ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ತಂದೆ-ತಾಯಿ ವಿರುದ್ಧ ಮಗಳ ದೂರು
ಸುದ್ದಿ ಸಾರ

ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ತಂದೆ-ತಾಯಿ ವಿರುದ್ಧ ಮಗಳ ದೂರು

ಅತ್ಯಾಚಾರಕ್ಕೀಡಾದ ಮಗಳಿಗೆ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ಪೋಷಕರೇ ಒತ್ತಾಯಿಸಿದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚು ಸುದ್ದಿ ಕೇಂದ್ರಕ್ಕೆ ಬರುತ್ತಿವೆ. ಉತ್ತರ ಪ್ರದೇಶದ ಉನ್ನಾವ್‌ನಲ್ಲಿ 18 ವರ್ಷದ ಯುವತಿ ಮೇಲೆ ಬಿಜೆಪಿ ಶಾಸಕನಿಂದ ಅತ್ಯಾಚಾರ ಮತ್ತು ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಜನಸಾಮಾನ್ಯರಲ್ಲಿ ತೀವ್ರ ಆಕ್ರೋಶವನ್ನು ಹುಟ್ಟು ಹಾಕಿವೆ.

ಆದರೆ ಇದೀಗ ಅತ್ಯಾಚಾರ ಪ್ರಕರಣವೊಂದರ ಸಂತ್ರಸ್ತೆಯ ತಂದೆ-ತಾಯಿ ನಡೆದುಕೊಂಡಿರುವ ರೀತಿ ಮತ್ತು ತಮ್ಮ ಮಗಳಿಗೆ ಹಾಕಿದ ನಿರ್ಬಂಧ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಣದ ಆಮಿಷ ಹಾಗೂ ಅತ್ಯಾಚಾರ ಎಸಗಿದವರ ಬೆದರಿಕೆಯಿಂದಾಗಿ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ನೀಡುವಂತೆ ಪೋಷಕರು ಮಗಳ ಮೇಲೆ ಒತ್ತಡ ತರಲು ಯತ್ನಿಸಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

15 ವರ್ಷದ ಬಾಲಕಿ ಮೇಲೆ ನಡೆದಿತ್ತು ಅತ್ಯಾಚಾರ:

ಕಳೆದ ವರ್ಷ ಆಗಸ್ಟ್‌ 30ರಂದು ದೆಹಲಿಯ ಅಮನ್‌ ವಿಹಾರದ ಪ್ರೇಮನಗರದಿಂದ ಬಾಲಕಿಯೊಬ್ಬಳ ಅಪಹರಣವಾಗಿತ್ತು. ಈ ಬಗ್ಗೆ ಅಮನ್ ವಿಹಾರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದರು. ವಾರದ ಬಳಿಕ ಮನೆಗೆ ಮರಳಿದ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿತ್ತು.

ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್‌ ಸೇರಿದಂತೆ ಇಬ್ಬರು ಬಾಲಕಿಯನ್ನು ಅಪಹರಿಸಿ ನೋಯಿಡಾ, ಗಾಜಿಯಾಬಾದ್‌ ಸೇರಿದಂತೆ ಹಲವು ಕಡೆಗಳಲ್ಲಿ ಆಕೆಯ ಮೇಲೆ ಹಲವು ಬಾರಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಾಲಕಿಯ ಹೇಳಿಕೆ ಆಧರಿಸಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ.

ಆಮಿಷ ಒಡ್ಡಿದ ಆರೋಪಿ:

ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಆರೋಪಿಗಳ ಪೈಕಿ ಒಬ್ಬ ಬಾಲಕಿಯ ಪೋಷಕರನ್ನು ಸಂಪರ್ಕಿಸಿ ಅತ್ಯಾಚಾರಕ್ಕೆ ಒಳಗಾದ ಬಾಲಕಿಯಿಂದ ಸುಳ್ಳು ಹೇಳಿಸಲು 20 ಲಕ್ಷ ರೂಪಾಯಿ ಹಣ ನೀಡುವುದಾಗಿ ಆಮಿಷ ಒಡ್ಡಿದ್ದಾನೆ. ಬಾಲಕಿಯಿಂದ ನ್ಯಾಯಾಲಯದಲ್ಲಿ ಸುಳ್ಳು ಹೇಳಿಕೆ ಕೊಡಿಸಲು ಮಗಳನ್ನು ಒಪ್ಪಿಸಲು ಹಣದ ಆಮಿಷ ಒಡ್ಡಿರುವ ಆರೋಪಿ ಮುಂಗಡ ಹಣವಾಗಿ 5 ಲಕ್ಷ ರೂಪಾಯಿಯನ್ನು ಪೋಕರಿಗೆ ಕೊಟ್ಟಿದ್ದಾನೆ.

ತನ್ನ ಹೆತ್ತವರು ಆರೋಪಿಗಳಿಂದ ಹಣ ಪಡೆದಿರುವ ವಿಷಯ ಬಾಲಕಿಗೆ ಗೊತ್ತಾಗಿದೆ. ಇದಾದ ಬಳಿಕ ಆಕೆಯ ಪೋಷಕರು ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಹೇಳಿಕೆ ನೀಡದಂತೆ ಬಾಲಕಿಯ ಮೇಲೆ ಒತ್ತಡ ಹೇರಿದ್ದಾರೆ. ಈ ವಿಷಯವಾಗಿ ಬಾಲಕಿ ಮತ್ತು ಪೋಷಕರ ನಡುವೆ ಹಲವು ಬಾರಿ ಗಲಾಟೆಯೂ ನಡೆದಿದೆ.

ತಂದೆ-ತಾಯಿ ವಿರುದ್ಧ ದೂರು:

ತಂದೆ-ತಾಯಿಯ ಒತ್ತಾಯದಿಂದ ಬೇಸರಗೊಂಡು 15 ವರ್ಷದ ಬಾಲಕಿ ಈ ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾಳೆ. ಏಪ್ರಿಲ್‌ 10ರಂದು ಪೋಷಕರು ನ್ಯಾಯಾಲಯಕ್ಕೆ ಹೋಗಿದ್ದ ವೇಳೆ ಬಾಲಕಿ ಹಣದ ಸಮೇತ ಪ್ರೇಮ್‌ ವಿಹಾರ್‌ ಠಾಣೆಗೆ ಬಂದು ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ.

“ಸಂತ್ರಸ್ಥೆ ನೀಡಿದ ಹಣ ಎಣಿಸಿದಾಗ 4.96 ಲಕ್ಷ ಇತ್ತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 195(ಎ), 506 ಮತ್ತು 120 (ಬಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಹೇಳಿಕೆ ಆಧರಿಸಿ ಯುವತಿಯ ತಾಯಿಯನ್ನು ಬಂಧಿಸಲಾಗಿದೆ. ಆಕೆಯ ತಂದೆ ಪರಾರಿಯಾಗಿದ್ದಾನೆ," ಎಂದು ಡಿಸಿಪಿ ತಿವಾರಿ ತಿಳಿಸಿದ್ದಾರೆ.

ಬಾಲಕಿ ಸದ್ಯ ದೆಹಲಿಯ ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾಳೆ. ಮಕ್ಕಳ ಕಲ್ಯಾಣ ಸಮಿತಿ ಆಕೆಗೆ ಆಶ್ರಯ ನೀಡಿದೆ.