samachara
www.samachara.com
ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್‌ ಖಾನ್‌ಗೆ 5 ವರ್ಷ ಜೈಲು
ಸುದ್ದಿ ಸಾರ

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್‌ ಖಾನ್‌ಗೆ 5 ವರ್ಷ ಜೈಲು

ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ದೋಷಿ ಎಂದು ತೀರ್ಪು ನೀಡಿರುವ ಜೋಧ್‌ಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

samachara

samachara

ಸುಮಾರು ಎರಡು ದಶಕದಷ್ಟು ಹಿಂದಿನ ಹೈಪ್ರೊಫೈಲ್‌ ಪ್ರಕರಣದ ತೀರ್ಪು ಗುರುವಾರ ಹೊರಬಿದ್ದಿದೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ದೋಷಿ ಎಂದು ತೀರ್ಪು ನೀಡಿರುವ ಜೋಧ್‌ಪುರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ದೋಷಿ ಎಂದು ಗುರುವಾರ ಬೆಳಿಗ್ಗೆ ತೀರ್ಪು ನೀಡಿದ್ದ ನ್ಯಾಯಾಲಯ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಮಧ್ಯಾಹ್ನ ಪ್ರಕಟಿಸಿದೆ.

ನ್ಯಾಯಾಲಯದ ಆದೇಶದ ಬಳಿಕ ಸಲ್ಮಾನ್‌ ಖಾನ್‌ ವೈದ್ಯಕೀಯ ತಪಾಸಣೆ ನಡೆಸಿ, ಜೋಧ್‌ಪುರ ಕೇಂದ್ರೀಯ ಕಾರಾಗೃಹಕ್ಕೆ ಕಳಿಸಲಾಗಿದೆ.

ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 28ರಂದು ಮುಗಿಸಿದ್ದ ನ್ಯಾಯಾಲಯ ತೀರ್ಪನ್ನು ಗುರುವಾರಕ್ಕೆ ಕಾದಿರಿಸಿತ್ತು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೊರತುಪಡಿಸಿ ಇನ್ನುಳಿದ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ನಟರಾದ ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಕೊಠಾರಿ, ದುಶ್ಯಂತ್‌ ಸಿಂಗ್‌ ಮತ್ತು ದಿನೇಶ್‌ ಗಾವ್ರೆ ಕೂಡಾ ಈ ಪ್ರಕರಣದ ಆರೋಪಿಗಳು ಎಂದು ಹೆಸರಿಸಲಾಗಿತ್ತು.

ಈ ಪ್ರಕರಣದಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆಯಾಗಿದ್ದರೆ ಸಲ್ಮಾನ್‌ ಖಾನ್ ಜೋಧ್‌ಪುರ ನ್ಯಾಯಾಲಯದಿಂದಲೇ ಜಾಮೀನು ಪಡೆಯಲು ಅವಕಾಶವಿತ್ತು. ಆದರೆ, ಮೂರು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆ ಪ್ರಕಟವಾಗಿರುವುದರಿಂದ ಜಾಮೀನಿಗಾಗಿ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9/51ರಡಿ ಗರಿಷ್ಠ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣದ ವೇಳೆ ಜೋಧ್‌ಪುರ ಬಳಿಯ ಕಂಕಣಿಯಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿ ಕೊಂದಿದ್ದರು.

ಸಂರಕ್ಷಿತ ಅರಣ್ಯದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್ ಖಾನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9/51 ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ 1998ರ ಅಕ್ಟೋಬರ್‌ 2ರಂದು ಪ್ರಕರಣ ದಾಖಲಿಸಲಾಗಿತ್ತು.