samachara
www.samachara.com
ಸೌಹಾರ್ದ ಕರ್ನಾಟಕ ನಿರ್ಮಾಣಕ್ಕಾಗಿ ನಾಳೆ ರಾಜ್ಯಾದ್ಯಂತ 'ಮಾನವ ಸರಪಳಿ'
ಸುದ್ದಿ ಸಾರ

ಸೌಹಾರ್ದ ಕರ್ನಾಟಕ ನಿರ್ಮಾಣಕ್ಕಾಗಿ ನಾಳೆ ರಾಜ್ಯಾದ್ಯಂತ 'ಮಾನವ ಸರಪಳಿ'

ಕೋಮು ಸೌಹಾರ್ದತೆ ಕದಡುವ ಹೇಳಿಕೆಗಳು ಸಾರ್ವಜನಿಕವಾಗಿ ಹೆಚ್ಚುತ್ತಿರುವ ಇವತ್ತಿನ ಸಂದರ್ಭದಲ್ಲಿ 'ಮನುಜ ಕುಲಂ, ತಾನೊಂದೆ ವಲಂ' ಎಂಬ ವಿಚಾರವನ್ನು ಸಾರಲು ಮಾನವ ಸರಪಳಿ ರಚಿಸಲಾಗುತ್ತಿದೆ. ಜನವರಿ 30ರಂದು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಮಾನವ ಸರಪಳಿ ನಿರ್ಮಾಣಕ್ಕೆ ಪ್ರಗತಿಪರ ಸಂಘಟನೆಗಳು ಮುಂದಾಗಿದ್ದು, 'ಸೌಹಾರ್ದ ಕರ್ನಾಟಕ ವೇದಿಕೆ' ಇದರ ಹೊಣೆ ಹೊತ್ತಿದೆ. 

ಡಿವೈಎಫ್‌ಐ, ಎಸ್‌ಎಫ್‌ಐ, ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳು ಈ ಕಾರ್ಯಕ್ಕೆ ಮುಂದಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಮಾನವ ಸರಪಳಿಯಲ್ಲಿ ಭಾಗಿಯಾಗಲಿದ್ದಾರೆ. "ದೇಶದಲ್ಲಿ ಒಂದೆಡೆ ಬಲಪಂಥೀಯ ಸಂಘಟನೆಗಳು ಮತ್ತದೇ ಧರ್ಮಾಧಾರಿತ ರಾಜಕಾರಣಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆಯಂಥ ನಾಯಕರು ಕೋಮು ದ್ವೇಷ ಬಿತ್ತುವ ಮಾತುಗಳನ್ನು ಆಗಾಗ ಆಡುತ್ತಲೇ ಇದ್ದಾರೆ. ಸಂವಿಧಾನವನ್ನು ಬದಲಿಸುವ ಸಲುವಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವ ಮೂಲಕ ಹೆಗಡೆ ಇತ್ತೀಚೆಗೆ ಬಿಜೆಪಿ ಪಕ್ಷದ ಮುಖಂಡರನ್ನೂ ಮುಜುಗರಕ್ಕೆ ಈಡುಮಾಡಿದ್ದರು. ಹೀಗಿರುವಾಗ ಜನರಲ್ಲಿ ಭಾರತದ ಮೂಲ ಸೌಹಾರ್ದತೆಯನ್ನು ತಿಳಿಸುವ ಮತ್ತು ಜನರಲ್ಲಿ ಧರ್ಮಾತೀತವಾಗಿ ಒಗ್ಗಟ್ಟು ಮೂಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ. ಈ ಕಾರಣಕ್ಕಾಗಿಯೇ ಸೌಹಾರ್ದ ಕರ್ನಾಟಕಕ್ಕಾಗಿ ಮಾನವ ಸರಪಳಿ ನಿರ್ಮಾಣಕ್ಕೆ ವೇದಿಕೆ ಮುಂದಾಗಿದೆ,'' ಎನ್ನುತ್ತಾರೆ ಆಯೋಜಕರಲ್ಲಿ ಒಬ್ಬರಾದ ಕೆ. ಎಸ್. ವಿಮಲಾ.

"ಭಾರತೀಯ ಪ್ರಜೆಗಳಾದ ನಾವು, ಸೌಹಾರ್ದತೆಗಾಗಿ ಮಾನವ ಸರಪಳಿಯನ್ನು ರಚಿಸುವ ಮೂಲಕ ಸಾವಿರಾರು ವರುಷಗಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಸ್ಮರಿಸುತ್ತೇವೆ. ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಜನತೆಯ ಸಾರ್ವಭೌಮತ್ವ ವನ್ನು ಮತ್ತು ಈ ಉದಾತ್ತ ಮೌಲ್ಯಗಳನ್ನು ಹೊಂದಿರುವ ನಮ್ಮ ಸಂವಿಧಾನದ ಆಶಯಗಳನ್ನು ದೃಢವಾಗಿ ಪ್ರತಿಪಾದಿಸುತ್ತೇವೆ. ಶಾಂತಿ, ಸ್ನೇಹ, ಸೌಹಾರ್ದತೆ, ಸಹಬಾಳ್ಬೆಗೆ ಬದ್ದರಾಗಿ ಕೋಮು ಸಾಮರಸ್ಯ ವನ್ನು ನಾವು ಕಾಪಾಡಿಕೊಂಡು ಬರುತ್ತೇವೆ. ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಈ ದಿನದಂದು ಕೋಮುವಾದ, ಮತೀಯ ಮೂಲಭೂತವಾದ, ಎಲ್ಲಾ ಬಗೆಯ ಭಯೋತ್ಪಾದನೆಯನ್ನು ಹಿಮ್ಮೆಟ್ಟಿಸಲು ಪಣ ತೊಡುತ್ತೇವೆ. 'ಸರ್ವ ಜನಾಂಗದ ಶಾಂತಿಯ ತೋಟ'ವಾಗಿರುವ ಕರ್ನಾಟಕ ದ ವೈವಿಧ್ಯತೆಯ ಸಂಸ್ಕೃತಿಯನ್ನು ಸಂರಕ್ಷಸುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸುತ್ತಿದ್ದೇವೆ," ಎನ್ನುತ್ತವೆ ಸೌಹಾರ್ದ ಕರ್ನಾಟಕ ವೇದಿಕೆಯ ಸಿದ್ಧತಾ ಸಮಿತಿ.

ಸೌಹಾರ್ದ ವೇದಿಕೆಯ ಈ ಹೆಜ್ಜೆಗೆ ಹಲವು ಗಣ್ಯರು, ರಾಜಕಾರಣಿಗಳು, ಪ್ರಗತಿಪರ ಚಿಂತಕರು ಬೆಂಬಲ ಸೂಚಿಸಿದ್ದಾರೆ. ಜನವಾದಿ ಮಹಿಳಾ ಸಂಘಟನೆ, ಸಿಪಿಐಎಂ, ಹಲವು ಮುಸಲ್ಮಾನ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಕೈಜೋಡಿಸಿವೆ. ಇತ್ತೀಚೆಗೆ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಟ ಪ್ರಕಾಶ್‌ ರೈ ಕೂಡ ಮೈಸೂರಿನಲ್ಲಿ ಮಾನವ ಸರಪಳಿಯಲ್ಲಿ ಭಾಗಿಯಾಗಲಿದ್ದಾರೆ. ಅದೇ ರೀತಿ ಹಲವು ಸಾಮಾಜಿಕ ಕಾರ್ಯಕರ್ತರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾನವ ಸರಪಳಿಯಲ್ಲಿ ಭಾಗಿಯಾಗಲಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ಸರ್ವಜ್ಞ, ರಾಷ್ಟ್ರಕವಿ ಕುವೆಂಪು ಅವರ ತತ್ವಗಳನ್ನು ನೆನಪಿಸುವ ನಿಟ್ಟಿನಲ್ಲಿ ಮಾನವ ಸರಪಳಿ ಕೆಲಸ ಮಾಡಲಿದೆ.

ರಾಜ್ಯದ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ಮಾನವ ಸರಪಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. "ನಾಡಿನ ಶಾಂತಿ, ಸಾಮರಸ್ಯಕ್ಕಾಗಿ ನಡೆಸುತ್ತಿರುವ ಮಾನವ ಸರಪಳಿಯಲ್ಲಿ ಭಾಗವಹಿಸುವುದು ನನ್ನ ಜವಾಬ್ದಾರಿ. ನಾನು ಹೊಸೂರು ರಸ್ತೆಯ ಬೊಮ್ಮನಹಳ್ಳಿ ಬಳಿ ಮಾನವ ಸರಪಳಿಯಲ್ಲಿ ಕೊಂಡಿಯಾಗಲು ಬಯಸಿದ್ದೇನೆ. ಹಾಗೆಯೇ ಸೌಹಾರ್ದತೆ ಬಯಸುವ ಎಲ್ಲರೂ ಭಾಗವಹಿಸಲು ಕೋರುತ್ತೇನೆ," ಎಂಬುದಾಗಿ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.