ದೆಹಲಿಯಲ್ಲಿ ಎಂಟು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ: ಎತ್ತ ಸಾಗುತ್ತಿದೆ ‘ವಿಶ್ವಗುರು’?
ಸುದ್ದಿ ಸಾರ

ದೆಹಲಿಯಲ್ಲಿ ಎಂಟು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ: ಎತ್ತ ಸಾಗುತ್ತಿದೆ ‘ವಿಶ್ವಗುರು’?

ರಾಷ್ಟ್ರದ ರಾಜಧಾನಿಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ದೆಹಲಿಯ ಶಾಲಿಮಾರ್ ಬಾಗ್‌ ಪ್ರದೇಶದಲ್ಲಿ 8 ತಿಂಗಳ ಹೆಣ್ಣು ಮಗುವಿನ ಮೇಲೆ 28 ವಯಸ್ಸಿನ ಸೋದರ ಸಂಬಂಧಿಯಿಂದಲೇ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಲೈಂಗಿಕ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ತಾಯಿಯು ತಮ್ಮ ಮಗುವನ್ನು ಸಹೋದರ ಸಂಬಂಧಿ ಮನೆಯಲ್ಲಿ ಬಿಟ್ಟು ಗಂಡನೊಂದಿಗೆ ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಹಸುಗೂಸಿನ ಮೇಲೆ ಅತ್ಯಾಚಾರ ನಡೆದಿದೆ. ಈ ಕುರಿತು ಆರೋಪಿಯೇ ಸ್ವತಃ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಗುವಿನ ತಾಯಿ ಕೆಲಸ ಮುಗಿಸಿ ಮರಳಿ ಮನೆಗೆ ಬಂದಾಗ, ಮಗುವಿನ ಬಟ್ಟೆ ಹಾಗೂ ಹಾಸಿಗೆ ರಕ್ತವಾಗಿದ್ದನ್ನು ನೋಡಿ ಆತಂಕಗೊಂಡಿದ್ದಾರೆ. ತಕ್ಷಣವೇ ಪತಿಗೆ ಕರೆ ಮಾಡಿ ತಿಳಿಸಿ, ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಮೇಲೆ ಬಲತ್ಕಾರ ನಡೆದಿರುವುದು ಖಚಿತ ಎಂದಿದೆ ವೈದ್ಯಕೀಯ ವರದಿ.

“ನಾವು ನಿನ್ನೆಯೇ (ಸೋಮವಾರ) ಆರೋಪಿಗಳನ್ನು ಬಂಧಿಸಿದ್ದೇವೆ. 28 ವರ್ಷ ವಯಸ್ಸಿನ ಸೋದರ ಸಂಬಂಧಿಯೇ ಇದರಲ್ಲಿ ಆರೋಪಿಯಾಗಿದ್ದಾನೆ. ಭಾರತೀಯ ದಂಡ ಸಂಹಿತೆ 376ರ ಅಡಿಯಲ್ಲಿ ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಯ ವಿಭಾಗ 6ರ ಅಡಿಯಲ್ಲಿ ಆರೋಪಿಯ ವಿರುದ್ಧ ಕೇಸು ದಾಖಲಾಗಿದೆ," ಎಂದು ಸುಭಾಷ್ ನಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ಚುವರಿ ಸಬ್‌ ಇನ್ಸ್‌ಪೆಕ್ಟರ್‌ ಪಾರ್ವತಿ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬೇಟಿ ನೀಡಿರುವ ದೆಹಲಿ ಆಯೋಗದ ಮಹಿಳಾ ಮುಖ್ಯಸ್ಥ ಸ್ವಾತಿ ಮಾಲಿವಾಲ್, ಆಸ್ಪತ್ರೆಯಲ್ಲಿ ಮಗುವಿನ ಯೋಗ ಕ್ಷೇಮವನ್ನು ವಿಚಾರಿಸಿದ್ದಾರೆ. ನಂತರ, “ ಈ ಘಟನೆ ಖಂಡನೀಯ. ಇದರ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು ಆದರೆ ಜನರು ದಿನಂಪತ್ರಿಯಂತೆ ದಿನಪತ್ರಿಕೆಗಳ ಪುಟಗಳನ್ನು ತಿರುಗಿಸಿ ನೋಡಿ, ತಮ್ಮ ಜೀವನವನ್ನು ಮುಂದುವರಿಸುತ್ತಾರೆ" ಎಂದು ನಿರಾಶೆಯಿಂದ ಬೇಸರ ವ್ಯಕ್ತಪಡಿಸಿದರು.

“ಆ ಪುಟ್ಟ ಕಂದಮ್ಮನ ಆಕ್ರಂದನ ನನ್ನ ಕಿವಿಯಲ್ಲಿ ಇನ್ನೂ ಮತ್ತೆ ಮತ್ತೆ ಕೇಳಿಸುತ್ತಿದೆ. ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗೆ ಆರು ತಿಂಗಳ ಒಳಗೆ ಮರಣ ದಂಡನೆ ವಿಧಿಸಬೇಕು. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಅತ್ಯಾಚಾರಿಗಳು ಕಾನೂನಿನ ಯಾವುದೇ ಭಯವಿಲ್ಲದೇ ಹೀಗೆ ಮಾಡುತ್ತಿದ್ದಾರೆ. ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳ ಅನುಷ್ಠಾನವು ಸರಿಯಾಗಿ ನಡೆಯುತ್ತಿಲ್ಲ,” ಎಂದು ಸ್ವಾತಿ ಮಾಲಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ’ ಮಾಹಿತಿಯ ಪ್ರಕಾರ, 2015ಕ್ಕೆ ಹೋಲಿಸಿದರೆ, 2016 ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮಕ್ಕಳ ಅತ್ಯಾಚಾರ ಪ್ರಕರಣಗಳು ಶೇ 82 ರಷ್ಟು ಹೆಚ್ಚಾಗಿದೆ. 2016 ರಲ್ಲಿ ಪೊಲೀಸರು 38,947 ಅತ್ಯಾಚಾರ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ.  ಈ ಅಂಕಿ-ಸಂಖ್ಯೆ ಕಳೆದ ವರ್ಷಕ್ಕಿಂತ ಶೇ. 12.4 ರಷ್ಟು ಹೆಚ್ಚಾಗಿದೆ. ದೆಹಲಿಯ ಪಕ್ಕದ ಹರಿಯಾಣ ರಾಜ್ಯದಲ್ಲಿ 10 ಅತ್ಯಾಚಾರಗಳು ನಡೆದಿವೆ. ಮೂರು ವರ್ಷದ ಮಗುವಿನ ಮೇಲೆಯೂ ಅತ್ಯಾಚಾರ ಎಸಗಲಾಗಿತ್ತು ಎನ್ನುತ್ತವೆ ವರದಿಗಳು.