samachara
www.samachara.com
ಆಂಗ್ ಸಾನ್ ಸೂಕಿ (ಚಿತ್ರ ಕೃಪೆ: ದಿ ಗಾರ್ಡಿಯನ್) 
ಆಂಗ್ ಸಾನ್ ಸೂಕಿ (ಚಿತ್ರ ಕೃಪೆ: ದಿ ಗಾರ್ಡಿಯನ್) 
ಸುದ್ದಿ ಸಾರ

ಆಂಗ್ ಸಾನ್ ಸೂಕಿ; ರೊಹಿಂಗ್ಯಾ ವಿಚಾರದಲ್ಲಿ ಯಾಕೆ ‘ಮೂಕಿ’?

ರೋಹಿಂಗ್ಯರ ಮೇಲೆ ಹಿಂಸಾಚಾರ: ವಿಶ್ವಸಂಸ್ಥೆಯಲ್ಲಿ ಮಾತನಾಡಲು ನಿರಾಕರಿಸಿದ ಆಂಗ್ ಸಾನ್ ಸೂಕಿ

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

Summary

‘ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರ ಮತ್ತು ಲೈಂಗಿಕ ಹಿಂಸೆಯ ಕುರಿತು ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ,’ ಎಂದು ಆಂಗ್ ಸಾನ್ ಸೂಕಿ ಕಳೆದ ವಾರ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರೆಸ್‌ಗೆ ಕಳುಹಿಸಿದ ಪತ್ರ ಈಗ ಬಹಿರಂಗವಾಗಿದೆ.

ರೋಹಿಂಗ್ಯರ ಮೇಲೆ ನಡೆದ ಹಿಂಸಾಚಾರ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ವಿಶ್ವಸಂಸ್ಥೆಯಲ್ಲಿ ಮಾತನಾಡಲು ಆಂಗ್ ಸಾನ್ ಸೂಕಿ ನಿರಾಕರಿಸಿದ್ದಾರೆ.

“ರೋಹಿಂಗ್ಯಾ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರ ಮತ್ತು ಲೈಂಗಿಕ ಹಿಂಸೆಯ ಕುರಿತು ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ,”
- ಆಂಗ್ ಸಾನ್ ಸೂಕಿ, ಮಯನ್ಮಾರ್ ಸರಕಾರದ ಸಲಹೆಗಾರ್ತಿ

ಈ ಮೊದಲು, “ಎಲ್ಲ ಮುಸ್ಲಿಮರೂ ದೇಶವನ್ನು ತೊರೆದಿಲ್ಲ. ಅನೇಕ ಮುಸ್ಲಿಮರು ಇಲ್ಲಿಯೇ ಉಳಿದಿದ್ದಾರೆ. ಈ ಕುರಿತು ಪರಿಶೀಲಿಸಲು ಅಂತಾರಾಷ್ಟ್ರೀಯ ಸಮಿತಿಗೆ ಆಹ್ವಾನ ನೀಡಲಾಗಿದೆ,” ಎಂದು ಮಯನ್ಮಾರ್ ಸರಕಾರದ ಸಲಹೆಗಾರ್ತಿ ಆಂಗ್ ಸಾನ್ ಸೂಕಿ ಹೇಳಿದ್ದರು.

ಅಲ್ಲದೇ, ರೋಹಿಂಗ್ಯ ಸಮುದಾಯದ ಹಿತ ಕಾಯಲು ಹಾಗೂ ಶಾಂತಿ ಮತ್ತು ಸುಸ್ಥಿರತೆಯನ್ನು ಕಾಪಾಡಲು ಮತ್ತು ಗಲಭೆಯ ನಿಯಂತ್ರಣಕ್ಕೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಯನ್ಮಾರ್ ಮಾಡಿದೆ ಎಂದಿದ್ದರು.

'ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರ್ ದೇಶದ ಉತ್ತರದ ರಾಖ್ಹಿನೆ ರಾಜ್ಯದಲ್ಲಿ ಹಿಂಸಾಚಾರ ಆರಂಭವಾದಂದಿನಿಂದ 6,55,000ಕ್ಕಿಂತಲೂ ಹೆಚ್ಚು ರೋಹಿಂಗ್ಯ ಮುಸ್ಲಿಂರು ಹಿಂಸಾಚಾರದ ಹಿನ್ನೆಲೆಯಲ್ಲಿ ಜೀವವನ್ನು ಉಳಿಸಿಕೊಳ್ಳಲು ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಿಗೆ ಪ್ರಯಾಣ ಮಾಡಿದ್ದರು.

ಕನಿಷ್ಠ 6,700 ರೋಹಿಂಗ್ಯರನ್ನು ಅಲ್ಲಿನ ಸೈನಿಕರ ಮತ್ತು ಬೌದ್ದರು ಕೊಂದು ಹಾಕಿದ್ದಾರೆ’ ಎನ್ನುತ್ತದೆ ಮೆಡಿಸಿನ್ಸ್ ಸಾನ್ಸ್ ಫ್ರಾಂಟೀಯರ್ಸ್ (Médecins Sans Frontières) ವರದಿ. ರೋಹಿಂಗ್ಯಾ ವಿರುದ್ಧದ ಕಾರ್ಯಾಚರಣೆ ವೇಳೆ ಮಯನ್ಮಾರ್ ಸೈನಿಕರು ಮಾನವೀಯತೆಯನ್ನೇ ಮರೆತು ವರ್ತಿಸಿದ್ದು, ಮಕ್ಕಳು, ವೃದ್ಧರು ಎಂದು ನೋಡದೇ ದೌರ್ಜನ್ಯ ನಡೆಸಿದ್ದರು.

ಈ ವೇಳೆ ಹಲವು ಯುವತಿಯರನ್ನು ಮತ್ತು ಹೆಣ್ಣುಮಕ್ಕಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಹೆಣ್ಣು ಮಕ್ಕಳು ಅತ್ಯಾಚಾರದಿಂದಲೇ ಕೊನೆಯುಸಿರೆಳೆದಿದ್ದಾರೆ. ಮತ್ತು ಕಾರ್ಯಾಚರಣೆ ನೆಪದಲ್ಲಿ ಮಹಿಳೆಯರನ್ನು ನಗ್ನವಾಗಿ ನಿಲ್ಲಿಸುತ್ತಿದ್ದರು ಎಂದು ವರದಿಯಾಗಿತ್ತು.

'ಮಯನ್ಮಾರ್ ದೇಶ ಅಂತಾರಾಷ್ಟ್ರೀಯ ಪರಿಶೀಲನೆಗೆ ಬೆದರುವುದಿಲ್ಲ. ರಾಖ್ಹಿನೆ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆಗೆ ಖಾಯಂ ಪರಿಹಾರ ಅಗತ್ಯವಾಗಿದೆ. ಇಲ್ಲಿ ಎಲ್ಲ ಬಗೆಯ ಗುಂಪುಗಳು ತೀವ್ರ ಸಮಸ್ಯೆಯಿಂದ ಬಳಲುತ್ತಿವೆ. ಇಲ್ಲಿನ ಮುಸ್ಲಿಮರು ಬಾಂಗ್ಲಾ ದೇಶಕ್ಕೆ ಪಲಾಯನಗೈಯುತ್ತಿರುವುದು ಶೋಚನೀಯ ಸಂಗತಿ,' ಎಂದಿತ್ತು ಮಯನ್ಮಾರ್.

ಸಶಸ್ತ್ರ ಸಹಿತವಾಗಿದ್ದ ಸೈನಿಕರು ನಾಗರಿಕರಿಗೆ ತೊಂದರೆ ನೀಡಿಲ್ಲ. ಸಶಸ್ತ್ರ ಮತ್ತು ಭದ್ರತಾ ಪಡೆಗಳು ನಾಗರಿಕರ ವಿರುದ್ಧ ಯಾವುದೇ ಲೈಂಗಿಕ ಅಥವಾ ಇತರ ಹಿಂಸೆಯನ್ನು ಮಾಡಿಲ್ಲ ಎಂದು ಆಂತರಿಕ ತನಿಖೆಯಿಂದ ತಿಳಿದು ಬಂದಿದೆ. ಹಾಗಂತ ಮಯನ್ಮಾರ್ ಸರಕಾರವು ತಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಸಮರ್ಥಿಸಿಕೊಳ್ಳುತ್ತಲೇ ಬಂದಿದೆ.

ಆದರೆ ಮಯನ್ಮಾರ್ ದೇಶವು ರೋಹಿಂಗ್ಯಗಗಳ ಮೇಲಾಗಿರುವ ಹಿಂಸಾಚಾರ ಮತ್ತು ಅತ್ಯಾಚಾರದ ಭಯಾನಕ ಸತ್ಯವನ್ನು ತಿರಸ್ಕರಿಸುತ್ತಿದೆ ಎಂದು ಮಾನವ ಹಕ್ಕುಗಳ ಸಂಶೋಧಕರು ಸಾಕ್ಷಿ ಸಮೇತ ಮುಂದಿಡುತ್ತಾ ಬರುತ್ತಿದ್ದಾರೆ. ಮಯನ್ಮಾರ್ನಿಂದ ಓಡಿ ಹೋಗಿರುವ ರೋಹಿಂಗ್ಯರನ್ನು ಮರಳಿ ಕರೆಯಿಸಿಕೊಳ್ಳುವ ಯೋಜನೆಗಳು ಸಿದ್ದವಾಗಿವೆ. ಬಾಂಗ್ಲಾದೇಶ ರೋಹಿಂಗ್ಯರ ವಾಪಸಾತಿಗೆ ಒಪ್ಪಿಕೊಂಡಿದ್ದು, ಜನವರಿ ಅಂತ್ಯದ ವೇಳೆಗೆ ಅವರ ವಾಪಾಸಾತಿ ಪ್ರಾರಂಭವಾಗಲಿದೆ ಎನ್ನುತ್ತಿದೆ ಮಯನ್ಮಾರ್ ಸರಕಾರ.

ಆದರೆ ದೇಶದ ಪೌರತ್ವವನ್ನು ಕೊಡುವ ತನಕ ಮತ್ತು ತಮ್ಮ ಸುರಕ್ಷತೆಯನ್ನು ಖಾತರಿಪಡಿಸುವ ತನಕ ರೋಹಿಂಗ್ಯ ಮುಸ್ಲಿಂರು ಮಯನ್ಮಾರ್ ದೇಶಕ್ಕೆ ವಾಪಾಸಾಗುವುದಿಲ್ಲ ಎನ್ನುತ್ತಿದ್ದಾರೆ.ಹೀಗಿರುವಾಗ, ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ, ಮಿಲಿಟರಿ ಆಡಳಿತ ವಿರುದ್ಧ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಗೃಹ ಬಂಧನಕ್ಕೆ ಒಳಗಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಆಂಗ್‌ ಸಾನ್‌ ಸೂಕಿ ಮಾತ್ರ ತಮ್ಮದೇ ದೇಶದೊಳಗೆ ನಡೆದ ಮಾನವಹಕ್ಕುಗಳ ಹರಣದ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡಲಿಲ್ಲ. ಇದೀಗ ಅವರು ವಿಶ್ವಸಂಸ್ಥೆಯೊಳಗೂ ಮಾತನಾಡಲು ನಿರಾಕರಿಸುವ ಮೂಲಕ ಅಚ್ಚರಿಯ ನಡೆಯನ್ನಿಟ್ಟಿದ್ದಾರೆ.