samachara
www.samachara.com
ಸಿರಿಯಾದಲ್ಲಿ ಮುಂದುವರಿದ ಮಾರಣಹೋಮ: ಹರಿಯುತ್ತಿರುವ ನೆತ್ತರಿಗೆ ಕೊನೆಯೆಂದು?
ಸುದ್ದಿ ಸಾರ

ಸಿರಿಯಾದಲ್ಲಿ ಮುಂದುವರಿದ ಮಾರಣಹೋಮ: ಹರಿಯುತ್ತಿರುವ ನೆತ್ತರಿಗೆ ಕೊನೆಯೆಂದು?

ಸಿರಿಯಾದಲ್ಲಿನ ವೈಮಾನಿಕ ದಾಳಿಯಿಂದಾಗಿ ಮೃತಪಟ್ಟವರ ಸಂಖ್ಯೆ 250 ದಾಟಿದ್ದು, 1,200ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದಾರೆ. ಮೃತಪಟ್ಟವರಲ್ಲಿ 50ಕ್ಕೂ ಹೆಚ್ಚು ಜನ ಮಕ್ಕಳು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ತಿಳಿಸಿವೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

2013ರಿಂದಲೇ ಸೈನಿಕ ಕಾರ್ಯಾಚರಣೆಗಳು ನಡೆಯುತ್ತಿರುವ ಈ ಪ್ರದೇಶದಲ್ಲಿ ಕೇವಲ 48 ಗಂಟೆ ಅವಧಿಯೊಳಗೆ ಇಷ್ಟು ಪ್ರಮಾಣದ ಸಾವು ನೋವು ಈ ಹಿಂದೆ ಎಂದೂ ಸಂಭವಿಸಿರಲಿಲ್ಲ. ಸುಮಾರು 3,00,000 ಜನರನ್ನು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ.

ಗಡಿ ಕುರಿತಾಗಿ ಸಿರಿಯಾದಲ್ಲಿ ಐಸಿಸ್‌ ಉಗ್ರರು ಮತ್ತು ರಷ್ಯಾ ನಡುವೆ ಸಂಘರ್ಷ ನಡೆಯುತ್ತಿದ್ದು, ರಷ್ಯಾ ಉಗ್ರ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ಉಗ್ರರಿಂದ ತಾನು ಕಳೆದುಕೊಂಡ ಪ್ರದೇಶಗಳನ್ನು ಮತ್ತೆ ಪಡೆಯುವ ಸಲುವಾಗಿ ಸಿರಿಯಾ ಸೈನ್ಯ ಮುನ್ನುಗ್ಗುತ್ತಿದೆ. ಈ ಮಧ್ಯೆ ಭಾನುವಾರ ನಡೆದ ವೈಮಾನಿಕ ದಾಳಿಯಿಂದಾಗಿ ಈ ದುರಂತ ಸಂಭವಿಸಿದ್ದು, ಅಪಾರ ಪ್ರಮಾಣದ ಸಾವು ನೋವುಗಳಿಗೆ ಕಾರಣವಾಗಿದೆ.

ಇನ್ನು ನಿಲ್ಲದ ಈ ಸಂಘರ್ಷದಲ್ಲಿ ಹತ್ತಕ್ಕಿಂತಲೂ ಹೆಚ್ಚು ಪಟ್ಟಣ ಮತ್ತು ಹಳ್ಳಿಗಳು ಅಸ್ತವ್ಯಸ್ಥಗೊಂಡಿವೆ. ಸುತ್ತಮುತ್ತ ಇದ್ದ ಹಲವಾರು ಆಸ್ಪತ್ರೆಗಳೂ ಕೂಡ ದಾಳಿಯಿಂದ ದ್ವಂಸಗೊಂಡಿವೆ. ವಿಶ್ವ ಸಂಸ್ಥೆಯ ಹೇಳಿರುವ ಪ್ರಕಾರ 6 ಸ್ಥಳೀಯ ಆಸ್ಪತ್ರೆಗಳು ದಾಳಿಯಿಂದ ಧ್ವಂಸಗೊಡಿದ್ದವು. ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ದಾಳಿಗೆ ಒಳಗಾಗಿರುವ ಡೌಮಾ ಪಟ್ಟಣದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲಾಗಿದ್ದು, ಹಲವಾರು ಸ್ವಯಂಸೇವಕ ಸಂಸ್ಥೆಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ಕೈಜೋಡಿಸಿವೆ.

ಸಿರಿಯಾಗೆ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಹಲವಾರು ಗಡಿ ಸಂಬಂಧಿತ ವಿವಾದಗಳಿವೆ. ಸಧ್ಯದ ಸಿರಿಯಾ ಅಧ್ಯಕ್ಷರಾಗಿರುವ ಅಸ್ಸಾದ್‌ಗಿರುವ ತನ್ನ ಅವಧಿಯಲ್ಲದೇ ಈ ಎಲ್ಲಾ ವಿವಾದಗಳು ಬಗೆ ಹರಿಯಬೇಕೆಂಬ ಇರಾದೆ ಈ ಕಲಹಗಳಿಗೆ ನಾಂದಿ ಹಾಡಿದೆ. ಇದು ಮತ್ತಷ್ಟು ಸಂಘರ್ಷಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ. ಅಮೆರಿಕಾದ ಕುಮ್ಮಕ್ಕು, ರಷ್ಯಾದ ಜೊತೆಗಿನ ಯುದ್ಧಗಳು ಸಿರಿಯಾ ಅಧ್ಯಕ್ಷರು ಯುದ್ಧದಲ್ಲಿ ಮುನ್ನುಗುವಂತೆ ಪ್ರೇರೇಪಿಸುತ್ತಿವೆ. ದೇಶದ ಸುತ್ತ ನಡೆಯುತ್ತಿರುವ ಅಂತಃಕಲಹಗಳು ಸಿರಿಯಾದ ಮೇಲೂ ಪ್ರಭಾವ ಬೀರಿವೆ.

ಈ ಮಧ್ಯೆ, ಟರ್ಕಿ ಕೂಡ ಯುದ್ಧ ಆರಂಭಿಸಿದೆ. ಕುರ್ಡ್‌ ಸಮುದಾಯದ ಜನರನ್ನು ಹಿಮ್ಮೆಟ್ಟಿಸುವ ಸಲುವಾಗಿ ಕಾರ್ಯಾಚರಣೆ ನಡೆಸುತ್ತ, ಸಿರಿಯಾ ಗಡಿಯೊಳಗೆ ಪ್ರವೇಶಿಸುರುವ ಟರ್ಕಿ ಸೈನ್ಯದ ವಿರುದ್ಧ ಸಿರಿಯಾ ಸೈನಿಕರು ಕಾದಾಡುತ್ತಿದ್ದಾರೆ. ಈ ಕಾದಾಟ ಕೂಡ ನಡೆಯುತ್ತಿರುವುದು ಸಹ ಡೆಮಾಸ್ಕಸ್‌ ಗಡಿಗಳಲ್ಲೇ.

ಮುಸ್ಲಿಂ ಭಯೋತ್ಪಾದಕ ಸಂಘಟನೆ ಆಲ್-ಖೈದಾ ಜತೆ ಸಂಬಂಧ ಹೊಂದಿರುವ ಜಯಶ್-ಅಲ್-ಇಸ್ಲಾಂ ಮತ್ತು ತಹ್ರೀರ್‌ ಅಲ್-ಶಾಮ್‌ ಸಂಘಟನೆಗಳು ಈ ಭಾಗದಲ್ಲಿ ತಮ್ಮ ಪ್ರಾಬಲ್ಯವನ್ನು ಹೊಂದಿವೆ. ಒಂದು ಕಡೆ ಸಿರಿಯಾ ಸೈನ್ಯ, ಮತ್ತೊಂದೆಡೆ ರಷ್ಯಾ ಹಾಗೂ ಟರ್ಕಿ ಸೈನ್ಯಗಳ ಜೊತೆಗಿನ ಕದನ ಸಾಲದಂತೆ ಈ ಉಗ್ರಗಾಮಿ ಸಂಘಟನೆಗಳ ಕ್ರೌರ್ಯದ ನಡುವೆ ಬದುಕು ಸಾಗಿಸುತ್ತಿರುವ ಈ ಜನ ಹಿಂಸೆಯ ಮಧ್ಯೆಯೇ ಉಸಿರಾಡುತ್ತಿದ್ದಾರೆ.

ಮೊದಲಿನಿಂದಲೂ ಆಹಾರದ ಸಮಸ್ಯೆ ಎದುರಿಸುತ್ತಿರುವ ಈ ಭಾಗದಲ್ಲಿ ದಾಳಿಯಿಂದ ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿರುವ ಸ್ಥಳೀಯ ವೈದ್ಯರೊಬ್ಬರು ಹೇಳುವಂತೆ,'ವೈಮಾನಿಕ ದಾಳಿಯಿಂದ ಗಾಯಗೊಂಡವರಿಗೆ ಬದುಕುವ ಆಸೆಯಿದೆ. ಆದರೆ ಹಸಿವಿನ ಕಾರಣದಿಂದಾಗಿ ಮೊದಲೇ ದುರ್ಬಲಗೊಂಡಿದ್ದ ದೇಹಗಳು ಈಗ ಮತ್ತಷ್ಟು ಜರ್ಜರಿತವಾಗಿವೆ.

ಚಿಕ್ಕ ಬ್ರೆಡ್‌ ತುಂಡಿಗೂ ಹತ್ತಾರು ಪ್ರಮಾಣದ ಹೆಚ್ಚು ಹಣ ತೆತ್ತು ಕಳ್ಳುವ ಪರಿಸ್ಥಿತಿಯಿರುವ ಕಾರಣದಿಂದ ಈ ಭಾಗದ ಶೇ.12ರಷ್ಟು ಮಕ್ಕಳು ಸಂಪೂರ್ಣವಾಗಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಕಳೆದ ನವೆಂಬರ್ ತಿಂಗಳಿನಿಂದ ಸಿರಿಯಾ ಸರಕಾರ ಮಾನವೀಯ ಕಾರಣದ ಮೇಲೆ ಈ ಪ್ರದೇಶದ ಜನರಿಗೆ ಆಹಾರವನ್ನು ಪೂರೈಸಲು ಮುಂದೆ ಬಂದಿದ್ದ ಸ್ವಯಂ ಸೇವಕ ಸಂಘಟನೆಗಳಿಗೆ ಅವಕಾಶ ನೀಡಿತ್ತು.

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆ, ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದರ ಬಗ್ಗೆ ಸಿರಿಯಾಗೆ ಎಚ್ಚರಿಕೆ ನೀಡಿದೆ. ಅದರ ಜತೆಗೆ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಅಗತ್ಯತೆ ಇರುವುದರಿಂದ ಕದನ ವಿರಾಮವನ್ನು ಘೋಷಿಸುವಂತೆ ಸೂಚಿಸಿದೆ. ಆದರೆ ಸಿರಿಯಾ ಸುಮ್ಮನೆ ಕೂರುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

ಸುತ್ತಲೂ ಶತ್ರುಗಳನ್ನು ಸೃಷ್ಟಿಸಿಕೊಂಡಿರುವ ಸಿರಿಯಾ ತನ್ನ ಪ್ರಜೆಗಳ ಕ್ಷೇಮವನ್ನು ಕಾಪಾಡುವ ಕಾರಣಕ್ಕಾಗಿ ಆದರೂ ಏನಾದರೂ ಹಿಂದೆ ಸರಿಯಬಹುದೇ ಎಂದು ಕಾದು ನೋಡಬೇಕಿದೆ.