ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ ಸಿಬಿಐ ವಶಕ್ಕೆ: ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಸಿಗುವುದೇ? 
ಸುದ್ದಿ ಸಾರ

ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ ಸಿಬಿಐ ವಶಕ್ಕೆ: ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಸಿಗುವುದೇ? 

ಕುಲದೀಪ್ ಸಿಂಗ್ ಸೆಂಗರ್ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಆರೋಪಿಯನ್ನು ಶುಕ್ರವಾರ ಮುಂಜಾನೆ ವಶಕ್ಕೆ ತೆಗೆದುಕೊಂಡಿದೆ. ಆದರೆ ನ್ಯಾಯ ಸಿಗುವುದು ಮಾತ್ರ ಮರೀಚಿಕೆಯಾಗಿದೆ. 

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಕಳೆದ ವರ್ಷದ ಜೂನ್‌ ತಿಂಗಳಲ್ಲಿ 16 ವರ್ಷದ ಬಾಲಕಿಯು, ಶಾಸಕ ಕುಲ್‌ದೀಪ್‌ ಮತ್ತು ಆತನ ಬೆಂಬಲಿಗರು ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿದ್ದರು, ಅಲ್ಲದೇ ಯುವತಿ ಕುಟುಂಬ ಸಮೇತವಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಅತ್ಯಾಚಾರದ ಆರೋಪ ಮಾಡಿ, ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ಯುವತಿಯ ತಂದೆ ಸೋಮವಾರ ಅನುಮಾನಾಸ್ಪದ ಸಾವನ್ನಪ್ಪಿದ್ದರು. ಅವರ ಸಾವಿಗೆ ಉತ್ತರ ಪ್ರದೇಶದ ಪೊಲೀಸರು ಕಾರಣ ಎಂಬ ಆರೋಪವೂ ಕೇಳಿಬಂದಿತ್ತು.

ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಆರೋಪಿ ಶಾಸಕನ ವಿರುದ್ಧ ಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಆಗ್ರಹಗಳು ಕೇಳಿಬಂದಿದ್ದವು. ಕೊನೆಗೆ, ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ಆರೋಪಿಯನ್ನು ಶುಕ್ರವಾರ ಮುಂಜಾನೆ ವಶಕ್ಕೆ ತೆಗೆದುಕೊಂಡಿದೆ.

ಲಕ್ನೋದ ಸಿಬಿಐ ಕಚೇರಿಯಲ್ಲಿ ಶಾಸಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದ್ದು, ಐಪಿಸಿ ಸೆಕ್ಷನ್ 363 (ಅಪಹರಣ), 366 (ಮಹಿಳೆ ಅಪಹರಣ), 376 (ಅತ್ಯಾಚಾರ), 506 (ಅಪರಾಧಿಕ ಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ಫೋಕ್ಸೋ ಕಾಯ್ದೆಯಡಿಯಲ್ಲಿಯೂ ಪ್ರಕರಣ ದಾಖಲಾಗಿದೆ.

<i>ಎಫ್‌ಐಆರ್‌ ಪ್ರತಿ, ಕೃಪೆ: ಫರ್ಸ್ಟ್‌ ಪೋಸ್ಟ್ </i>
ಎಫ್‌ಐಆರ್‌ ಪ್ರತಿ, ಕೃಪೆ: ಫರ್ಸ್ಟ್‌ ಪೋಸ್ಟ್

“ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಸಂಪೂರ್ಣವಾಗಿ ಹಸ್ತಾಂತರಿಸಲಾಗಿದೆ. ಈಗಾಗಲೇ ಸಿಬಿಐ ಕುಲದೀಪ್ ಸಿಂಗ್ ಸೆಂಗರ್‌ನನ್ನು ವಿಚಾರಣೆಗೆ ಒಳಪಡಿಸಿದೆ. ನಮ್ಮ ಸರಕಾರವು ಇಂತಹ ಗಂಭೀರ ಪ್ರಕರಣಗಳಲ್ಲಿ ಯಾವುದೇ ರಾಜಿಯಾಗುವುದಿಲ್ಲ. ಆರೋಪಿಯು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವನನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ,” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿಥ್ಯನಾಥ್ ತಿಳಿಸಿದ್ದಾರೆ.

ಆದರೆ “ನಾನು ಅಮಾಯಕ ಮತ್ತು ನಿರಪರಾಧಿ. ನನ್ನ ವಿರುದ್ಧ ಸಂಚು ನಡೆಸಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ,” ಎಂದು ಕುಲದೀಪ್ ಸಿಂಗ್ ಸೆಂಗರ್ ಹೇಳಿಕೊಂಡಿದ್ದಾರೆ.

ಈ ಹಿಂದೆ ನಡೆದ್ದೇನು?

ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ತಂದೆಯು ದಾಖಲಿಸಿದ ಎಫ್ಐಆರ್ ಹಿಂತೆಗೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ಎಪ್ರಿಲ್ 3ರಂದು ಶಾಸಕ ಕುಲದೀಪ್ ಸಿಂಗ್ ಸೆಂಗರ್‌ ಸಹೋದರ ಅತುಲ್ ಸಿಂಗ್ ಸೆಂಗರ್ ಸಂತ್ರಸ್ಥಳ ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ಲಕ್ನೋದಲ್ಲಿನ ನಿವಾಸದ ಎದುರೇ ಸಂತ್ರಸ್ಥಳ ಕುಟುಂಬ ಆತ್ಮಹತ್ಯೆಗೆ ಮುಂದಾಗಿತ್ತು. ಆಗ ಮಹಿಳೆಯ ತಂದೆಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ತದನಂತರದಲ್ಲಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.

“ಹೊಟ್ಟೆ ನೋವು ಹಾಗೂ ವಾಂತಿಯ ಕಾರಣಕ್ಕೆ ಸಂತ್ರಸ್ಥೆಯ ತಂದೆಯನ್ನು ಭಾನುವಾರ ರಾತ್ರಿ ಪೊಲೀಸರು ಆಸ್ಪತ್ರೆಗೆ ಕರೆ ತಂದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ” ಎಂದು ಉನ್ನಾವ್‌ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಮೂಲಗಳು ತಿಳಿಸಿದ್ದವು.

ಆದರೆ 'ಇದು ವ್ಯವಸ್ಥಿತವಾಗಿ ನಡೆದ ಕೊಲೆ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಕರ್ತವ್ಯ ಲೋಪದ ಕಾರಣಕ್ಕೆ 6 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ನಂತರ ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು.

ರೇಪ್ ಸಂತ್ರಸ್ತೆಯ ದೂರನ್ನು ಪೊಲೀಸರು ನಿರ್ವಹಿಸಿದ ರೀತಿಯ ಬಗ್ಗೆ ಅದು ತೀವ್ರ ಅಸಮಧಾನ ಹೊಂದಿದ್ದ ಅಲಹಾಬಾದ್ ಹೈಕೋರ್ಟ್, ಪ್ರಕರಣದಲ್ಲಿ ಶಾಸಕ ಸೇಂಗರ್ ಅವರನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರ ವೈಫಲ್ಯವನ್ನು ಪ್ರಶ್ನಿಸಿತ್ತು. ಹಾಗೂ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಂಶಯ ವ್ಯಕ್ತಪಡಿಸಿತ್ತು.

Also read: ಅತ್ಯಾಚಾರ ಆರೋಪ: ಯೋಗಿ ಆದಿತ್ಯನಾಥ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದ ತಂದೆ ಸಾವು