ತಾಜ್‌ಮಹಲ್‌ ದೇವರ ಆಸ್ತಿ ಎಂದ ವಕ್ಫ್‌ ಮಂಡಳಿ; ಮಾಲೀಕತ್ವವನ್ನು ನಿರಾಕರಿಸಿದ ಸುಪ್ರಿಂ ಕೋರ್ಟ್‌
ಸುದ್ದಿ ಸಾರ

ತಾಜ್‌ಮಹಲ್‌ ದೇವರ ಆಸ್ತಿ ಎಂದ ವಕ್ಫ್‌ ಮಂಡಳಿ; ಮಾಲೀಕತ್ವವನ್ನು ನಿರಾಕರಿಸಿದ ಸುಪ್ರಿಂ ಕೋರ್ಟ್‌

ಪ್ರೀತಿಯ ಸಂಕೇತವಾದ ತಾಜ್‌ಮಹಲ್‌ ಆಗಾಗ ಚರ್ಚಾ ಕೇಂದ್ರಕ್ಕೆ ಬರುತ್ತಲೇ ಇರುತ್ತದೆ. ಈ ಹಿಂದೆ ಬಲಪಂಥೀಯ ಸಂಘಟನೆಗಳು ತೇಜೇಮಹಲ್‌ ಎಂಬ ವರಸೆ ಹಿಡಿದಿತ್ತು. ಈಗಿನ ಸರದಿ ವಕ್ಫ್‌ ಮಂಡಳಿಯದ್ದು. 

ತಾಜ್‌ಮಹಲ್‌ ತನ್ನದು ಎಂದಿದ್ದ ಸುನ್ನಿ ವಕ್ಫ್‌ ಬೋರ್ಡ್‌ಗೆ ಸುಪ್ರಿಂ ಕೋರ್ಟ್‌ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸೂಚಿಸಿತ್ತು. ಆಧಾರಗಳನ್ನು ಕಲೆ ಹಾಕಲು ವಿಫಲವಾಗಿರುವ ಸುನ್ನಿ ವಕ್ಫ್‌ ಬೋರ್ಡ್‌, ತಾಜ್‌ ಮಹಲ್‌ಅನ್ನು ‘ದೇವರ ಆಸ್ತಿ’ ಎಂದು ಸಮರ್ಥಿಸಿಕೊಳ್ಳುವಲ್ಲಿ ಸೋತಿದೆ. ವಕ್ಫ್‌ ಮಂಡಳಿ ತಾಜ್‌ಮಹಲ್‌ನ ನಿರ್ವಹಣೆಯನ್ನಷ್ಟೇ ನೋಡಿಕೊಳ್ಳುತ್ತಿದೆ ಎಂದಿದೆ.

ಈ ಹಿಂದೆ 2005ರಲ್ಲಿ ಸುನ್ನಿ ವಕ್ಫ್‌ ಬೋರ್ಡ್‌ ತಾಜ್‌ಮಹಲ್‌ ಮಂಡಳಿಯ ಆಸ್ತಿ ಎಂದು ನೊಂದಾಯಿಸಲು ಪ್ರಯತ್ನಿಸಿತ್ತು. ಆದರೆ ನೊಂದಾವಣೆ ಸಾಧ್ಯವಾಗದ ಕಾರಣ ವಕ್ಫ್‌ ಬೋರ್ಡ್‌ ನ್ಯಾಯಾಲಯದ ಮೆಟ್ಟಿಲೇರಿತ್ತು.

ಮೊಖದ್ದಮೆಯ ಕುರಿತಾಗಿ ಸುಪ್ರಿಂ ಕೋರ್ಟ್‌, ಭಾರತೀಯ ಪುರಾತತ್ವ ಇಲಾಖೆಯಿಂದ ಅನುಮತಿಯನ್ನು ಪಡೆದಲ್ಲಿ ತಾಜ್‌ಮಹಲ್‌ಅನ್ನು ಮಂಡಳಿಯ ಹೆಸರಿಗೆ ನೊಂದಾಯಿಸಬಹುದು ಎಂದು ತಿಳಿಸಿತ್ತು. ಜತೆಗೆ ತಾಜ್‌ಮಹಲ್‌ ಮಾಲಿಕತ್ವ ಕುರಿತಾಗಿ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಮಂಡಳಿಗೆ ಸೂಚಿಸಿತ್ತು. ಸರಿಯಾದ ಸಾಕ್ಷ್ಯಾಧಾರಗಳು ದೊರೆತು ತಾಜ್‌ಮಹಲ್‌ ವಕ್ಫ್‌ ಮಂಡಳಿಯ ಮಾಲಿಕತ್ವಕ್ಕೆ ಬರುವವರೆಗೂ, ಮಂಡಳಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ತಾಜ್‌ಮಹಲ್‌ ಕಟ್ಟಡದೊಳಗೆ ನಡೆಸಬಾರದು ಎಂದು ಸುಪ್ರಿಂ ಕೋರ್ಟ್‌ ಸೂಚಿಸಿತ್ತು.

ತಾಜ್ ಮಹಲ್‌ಅನ್ನು ವಕ್ಫ್ ಆಸ್ತಿ ಎಂದು ನೋಂದಾಯಿಸಿದ ನಂತರ ಅದು ಮಂಡಳಿಯ ಮಾಲೀಕತ್ವಕ್ಕೆ ಒಳಪಡುತ್ತದೆ. ಮುಂದಿನ ದಿನಗಳಲ್ಲಿ ಪುರಾತತ್ವ ಇಲಾಖೆಯ ಅಡಿಯಲ್ಲಿರುವ ಇತರೆ ಐತಿಹಾಸಿಕ ಕಟ್ಟಡಗಳನ್ನೂ ಕೂಡ ನಮ್ಮದು ಎಂದು ಬೇರೆ ಆಡಳಿತ ಮಂಡಳಿಗಳು ವಾದಿಸಬಹುದು. ಅದು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್‌ರವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ತಾಜ್‌ಮಹಲ್‌ ಮಾಲಿಕತ್ವ ವಿಚಾರವಾಗಿ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕೇಳಿದ್ದ ಸುಪ್ರಿಂ ಕೋರ್ಟ್‌ , ಮೊಘಲ್‌ ಚಕ್ರವರ್ತಿ ಶಹಜಹಾನ್‌ಅವರ ಕೈಬರಹವನ್ನು ಮತ್ತು ಸಹಿಗಳನ್ನು ನೋಡುವುದು ಆಸಕ್ತಿದಾಯಕ ವಿಷಯವಾಗಿದೆ ಎಂದಿತ್ತು. ಮೊಘಲ್‌ ವಂಶಸ್ಥರು ತಾಜ್‌ಮಹಲ್‌ಅನ್ನು ಮಂಡಳಿಯ ಮಾಲೀಕತ್ವಕ್ಕೆ ಹಸ್ತಾಂತರಿಸಿರುವುದರ ಕುರಿತು ಲಿಖಿತ ದಾಖಲೆಗಳನ್ನು ತರುವಂತೆ ಮಂಡಳಿ ಪರ ವಕೀಲರಿಗೆ ಸೂಚಿಸಿತ್ತು.

ಅಧಿಕೃತ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಾಗದ ವಕ್ಫ್‌ ಮಂಡಳಿ ಪರ ವಕೀಲರು, ತಾಜ್‌ಮಹಲ್‌ಅನ್ನು ದೇವರ ಆಸ್ತಿ ಎಂದಿದ್ದಾರೆ. ಕಟ್ಟಡದ ಪಾಲನೆಯನ್ನಷ್ಟೇ ವಕ್ಫ್‌ ಮಂಡಳಿ ಮಾಡುತ್ತಿದೆ ಎಂದು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.

ಅಂತಿಮವಾಗಿ ಸುಪ್ರಿಂ ಕೋರ್ಟ್‌ ತಾಜ್‌ಮಹಲ್‌ನ ಮಾಲಿಕತ್ವವನ್ನು ಸುನ್ನಿ ವಕ್ಫ್‌ ಮಂಡಳಿಯ ತಾಜ್‌ ಮಾಲೀಕತ್ವವನ್ನು ನಿರಾಕರಿಸಿದೆ. ಐತಿಹಾಸಿಕ ಸ್ಮಾರಕವಾದ ತಾಜ್‌ಮಹಲ್‌ಅನ್ನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಹೆಸರನಲ್ಲಿ ನೊಂದಾಯಿಸಲು ಸಾಧ್ಯವಿಲ್ಲ. ಮಾಲೀಕತ್ವವಿಲ್ಲದೆ, ನಿರ್ವಹಣೆಯನ್ನಷ್ಟೇ ಮಾಡಬಹುದು ಎಂದು ಸುಪ್ರಿಂ ಅಭಿಪ್ರಾಯಿಸಿದೆ.