samachara
www.samachara.com
ಯುಪಿಎ ದಾಖಲೆ ಮುರಿದ ಮೋದಿ: ಪೆಟ್ರೋಲ್, ಡೀಸೆಲ್ ದರ ದಾಖಲೆ ಏರಿಕೆ
ಸುದ್ದಿ ಸಾರ

ಯುಪಿಎ ದಾಖಲೆ ಮುರಿದ ಮೋದಿ: ಪೆಟ್ರೋಲ್, ಡೀಸೆಲ್ ದರ ದಾಖಲೆ ಏರಿಕೆ

ದೇಶ ದಾಖಲೆಯ ತೈಲಬೆಲೆ ಏರಿಕೆಗೆ ಸಾಕ್ಷಿಯಾಗಿದೆ. ಡೀಸೆಲ್‌ನ ದರ ಭಾರಿ ಹೆಚ್ಚಳವಾಗಿದೆ. ಪೆಟ್ರೋಲ್‌ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ 80 ರೂಪಾಯಿ ದಾಟಿದೆ. ಇದು ನಿತ್ಯ ಇಂಧನ ಬಳಸುವವರ ಪಾಲಿಗೆ ಅಚ್ಚೆ ದಿನ್ ಖಂಡಿತಾ ಅಲ್ಲ. 

samachara

samachara

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಏರಿಕೆ ಗ್ರಾಹಕರಲ್ಲಿ ಭಯ ಮೂಡಿಸಿದೆ. ಸೋಮವಾರ ತೈಲ ಕಂಪನಿಗಳು ಹೊಸ ದರವನ್ನು ಬಳಕೆದಾರರ ಮೇಲೆ ಹೇರಲಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಲಿರುವ ನಿರೀಕ್ಷೆ ಭಾರತದ ಮೇಲೂ ಪ್ರಭಾವವನ್ನು ಬೀರಿದೆ.

ಭಾರತದ ಪ್ರಮುಖ ನಗರಗಳಲ್ಲಿ ತೈಲ ಬೆಲೆ ಸುಮಾರು 10-18 ಪೈಸೆಗಳಷ್ಟು ಏರಿಕೆ ಕಂಡಿದೆ. ಒಂದು ಲೀಟರ್ ಪೆಟ್ರೋಲ್‌ನ ಬೆಲೆ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ 73.83 ರೂಗಳನ್ನು ತಲುಪಿದೆ. ಮುಂಬೈನಲ್ಲಿನ ದರ ಅತಿ ಹೆಚ್ಚು ಎನಿಸಿದ್ದು 81.69 ರೂಗಳಿಗೆ ಮಾರಾಟಗೊಳ್ಳುತ್ತಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯ ಏರಿಳಿತಗಳನ್ನು ಆಧರಿಸಿ, ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ. ಈ ಕಾರ್ಯವನ್ನು ತೈಲೋದ್ಯಮ ಕಂಪನಿಗಳು 2017ರ ಜೂನ್‌ ಆರಂಭದಿಂದಲೂ ನಡೆಸಿಕೊಂಡು ಬಂದಿವೆ.

ಪ್ರೆಟ್ರೋಲ್ ಕಳೆದ 4 ವರ್ಷಗಳಲ್ಲಿ ಅತಿ ಹೆಚ್ಚಿನ ದರವನ್ನು ಪಡೆದುಕೊಂಡಿದೆ. 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಲೀಟರ್ ಪೆಟ್ರೋಲ್ ದೆಹಲಿಯಲ್ಲಿ 73.83 ರೂಗಳಿಗೆ ಮಾರಾಟಗೊಂಡಿತ್ತು. ಇನ್ನಿತರ ನಗರಗಳಲ್ಲಿ 76 ರೂಗಳನ್ನು ದಾಟಿತ್ತು. ಮತ್ತೆ ಈಗ ಅದೇ ದರವನ್ನು ಪೆಟ್ರೋಲ್ ಪಡೆದುಕೊಂಡಿದೆ.

ಡೀಸೆಲ್ ವಿಷಯಕ್ಕೆ ಬರುವುದಾದರೆ, ಇತಿಹಾಸದಲ್ಲಿ ಡೀಸೆಲ್ ಹಿಂದೆಂದೂ ಈ ಪ್ರಮಾಣದ ಬೆಲೆ ಪಡೆದುಕೊಂಡಿರಲಿಲ್ಲ. ಇಂದು ಒಂದು ಲೀಟರ್ ಡೀಸೆಲ್ ದೆಹಲಿಯಲ್ಲಿ 64.69 ರೂಗಳಿಗೆ ಮಾರಲ್ಪಡುತ್ತಿದೆ. ಮುಂಬೈನಲ್ಲಿ 68.89 ರೂಗಳಿಗೆ ಮಾರಾಟವಾಗುತ್ತಿದೆ.

ಯುಪಿಎ ದಾಖಲೆ ಮುರಿದ ಮೋದಿ: ಪೆಟ್ರೋಲ್, ಡೀಸೆಲ್ ದರ ದಾಖಲೆ ಏರಿಕೆ
ಚಿತ್ರ ಕೃಪೆ : ಎನ್‌ಡಿ ಟಿವಿ 

ವಿತ್ತ ಸಚಿವ ಅರುಣ್ ಜೇಟ್ಲಿ 2014ರ ನವೆಂಬರ್ನಿಂದ 2016ರ ಜನವರಿಯೊಳಗೆ ಸತತ 9 ಬಾರಿ ತೈಲದ ಮೇಲಿನ ಸುಂಕವನ್ನು ಏರಿಸಿದ್ದರು. ಆಗ ತೈಲ ಬೆಲೆ ಜಾಗತಿಕವಾಗಿ ಕುಸಿದಿತ್ತು. ಆದರೆ ಸುಂಕವನ್ನು ಕಡಿಮೆಗೊಳಿಸಿದ್ದು ಮಾತ್ರ ಕೇವಲ ಒಂದೇ ಬಾರಿ.

2017ರ ಅಕ್ಟೋಬರ್‌ನಲ್ಲಿ ಪೆಟ್ರೋಲ್ ಬೆಲೆ 70 ರೂ ದಾಟಿದಾಗ ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಸುಂಕದಲ್ಲಿ 2 ರೂಗಳನ್ನು ಕಡಿತಗೊಳಿಸಿತ್ತು. ಡೀಸೆಲ್ ಬೆಲೆಯೂ ಕೂಡ 59 ರೂಗಳನ್ನು ದಾಟಿದ್ದ ಕಾರಣ, ಅದರ ಮೇಲಿನ ಸುಂಕವನ್ನೂ ಕಡಿಮೆಗೊಳಿಸಿತ್ತು. ಈಗ ಮತ್ತೆ ಸರಕಾರ ಸುಂಕವನ್ನು ಕಡಿಮೆಗೊಳಿಸಿದ ದೇಶದ ಜನರ ಹಿತವನ್ನು ಕಾಪಾಡುವುದೇ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಜಾಗತಿಕವಾಗಿ, ಅಮೆರಿಕಾದಲ್ಲಿನ ತೈಲೋತ್ಪಾದನೆ ಕುಂಠಿತಗೊಂಡಿದೆ. ಜತೆಗೆ ತೈಲೋತ್ಪಾದನಾ ರಾಷ್ಟ್ರ ಇರಾನ್ ಮೇಲೆ ಅಮೆರಿಕಾ ಹಲವಾರು ಧಿಗ್ಬಂಧನಗಳನ್ನು ವಿಧಿಸುವ ನಿರೀಕ್ಷೆಗಳಿದ್ದು, ಈ ಬೆಳವಣಿಗೆಗಳು ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.

ಈ ತೈಲ ಬೆಲೆ ಏರಿಕೆ ದೇಶದ ಎಲ್ಲಾ ಸೇವೆ ಮತ್ತು ಸರಕುಗಳ ಬೆಲೆಯನ್ನೂ ಕೂಡ ಹೆಚ್ಚಿಸುವ ನಿರೀಕ್ಷೆಯಿದೆ. ಹಣದುಬ್ಬರವನ್ನು ಹೆಚ್ಚಿಸುವಲ್ಲಿ ಈ ತೈಲ ಬೆಲೆ ಏರಿಕೆ ಪರೋಕ್ಷ ಪರಿಣಾಮವನ್ನು ಬೀರಲಿದೆ.

ಈ ಬೆಳವಣಿಗೆಯನ್ನು ನಿಯಂತ್ರಿಸುವ ಸಲುವಾಗಿ ಆರ್‌ಬಿಐ ಪ್ರಮುಖರು ಬುಧವಾರ ಸಬೆ ಸೇರಲಿದ್ದು, ಹಣದುಬ್ಬರವನ್ನು ತಡೆಗಟ್ಟಲು ಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಲಿದ್ದಾರೆ. ಈ ಸಭೆಯ ಪರಿಣಾಮಗಳು ಏನಾಗಬಹುದು ಎನ್ನುವುದನ್ನು ಕಾದು ನೋಡಬೇಕಿದೆ.