ಸುದ್ದಿ ಸಾರ

ಲವ್ ಜಿಹಾದ್ ನೆಪ: ಮುಸ್ಲಿಂ ವ್ಯಕ್ತಿಯನ್ನು ಜೀವಂತ ಸುಟ್ಟು ಕೊಂದ ದೂರ್ತನ ಬಂಧನ

ಮುಸ್ಲಿಂ ವ್ಯಕ್ತಿಯನ್ನು ಜೀವಂತವಾಗಿ ಕೊಚ್ಚಿ ಕೊಲೈಗೈದಿರುವ ವಿಡೀಯೋ ಮತ್ತು ಅಪರಾಧಿಯ ಬಂಧನ 

Summarytoggle summary

ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲಿಸರು ಗುರುವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ರಾಜ್ಸಮಂದ್ ಪ್ರದೇಶದ ನಿವಾಸಿ ಶಂಭುಲಾಲ್ ರೆಗಾರ್ ಎಂದು ಗುರುತಿಸಲಾಗಿದೆ.

ರಾಜಸ್ತಾನದಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲ ಮೂಲದ ಮುಸ್ಲಿಂ ವ್ಯಕ್ತಿಯನ್ನು ಜೀವಂತವಾಗಿ ಕೊಚ್ಚಿ ಕೊಲೈಗೈದಿರುವ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಫ್ರಾಜುಲ್ (47) ಎಂಬುವವರು ಬರ್ಬರವಾಗಿ ಕೊಲೆಯಾಗಿದ್ದು ಎಂದು ತಿಳಿದು ಬಂದಿತ್ತು. ಕೋಮು ಭಾವನೆ ಕೆರಳಿಸುವ ಮಾತುಗಳೂ ವಿಡೀಯೊದಲ್ಲಿ ದಾಖಲಾಗಿದ್ದವು.

ಅಫ್ರಾಜುಲ್ ನನ್ನು ಬರ್ಬರವಾಗಿ ಹತ್ಯೆ ಮಾಡಿ ಅದನ್ನು ಜಗತ್ತಿಗೆ ತೋರಿಸಿದ ವ್ಯಕ್ತಿಯನ್ನು ಗಲ್ಲಿಗೇರಿಸಬೇಕು
-ಕುಟುಂಬಸ್ಥರು

ಕೋಲ್ಕತ್ತ ದಿಂದ 325 ಕಿ.ಮೀ ಯಷ್ಟು ದೂರವಿರುವ ಅಫ್ರಾಜುಲ್ ಊರು ಸೈಯದಾಪುರ. “ ನನ್ನ ಗಂಡನನ್ನು ತುಂಬ ಕ್ರೂರವಾಗಿ ಕೊಂದು ಅದನ್ನು ಜಗತ್ತಿಗೆ ತೋರಿಸಿದವರನ್ನು ಗಲ್ಲಿಗೇರಿಸಬೇಕು. ನಾವು ಮುಸ್ಲಿಂ ಎಂಬ ಕಾರಣಕ್ಕಾಗಿಯೇ ಅವರನ್ನು ಕೊಂದಿದ್ದಾರೆ. ನಮಗೆ ನ್ಯಾಯ ಬೇಕು. ನಿನ್ನೆ ಮದ್ಯಾಹ್ನ 3 ಗಂಟೆ ಸುಮಾರಿಗೆ ನಮಗೆ ರಾಜಸ್ತಾನ ಪೊಲೀಸರಿಂದ ಕರೆ ಬಂದಾಗ ನಮಗೆ ನನ್ನ ಗಂಡನ ಕೊಲೆಯ ವಿಷಯ ತಿಳಿದಿದ್ದು,” ಎಂದು ಅಫ್ರಾಜುಲ್ ಪತ್ನಿ ಗುಲ್ ಬಹರ್ ಬಿಬಿ ತಿಳಿಸಿದ್ದಾರೆ.

“ಅವರು (ಅಫ್ರಾಜುಲ್) ಪ್ರತಿ ದಿನ ಮನೆಗೆ ಕರೆ ಮಾಡುತ್ತಿದ್ದರು. ಮಂಗಳವಾರ ಕೂಡ ಕರೆ ಮಾಡಿ ಮಾತನಾಡಿದ್ದರು. ಲವ್ ಜಿಹಾದ್ ಎಂದರೆ ಏನೆಂದು ನಮಗೆ ತಿಳಿದಿಲ್ಲ. ನನ್ನ ತಂದೆಯನ್ನು ಬೆಂಕಿಯ ಮೇಲೆ ಪ್ರಾಣಿಗಳಂತೆ ಹಾಕಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಈ ಥರ ಮಾಡಿದವರೂ ಅದೇ ತರಹ ಶಿಕ್ಷೆ ಅನುಭವಿಸಿ ಸಾಯಬೇಕು ಎಂದು ನಾವು ಬಯಸುತ್ತೇವೆ. ಆ ವಿಡೀಯೋ ನೋಡಿ ನಾನು ಕಣ್ಣೀರಾದೆ” ಎನ್ನುತ್ತಾರೆ ಅವರ ಮಗಳು ರೆಜಿನಾ ಖಾತೂನ್.

ಅಫ್ರಾಜುಲ್ ಮೂರು ಮಕ್ಕಳ ತಂದೆಯಾಗಿದ್ದು, ಈ ತಿಂಗಳ ಕೊನೆಯಲ್ಲಿ ತನ್ನ ದೊಡ್ಡ ಮಗಳ ಮದುವೆ ಮನೆಗೆ ಹೋಗಲು ನಿರ್ಧರಿಸಿದ್ದ. ಅಫ್ರಜುಲ್ ಸುಮಾರು 12 ವರ್ಷಗಳಿಂದ ರಾಜಸ್ತಾನದಲ್ಲಿ ಕೆಲಸ ಮಾಡುತ್ತಿದ್ದ. ಪ್ರತಿ ಎರಡು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಇದ್ದ ಚಿಕ್ಕ ಭೂಮಿಯಿಂದ ಮನೆಯನ್ನು ನಡೆಸಲು ಸಾಧ್ಯವಾಗದೇ ರಾಜಸ್ತಾದಲ್ಲಿ ಕೆಲಸ ಮಾಡುತ್ತಿದ್ದ ಎನ್ನುತ್ತವೆ ಕುಟುಂಬದ ಮೂಲಗಳು.

“ಸಾಮಾಜಿಕ ಜಾಲತಾಣದಲ್ಲಿ ಈ ವೀಡೀಯೋ ವೈರಲ್ ಆದ್ದದ್ದು ನೋಡಿದರೆ ಇದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಇದರಲ್ಲಿ ದೊಡ್ಡ ವ್ಯಕ್ತಿಗಳೇ ಭಾಗಿಯಾಗಿದ್ದಾರೆ,” ಎನ್ನುತ್ತಾರೆ ಅಫ್ರಜಲ್ ಸೊಸೆ ಜೀನತ್ ಖಾನ್.

“ನಾನು ಅವನನ್ನು ಬಹುತೇಕ ವರ್ಷಗಳಿಂದ ನೋಡಿದ್ದೇನೆ. ಆತ ಒಳ್ಳೆಯ ಮನುಷ್ಯನಾಗಿದ್ದ. ಕೆಟ್ಟ ಕೆಲಸ ಮಾಡಿದ ಯಾವುದೇ ದಾಖಲೆಗಳು ಇರಲಿಲ್ಲ” ಎಂದು ಮನೆ ಹತ್ತಿರದ ಜೆವೆಲ್ ಚೌದರಿ ಹೇಳುತ್ತಾರೆ. “ ಈಗ ಆತನ ಮನೆಯನ್ನು ನೋಡಿಕೊಳ್ಳುವವರು ಯಾರು? ಆತನ ದೊಡ್ಡ ಮಗಳು 10 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆತನೊಬ್ಬನೇ ದುಡಿದು ಕುಟುಂಬವನ್ನು ಸಾಕುತ್ತಿದ್ದ,” ಎಂದು ಅವರ ಕುಟುಂಬದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ ಮತ್ತೊಬ್ಬ ಹತ್ತಿರದ ವ್ಯಕ್ತಿ ಇಬ್ರಾಹಿಂ ಶೇಖ್.

ಸದ್ಯ, ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಲವ್‌ ಜಿಹಾದ್‌ ಹೆಸರಿನಲ್ಲಿ ಅಮಾಯಕನೊಬ್ಬನನ್ನು ಜೀವಂತ ಸುಟ್ಟು ಕೊಂದಿರುವ ಘಟನೆ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿದೆ.