ನರೇಂದ್ರ ಮೋದಿ, ಪ್ರಧಾನ ಮಂತ್ರಿ. (ಚಿತ್ರಕೃಪೆ: ನ್ಯೂಸ್‌ 18)
ಸುದ್ದಿ ಸಾರ

‘ನಮ್ಮ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುತ್ತದೆ’: ಕೊನೆಗೂ ಮೌನ ಮುರಿದ ಪ್ರಧಾನಿ ಮೋದಿ

ಇದೀಗ ಕೊನೆಗೂ ನರೇಂದ್ರ ಮೋದಿ ತಮ್ಮ ಮೌನವನ್ನು ಮುರಿದ್ದಿದ್ದಾರೆ. ಉನ್ನಾವೋ ಮತ್ತು ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಉನ್ನಾವ್‌ನಲ್ಲಿ 18 ವರ್ಷದ ಯುವತಿ ಮೇಲೆ ಬಿಜೆಪಿ ಶಾಸಕನಿಂದ ಅತ್ಯಾಚಾರ ಮತ್ತು ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದೇಶದ ಪ್ರಜ್ಞಾವಂತ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದ್ದವು. ಈ ಕುರಿತು ದೇಶದಾದ್ಯಂತ ಜನರ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯ ಮೌನದ ಕುರಿತು ಅನೇಕ ಪ್ರಶ್ನೆಗಳು ಹಾಗೂ ಟೀಕೆಗಳ ಸುರಿಮಳೆಯಾಗಿತ್ತು.

ಇದೀಗ ಕೊನೆಗೂ ನರೇಂದ್ರ ಮೋದಿ ತಮ್ಮ ಮೌನ ಮುರಿದ್ದಿದ್ದಾರೆ. ಉನ್ನಾವೋ ಮತ್ತು ಕಥುವಾದಲ್ಲಿ ನಡೆದ ಎರಡೂ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

Also read: ಅತ್ಯಾಚಾರ ಆರೋಪ: ಯೋಗಿ ಆದಿತ್ಯನಾಥ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ತಂದೆ ಸಾವು

“ಕಳೆದ ಎರಡು ದಿನಗಳಿಂದ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಈ ಎರಡೂ ಪ್ರಕರಣಗಳು ನಾಗರಿಕ ಸಮಾಜದ ಭಾಗವೇ ಅಲ್ಲ. ಸಮಾಜ ಹಾಗೂ ದೇಶದ ದೃಷ್ಟಿಯಿಂದ ನಾಗರಿಕ ಸಮಾಜದ ಭಾಗವಾದ ನಾವೆಲ್ಲ ತಲೆ ತಗ್ಗಿಸಬೇಕಾದ ಘಟನೆಗಳಿವು. ಯಾವುದೇ ತಪ್ಪಿತಸ್ಥರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ದೇಶದ ಜನರಿಗೆ ಭರವಸೆ ನೀಡುತ್ತೇನೆ. ಅಲ್ಲದೇ ನಮ್ಮ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ,” ಎಂದಿದ್ದಾರೆ.

ಇದೆ ವೇಳೆ, ಸ್ತ್ರೀ ಸ್ವಾತಂತ್ರ್ಯದ ಕುರಿತು ಮಾತನಾಡಿದ ನರೇಂದ್ರ ಮೋದಿ, ಹೆಣ್ಣು ಮಕ್ಕಳು ತಡವಾಗಿ ಮನೆಗೆ ಬಂದಾಗ ವಿಚಾರಣೆ ನಡೆಸುವ ಹೆತ್ತವರು, ಮಗ ತಡವಾಗಿ ಬಂದಾಗಲೂ ವಿಚಾರಣೆ ಮಾಡಬೇಕು ಎಂದಿದ್ದಾರೆ.

ಅವರು ಈ ಹಿಂದೆಯೂ ಇದೇ ಮಾತುಗಳನ್ನು ಆಡಿದ್ದರು. ಈ ಹಿಂದೆ ಕೆಂಪು ಕೋಟೆಯಲ್ಲಿ ಮಾತನಾಡಿದ್ದಾಗಲೂ ತಡವಾಗಿ ಮನೆಗೆ ಬರುವ ಮಗನನ್ನು ಹೆತ್ತವರು ಪ್ರಶ್ನಿಸಬೇಕು ಎಂದಿದ್ದನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

ಉನ್ನಾವೋ ಮತ್ತು ಕಥುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನ ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಮಧ್ಯರಾತ್ರಿ ಕ್ಯಾಂಡಲ್ ಲೈಟ್ ಪ್ರತಿಭಟನೆ ಕೂಡ ನಡೆಸಿದ್ದರು. ಅಲ್ಲದೇ ಘಟನೆ ಕುರಿತಂತೆ ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಟೀಕಾಪ್ರಹಾರ ಮಾಡಿದ್ದರು. ಎರಡೂ ಅತ್ಯಾಚಾರ ಪ್ರಕರಣಗಳ ಕುರಿತಂತೆ ಮೌನ ಮುರಿಯುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದರು.

'ಇದು ನಿಜಕ್ಕೂ ಸಹಿಸಲಸಾಧ್ಯ, ಅವರ ಪ್ರತಿಕ್ರಿಯೆಗಾಗಿ ಇಡೀ ಭಾರತ ದೇಶವೇ ಕಾಯುತ್ತಿದೆ' ಎಂದಿದ್ದರು.

ಅಲ್ಲದೇ ನಾನಾ ಕ್ಷೇತ್ರಗಳ ಗಣ್ಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

Also read: ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ ಸಿಬಿಐ ವಶಕ್ಕೆ: ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಸಿಗುವುದೇ? 

ಈಗ ತಡವಾಗಿಯಾದರೂ ಪ್ರಧಾನಿ ಮೋದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ‘ಅಪರಾಧಿಗಳನ್ನು ಬಿಡುವುದಿಲ್ಲ. ಜತೆಗೆ ನಮ್ಮ ಹೆಣ್ಣು ಮಕ್ಕಳಿಗೆ ನ್ಯಾಯ ದೊರೆಯುತ್ತದೆ’ ಎನ್ನುವ ಭರವಸೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಕಾರ್ಯರೂಪದಲ್ಲಿ ಬರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Also read: ‘ನನ್ನ ಸಾವಿಗೆ ಮೋದಿ ಹೊಣೆ’: ರೈತನೊಬ್ಬನ ಡೆಥ್ ನೋಟ್