ಗುಜರಾತ್ ಎರಡನೇ ಹಂತದ ಮತದಾನ ಮುಕ್ತಾಯ: ಜನರ ಮನದಲ್ಲಿ ಯಾರಿದ್ದಾರೆ? 
ಸುದ್ದಿ ಸಾರ

ಗುಜರಾತ್ ಎರಡನೇ ಹಂತದ ಮತದಾನ ಮುಕ್ತಾಯ: ಜನರ ಮನದಲ್ಲಿ ಯಾರಿದ್ದಾರೆ? 

ವಿಧಾನಸಭಾ ಕ್ಷೇತ್ರಗಳ ಎರಡನೇ ಹಂತದ ಮತದಾನಕ್ಕೆ ತೆರೆಬಿದ್ದಿದೆ; ಫಲಿತಾಂಶದತ್ತ ಕುತೂಹಲ ಮನೆ ಮಾಡಿದೆ.ಗುಜರಾತ್ ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು 93 ವಿಧಾನಸಭಾ ಕ್ಷೇತ್ರಗಳಿಗೆ ಜನಪ್ರತಿನಿಧಿಗಳ ಆಯ್ಕೆಗೆ ಜನ ಹಕ್ಕು ಚಲಾಯಿಸಿದ್ದಾರೆ.

782 ಪುರುಷ ಮತ್ತು 69 ಮಹಿಳೆಯರು ಸೇರಿದಂತೆ 851 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಬನಸ್ಕಂತ, ಪಟನ್, ಸಬರ್ಕಾಂತ, ಮೆಹ್ಸಾನಾ, ಗಾಂಧಿನಗರ, ಅಹ್ಮದಾಬಾದ್, ಅರಾವಳಿ, ಮಹಿಸಾಗರ, ಪಂಚಮಹಲ್, ದಾಹೋದ್, ಖೇಡಾ, ಆನಂದ್, ವಡೋದರ ಮತ್ತು ಚೊಟ್ಟಾ ಉಡೇಪುರ ಜಿಲ್ಲೆಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಿತು.

25,577 ಮತಗಟ್ಟೆಗಳಲ್ಲಿ, ಒಟ್ಟು 2,22,96,867 ಮತದಾರರು ಮತ ಚಲಾಯಿಸಬೇಕಿತ್ತು. ಇದರಲ್ಲಿ 1,15,47,435 ಪುರುಷರು, 1,07,48,977 ಮಹಿಳೆಯರು ಮತ್ತು 477 ತೃತೀಯ ಲಿಂಗಿಗಳಿದ್ದರು. ಎರಡನೇ ಹಂತದ ಮತದಾನದಲ್ಲಿ ಅಹ್ಮದಾಬಾದ್‌ನ ರಾನೀಪ್ ಭಾಗದಿಂದ ಪ್ರಧಾನಿ ಮೋದಿ, ನಾರಾಂಪುರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಹ್ಮದಾಬಾದ್‌ನ ವೇಜಲ್ಪುರದಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಹ್ಮದಾಬಾದ್‌ನ ಜಮಲಾಪುರದಿಂದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅದ್ವಾನಿ, ಗಾಂಧಿನಗರದಿಂದ ಮೋದಿ ತಾಯಿ ಯಶೊಧಾಬೆನ್ ಕೂಡ ತಮ್ಮ ಮತ ಚಲಾಯಿಸಿದ್ದಾರೆ.

ಚುನಾವಣಾ ನೀತಿ ಉಲ್ಲಂಘನೆ:

ಪ್ರಧಾನಿ ನರೇಂದ್ರ ಮೋದಿ ಮತ ಚಲಾಯಿಸಿದ ಬಳಿಕ ರೋಡ್‌ ಶೋ ನಡೆಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಟ್ವೀಟರ್ ನಲ್ಲಿ ಆಕ್ಷೇಪಿಸಿದ್ದಾರೆ. ಸಾಬರಮತಿ ಕ್ಷೇತ್ರದಲ್ಲಿ ಮತದಾನದ ನಂತರ ಮೋದಿ ಶಾಯಿ ಹಾಕಿದ ತೋರು ಬೆರಳನ್ನು ಸಾರ್ವಜನಿಕರಿಗೆ ಪ್ರದರ್ಶಿಸುತ್ತಲೇ ಕಾರಿನಲ್ಲಿ ರೋಡ್ ಶೋ ನಡೆಸಿದ್ದರು. ಇದು ಮೋದಿಯ ಚುನಾವಣಾ ಪ್ರಚಾರ ಎಂದಿರುವ ಚಿದಂಬರಂ, ‘ಚುನಾವಣಾ ಆಯೋಗ ಏನು ಮಾಡುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.

ಠಾಕೂರ್ ಆತ್ಮವಿಶ್ವಾಸ:

ಓಬಿಸಿ ನಾಯಕ ಅಲ್ಪೇಶ್ ಠಾಕೂರ್ ತಮ್ಮ ಪಕ್ಷದ ಗೆಲುವಿನ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡು ದಶಕಗಳಿಂದ ವಿರೋಧಪಕ್ಷವಾಗಿರುವ ಕಾಂಗ್ರೆಸ್‌ಗೆ ಈ ಬಾರಿ ಗೆಲುವು ನಿಶ್ಚಿತ ಎಂದವರು ಹೇಳಿದ್ದಾರೆ. “ನನ್ನ ಮತಗಟ್ಟೆಯಲ್ಲಿ ಮೊದಲು ಮತ ಹಾಕಿದ ಮತದಾರ ನಾನು. ರಾಜ್ಯದಲ್ಲಿರುವ ರಾಜಕೀಯವನ್ನು ಬದಲಾಯಿಸುವ ಇಚ್ಛೆಯನ್ನು ನಾವು ಹೊಂದಿದ್ದೇವೆ. ಕಾಂಗ್ರೆಸ್ ಮುಂದಿನ ಸರಕಾರ ರಚಿಸಿ, ಬಡವರಿಗೆ, ಮಹಿಳೆ ಹಾಗೂ ಸಮಾಜದ ವಿವಿಧ ವರ್ಗಗಳ ಜನರಿಗಾಗಿ ಕೆಲಸ ಮಾಡುತ್ತದೆ,” ಎಂದು ಹೇಳಿದ್ದಾರೆ.

ಕಡಿಮೆ ಮತದಾನ:

“ಮತದಾನ ಪ್ರಜಾಪ್ರಭುತ್ವದ ಹಬ್ಬ. ಇದನ್ನು ಆಚರಿಸಿ ಸಂಪನ್ನಗೊಳಿಸಿ,” ಎಂದು ಮೋದಿ ಬೆಳಿಗ್ಗೆ ಟ್ವೀಟ್ ಮಾಡಿದ್ದರು. ಆದರೆ ಮದ್ಯಾಹ್ನ 2 ಗಂಟೆ ವೇಳೆಗೆ ಒಟ್ಟಾರೆಯಾಗಿ ಶೇ. 47.40 ರಷ್ಟು ಮತದಾನ ಕಂಡು ಬಂದಿತ್ತು. ಎರಡು ಕ್ಷೇತ್ರಗಳನ್ನು ಹೊರತು ಪಡಿಸಿದರೆ ಉಳಿದ ಯಾವುದೇ ಕ್ಷೇತ್ರಗಳೂ ಶೇ.50 ರಷ್ಟು ಮತದಾನ ಕಂಡು ಬಂದಿಲ್ಲ ಎಂದು ಹೇಳುತ್ತವೆ ಚುನಾವಣಾ ಆಯೋಗದ ವರದಿಗಳು.

1700 ಮತಗಟ್ಟೆಗಳನ್ನು ವೆಬ್ ಕಾಸ್ಟಿಂಗ್ ಮುಖಾಂತರ ಸತತವಾಗಿ ಮಾನಿಟರಿಂಗ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ. ಚಾನಿಯಾಯಾ ಗ್ರಾಮದಲ್ಲಿ ಇವಿಎಂ ಮತಯಂತ್ರಗಳು ದೋಷಪೂರಿತವಾಗಿದ್ದವು ಎನ್ನುತ್ತವೆ ವರದಿಗಳು. ಚುನಾವಣಾ ಆಯೋಗದ ವಿರುದ್ಧ ಶಶಿ ತರೂರ ಕಿಡಿಕಾರಿದ್ದರು.

“ಚುನಾವಣಾ ಆಯೋಗ ಡಬ್ಬಲ್ ಸ್ಟ್ಯಾಂಡರ್ಡ್ ರೀತಿಯಲ್ಲಿ ಕೆಲಸ ಮಾಡುತ್ತಿದೆ” ಎಂದವರು ಆರೋಪಿಸಿದ್ದಾರೆ. ವಡೋದರಾ ಮತಗಟ್ಟೆಯನ್ನು ಎಲ್ಲರೂ ಮಹಿಳಾ ಅಧಿಕಾರಿಗಳೇ ಇದ್ದರು ಎಂಬುವುದು ವಿಶೇಷವಾಗಿದೆ. ಗುಜರಾತ್ ನ ಎರಡೂ ಹಂತದ ಮತದಾನ ಮುಕ್ತಾಯವಾಗಿದೆ. ಡಿಸೆಂಬರ್ 18 ರಂದು ಫಲಿತಾಂಶ ಹೊರಬೀಳಲಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆಯಾಗಿದೆ.

ಈ ಬಾರಿ ರಾಜ್ಯದ ಅಧಿಕಾರ ಹಿಡಿಯುವವರು ಯಾರು? ಗುಜರಾತ್ ಜನ ಬದಲಾವಣೆಯನ್ನು ಬಯಸಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿಯುತ್ತಾರಾ? ಅಥವಾ ಧರ್ಮಾಧಾರಿತ ರಾಜಕಾರಣ ಗುಜರಾತ್‌ನಲ್ಲಿ ಮತ್ತೊಂದು ಅವಧಿಯವರೆಗೆ ಮುಂದುವರೆಯುತ್ತಾ? ಎಲ್ಲದಕ್ಕೂ ಮತದಾರರು ನೀಡಿರುವ ಉತ್ತರ ಈಗ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.ಈ ನಡುವೆ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದೆ.

ವಿಶೇಷ ಅಂದರೆ, ಎಲ್ಲಾ ಪ್ರಮುಖ ಸಮೀಕ್ಷೆಗಳು ಗುಜರಾತ್‌ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಭವಿಷ್ಯ ನುಡಿಯುತ್ತಿವೆ. ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಮಾತ್ರ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎನ್ನುತ್ತಿದ್ದಾರೆ. ಏನಕ್ಕೂ ಡಿ. 18ರ ಫಲಿತಾಂಶ ಉತ್ತರ ನೀಡಲಿದೆ.