ಸಿಲಿಕಾನ್‌ ಸಿಟಿ ಬಾರಲ್ಲೂ ‘ನೋ ಸ್ಮೋಕಿಂಗ್‌’; ಮದ್ಯದಂಗಡಿಗಳಿಗೆ ತಟ್ಟಿದ ಕೋಟ್ಪಾ ಬಿಸಿ
ಸುದ್ದಿ ಸಾರ

ಸಿಲಿಕಾನ್‌ ಸಿಟಿ ಬಾರಲ್ಲೂ ‘ನೋ ಸ್ಮೋಕಿಂಗ್‌’; ಮದ್ಯದಂಗಡಿಗಳಿಗೆ ತಟ್ಟಿದ ಕೋಟ್ಪಾ ಬಿಸಿ

ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವಂತಿಲ್ಲ. ಹೌದು ಅದು ಕಾನೂನು! ಆದರೆ, ಬಾರ್‌ಗಳು ಕೂಡ ಸಾರ್ವಜನಿಕ ಸ್ಥಳವಾಗಿದ್ದು, ಅಲ್ಲಿಯೂ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂದು ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ

ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವಂತಿಲ್ಲ. ಹೌದು ಅದು ಕಾನೂನು! ಆದರೆ, ಬಾರ್‌ಗಳು ಕೂಡ ಸಾರ್ವಜನಿಕ ಸ್ಥಳವಾಗಿದ್ದು, ಅಲ್ಲಿಯೂ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂದು ಬೆಂಗಳೂರು ದಕ್ಷಿಣ ವಲಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದೀಗ ಬಾರ್‌ಗಳ ವ್ಯಾಪಾರಕ್ಕೆ ಹೊಡೆತ ಕೊಟ್ಟಿರುವುದಲ್ಲದೇ, ಮಾಲೀಕರ ನಿದ್ದೆ ಗೆಡಿಸಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿರುವ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ವಿರುದ್ಧ 'ಸ್ಪೆಷಲ್‌ ಡ್ರೈವ್‌' ಆರಂಭವಾಗಿದೆ. 2017ರ ಸಾಲಿನಲ್ಲಿ ಬರೋಬ್ಬರಿ 6,400 ಪ್ರಕರಣಗಳನ್ನು ಕೋಟ್ಪಾ (ಸಿಗರೇಟ್‌ ಮತ್ತು ಇತರೆ ತಂಬಾಕು ಪದಾರ್ಥಗಳ ಕಾಯ್ದೆ) ಅಡಿಯಲ್ಲಿ ಹಾಕಲಾಗಿದೆ. ಈ ಬಗ್ಗೆ 'ಸಮಾಚಾರ'ಕ್ಕೆ ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಎಸ್‌. ಡಿ. ಶರಣಪ್ಪ, "ದಂಡ ವಿಧಿಸುವ ದೃಷ್ಟಿಯಿಂದ ಈ ವಿಶೇಷ ಕಾರ್ಯಾಚರಣೆಯನ್ನು ನಾವು ಮಾಡುತ್ತಿಲ್ಲ. ಮಾದಕ ವಸ್ತುಗಳ ವ್ಯಸನಕ್ಕೆ ಧೂಮಪಾನವೇ ಮೊದಲ ಹೆಜ್ಜೆಯಾಗಿದೆ. ಯುವ ಜನರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅದನ್ನು ತಡೆಯುವ ಭಾಗವಾಗಿ ನಾವು ಎಲ್ಲಾ ಸಾರ್ವಜನಿಕ ಪ್ರದೇಶಗಳನ್ನೂ ಶಿಸ್ತಿನ ನಿಯಮವನ್ನು ತರಲು ಹೊರಟಿದ್ದೇವೆ. ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಕೂಡ ಇದಕ್ಕೆ ಹೊರತಲ್ಲ. ಬಾರ್‌ಗಳ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರ ಜತೆಗೆ ಧೂಮಪಾನಕ್ಕೆ ಅವಕಾಶ ಕೊಟ್ಟರೆ ಶಿಸ್ತಿನ ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನೂ ಕೊಡಲಾಗಿದೆ," ಎಂದರು.

ಈಗಾಗಲೇ ದಕ್ಷಿಣ ವಿಭಾಗದಲ್ಲಿರುವ ಕನಕಪುರ ರಸ್ತೆಯ ಎಲ್ಲಾ ಬಾರ್‌ಗಳ ವಿರುದ್ಧ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಧೂಮಪಾನಕ್ಕಾಗಿ 'ಸ್ಮೋಕಿಂಗ್‌ ಝೋನ್‌' ಮಾಡಬೇಕು, ಆ ಸ್ಥಳವನ್ನು ಹೊರತುಪಡಿಸಿ ಎಲ್ಲಿಯೂ ಧೂಮಪಾನಕ್ಕೆ ಅವಕಾಶ ನೀಡಬಾರದು ಎಂಬ ಷರತ್ತು ವಿಧಿಸಿದ್ದಾರೆ. ಸಿಗರೇಟುಗಳನ್ನು ಬಿಡಿಬಿಡಿಯಾಗಿ ಮಾರಬಾರದು, 18 ವರ್ಷದೊಳಗಿನ ಮಕ್ಕಳಿಗೆ ನೀಡಬಾರದು, ಶಾಲಾ ಕಾಲೇಜುಗಳ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಬಾರದು ಎಂದು ಕಾನೂನು ಹೇಳುತ್ತದೆ. ಅದೇ ರೀತಿ ಹೋಟೆಲ್‌, ಚಿತ್ರಮಂದಿರ, ಪಾರ್ಕ್‌ ಸೇರಿದಂತೆ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿಯೂ ಧೂಮಪಾನ ಮಾಡುವಂತಿಲ್ಲ. ಆದರೆ ಬಾರ್‌ ಇರುವುದೇ ವ್ಯಸನಗಳಿಗಾಗಿ ಎಂಬ ಮಾತಿದೆಯಾದರೂ, ಅಲ್ಲಿಯೂ ಮಧ್ಯಪಾನ ಹೊರತುಪಡಿಸಿ, ತಂಬಾಕು ಪದಾರ್ಥಗಳ ಸೇವನೆಗೆ ಪೊಲೀಸರು ಬ್ರೇಕ್‌ ಹಾಕಿದ್ದಾರೆ.

"ಕನಕಪುರ ರಸ್ತೆಯಲ್ಲಿರುವ ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಧೂಮಪಾನ ಮಾಡುವವರ ವಿರುದ್ಧ ಮತ್ತು ಬಾರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅದಕ್ಕಾಗಿ ನಾವು ಮುಂಜಾಗೃತಾ ಕ್ರಮವಾಗಿ ಧೂಮಪಾನಕ್ಕೆ ಕಡಿವಾಣ ಹಾಕುವತ್ತ ಕ್ರಮ ಕೈಗೊಂಡಿದ್ದೇವೆ. ಎಲ್ಲಾ ಗ್ರಾಹಕರಿಗೂ ಮನವಿ ಮಾಡುತ್ತಿದ್ದೇವೆ. ಆದರೆ ಯಾರೂ ಕೇಳುವುದಿಲ್ಲ. ಧೂಮಪಾನ ಮಾಡದೇ ಮಧ್ಯಪಾನ ಮಾಡುವ ಮಂದಿ ಬೆರಳೆಣಿಕೆಯವರು. ಇದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳಬಹುದು. ಪ್ರತ್ಯೇಕ ಸ್ಮೋಕಿಂಗ್‌ ಝೋನ್‌ ನಿರ್ಮಿಸುವುದಕ್ಕೂ ಚಿಂತಿಸಿದ್ದೇವೆ," ಎನ್ನುತ್ತಾರೆ ಜೆ. ಪಿ. ನಗರದ ತ್ರಿವೇಣಿ ಬಾರಿನಲ್ಲಿ ಕೆಲಸ ಮಾಡುವ ಉಮೇಶ್‌.ಬೆಂಗಳೂರು ಬಾರ್‌ ಅಸೋಸಿಯೇಷನ್‌ ಸದಸ್ಯ ಲೋಕೇಶ್‌ 'ಸಮಾಚಾರ'ದ ಜತೆ ಮಾತನಾಡಿ, ಸ್ಮೋಕಿಂಗ್‌ ಝೋನ್‌ ಮಾಡಿಕೊಳ್ಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎಂದರು. ಮುಂದುವರೆದ ಅವರು, "ಪ್ರತ್ಯೇಕ ಸ್ಮೋಕಿಂಗ್‌ ಝೋನ್‌ ಮಾಡಿಕೊಳ್ಳಬೇಕು ಎಂದು ಕೋಟ್ಪಾ ಕಾಯ್ದೆ ಹೇಳುತ್ತದೆ. ಅದನ್ನು ಜಾರಿಗೆ ತರುವುದು ನಮ್ಮ ಕರ್ತವ್ಯ. ಬಾರ್‌ ಅಸೋಸಿಯೇಷನ್‌ ವತಿಯಿಂದಲೂ ಬಾರ್‌ಗಳಿಗೆ ಇದನ್ನೇ ಹೇಳುತ್ತೇವೆ," ಎಂದರು.

ಏನಿದು ಕೋಟ್ಪಾ?:

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥಗಳ ಸೇವನೆಯನ್ನು ತಡೆಗಟ್ಟುವ ಸಲುವಾಗಿ 2003ರಲ್ಲಿ ಜಾರಿಗೆ ಬಂದ ಕಾಯ್ದೆ. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ವ್ಯಸನ ಮಾಡಿದರೆ, ಪೊಲೀಸರು 200 ರೂ.ಗಳವರೆಗೆ ದಂಡವನ್ನು ವಿಧಿಸಬಹುದು. ಕಾಯ್ದೆಯ ಅನ್ವಯ ತಂಬಾಕು ಪದಾರ್ಥಗಳ ಜಾಹೀರಾತಿಗೂ ನಿರ್ಬಂಧವಿದೆ. ಸಿಗರೇಟನ್ನು ಸಾರ್ವಜನಿಕ ಸ್ಥಳಗಳಾದ ಹೋಟೆಲ್‌ಗಳು, ಏರ್‌ಪೋರ್ಟ್‌, ಆಡಿಟೋರಿಯಮ್‌, ಚಿತ್ರಮಂದಿರ, ಆಸ್ಪತ್ರೆ, ಸಾರ್ವಜನಿಕ ಸಾರಿಗೆ, ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ಬಾರ್‌, ಪಬ್‌, ಸರಕಾರೀ ಮತ್ತು ಖಾಸಗಿ ಕಚೇರಿ, ಲೈಬ್ರರಿ, ಕೋರ್ಟ್‌, ಪೋಸ್ಟ್‌ ಆಫೀಸ್‌, ಮಾರುಕಟ್ಟೆ, ಶಾಪಿಂಗ್‌ ಮಾಲ್‌, ಕ್ಯಾಂಟೀನ್‌, ಬಾಂಕ್ವೆಟ್‌ ಹಾಲ್‌, ಡಿಸ್ಕೋಥೆಕ್‌, ಕಾಫೀ ಹೌಸ್‌, ಶಾಲಾ ಕಾಲೇಜು, ಪಾರ್ಕ್‌ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಮೋಕಿಂಗ್‌ ಮಾಡುವಂತಿಲ್ಲ.

ಈ ಮೇಲಿನ ಯಾವುದಾದರೂ ಸ್ಥಳದಲ್ಲಿ ಸ್ಮೋಕಿಂಗ್‌ ಮಾಡುವುದಾದರೆ ವಿಶೇಷ ಸ್ಮೋಕಿಂಗ್‌ ಝೋನ್‌ ನಿರ್ಮಿಸಬೇಕು. ಅದರ ಜತೆಗೆ ಕೋಟ್ಪಾ ಕಾಯ್ದೆಯಲ್ಲಿ ಸಂಗ್ರವಾಗುವ ದಂಡವನ್ನು ಕ್ಯಾನ್ಸರ್‌ ಪೀಡಿತರ ಕಲ್ಯಾಣಕ್ಕಾಗಿಯೇ ಮೀಸಲಿಡಲಾಗುತ್ತದೆ. ತಂಬಾಕು ವ್ಯಸನ ಮಾಡಿ ಕ್ಯಾನ್ಸರ್‌ನಿಂದ ಬಳಲುವವರ ಆರೋಗ್ಯ ಚಿಕಿತ್ಸೆಗೆ ಬಳಸುವ ಉದ್ದೇಶವನ್ನು ಕೋಟ್ಪಾ ಕಾಯ್ದೆ ಹೊಂದಿದೆ.ಪಾನ ಪ್ರಿಯರಿಗೆ ಬಾರ್‌ಗಳಲ್ಲಿ ಇದರಿಂದ ಕೊಂಚ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದರೂ, ಕೋಟ್ಪಾ ಕಾಯ್ದೆಯ ಅನುಷ್ಠಾನದಿಂದ ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂಬುದು ಪೊಲೀಸರ ಅಭಿಪ್ರಾಯವಾಗಿದೆ. ಪ್ರತ್ಯೇಕ ಸ್ಮೋಕಿಂಗ್‌ ಝೋನ್‌ ನಿರ್ಮಿಸದಿದ್ದರೆ, ಬಾರ್‌ಗಳ ಮಾಲೀಕರು ಪೊಲೀಸರ ದಂಡ ಭರಿಸಬೇಕಿದೆ. ಆದರೆ ಎಷ್ಟು ದಿನ ಇದು ಜಾರಿಯಲ್ಲಿರುತ್ತೆ ಎಂಬುದನ್ನೂ ಗಮನಿಸಬೇಕಿದೆ.