ಬಜರಂಗದಳದ ಮಾಜಿ ಕಾರ್ಯಕರ್ತ ದೀಪಕ್ ಹತ್ಯೆ: ಕಾಟಿಪಳ್ಳದ ಸುತ್ತಮುತ್ತ ಪರಿಸ್ಥಿತಿ ಉದ್ವಿಘ್ನ
ಸುದ್ದಿ ಸಾರ

ಬಜರಂಗದಳದ ಮಾಜಿ ಕಾರ್ಯಕರ್ತ ದೀಪಕ್ ಹತ್ಯೆ: ಕಾಟಿಪಳ್ಳದ ಸುತ್ತಮುತ್ತ ಪರಿಸ್ಥಿತಿ ಉದ್ವಿಘ್ನ

ದಕ್ಷಿಣದ ಕನ್ನಡ ಜಿಲ್ಲೆಯ ಕಾಟಿಪಾಳ್ಳ ಬಳಿ ಹಾಡಹಗಲೇ ನಡೆದ ಮಾರಕಾಸ್ತ್ರಗಳ ದಾಳಿಗೆ ಬಜರಂಗ ದಳದ ಕಾರ್ಯಕರ್ತರೊಬ್ಬರು ಬಲಿಯಾಗಿದ್ದಾರೆ. ದೀಪಕ್ ಮೃತಪಟ್ಟ ವ್ಯಕ್ತಿ. ಕೈಕಂಬದ ನಿವಾಸಿಯಾಗಿದ್ದ ಇವರ, ಮೊಬೈಲ್ ಕಂಪನಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಮೊದಲು ಬಜರಂಗದಳ ಕಾರ್ಯಕರ್ತರಾಗಿದ್ದು, ಸದ್ಯ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.

“ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಮೋಟಾರ್ ಬೈಕಿನಲ್ಲಿ ತೆರಳುತ್ತಿದ್ದ ದೀಪಕ್‌ರನ್ನು ಕಾರಿನಲ್ಲಿ ಬಂದ ನಾಲ್ಕು ಜನ ಮುಸುಕುದಾರಿಗಳು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳನ್ನು ಹೊಂದಿದ್ದ ಅವರು ದೀಪಕ್ ಮೇಲೆ ದಾಳಿ ಮಾಡಿದ್ದಾರೆ. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ದೀಪಕ್ ಯಶಸ್ವಿಯಾಗಲಿಲ್ಲ, ಮಾರಕಾಸ್ತ್ರಗಳ ದಾಳಿ ನಡೆದ ನಂತರದಲ್ಲಿ ರಕ್ತದ ಮಡುವಿನಲ್ಲಿ ಅವರು ಬಿದ್ದಿದ್ದರು ” ಎಂದು ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ದೀಪಕ್‌ರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ವೈದ್ಯಕೀಯ ಪರೀಕ್ಷೆಗೆ ಮುನ್ನವೇ ದೀಪಕ್ ಅಸುನೀಗಿದರು.ಈಗಾಗಲೇ ಕಾಟಿಪಾಳ್ಳ ಸುತ್ತಮುತ್ತ ಪರಿಸ್ಥಿತಿ ಉದ್ವಿಘ್ನವಾಗಿದ್ದು, ಗುರುವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ಒತ್ತಾಯ ಪೂರ್ವಕವಾಗಿ ಮುಚ್ಚಿಸಲಾಗಿದೆ. ಸೂರತ್ಕಲ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ."ಈಗಾಗಲೇ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಶಂಕಿತನ ಪೂರ್ಣ ವಿಚಾರಣೆಯ ನಂತರ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ," ಎಂದು ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಕಮಲ್ ಪಂಥ್ 'ಸಮಾಚಾರ'ಕ್ಕೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮೂಲದ ಸುದ್ದಿತಾಣಗಳು ನಾಲ್ವರ ಬಂಧನವಾಗಿ ಎಂದು ಸುದ್ದಿ ಪ್ರಕಟಿಸಿವೆ.

ನೈತಿಕ ಪೊಲೀಸ್ ಗಿರಿ:

ಈ ಮೊದಲು ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು, ವಿದ್ಯಾರ್ಥಿನಿಯರ ಮೇಲೆ ಹಿಂದೂ ಸಂಘಟನೆಯ ತಂಡವೊಂದು ಪೊಲೀಸರ ಎದುರೇ ಹಲ್ಲೆ ನಡೆಸಿರುವ ಪ್ರಕರಣವೊಂದು ಬುಧವಾರ ಬೆಳಕಿಗೆ ಬಂದಿತ್ತು.ಇಬ್ಬರು ವಿದ್ಯಾರ್ಥಿನಿಯರು ಒಬ್ಬ ಮುಸ್ಲಿಂ ವಿದ್ಯಾರ್ಥಿಯೊಂದಿಗೆ ಪಿಲಿಕುಳ ನಿಸರ್ಗಧಾಮದ ಮಾನಸ ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್‌ಗೆ ತೆರಳಿದ್ದರು. ಈ ಮಾಹಿತಿಯನ್ನು ಪಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಜೊತೆಯಲ್ಲಿಯೇ ಆಗಮಿಸಿದ್ದಾರೆ.

ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಅಮ್ಯೂಸ್ ಮೆಂಟ್ ವಾಟರ್ ಪಾರ್ಕ್ ನಿಂದ ಹೊರಗೆ ಕರೆದುಕೊಂಡು ಬಂದ ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಎದುರೇ ಹಿಂದೂ ಯುವತಿಗೆ ಹೊಡೆದಿದ್ದಾರೆ. ಇದು ವಿಡಿಯೋದಲ್ಲಿಯೂ ಕೂಡ ದಾಖಲಾಗಿತ್ತು.ಕೊನೆಗೆ ಪೊಲೀಸರೇ ವಿದ್ಯಾರ್ಥಿಗಳನ್ನು ರಕ್ಷಿಸಿ ವಿದ್ಯಾರ್ಥಿನಿಯರ ಸಮೇತ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ವಿದ್ಯಾರ್ಥಿಗಳ ಮೇಲೆ ನಡೆದಿರುವ ಈ ನೈತಿಕ ಪೊಲೀಸ್‌ಗಿರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದರು.ದಕ್ಷಿಣ ಕನ್ನಡದ ಉಭಯ ಜಿಲ್ಲೆಗಳು ಕೋಮುವಾದದ ಕುಲುಮೆಗಳಾಗಿವೆ ಎಂದು ವರದಿಗಳು ಹೇಳುತ್ತವೆ. ಇಲ್ಲಿ ನಡೆಯುವ ಹತ್ಯೆಗಳು, ಪ್ರತಿ ಹತ್ಯೆಗಳ ಸರಣಿ ಸಾಮಾನ್ಯ ಜನಜೀವನಕ್ಕೆ ಸಂಕಷ್ಟವನ್ನು ತಂದೊಡ್ಡುತ್ತಿವೆ. ಈ ಹಿಂದೆ, ಇಲ್ಲಿ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ದೀಪಕ್ ಕೊಲೆ ಕೂಡ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸುವ ಮೂಲಕ ಸಂಭಾವ್ಯ ಸಂಘರ್ಷಕ್ಕೆ ತೆರೆ ಎಳೆದಿದ್ದಾರೆ. ಹೀಗಿದ್ದೂ, ಗುರುವಾರದ ಬೆಳವಣಿಗೆಗಳನ್ನು ಗಮನಿಸಬೇಕಿದೆ.