samachara
www.samachara.com
'ಹೆಗಡೆ ಹೇಳಿಕೆ ವಿವಾದ': ಸಂಸತ್‌ನಲ್ಲಿ ಗದ್ದಲ; ಸಾಗರದಲ್ಲಿ ದೂರು ದಾಖಲು
ಸುದ್ದಿ ಸಾರ

'ಹೆಗಡೆ ಹೇಳಿಕೆ ವಿವಾದ': ಸಂಸತ್‌ನಲ್ಲಿ ಗದ್ದಲ; ಸಾಗರದಲ್ಲಿ ದೂರು ದಾಖಲು

ಕೇಂದ್ರ

ಕೌಶಲ್ಯಾಭಿವೃದ್ಧಿ ಇಲಾಖೆ ರಾಜ್ಯ ಸಚಿವ ಅನಂತ ಕುಮಾರ್ ಹೆಗಡೆ ಬಾಲಿಶ ಹೇಳಿಕೆ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿದೆ.

'ಸಂವಿಧಾನವನ್ನು ಬದಲಿಸುವ ನಾವು ಬಂದಿದ್ದೇವೆ' ಎಂಬ ಹೆಗಡೆ ಹೇಳಿಕೆ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರಮಟ್ಟದ ಸುದ್ದಿ ಮಾಧ್ಯಮಗಳ ಗಮನ ಸೆಳೆದಿತ್ತು. ಬುಧವಾರ ಲೋಕಸಭೆ, ರಾಜ್ಯಸಭೆ ಎರಡರಲ್ಲೂ ಹೆಗಡೆಯನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದವು.

ಬೆಳಗ್ಗೆ ಸಂಸತ್ ಅಧಿವೇಶನ ಆರಂಭವಾಗುತ್ತಿದ್ದಂತೆ, ಅನಂತ್ ಕುಮಾರ್ ಹೆಗಡೆ ಹೇಳಿಕೆ ಚರ್ಚೆಗೆ ನಾಂದಿ ಹಾಡಿತು. ಈ ವಿಚಾರದಲ್ಲಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದು ಕಲಾಪವು ಒಂದು ಘಂಟೆಯಷ್ಟು ಕಾಲ ಮುಂದೂಡಲ್ಪಟ್ಟಿತು. "ಸಂವಿಧಾನವನ್ನು ಕೀಳಾಗಿ ಕಂಡಿರುವ ಕೇಂದ್ರ ಸಚಿವ ಹೆಗಡೆಯನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು," ಎಂಬ ವಿಪಕ್ಷಗಳ ಆಗ್ರಹಕ್ಕೆ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ವಿಜಯ್ ಗೊಯಲ್ ಮಾತನಾಡಿ "ಹೆಗಡೆ ಹೇಳಿಕೆಗೂ, ನಮಗೂ ಯಾವುದೇ ಸಂಬಂಧವಿಲ್ಲ," ಎಂದು ಸಮರ್ಥಿಸಿಕೊಂಡರು.

ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಮಾತನಾಡಿ, "ಒಬ್ಬ ವ್ಯಕ್ತಿಯಾಗಿ ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲವೆಂದಾದರೆ, ಆ ವ್ಯಕ್ತಿಗೆ ಸಂಸತ್ ಸದಸ್ಯನಾಗಿ ಮುಂದುವರಿಯಲು ಯಾವುದೇ ಹಕ್ಕಿಲ್ಲ,’’ ಎಂದು ಗುಡುಗಿದರು.

ಮತ್ತೆ ಕಲಾಪ ಆರಂಭವಾದಾಗ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, "ಸಚಿವರು ಜಾತ್ಯತೀತ ಮತ್ತು ಸಂವಿಧಾನ ಬದಲಾವಣೆ ಬಗ್ಗೆ ಮಾತಮಾಡಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು,’’ ಎಂದರು. ಇದಕ್ಕೆ ಟಿಆರ್‌ಎಸ್, ಎಸ್ಪಿ, ಬಿಎಸ್ಪಿ, ಟಿಎಂಸಿ ಪಕ್ಷಗಳು ಬೆಂಬಲಿಸಿ, ಕೂಡಲೇ ಸಚಿವ ಹೆಗಡೆಯನ್ನು ಸಚಿವ ಸ್ಥಾನದಿಂದ ಹೊರ ಹಾಕುವಂತೆ ಅಗ್ರಹಿಸಿದವು.

ಹೆಗಡೆ ಹೇಳಿಕೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬಿಜೆಪಿ ದೂರ ಸರಿದು ನಿಂತಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಸಂಸತ್‌ ಹೊರಗೆ ಪತ್ರಕರ್ತರೊಡನೆ ಮಾತನಾಡಿ, "ಸರಕಾರ ಈಗಾಗಲೇ ತಾನು ಹೆಗಡೆ ಹೇಳಿಕೆಯನ್ನು ಬೆಂಬಲಿಸುವುದಿಲ್ಲವೆಂದು ಹೇಳಿದೆ. ಈ ಅಧಿವೇಶನಕ್ಕೆ ಇನ್ನು ಐದು ದಿನಗಳು ಮಾತ್ರ ಇದ್ದು, ವಿಪಕ್ಷಗಳು ಗೊಂದಲ ಸೃಷ್ಟಿಸದೆ ಕಲಾಪ ನಡೆಸಲು ಸಹಕರಿಸುತ್ತವೆ ಎಂದು ಆಶಿಸುತ್ತೇನೆ,'' ಎಂದಿದ್ದಾರೆ. ಆದರೆ ವಿಪಕ್ಷ ಮಾತ್ರ ಸಚಿವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ರಾಜ್ಯಸಭೆಯಲ್ಲಿ  ಸಭಾಪತಿ ವೆಂಕಯ್ಯ ನಾಯ್ಡು ಅವರ ಸ್ಥಾನದ ಬಳಿ ಬಂದು "ಬಾಬಾ ಸಾಹೇಬ್ ಕಾ ಯೇ ಅಪಮಾನ್ ನಹೀ ಚಲೇಗಾ'' ಎಂದು ಘೋಷಣೆಗಳು ಮೊದಲ ದಿನ ಮೊಳಗಿದವು.

ಕರ್ನಾಟಕದ ಬಿಜೆಪಿ ಘಟಕವೂ ಕೂಡ ಹೆಗಡೆ ಹೇಳಿಕೆಗೂ, ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಅಂತರ ಕಾಯ್ದುಕೊಂಡಿದೆ. ಮಂಗಳವಾರ ನಡೆದ ಕೋರ್‌ ಕಮಿಟಿ ಸಭೆಯಲ್ಲಿಯೂ ಈ ವಿಚಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕೊನೆಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ರಾಜ್ಯ ಘಟಕ, ಅಮಿತ್ ಶಾ ಭೇಟಿಯನ್ನಷ್ಟೆ ಮಾಹಿತಿ ರೂಪದಲ್ಲಿ ನೀಡಿದೆ. ಈ ಹಿಂದೆ, ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಹೆಗಡೆ ಹೇಳಿಕೆ ಕುರಿತು ಚರ್ಚೆ ನಡೆಲಿದೆ ಎಂದು ವರದಿಯಾಗಿತ್ತು.

ದೂರು ದಾಖಲು: 

ಈ ನಡುವೆ, ಅನಂತ್ ಕುಮಾರ್ ಹೆಗಡೆ ವಿರುದ್ಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಶಿವಾನಂದ್ ಕುಗ್ವೆ ದೂರು ನೀಡಿದ್ದರು, "ಸಂವಿಧಾನಕ್ಕೆ ಅಪಮಾನ ಮಾಡುವಂತ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ರಾಷ್ಟ್ರದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಬೇಕು,'' ಎಂದು ಆಗ್ರಹಿಸಿದ್ದಾರೆ.