samachara
www.samachara.com
 ಬಿಪ್ಲಬ್‌ ಕುಮಾರ್ ದೇವ್‌, ತ್ರಿಪುರ ಮುಖ್ಯಮಂತ್ರಿ 
ಬಿಪ್ಲಬ್‌ ಕುಮಾರ್ ದೇವ್‌, ತ್ರಿಪುರ ಮುಖ್ಯಮಂತ್ರಿ |ಚಿತ್ರಕೃಪೆ : ಇಂಡಿಯನ್‌ ಎಕ್ಸ್‌ಪ್ರೆಸ್‌
ಸುದ್ದಿ ಸಾರ

‘ಮಹಾ ಭಾರತದ ಕಾಲದಲ್ಲಿ ಉಪಗ್ರಹಗಳಿದ್ದವು’; ಬೆತ್ತಲಾದ ಬಿಜೆಪಿ ನಾಯಕನ ಬೌದ್ಧಿಕ ದಿವಾಳಿತನ

ಅಂತರ್ಜಾಲ ಮತ್ತು ಉಪಗ್ರಹಗಳ ತಂತ್ರಜ್ಞಾನವನ್ನುಮಹಾಭಾರತದ ಕಾಲದಷ್ಟು ಹಿಂದಕ್ಕೆ ಕೊಂಡೊಯ್ದಿರುವ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇವ್‌, ‘ಇವೆಲ್ಲವೂ ಪುರಾತನ ಭಾರತೀಯರ ಸಂಶೋಧನೆಗಳು’ ಎಂದಿದ್ದಾರೆ.

samachara

samachara

ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಹರ್ಷವರ್ಧನ್‌ ಐನ್‌ಸ್ಟೀನ್‌ ಹಾಗೂ ವೇದಗಳಿಗೆ ತಳಕು ಹಾಕಿ ನಗೆಪಾಟಲಿಗೆ ಈಡಾಗಿದ್ದರು. ಮತ್ತೊಬ್ಬ ಕೇಂದ್ರ ಸಚಿವರು ಡಾರ್ವಿನ್‌ ಸಿದ್ಧಾಂತವನ್ನು ಅಲ್ಲಗೆಳೆದು, ಹೊಸದೊಂದು ಸಿದ್ಧಾಂತಕ್ಕೆ ನಾಂದಿ ಹಾಡಿದ್ದರು. ಇಬ್ಬರು ಬಿಜೆಪಿ ರಾಜಕೀಯ ನಾಯಕರ ಬುದ್ಧಿಮತ್ತೆ ಬಗ್ಗೆ ಜನರಿಗೆ ತಿಳಿದು, ಅದು ಮರೆಯುವ ಮೊದಲೇ ಇದೀಗ ಮತ್ತೊಬ್ಬ ಬಿಜೆಪಿ ಮುಖ್ಯಮಂತ್ರಿಯೊಬ್ಬರ ಭೌದ್ಧಿಕ ದಿವಾಳಿತನ ದೇಶದ ಜನತೆಯ ಮುಂದೆ ಬೆತ್ತಲಾಗಿದೆ.

“ಇಂಟರ್‌ನೆಟ್‌ ಮತ್ತು ಕೃತಕ ಉಪಗ್ರಹಗಳು ಹೊಸದೇನಲ್ಲ, ಭಾರತದಲ್ಲಿ ಇವು ಮಹಾಭಾರತದ ಕಾಲದಿಂದಲೂ ಬಳಕೆಯಲ್ಲಿವೆ,”

-ಹೀಗೊಂದು ಹೇಳಿಕೆಯನ್ನು ತ್ರಿಪುರಾದ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್ ದೇವ್ ನೀಡಿದ್ದಾರೆ. ಅಗರ್ತಳದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಾಗಾರದಲ್ಲಿ ‘ಕಂಪ್ಯೂಟರೀಕರಣ ಮತ್ತು ಸುಧಾರಣೆಗಳು’ ಎಂಬ ವಿಚಾರದ ಕುರಿತಾಗಿ ಮಾತನಾಡುವಾಗ ದೇವ್‌, ಈ ವಿಚಾರವನ್ನು ಪ್ರಸ್ಥಾಪಿಸಿದ್ದಾರೆ. ಅವರ ಪ್ರಕಾರ ಲಕ್ಷಾಂತರ ವರ್ಷಗಳ ಹಿಂದೆಯೇ ಭಾರತೀಯರು ಅಂತಾರ್ಜಾಲವನ್ನು ಸಂಶೋಧಿಸಿದ್ದರು.

“ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ‘ನ್ಯಾಷನಲ್‌ ಇನ್‌ಫಾರ್ಮೆಟಿಕ್ಸ್‌ ಸೆಂಟರ್‌’ ಇಂದಿಗೂ ಕೂಡ ಭಾರತೀಯರು ಲಕ್ಷಾಂತರ ವರ್ಷಗಳ ಹಿಂದೆ ಸಂಶೋಧಿಸಿದ್ದ ಸಾಧನಗಳನ್ನೇ ಬಳಸುತ್ತಿದೆ,” ಎನ್ನುತ್ತಾರವರು.

ಅಂತರ್ಜಾಲ ಮತ್ತು ಉಪಗ್ರಹ ಸಂವಹನ ವ್ಯವಸ್ಥೆಗಳು ಮಹಾಭಾರತದ ಕಾಲದಲ್ಲೇ ಬಳಕೆಯಲ್ಲಿವೆ. ಕುರುಡು ದೊರೆ ಧೃತರಾಷ್ಟ್ರನ ರಥ ಸಾರಥಿ ಸಂಜಯ ಧೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧ ಸಮಯದ ಸಮಗ್ರ ವಿವರಣೆಯನ್ನು ನೀಡಲು ಹೇಗೆ ಸಾಧ್ಯವಾಯಿತು? ಧೃತರಾಷ್ಟ್ರ ಸಂಜಯನ ಕಣ್ಣುಗಳ ಮೂಲಕ ಹೇಗೆ ಕುರುಕ್ಷೇತ್ರ ಯುದ್ಧವನ್ನು ವೀಕ್ಷಿಸಿದ್ದ? ಎಂದರೆ ಆ ಕಾಲಕ್ಕೇ ಭಾರತದಲ್ಲಿ ಆಂತರ್ಜಾಲ ಸೌಲಭ್ಯವಿತ್ತು. ಉಪಗ್ರಹ ಮತ್ತು ತಂತ್ರಜ್ಞಾನಗಳು ಭಾರತದಲ್ಲಿ ಬಳಕೆಯಲ್ಲಿದ್ದವು.
ಬಿಪ್ಲಬ್‌ ಕುಮಾರ್ ದೇವ್, ತ್ರಿಪುರ ಮುಖ್ಯಮಂತ್ರಿ

“ಯುರೋಪಿನ್‌ ರಾಷ್ಟ್ರಗಳು ಮತ್ತು ಅಮೆರಿಕಾ ಅಂತರ್ಜಾಲ ಮತ್ತು ತಂತ್ರಜ್ಞಾನವನ್ನು ನಮ್ಮ ಆವಿಷ್ಕಾರ ಎಂದು ಹೇಳಿಕೊಳ್ಳುತ್ತವೆ. ಆದರೆ ಮೂಲವಾಗಿ ಇವು ಭಾರತದ ತಂತ್ರಜ್ಞಾನಗಳು,” ಎಂದು ದೇವ್‌ ಹೇಳಿದ್ದಾರೆ.

ಅಲ್ಲದೇ, “ಲಕ್ಷಾಂತರ ವರ್ಷಗಳ ಹಿಂದೆಯೇ ಭಾರತೀಯರು ತಂತ್ರಜ್ಞಾನದ ಬಳಕೆಯಲ್ಲಿ ಎಲ್ಲರಿಗಿಂತಲೂ ಮುಂದೆ ಇದ್ದರು. ಇಂತಹ ಸಮೃದ್ಧ ಸಂಸ್ಕೃತಿಯನ್ನು ಭಾರತ ಹೊಂದಿತ್ತು ಎಂದು ಹೇಳಲು ಹೆಮ್ಮೆಯಾಗುತ್ತದೆ. ಈಗಲೂ ಅಂತರ್ಜಾಲ ಮತ್ತು ಸಾಫ್ಟ್‌ವೇರ್‌ ತಂತ್ರಜ್ಞಾನಗಳಲ್ಲಿ ಭಾರತೀಯರು ಮುಂದಿದ್ದಾರೆ,” ಎಂದಿದ್ದಾರೆ.

ಈ ಅಂಶಕ್ಕೆ ಪೂರಕವಾಗಿ ಮೈಕ್ರೋಸಾಫ್ಟ್‌ ಅಮೆರಿಕಾ ಮೂಲದ ಕಂಪನಿಯಾಗಿದ್ದರೂ ಅದರಲ್ಲಿನ ಬಹುಪಾಲು ತಂತ್ರಜ್ಞರು ಭಾರತೀಯ ಮೂಲದವರು ಎಂಬ ಉದಾಹರಣೆಯನ್ನು ನೀಡಿದ್ದಾರೆ.

ಪುರಾಣಗಳ ಕಾಲದಲ್ಲಿ ಮಹಾಭಾರತದವರೆಗೂ ಭಾರತ ತಂತ್ರಜ್ಞಾನಗಳ ವಿಷಯದಲ್ಲಿ ಅಗ್ರ ಸ್ಥಾನವನ್ನೇ ಪಡೆದುಕೊಂಡಿತ್ತು. ಮಧ್ಯಕಾಲೀನ ಸಮಯದಲ್ಲಿ ಈ ಸ್ಥಾನ ಭಾರತದಿಂದ ದೂರವಾಯಿತು. ಆದರೆ ಭಾರತ ತಂತ್ರಜ್ಞಾನದಲ್ಲಿ ತನ್ನ ಹಿಂದಿನ ಸ್ಥಾನಕ್ಕೆ ಮರಳಿದೆ. ಅಮೆರಿಕಾದ ಕಂಪನಿಗಳಲ್ಲಿ ಇಂದು ಭಾರತೀಯ ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ನಿರ್ವಹಿಸುತ್ತಿರುವ ಪ್ರಮುಖ ಪಾತ್ರಗಳೇ ಇದಕ್ಕೆ ಉದಾಹರಣೆ.
ಬಿಪ್ಲಬ್‌ ಕುಮಾರ್ ದೇವ್, ತ್ರಿಪುರ ಮುಖ್ಯಮಂತ್ರಿ.

ಮೋದಿ ರಕ್ಷಕ:

ಪ್ರಧಾನಿ ನರೇಂದ್ರ ಮೋದಿ ‘ರಕ್ಷಕ’ರಾಗಿದ್ದು, ಸ್ವತಃ ತಾವೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮೂಲಕ ಸಂಸತ್‌ ಸದಸ್ಯರು ಹಾಗೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವಂತೆ ಅವರು ಸೂಚಿಸಿದ್ದಾರೆ,” ಎಂದಿದ್ದಾರೆ ಬಿಪ್ಲಾವ್ ಕುಮಾರ್ ದೇವ್.

“ನರೇಂದ್ರ ಮೋದಿಯವರು ದೇಶದ ಎಲ್ಲಾ ಜನರಿಗೂ ತಂತ್ರಜ್ಞಾನ ಹಾಗೂ ಅಂತರ್ಜಾಲ ಸೇವೆಗಳು ದೊರೆಯುವಂತೆ ಮಾಡಿ, ಡಿಜಿಟಲೈಸೇಷನ್‌ ಪ್ರಕ್ರಿಯೆಗೆ ದೊಡ್ಡ ವಾಹಕ ಶಕ್ತಿಯಾಗಿದ್ದಾರೆ,” ಎನ್ನುತ್ತಾರವರು.

ತ್ರಿಪುರದಲ್ಲಿ ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿದ್ದ 47 ವರ್ಷದ ಬಿಪ್ಲಬ್‌ ಕುಮಾರ್‌ ದೇವ್‌, ಕಳೆದ ಮಾರ್ಚ್‌ ತಿಂಗಳಿನಲ್ಲಿ ಭಾರತೀಯ ಜನತಾ ಪಕ್ಷದಿಂದ ಚುನಾವಣೆಗೆ ನಿಂತಿದ್ದರು. ಸತತ 25 ವರ್ಷಗಳಿಂದ ತ್ರಿಪುರದ ಅಧಿಕಾರವನ್ನು ಹಿಡಿದ್ದ ಸಿಪಿಐ(ಎಂ)ಎನ್ನು ಮಣಿಸಿದ್ದ ಬಿಜೆಪಿ ಪಕ್ಷ ಕೊನೆಗೆ ಬಿಪ್ಲಬ್‌ ಕುಮಾರ್ ದೇವ್‌ಗೆ ಮುಖ್ಯಮಂತ್ರಿ ಪಟ್ಟವನ್ನು ನೀಡಿತ್ತು.

ಮುಖ್ಯಮಂತ್ರಿಯಾಗಿ ತಿಂಗಳು ಕಳೆಯುವ ವೇಳೆಗಾಗಲೇ ಬಿಪ್ಲಬ್‌ ಕುಮಾರ್‌ ದೇವ್‌ ರಾಷ್ಟ್ರಾದ್ಯಂತ ನಗೆಪಾಟಲಿಗೆ ಈಡಾಗಿದ್ದಾರೆ. ಬಿಪ್ಲಬ್‌ ಕುಮಾರ್‌ ಹೇಳಿಕೆಯನ್ನು ಮಾಧ್ಯಮಗಳು ಬಿತ್ತರಿಸುತ್ತಿದ್ದಂತೆ, ಟ್ವಿಟ್ಟರ್‌ ಮೂಲಕ ಹಲವಾರು ಜನ ಬಿಪ್ಲಬ್‌ ಕುಮಾರ್‌ ದೇವ್‌ರ ಕಾಲೆಳೆಯಲು ಮುಂದಾಗಿದ್ದಾರೆ.