samachara
www.samachara.com
‘ಆರ್‌ಎಸ್‌ಎಸ್‌ ಅಷ್ಟು ಕರಪ್ಟ್ ಯಾರೂ ಇಲ್ಲ’: ಬಿಜೆಪಿ ಶಾಸಕ ಸುರೇಶ್ ಗೌಡ
ಸುದ್ದಿ ಸಾರ

‘ಆರ್‌ಎಸ್‌ಎಸ್‌ ಅಷ್ಟು ಕರಪ್ಟ್ ಯಾರೂ ಇಲ್ಲ’: ಬಿಜೆಪಿ ಶಾಸಕ ಸುರೇಶ್ ಗೌಡ

ಶುಕ್ರವಾರ ‘ಬಿ ಟಿವಿ’ ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಪತ್ರಕರ್ತರ ಜತೆಗಿನ ಖಾಸಗಿ ಮಾತುಕತೆಯಲ್ಲಿ ಸುರೇಶ್ ಗೌಡ ರಾಜ್ಯ ರಾಜಕಾರಣ, ಅದರಲ್ಲೂ ವಿಶೇಷವಾಗಿ ಬಿಜೆಪಿಯ ಅಂತರಂಗದ ಗುದ್ದಾಟಗಳ ಮಾಹಿತಿ ಹೊರಹಾಕಿದ್ದಾರೆ.

samachara

samachara

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಅಷ್ಟು ಕರಪ್ಟ್ ಯಾರೂ ಇಲ್ಲ...

ಹೀಗೊಂದು ಗುರುತರವಾದ ಆರೋಪವನ್ನು ಮಾಡಿದವರು ಎಡಪಂಥೀಯರಲ್ಲ, ವಿಚಾರವಾದಿಗಳಲ್ಲ, ಬುದ್ಧಿಜೀವಿಗಳೂ ಅಲ್ಲ. ಬದಲಿಗೆ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ.

ಶುಕ್ರವಾರ ‘ಬಿ ಟಿವಿ’ ಸುದ್ದಿ ವಾಹಿನಿ ಪ್ರಸಾರ ಮಾಡಿರುವ ಪತ್ರಕರ್ತರ ಜತೆಗಿನ ಖಾಸಗಿ ಮಾತುಕತೆಯಲ್ಲಿ ಸುರೇಶ್ ಗೌಡ ರಾಜ್ಯ ರಾಜಕಾರಣ, ಅದರಲ್ಲೂ ವಿಶೇಷವಾಗಿ ಬಿಜೆಪಿಯ ಅಂತರಂಗದ ಗುದ್ದಾಟಗಳ ಮಾಹಿತಿ ಹೊರಹಾಕಿದ್ದಾರೆ.

ಆರ್‌ಎಸ್‌ಎಸ್‌ ಕರಪ್ಟ್:

ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದರು ಎಂಬ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಕೆಳಗೆ ತಳ್ಳಿತು. ಅದ್ವಾನಿಯಂತಹ ನಾಯಕರನ್ನೂ ಮೂಲೆ ಗುಂಪು ಮಾಡಲಾಯಿತು. ಇವುಗಳ ಹಿಂದೆ ಇರುವುದು ಆರ್‌ಎಸ್‌ಎಸ್‌. ಅವರಷ್ಟು ಭ್ರಷ್ಟರು ಯಾರೂ ಇಲ್ಲ. ಬೇಕಾದರೆ ಯಡಿಯೂರಪ್ಪ ಅವರನ್ನೇ ಕೇಳಿ. ಅಧಿಕಾರದಲ್ಲಿದ್ದಾಗ ಯಾರ್ಯಾರಿಗೆ (ಆರ್‌ಎಸ್‌ಎಸ್‌ ನಾಯಕರಿಗೆ) ಭೂಮಿ ನೀಡಿದ್ದಾರೆ, ‘ಹೊಸ ದಿಗಂತ’ ಪತ್ರಿಕೆಗೆ 5 ಕೋಟಿ ನೀಡಿದ್ದಾರೆ ಎಂದು ಸುರೇಶ್ ಗೌಡ ಬಾಯಿ ಬಿಟ್ಟಿದ್ದಾರೆ.

ಅನೌಪಚಾರಿಕ ಮಾತುಕತೆಯಂತೆ ಕಾಣುವ ದೃಶ್ಯಾವಳಿಗಳಲ್ಲಿ ಸುರೇಶ್ ಗೌಡ ಯಡಿಯೂರಪ್ಪ ಅವರ ಜತೆ ನಡೆಸಿದ ಮಾತುಕತೆ ಪ್ರಸಂಗವೊಂದನ್ನು ಪ್ರಸ್ತಾಪಿಸಿದ್ದಾರೆ.

“ಒಂದು ದಿನ ಬೆಳಗ್ಗೆ ನನ್ನ ಜತೆ ಮಾತುಕತೆಗೆ ಹೇಳಿಕಳಿಸಿದ್ದರು. ಈ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂದು ನಾನು ಯಡಿಯೂರಪ್ಪ ಅವರಿಗೆ ಕೇಳಿದೆ. ಅದಕ್ಕೆ ಅವರು ನಾನೇ ಎಂದರು. ಒಂದು ವೇಳೆ ಸಮ್ಮಿಶ್ರ ಸರಕಾರ ಬಂದು ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೆ, ಶೋಭಾನಾ? ನಿಮ್ಮ ಮಗನಾ ಎಂದು ಕೇಳಿದೆ,’’ ಎಂದು ಸುರೇಶ್ ಗೌಡ ಹೇಳಿಕೊಂಡಿದ್ದಾರೆ.

ಬಿಜೆಪಿ ಒಳಗಜಳ:

ಬಿಜೆಪಿ ಒಳಗಿನ ಜಗಳಗಳು ಜಗಜ್ಜಾಹೀರಾಗಿರುವ ಸಂಗತಿ. ಯಡಿಯೂರಪ್ಪ ಮತ್ತು ಅನಂತ ಕುಮಾರ್ ನಡುವಿನ ಗುದ್ದಾಟಗಳು ತೀರಾ ಹಳೆಯವು. ಸುರೇಶ್ ಗೌಡ ಈ ವಿಚಾರವನ್ನೂ ಮಾತುಕತೆ ವೇಳೆ ಪ್ರಸ್ತಾಪಿಸಿದ್ದಾರೆ.

“ಯಡಿಯೂರಪ್ಪ ವಿರುದ್ಧ ಅಶೋಕ್ ಸೇರಿದಂತೆ ಉಳಿದ ನಾಯಕರನ್ನು ಮುಖ್ಯಮಂತ್ರಿ ಸ್ಥಾನದ ಆಸೆ ತೋರಿಸಿ ಎತ್ತು ಕಟ್ಟುವ ಕೆಲಸವನ್ನು ಅನಂತ ಕುಮಾರ್ ಮಾಡಿದ್ದಾರೆ,’’ ಎಂದವರು ಆರೋಪಿಸಿದ್ದಾರೆ.

ಹೀಗೆ, ಬಿಜೆಪಿ ಅಂತರಂಗದ ಕುರಿತಾದ ಹಲವು ವಿಚಾರಗಳನ್ನು ಸುರೇಶ್ ಗೌಡ ಪ್ರಸ್ತಾಪಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ‘ಬಿ ಟಿವಿ’ ಭಿತ್ತರಿಸಿದ ವಿಡಿಯೋ ಲಿಂಕ್ ಇಲ್ಲಿ ನೀಡಲಾಗಿದೆ.

ರಾಜ್ಯವನ್ನೇ ಬೆಚ್ಚಿ ಬೀಳಿಸುವ ಮಹಾ ಸ್ಫೋಟಕ ಸುದ್ದಿ! News @ 2.30 PM

Posted by BtvNews on Friday, April 13, 2018

UPDATE:

ಶಾಸಕ ಸುರೇಶ್ ಗೌಡರವರ ವೀಡಿಯೋ ಸಾಮಾಜಿಕ ಜಾತಲಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೀಡಿಯೋ 2013ರಲ್ಲಿ ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ತೊರೆದು ಕೆಜೆಪಿ ಪಕ್ಷವನ್ನು ಕಟ್ಟಿದ ಸಮಯದ್ದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ಇವು ಪಕ್ಷ ಎರಡು ಭಾಗವಾದಾಗ ನೋವಿನಿಂದ ಆಡಿದ್ದ ಮಾತುಗಳು. ಮಾಧ್ಯದವರೊಬ್ಬರು ಈ ವೀಡಿಯೋವನ್ನು ರೆಕಾರ್ಡ್‌ ಮಾಡಿಕೊಂಡಿದ್ದರು. ವಿಡಿಯೋವನ್ನಿಡಿದು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆ ಮಾಧ್ಯಮದ ಮಾಲೀಕರಿಗೆ ದೂರು ನೀಡಿದ ನಂತರ ಆ ಮಾಧ್ಯಮದವರು ಸುಮ್ಮನಾಗಿದ್ದರು. ಈಗ ಜೆಡಿಎಸ್‌ ಅಭ್ಯರ್ಥಿ ಚನ್ನಿಗಪ್ಪ ಹಣ ನೀಡಿ ವೀಡಿಯೋವನ್ನು ವೈರಲ್‌ ಮಾಡಿಸಿದ್ದಾರೆ. ರಾಜಕೀಯ ದುರುದ್ದೇಶಗಳಿಗಾಗಿ 5 ವರ್ಷದ ಹಿಂದಿನ ವಿಡಿಯೋವನ್ನು ಈಗ ತೋರಿಸಲಾಗುತ್ತಿದೆ,” ಎಂದು ಶಾಸಕ ಸುರೇಶ್‌ ಗೌಡ ತಿಳಿಸಿದ್ದಾರೆ.