ಸ್ಥಿತಿ ನೋಡಿದರೆ ನಾಚಿಕೆಯಾಗುತ್ತದೆ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌

ಇದೇ ಮೊದಲ ಬಾರಿಗೆ ಮಕ್ಕಳ ಮೇಲಿನ ದೌರ್ಜನ್ಯಗಳ ಕುರಿತು ಸಾರ್ವಜನಿಕವಾಗಿ ಮಾತನಾಡಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಇದು ರಾಷ್ಟ್ರವೇ ನಾಚಿಕೆ ಪಡಬೇಕಾದ ವಿಷಯ ಎಂದಿದ್ದಾರೆ. ಎಂತಹ ಸಮಾಜ ನಿರ್ಮಾಣವಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಭಾರತದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಎಗ್ಗಿಲ್ಲದೇ ಸಾಗಿರುವ ಪುಟ್ಟ ಬಾಲಕಿಯರ ಮೇಲಿನ ದೌರ್ಜನ್ಯಗಳ ಕುರಿತಾಗಿ ಮಾತನಾಡಿದ್ದಾರೆ. ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ವೇಳೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಬುಧವಾರ ಮಾತನಾಡಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಭಾರತವನ್ನು ನಾಚಿಕೆಗೆ ಗುರಿ ಪಡಿಸಿವೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಶ್ರೀ ವೈಷ್ಣೋದೇವಿ ವಿಶ್ವ ವಿದ್ಯಾಲಯದ 6ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ರಾಷ್ಟ್ರಪತಿ, ಇದೇ ಮೊದಲ ಬಾರಿಗೆ ದೌರ್ಜನ್ಯಗಳನ್ನು ಸಾರ್ವಜನಿಕವಾಗಿ ಖಂಡಿಸಿದ್ದಾರೆ.

ಸ್ವಾತಂತ್ರ್ಯ ದೊರೆತು 7 ದಶಕಗಳು ಕಳೆದ ನಂತರದಲ್ಲೂ ಇಂತಹ ಕೃತ್ಯ ಸಂಭವಿಸಿದೆ. ಯಾರೂ ಕೂಡ ಊಹಿಸಿಕೊಳ್ಳು ಸಾಧ್ಯವಾಗದ ದುರ್ಘಟನೆ ದೇಶದಲ್ಲಿ ನಡೆಯುತ್ತಿವೆ. ಇದೊಂದು ಅನಾಗರೀಕ ವರ್ತನೆ. ಕತುವಾದಲ್ಲಿನ ನಡೆದಿರುವ ದೌರ್ಜನ್ಯ ದೇಶದ ಬೇರೆ ಯಾವ ಭಾಗದಲ್ಲಿ ನಡೆದರೂ ಕೂಡ ಅದು ನಾಚಿಕೆಗೇಡಿನ ವಿಷಯ ಎಂದು ರಮಾನಾಥ್‌ ಕೋವಿಂದ್‌ ತಿಳಿಸಿದ್ದಾರೆ. ಎಂತಹ ಸಮಾಜವನ್ನು ನಾವು ನಿರ್ಮಿಸುತ್ತಿದ್ದೇವೆ ಎಂದು ದೇಶವನ್ನು ಪ್ರಶ್ನಿಸಿದ್ದಾರೆ.

ಮುಂದುವರೆದು ಮಾತನಾಡಿದ ಕೋವಿಂದ್‌, “ಯಾವ ಹೆಣ್ಣು ಮಗುವಿನ ಮೇಲೆಯೂ ದೌರ್ಜನ್ಯವಾಗದಂತೆ ತಡೆಗಟ್ಟುವುದು ಸಮಾಜದ ಜವಾಬ್ದಾರಿ. ಮಹಿಳೆಯರು ಮತ್ತು ಬಾಲಕಿಯರ ಮೇಲೆ ಯಾವುದೇ ರೀತಿಯ ಕೃತ್ಯಗಳು ಇನ್ನು ಮುಂದೆ ಜರುಗದಂತೆ ವ್ಯವಸ್ಥೆ ನೋಡಿಕೊಳ್ಳಬೇಕು. ಈ ಗುರಿ ತಲುಪಬೇಕು ಎಂದರೆ ಸಮಾಜ ಸರಿಯಾದ ಶಿಕ್ಷಣವನ್ನು ಪಡೆಯಬೇಕು,” ಎಂದು ರಾಷ್ಟ್ರ ಪತಿ ರಾಮನಾಥ್‌ ಕೋವಿಂದ್‌ ತಿಳಿಸಿದ್ದಾರೆ.

ಯಾವುದೇ ಮಹಿಳೆ ಅಥವಾ ಹೆಣ್ಣು ಮಗುವಿನ ಮೇಲೆ ದೌರ್ಜನ್ಯಗಳು ನಡೆಯದಂತೆ ಕಾಯುವುದು ನಮ್ಮೆಲ್ಲರ ಜವಾಬ್ದಾರಿ. ಈ ಜಗತ್ತಿನಲ್ಲಿ ಅತೀ ಸುಂದರವಾಗಿರುವುದೆಂದರೆ ಅದು ಪುಟ್ಟ ಮಗುವಿನ ನಗುಮುಖ. ಹಾಗೂ ಆ ನಗುಮುಖಗಳನ್ನು ರಕ್ಷಿಸುವುದೇ ನಮ್ಮ ಸಮಾಜದ ದೊಡ್ಡ ಸಾಧನೆ.
ರಾಮನಾಥ್‌ ಕೋವಿಂದ್‌, ಗೌರವಾನ್ವಿತ ರಾಷ್ಟ್ರಪತಿ

ಮಾತಿನ ಮಧ್ಯೆ ರಾಷ್ಟ್ರಪತಿಗಳು ದೇಶದ ವಿವಿಧ ಕ್ಷೇತ್ರಗಳಿಗೆ ಮಹಿಳೆಯರು ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಸಧ್ಯ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಮಹಿಳೆಯರ ಸಾಧನೆಯನ್ನು ಕೂಡ ಪ್ರಸ್ತಾಪಿಸಿದ್ದಾರೆ. ಭಾರತದ ಪುತ್ರಿಯರು ಭಾರತ ಮಾತೆಗೆ ವಿಜಯ ಮಾಲೆಯನ್ನು ತೊಡಿಸುತ್ತಿದ್ದಾರೆ ಎಂದು ರಾಮನಾಥ್‌ ಕೋಂವಿದ್‌ ತಿಳಿಸಿದ್ದಾರೆ.

ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಸಾಧನೆ ಮೆರೆಯುತ್ತಿರುವ ದೆಹಲಿಯ ಮಣಿಕಾ ಬಾತ್ರಾ, ಮಣಿಪುರದ ಮೇರಿ ಕೋಮ್‌, ಮೀರಾಬಾಯಿ ಚಾನು ಮತ್ತು ಸಂಗೀತಾ ಚಾನು, ಹರಿಯಾಣದ ಮನು ಬಕೇರ್‌ ಮತ್ತು ವಿನೇಶ್‌ ಪೋಗಟ್‌, ತೆಲಂಗಾಣದ ಸೈನಾ ನೆಹ್ವಾಲ್‌, ಪಂಜಾಬ್‌ನ ಹೀನಾ ಸಿಂಧು ಇತ್ಯಾದಿ ಕ್ರೀಡಾ ಪಟ್ಟುಗಳನ್ನು ರಾಮನಾಥ್‌ ಕೋವಿಂದ್‌ ನೆನಪಿಸಿಕೊಂಡಿದ್ದಾರೆ.

2 ದಿನಗಳ ಕಾಶ್ಮೀರ ಪ್ರವಾಸವನ್ನು ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಅಧಿಕಾರ ಸ್ವೀಕರಿಸಿದ ಮೇಲೆ ಇದೇ ಮೊದಲ ಬಾರಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

ಇದೇ ಸಮಾರಂಭದಲ್ಲಿ ರಾಷ್ಟ್ರಪ್ತಿ ರಾಮನಾಥ್‌ ಕೋವಿಂದ್‌ರವರ ಜತೆ ವೇದಿಕೆ ಹಂಚಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡ ಕತುವಾ ಘಟನೆಯನ್ನು ಅಲ್ಲಗೆಳೆದಿದ್ದಾರೆ. ಮಾತೆ ವೈಷ್ಣೋ ದೇವಿಯ ಪ್ರತಿರೂಪದಂತಿರುವ ಪುಟ್ಟ ಮಕ್ಕಳ ಮೇಲೆ ಹೇಗೆ ಇಂತಹ ನೀಚಕೃತ್ಯಗಳನ್ನು ಎಸೆಗಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಸಮಾಜಿಕ ವ್ಯವಸ್ಥೆ ಹಾದಿ ತಪ್ಪುತ್ತಿದೆ ಎಂದು ಕೂಡ ಎಚ್ಚರಿಸಿದ್ದಾರೆ.