ಆಧಾರ್ ಜೋಡಣೆಗೆ ತಾತ್ಕಾಲಿಕ ರಿಲೀಫ್: ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ
ಸುದ್ದಿ ಸಾರ

ಆಧಾರ್ ಜೋಡಣೆಗೆ ತಾತ್ಕಾಲಿಕ ರಿಲೀಫ್: ಸುಪ್ರಿಂ ಕೋರ್ಟ್ ಮಧ್ಯಂತರ ಆದೇಶ

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಒಳಗೊಂಡ ಪಂಚಸದಸ್ಯರ ಪೀಠ ತಾತ್ಕಾಲಿಕ ಉಪಷಮನ ನೀಡುವ ತೀರ್ಪನ್ನು ಪ್ರಕಟಿಸಿದೆ.ಈ ಮೊದಲು 2017ರ ಡಿಸೆಂಬರ್ 31 ಆಧಾರ್ ಜೋಡಣೆಗೆ ಅಂತಿಮ ದಿನ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ಸರಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳಿಗೆ ಆಧಾರ್ ಜೋಡನೆಯನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ದೇಶದ ನಾಗರಿಕರಿಗೆ ದೊರಯಬೇಕಾದ ಸಬ್ಸಿಡಿ ಮತ್ತು ವಿವಿಧ ಯೋಜನೆಗಳ ಫಲಾನುಭವಕ್ಕಾಗಿ ಆಧಾರ್ ಜೋಡಣೆಯ ಅಂತಿಮ ದಿನಾಂಕವನ್ನು ವಿಸ್ತರಿಸಲು ಕಳೆದ ವಾರ ಕೇಂದ್ರ ಸರಕಾರವೂ ಮನವಿ ಮಾಡಿಕೊಂಡಿತ್ತು.ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಆಧಾರ್ ಕಾರ್ಡ್ ಇಲ್ಲದೇ ಇರುವವರು ಬ್ಯಾಂಕ್ ಖಾತೆ ತೆರೆಯಲು ಅವಕಾಶವಿದೆ.

ಆದರೆ ಆಧಾರ್ ಪಡೆಯಲು ಸಲ್ಲಿಸಿರುವ ಅರ್ಜಿಯನ್ನು ಬ್ಯಾಂಕ್ ಗೆ ಒದಗಿಸಿದರೆ ಹೊಸ ಖಾತೆ ತೆರೆಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಬ್ಯಾಂಕ್ ಹೊಸ ಖಾತೆ ತೆರೆಯಲಿ ಆಧಾರ್ ಸಂಖ್ಯೆಗೆ ಸಲ್ಲಿಸಿರುವ ಅರ್ಜಿಯಾದರೂ ಅಗತ್ಯವಾಗಿದೆ.“ಈಗಾಗಲೇ ಆಧಾರ್ ಕಾರ್ಡ್ ಹೊಂದಿದವರು, ಆಧಾರ್ ಸಂಖ್ಯೆಯಿಲ್ಲದೇ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ತೆರೆಯಲು ಅವಕಾಶವಿಲ್ಲ. ಆಧಾರ್ ಇದ್ದವರು, ತಮ್ಮ ಹೊಸ ಖಾತೆಯೊಂದಿಗೆ ಅದನ್ನು ಜೋಡಿಸಲೇಬೇಕು,” ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ಮೂಲಭೂತ ಹಕ್ಕು ಮತ್ತು ಗೌಪ್ಯತೆಯ ಉಲ್ಲಂಘನೆ:

ಅಧಾರ್ ಕುರಿತು ಅರ್ಜಿದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಆಧಾರ್ ಮಾಡಿಸುವಾಗ ಬಯೋಮೆಟ್ರಿಕ್ ಮತ್ತು ವೈಯಕ್ತಿಕ ವಿವರಗಳನ್ನು ಪಡೆಯಲಾಗುತ್ತದೆ. ಇದು ದೇಶದ ಸಾಮಾನ್ಯ ನಾಗರಿಕರ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ,” ಎಂದು ಅರ್ಜಿದಾರರು ಆರೋಪಿಸಿದ್ದಾರೆ. ವೈಯಕ್ತಿಕ ಮಾಹಿತಿ ಸೋರಿಕೆಯನ್ನು ತಡೆಯಲು ಅಥವಾ ರಕ್ಷಿಸಲು ಭಾರತವು ಡೇಟಾ ರಕ್ಷಣೆಯ ಸೌಲಭ್ಯವನ್ನು ಹೊಂದಿಲ್ಲವಾದ್ದರಿಂದ, ಗೌಪ್ಯತೆಗೂ ಅಪಾಯವಾಗುವ ಸಾಧ್ಯತೆ ಇದೆ ಎಂದು ವಾದಿಸಿದ್ದಾರೆ.

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ :

ಈ ಮೊದಲು 2018ರ ಫೆಬ್ರುವರಿ 6ರೊಳಗೆ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡನೆ ಮಾಡಲೇಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಇದನ್ನು 2018ರ ಮಾರ್ಚ್ 31 ರವರೆಗೆ ಇದೀಗ ವಿಸ್ತರಿಸಲಾಗಿದೆ. ಈಗಿರುವ ಮತ್ತು ಹೊಸ ಸಿಮ್ ಖರೀದಿಗೆ ಇ-ಕೆವೈಸಿ ಸಂಪರ್ಕ ನೀಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“70 ವರ್ಷಗಳ ಭಾರತದಲ್ಲಿ ಆಧಾರ್ ಇಲ್ಲದೆಯೇ ಬ್ಯಾಂಕಿಂಗ್ ವ್ಯವಸ್ಥೆ ಇತ್ತು. ಈಗೇಕೆ ಆಧಾರ್ ಕಡ್ಡಾಯ ಮಾಡಿ ದೇಶದ ನಾಗರಿಕರಿಗೆ ಕಿರಿಕಿರಿ ಮಾಡುತ್ತೀದ್ದೀರಿ?” ಎಂದು ಸುಪ್ರೀಂ ಕೋರ್ಟ್ ಮುಂದೆ ವಕೀಲರೊಬ್ಬರು ಪ್ರಶ್ನೆ ಎತ್ತಿದ್ದಾರೆ. ಆಧಾರ್ ಸಮಸ್ಯೆಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. ಆದರೆ ಅದು ತಾತ್ಕಾಲಿಕ ಮಾತ್ರವೇ ಹೊರತು ಶಾಶ್ವತ ಅಲ್ಲ. ಇವತ್ತಲ್ಲ ನಾಳೆ ಆಧಾರ್ ಇಲ್ಲದೆ ಬದುಕು ಸಾಗದ ಸ್ಥಿತಿ ತಲುಪುವುದು ಇನ್ನಷ್ಟು ನಿಚ್ಚಳವಾಗಿದೆ.