ಕೊರೆಗಾಂವ್‌ ಸಂಭ್ರಮಾಚರಣೆ ಮೇಲೆ ದಾಳಿ ಹಿನ್ನೆಲೆ: ದಲಿತ ಸಂಘಟನೆಗಳ ಬಂದ್ ಯಶಸ್ವಿ
ಸುದ್ದಿ ಸಾರ

ಕೊರೆಗಾಂವ್‌ ಸಂಭ್ರಮಾಚರಣೆ ಮೇಲೆ ದಾಳಿ ಹಿನ್ನೆಲೆ: ದಲಿತ ಸಂಘಟನೆಗಳ ಬಂದ್ ಯಶಸ್ವಿ

ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರ ಖಂಡಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಮಹಾರಾಷ್ಟ್ರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಮುಂಬೈ ಸೇರಿದಂತೆ ಮಹಾರಾಷ್ಟ್ರದ ಬಹುತೇಕ  ನಗರಗಳು ಸಂಪೂರ್ಣ ಸ್ತಬ್ಧವಾಗಿದ್ದವು.

ಸೋಮವಾರ ಕೋರೆಗಾಂವ್‍ನಲ್ಲಿ ನಡೆಯುತ್ತಿದ್ದ ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವ ಆಚರಣೆ ವೇಳೆ ಘರ್ಷಣೆ ನಡೆದಿತ್ತು. ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಭೀಮಾ-ಕೋರೆಗಾಂವ್ ವಿಜಯೋತ್ಸವವನ್ನ ಸಂಭ್ರಮಿಸಲು ಕೋರೆಗಾಂವ್‍ನಲ್ಲಿ  ಸಾವಿರಾರು ದಲಿತರು ಸೇರಿದ್ದರು. ಈ ವೇಳೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದರು. ಪುಣೆಯಿಂದ 30ಕಿಲೋಮೀಟರ್ ದೂರದಲ್ಲಿರುವ ಕೋರೆಗಾಂವ್‍ಗೆ ತೆರಳುತ್ತಿದ್ದ ವಾಹನಗಳ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಲ್ಲು ತೂರಿದ್ದರು.  ಕೇಸರಿ ಬಾವುಟ ಹಿಡಿದಿದ್ದ ಜನರ ಗುಂಪು, ದಲಿತ ಸಮುದಾಯದ ಮೇಲೆ ದಾಳಿ ನಡೆಸಿತ್ತು. ಮಿಲಿಂದ್ ಏಕಬೋಟೆ ನೇತೃತ್ವದ ಹಿಂದೂ ಏಕ್ತಾ ಅಘಡಿ ಹಾಗೂ ಸಂಭಾಜಿ ಭಿಡೆ ನೇತೃತ್ವದ ಶಿವಾಜಿ ಪ್ರತಿಷ್ಠಾನದ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದರು ಅಂತಾ ಆರೋಪ ಕೇಳಿ ಬಂದಿತ್ತು. ಅಲ್ದೆ, ಸಂಭಾಜಿ ಹಾಗೂ ಮಿಲಿಂದ್ ಏಕಬೋಟೆ ದಲಿತ ಸಮುದಾಯದ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ್ದರು ಎನ್ನಲಾಗಿತ್ತು. ಹಿಂಸಾಚಾರ ಖಂಡಿಸಿ ನಿನ್ನೆಯೇ ಮುಂಬೈನಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಉದ್ರಿಕ್ತ ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ, ಬುಧವಾರ ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್‍ಗೆ ರಾಜ್ಯದ ಬಹುತೇಕ ದಲಿತ ಹಾಗೂ ಎಡಪಂಥೀಯ ಸಂಘಟನೆಗಳು ಬೆಂಬಲ ನೀಡಿದ್ದವು. ಬೆಳಗ್ಗೆನಿಂದಲೇ ಮುಂಬೈ ನಗರದ ಬಹುತೇಕ ರಸ್ತೆಗಳನ್ನ ಬಂದ್ ಮಾಡಿದ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮಹಾರಾಷ್ಟ್ರದ ಇತರೆ ಪ್ರಮುಖ ನಗರಗಳಾದ ಪುಣೆ, ನಾಗ್ಪುರ, ಸಾಂಗ್ಲಿ, ಮಿರಾಜ್ ಹಾಗೂ ಔರಂಗಾಬಾದ್ ಸೇರಿದಂತೆ ರಾಜ್ಯಾದ್ಯಾಂತ ಪ್ರತಿಭಟನೆಗಳು ನಡೆದವು. ಬೆಳಗ್ಗಿನಿಂದ್ಲೇ ಮುಂಬೈ ನಗರದಲ್ಲಿ ಜಮಾಯಿಸಿದ ದಲಿತಪರ ಸಂಘಟನೆಗಳ ಕಾರ್ಯಕರ್ತರು ಕೋರೆಗಾಂವ್‍ನಲ್ಲಿ ನಡೆದ ಹಿಂಸಾಚಾರ ಖಂಡಿಸಿ ಘೋಷಣೆ ಕೂಗಿದ್ರು. ಮುಂಬೈನ ಬಂದ್ರಾ ನಗರ ಸಂಪೂರ್ಣ ಬಂದ್ ಆಗಿತ್ತು. ಬಸ್, ಮೆಟ್ರೋ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿತ್ತು. ಶಾಲೆ, ಸರ್ಕಾರಿ ಕಚೇರಿಗಳು ಹಾಗೂ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಇನ್ನು ಸಂಭಾವ್ಯ ಹಿಂಸಾಚಾರ ತಡೆಹಿಡಿಯಲು ಮಹರಾಷ್ಟ್ರ ಸರ್ಕಾರ, ಮುಂಬೈ ನಗರದಲ್ಲಿ 21 ಸಾವಿರ ಪೊಲೀಸರನ್ನ ನಿಯೋಜಿಸಿತ್ತು. ಅಲ್ಲಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಪೊಲೀಸರು 100 ಕ್ಕೂ ಹೆಚ್ಚು ಪ್ರತಿಭಟನಾಕಾರನ್ನ ವಶಕ್ಕೆ ಪಡೆದ್ರು. ಔರಂಗಾಬಾದ್‍ನಲ್ಲಿ ಸಣ್ಣಪುಟ್ಟ ಹಿಂಸಾಚಾರದ ಘಟನೆಗಳು ನಡೆದಿದ್ದರಿಂದ ಪೊಲೀಸರು ಕೆಲವರನ್ನ ವಶಕ್ಕೆ ಪಡೆದರು.

ಸಂಜೆ 4.30 ರ ಸುಮಾರಿಗೆ ಪ್ರಕಾಶ್ ಅಂಬೇಡ್ಕರ್ ಬಂದ್ ಹಿಂಪಡೆದರು. ಬಳಿಕ ಮುಂಬೈನಲ್ಲಿ ಬಸ್ ಹಾಗೂ ಮೆಟ್ರೋ ಸಂಚಾರ ಪುನ:ರಾರಂಭಗೊಂಡವು. ಈ ವೇಳೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, "ಯಾಕುಬ್ ಮೆನನ್‍ಗೆ ಆದ ರೀತಿಯಲ್ಲೇ ಮಿಲಿಂದ್ ಏಕಬೋಟೆ ಹಾಗೂ ಸಂಭಾಜಿ ಭಿಡೆಗೂ ಶಿಕ್ಷೆಯಾಗ್ಬೇಕು ಅಂತಾ ಆಗ್ರಹಿಸಿದರು."

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್, "ರಾಜ್ಯದಲ್ಲಿ ನಡೆದಿರೋ ಹಿಂಸಾಚಾರ ಸಂಬಂಧ ಸೂಕ್ತ ತನಿಖೆ ನಡೆಸುತ್ತೇವೆ ಹಾಗೂ ಹಿಂಸಾಚಾರ ನಡೆದ ಪ್ರದೇಶಗಳ ಸಿಸಿಟವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದೇವೆ," ಎಂದು ಹೇಳಿದ್ದಾರೆ.

ಭೀಮಾ-ಕೋರೆಗಾಂವ್ ವಿಜಯೋತ್ಸವದ ವೇಳೆ ಹಿಂದೂಪರ ಸಂಘಟನೆಗಳು ನಡೆಸಿದ ಹಿಂಸಾಚಾರಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ದೆಹಲಿಯಲ್ಲೂ ಸಹ ವಿದ್ಯಾರ್ಥಿಗಳು ಹಿಂದೂಪರ ಸಂಘಟನೆಗಳು ನಡೆಸಿದ ಕೃತ್ಯವನ್ನ ಖಂಡಿಸಿದ್ದಾರೆ. ಬೆಂಗಳೂರಿನ ಟೌನ್‍ಹಾಲ್ ಮುಂದೆಯೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಗೆ ಕರೆ ನೀಡಿವೆ. ದಲಿತರ ಅಸ್ಮಿತೆಯ ಪ್ರತೀಕವಾಗಿರುವ ಕೋರೆಗಾಂವ್ ವಿಜಯೋತ್ಸವದ ವೇಳೆ ನಡೆದ ಹಿಂಸಾಚಾರ ಮುಂದಿನ ದಿನಗಳಲ್ಲಿ ಸೈದ್ದಾಂತಿಕ ದೃವೀಕರಣವನ್ನು ಹೆಚ್ಚಿಸುವ ನಿರೀಕ್ಷೆ ಇದೆ.