samachara
www.samachara.com
ಹ್ಯಾರಿಸ್ ಪುತ್ರ ನಲಪಾಡ್‌ ಗೂಂಡಾಗಿರಿ, ಯುವಕನ ಮೇಲೆ ಹಲ್ಲೆ; ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ನಡೆದಿದ್ದೇನು?
ಸುದ್ದಿ ಸಾರ

ಹ್ಯಾರಿಸ್ ಪುತ್ರ ನಲಪಾಡ್‌ ಗೂಂಡಾಗಿರಿ, ಯುವಕನ ಮೇಲೆ ಹಲ್ಲೆ; ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ನಡೆದಿದ್ದೇನು?

ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಮತ್ತು ಆತನ ಬೆಂಬಲಿಗರು ಶನಿವಾರ ರಾತ್ರಿ ಬೆಂಗಳೂರಿನ ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೊರಂಟ್‌ನಲ್ಲಿ 

ಉದ್ಯಮಿ ಲೋಕನಾಥ್‌ ಎಂಬುವರ ಪುತ್ರ 

24 ವರ್ಷದ ವಿದ್ವತ್‌ ಎಂಬುವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮುಖ ಮತ್ತು ತಲೆಗೆ ಗಂಭೀರವಾಗಿ ಗಾಯವಾಗಿರುವ ವಿದ್ವತ್‌ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಳಿಕ ತಲೆಮರೆಸಿಕೊಂಡಿರುವ ನಲಪಾಡ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಲಪಾಡ್‌ ಮತ್ತು ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್‌ 341, 506, 143, 144, 146, 147, 326 ಮತ್ತು 504 ಅನ್ವಯ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರು ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದ ನಲಪಾಡ್‌ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದ ಸದಸ್ಯತ್ವದಿಂದ ಉಚ್ಛಾಟಣೆ ಮಾಡಲಾಗಿದೆ.

“ಕಾನೂನಿನ ಮುಂದೆ ಎಲ್ಲರೂ ಒಂದೇ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಲೇಬೇಕು. ಬೆಂಗಳೂರು ಪೊಲೀಸ್‌ ಕಮಿಷನರ್‌ ಈ ಪ್ರಕರಣದಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ನಡೆದಿದ್ದೇನು?

ಹಲ್ಲೆಗೊಳಗಾಗಿರುವ ವಿದ್ವತ್ ಅವರ ಸ್ನೇಹಿತರ ಪ್ರಕಾರ, ಸಿಂಗಪುರದಲ್ಲಿ ಎಂಬಿಎ ಮುಗಿಸಿ ಬೆಂಗಳೂರಿಗೆ ಬಂದಿದ್ದ ವಿದ್ವತ್‌ ತಮ್ಮ ಸ್ನೇಹಿತರೊಂದಿಗೆ ಯುಬಿ ಸಿಟಿಯ ಫರ್ಜಿ ಕೆಫೆ ರೆಸ್ಟೊರಂಟ್‌ಗೆ ಶನಿವಾರ ರಾತ್ರಿ ಊಟಕ್ಕೆ ಹೋಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ವಿದ್ವತ್‌ ಮತ್ತವರ ಸ್ನೇಹಿತರು ಊಟ ಮಾಡುತ್ತಿದ್ದ ವೇಳೆ ನಲಪಾಡ್‌ ಹ್ಯಾರಿಸ್‌ ಕೂಡಾ ರೆಸ್ಟೊರಂಟ್‌ಗೆ ಬಂದಿದ್ದಾರೆ. ಇತ್ತೀಚೆಗೆ ನಡೆದ ಅಪಘಾತದಲ್ಲಿ ವಿದ್ವತ್‌ ಬಲಗಾಲಿಗೆ ಪೆಟ್ಟಾಗಿತ್ತು. ಹೀಗಾಗಿ ವಿದ್ವತ್‌ ಬಲಗಾಲನ್ನು ಚಾಚಿಕೊಂಡು ಕುಳಿತು ಊಟ ಮಾಡುತ್ತಿದ್ದರು. ವಿದ್ವತ್ ಕಾಲು ಚಾಚಿಕೊಂಡು ಕುಳಿತಿರುವುದಕ್ಕೆ ಆಕ್ಷೇಪಿಸಿದ ನಲಪಾಡ್ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ, ವಿದ್ವತ್‌ ಕಾಲಿಗೆ ಗಾಯವಾಗಿದ್ದು ಕಾಲು ಮಡಿಚಲು ಆಗುವುದಿಲ್ಲ ಎಂದು ಹೇಳಿದ್ದಾರೆ.

“ಕಾಲು ಚಾಚಿದ್ದ ವಿಷಯಕ್ಕೇ ಕೋಪಗೊಂಡ ನಲಪಾಡ್‌ ವಿದ್ವತ್‌ಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದರು. ಆದರೆ, ಕ್ಷಮೆ ಕೇಳುವಂಥ ತಪ್ಪನ್ನು ವಿದ್ವತ್ ಮಾಡಿರಲಿಲ್ಲ. ಹೀಗಾಗಿ ಕ್ಷಮೆ ಕೇಳಲು ವಿದ್ವತ್ ನಿರಾಕರಿಸಿದ. ಆದರೆ, ಕ್ಷಮೆ ಕೇಳುವಂತೆ ನಲಪಾಡ್‌ ಒತ್ತಾಯಿಸುತ್ತಲೇ ಇದ್ದರು. ಮಾತಿಗೆ ಮಾತು ಬೆಳೆದು ನಲಪಾಡ್‌ ವಿದ್ವತ್‌ ಮುಖಕ್ಕೆ ಹೊಡೆದರು. ನಲಪಾಡ್‌ ಜತೆಗಿದ್ದವರು ವಿದ್ವತ್‌ನ ಸುತ್ತುವರಿದು ಹೊಡೆಯಲು ಶುರು ಮಾಡಿದರು. ನಾವು ಹತ್ತಿರಕ್ಕೂ ಹೋಗಲು ಸಾಧ್ಯವಾಗದಂತೆ ಅವರು ವಿದ್ವತ್‌ ಸುತ್ತುವರಿದು ಮುಖ, ಮೂಗು, ತಲೆ, ಎದೆ ಭಾಗಕ್ಕೆ ಹೊಡೆದರು. ಬಾಟಲಿಯಿಂದ ತಲೆಗೆ ಹೊಡೆದರು. ವಿದ್ವತ್‌ ಪ್ರಜ್ಞೆ ತಪ್ಪುವವರೆಗೆ ಅವರು ಹೊಡೆಯುತ್ತಲೇ ಇದ್ದರು. ಹಲ್ಲೆ ನಡೆಸುತ್ತಿದ್ದ ವೇಳೆ ನಾವು ಹತ್ತಿರ ಹೋಗಲೂ ನಲಪಾಡ್‌ ಬೆಂಬಲಿಗರು ಬಿಡಲಿಲ್ಲ. ಫರ್ಜಿ ಕೆಫೆಯ ಸಿಬ್ಬಂದಿ ಕೂಡಾ ನಮ್ಮ ನೆರವಿಗೆ ಬರಲಿಲ್ಲ” ಎಂದು ವಿದ್ವತ್‌ ಸ್ನೇಹಿತ ಪ್ರವೀಣ್‌ ದೂರಿದ್ದಾರೆ.

ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದ ವಿದ್ವತ್‌ ಅವರನ್ನು ಅವರ ಸ್ನೇಹಿತರು ಕೂಡಲೆ ಸಮೀಪದ ಮಲ್ಯ ಆಸ್ಪತ್ರೆಗೆ ದಾಖಲಿಸಿದರು. ಮಲ್ಯ ಆಸ್ಪತ್ರೆಗೂ ಬಂದ ನಲಪಾಡ್ ಮತ್ತು ಅವರ ಬೆಂಬಲಿಗರು ಹಲ್ಲೆ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದರು ಎಂದು ವಿದ್ವತ್‌ ಸೋದರ ಸಾತ್ವಿಕ್ ಆರೋಪಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ವಿದ್ವತ್‌ ಮಾತನಾಡುವ ಸ್ಥಿತಿಯಲ್ಲೂ ಇಲ್ಲ. ಅವರ ಮುಖ, ಕಣ್ಣು, ಮೂಗು ಮತ್ತು ತಲೆಗೆ ಗಂಭೀರವಾದ ಗಾಯಗಳಾಗಿವೆ. “ಸಾರಿ ಕೇಳು ಅಂತ ಹೇಳ್ತಿದ್ರು. ನನಗೆ ಮಾತಾಡೋಕೆ ಆಗ್ತಿಲ್ಲ” ಎಂದು ವಿದ್ವತ್‌ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ.

ಶಾಸಕ ಎನ್‌.ಎ. ಹ್ಯಾರಿಸ್‌ ಆಸ್ಪತ್ರೆಗೆ ಬಂದು ಮಗನ ಪರವಾಗಿ ಕ್ಷಮೆ ಕೋರಿದ್ದಾರೆ ಎಂದು ತಿಳಿದು ಬಂದಿದೆ. “ಘಟನೆಯಿಂದ ನನಗೂ ನೋವಾಗಿದೆ. ನನ್ನ ಮಗ ಈಗ ಎಲ್ಲಿದ್ದಾನೆ ಎಂದು ಗೊತ್ತಿಲ್ಲ. ಮಗನಿಗೆ ಬುದ್ಧಿವಾದ ಹೇಳುತ್ತೇನೆ” ಎಂದು ಹ್ಯಾರಿಸ್‌ ಪ್ರತಿಕ್ರಿಯಿಸಿದ್ದಾರೆ.

ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

ನಲಪಾಡ್‌ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಮತ್ತು ಎಎಪಿ ಕಾರ್ಯಕರ್ತರು ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆ ಎದುರು ಭಾನುವಾರ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ನಲಪಾಡ್‌ ರಕ್ಷಣೆಗೆ ಮುಂದಾಗಿದ್ದಾರೆಂದು ಆರೋಪಿಸಿರುವ ಪ್ರತಿಭಟನಾಕಾರರು, “ನಲಪಾಡ್‌ ಎಲ್ಲಿದ್ದಾರೆಂದು ಪೊಲೀಸರಿಗೆ ಗೊತ್ತಿದೆ. ಕೂಡಲೇ ನಲಪಾಡ್‌ ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಘಟನೆ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ, “ಕಾಂಗ್ರೆಸ್‌ನಲ್ಲಿ ಇಂಥ ಗೂಂಡಾಗಿರಿ ಇದ್ದಿದ್ದೇ. ಕಾಂಗ್ರೆಸ್‌ ಅಂದರೆ ಭ್ರಷ್ಟಾಚಾರ, ಕಾಂಗ್ರೆಸ್‌ ಅಂದರೆ ಗೂಂಡಾಗಿರಿ” ಎಂದು ಹೇಳಿದ್ದಾರೆ.

ನಲಪಾಡ್‌ ಮತ್ತಿತರೆ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು. ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಬೌರಿಂಗ್‌ ಇನ್‌ಸ್ಟಿಟ್ಯೂಟ್‌ ಸೆಕ್ಯೂರಿಟಿ ಮೇಲೆ ಹಲ್ಲೆ?

2016ರ ಏಪ್ರಿಲ್‌ನಲ್ಲಿ ನಲಪಾಡ್‌ ಬೌರಿಂಗ್‌ ಇನ್‌ಸ್ಟಿಟ್ಯೂಟ್‌ನ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಪಾರ್ಕಿಂಗ್‌ ವಿಚಾರದಲ್ಲಿ ನಲಪಾಡ್ ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. 2016ರಲ್ಲಿ ಹ್ಯಾರಿಸ್‌ ಅವರ ಮತ್ತೊಬ್ಬ ಪುತ್ರ ಉಮರ್‌ ರಿಚ್ಮಂಡ್‌ ರಸ್ತೆಯ ‘ಪ್ಲಾನ್ ಬಿ’ ಪಬ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪ ಕೇಳಿಬಂದಿತ್ತು. ಆದರೆ, ಪಬ್‌ ಮಾಲೀಕರು ಮತ್ತು ಹಲ್ಲೆಗೊಳಗಾದ ವ್ಯಕ್ತಿ ಗಲಾಟೆಯಲ್ಲಿ ಉಮರ್‌ ಭಾಗಿಯಾಗಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.

“ಹ್ಯಾರಿಸ್‌ ಮತ್ತು ಅವರ ಪುತ್ರರಿಂದ ಶಾಂತಿನಗರದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ” ಎಂದು ಶಾಂತಿನಗರ ಬಿಜೆಪಿ ಮಂಡಲ ಅಧ್ಯಕ್ಷ ವಾಸುದೇವಮೂರ್ತಿ ಆರೋಪಿಸಿದ್ದಾರೆ. “ಶಾಂತಿನಗರದಲ್ಲಿ ಡ್ರಗ್ ಮಾಫಿಯಾ ಹೆಚ್ಚಾಗಿದೆ. ಯಾವರ ರಸ್ತೆಗಳಲ್ಲಿ ನೋಡಿದರೂ ಗಲಾಟೆಗಳು ನಡೆಯುತ್ತಿರುತ್ತವೆ. ಶಾಂತಿನಗರದಲ್ಲಿ ಗೂಂಡಾಗಿರಿಗೆ ಮಿತಿ ಇಲ್ಲದಂತಾಗಿದೆ. ಇದಕ್ಕೆಲ್ಲ ಹ್ಯಾರಿಸ್ ಮತ್ತು ಅವರ ಪುತ್ರರೇ ಕಾರಣ” ಎಂದು ಅವರು ದೂರಿದ್ದಾರೆ.

ಆಡಳಿತ ಪಕ್ಷ ಕಾಂಗ್ರೆಸ್‌ನ ಶಾಸಕರ ಮಗನ ಈ ಗೂಂಡಾಗಿರಿ ಪ್ರಕರಣ ಕಾಂಗ್ರೆಸ್‌ ಹಣಿಯಲು ವಿಪಕ್ಷಗಳಿಗೆ ಅಸ್ತ್ರವಾಗಲಿದೆ. ಚುನಾವಣೆ ಸಮೀಪದಲ್ಲಿರುವುದರಿಂದ ಇದು ಶಾಸಕ ಹ್ಯಾರಿಸ್‌ ವರ್ಚಸ್ಸಿಗೂ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ನಲಪಾಡ್‌ ಕೃತ್ಯವನ್ನು ಖಂಡಿಸಿ ಈಗಾಗಲೇ ಬೀದಿಗಿಳಿದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಈ ಪ್ರಕರಣವನ್ನು ಕಾಂಗ್ರೆಸ್‌ ವಿರುದ್ಧದ ಟೀಕೆಗೆ ಪ್ರಮುಖ ಅಸ್ತ್ರವಾಗಿಸಿಕೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿವೆ.

ಕೊಲೆ ಯತ್ನ ಪ್ರಕರಣ ದಾಖಲಿಸಲು ಸೂಚನೆ’“ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿ ಪ್ರಕರಣ ದಾಖಲಿಸಿಕೊಂಡು ಇಂದು ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಬೇಕು ಎಂದು ಕಬ್ಬನ್ ಪಾರ್ಕ್‌ ಠಾಣೆ ಇನ್‌ಸ್ಪೆಕ್ಟರ್‌ ಮತ್ತು ಎಸಿಪಿಗೆ ಸೂಚನೆ ನೀಡಿದ್ದೇನೆ. ಆರೋಪಿಗಳನ್ನು ಬಂಧಿಸಲು ವಿಫಲವಾದರೆ ಅಮಾನತುಗೊಳಿಸುವ ಎಚ್ಚರಿಕೆ ನೀಡಿದ್ದೇನೆ” ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.