samachara
www.samachara.com
'ಪುಟ್ಟ ದೇಶಕ್ಕೊಬ್ಬ ಯುವ ನಾಯಕ': ಆಸ್ಟ್ರಿಯಾದ ಅತ್ಯುನ್ನತ ಹುದ್ದೆಯ ಸನಿಹಕ್ಕೆ ಬಂದ ಸೆಬಾಸ್ಟಿಯನ್‌!
ಸುದ್ದಿ ಸಾರ

'ಪುಟ್ಟ ದೇಶಕ್ಕೊಬ್ಬ ಯುವ ನಾಯಕ': ಆಸ್ಟ್ರಿಯಾದ ಅತ್ಯುನ್ನತ ಹುದ್ದೆಯ ಸನಿಹಕ್ಕೆ ಬಂದ ಸೆಬಾಸ್ಟಿಯನ್‌!

ಯುರೋಪ್

ಖಂಡದ ನಟ್ಟನಡುವೆ ಇರುವ ಪುಟ್ಟ ದೇಶ ಆಸ್ಟ್ರಿಯಾ ಹೊಸ ನಾಯಕನ ನಿರೀಕ್ಷೆಯಲ್ಲಿದೆ.

ಇಲ್ಲಿನ ಚುನಾವಣೆಯಲ್ಲಿ ಬಲಪಂಥೀಯ ಮನಸ್ಥಿತಿಯ- ಕನ್ಸರ್ವೇಟಿವ್‌ ಪಕ್ಷ- ಪೀಪಲ್ಸ್‌ ಪಾರ್ಟಿ ಜಯಗಳಿಸುವ ಸಾಧ್ಯತೆಯನ್ನು ಸಮೀಕ್ಷೆಗಳು ಮುಂದಿಟ್ಟಿವೆ. ಒಂದು ವೇಳೆ ಪೀಪಲ್ಸ್‌ ಪಾರ್ಟಿ ಅಧಿಕಾರಕ್ಕೆ ಬಂದರೆ, ಅದರ ಅಧ್ಯಕ್ಷ ಸೆಬಾಸ್ಟಿಯನ್‌ ಕರ್ಝ್‌ ದೇಶದ ಹೊಸ ಚಾನ್ಸಲರ್‌ ಆಗಲಿದ್ದಾರೆ. ಸೆಬಾಸ್ಟಿಯನ್‌ಗೆ ಈಗ 31 ವರ್ಷ!

ಐವತ್ತರ ಆಸುಪಾಸಿನಲ್ಲಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 'ಯುವ ನಾಯಕ' ಎಂದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಮೂವತ್ತು ಎಂಬುದು ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲಿಡುವ ವಯಸ್ಸು. ಆದರೆ, 85 ಲಕ್ಷ ಜನಸಂಖ್ಯೆ ಹೊಂದಿರುವ ಆಸ್ಟ್ರಿಯಾ ದೇಶ 31 ವರ್ಷದ ಸೆಬಾಸ್ಟಿಯನ್ ಮೇಲೆ ನಂಬಿಕೆ ಇಟ್ಟಿದೆ. ಅವರನ್ನು ರಾಜಕೀಯದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡುವ ಸನ್ನಾಹದಲ್ಲಿದೆ. ಏನಾದರೂ, ಸೆಬಾಸ್ಟಿಯನ್‌ ಅಧ್ಯಕ್ಷತೆಯ ಪಕ್ಷ ಅಧಿಕಾರಕ್ಕೆ ಬಂದರೆ, ಅವರು ದೇಶವೊಂದನ್ನು ಪ್ರತಿನಿಧಿಸುವ ಪ್ರಪಂಚದ ಅತ್ಯಂತ ಕಿರಿಯ ರಾಜಕೀಯ ನಾಯಕ ಎನ್ನಿಸಿಕೊಳ್ಳುತ್ತಾರೆ.

ಯಾರು ಈ ಸೆಬಾಸ್ಟಿಯನ್?:

ಆಸ್ಟ್ರಿಯಾದ ರಾಜಧಾನಿ ವಿಯನ್ನಾದಲ್ಲಿ ಆಗಸ್ಟ್ 27, 1986ರಲ್ಲಿ ಹುಟ್ಟಿದವರು ಸೆಬಾಸ್ಟಿಯನ್‌. ಇಲ್ಲಿನ ಮೈಡ್ಲಿಂಗ್ ಎಂಬ ಜಿಲ್ಲಾ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿಯೇ, ದೇಶದಲ್ಲಿ ಜಾರಿಯಲ್ಲಿರುವ ಕಡ್ಡಾಯ ಮಿಲಿಟರಿ ಸೇವೆಗೆ ಕೆಲಕಾಲ ಸೇರಿಕೊಂಡರು. ತಮ್ಮ ವಿದ್ಯಾಭ್ಯಾಸದ ನಡುವೆಯೇ ಕಾಲೇಜಿಗೆ ಗುಡ್‌ಬೈ ಹೇಳಿ ದೇಶದ ರಾಜಕೀಯದ ಕಡೆಗೆ ಹೊರಳಿಕೊಂಡರು. 2011ರಲ್ಲಿ ಇಲ್ಲಿನ ಪೀಪಲ್‌ ಪಾರ್ಟಿಯ ಯುವ ಘಟಕದ ಅಧ್ಯಕ್ಷರಾದರು. 2013ರಲ್ಲಿ ಪೀಪಲ್‌ ಪಾರ್ಟಿ ಅಧಿಕಾರದಲ್ಲಿದ್ದ ಸಮಯದಲ್ಲಿ ಸೆಬಾಸ್ಟಿಯನ್‌ರನ್ನು ವಿದೇಶಾಂಗ ಇಲಾಖೆ ಸಚಿವರಾಗಿ ನೇಮಕ ಮಾಡಲಾಯಿತು. ಅದು, ಜಗತ್ತಿನ ಅತ್ಯಂತ ಕಿರಿಯ ವಿದೇಶಾಂಗ ಸಚಿವ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿತು.

ಆಸ್ಟಿಯಾದ ರಾಜದಾನಿ ವಿಯೆನ್ನಾ ಮೊದಲಿನಿಂದಲೂ ಜಾಗತಿಕ ಬಿಕ್ಕಟ್ಟುಗಳ ಸಂಧಾನ ವೇದಿಕೆಯಾಗಿದೆ. ಸೆಬಾಸ್ಟಿಯನ್‌ ವಿದೇಶಾಂಗ ಸಚಿವರಾಗುತ್ತಿದ್ದಂತೆ ಯುರೋಪಿಯನ್‌ ಯೂನಿಯನ್‌ ಒಟ್ಟಾಗಿಯೇ ಇರುವ ನಿಟ್ಟಿನಲ್ಲಿ ಭಾ‍ಷಣಗಳನ್ನು ಆರಂಭಿಸಿದರು. ಇರಾನ್‌ ಅಣ್ವಸ್ತ್ರ ಯೋಜನೆ ಕುರಿತು ಹಲವು ಸುತ್ತಿನ ಮಾತುಕತೆಗೆ ವಿಯೆನ್ನಾದಲ್ಲಿ ಅವಕಾಶ ಮಾಡಿಕೊಟ್ಟರು. ಈ ಮೂಲಕ ಜಾಗತಿಕ ಬಿಕ್ಕಟ್ಟುಗಳು ಎದುರಾದಾಗ ವಿಯೆನ್ನಾ ಮಧ್ಯಸ್ಥಿಕೆಯ ವೇದಿಕೆಯಾಗಿ ನಿಲ್ಲುತ್ತದೆ ಎಂಬುದನ್ನು ನಿರೂಪಿಸಿದರು.

2015ರಲ್ಲಿ ಯುರೋಪಿನಲ್ಲಿ ವಲಸೆ ಸಮಸ್ಯೆ ತಲೆದೋರಿದ ನಂತರ ಸೆಬಾಸ್ಟಿಯನ್‌ ಜಾಗತಿಕವಾಗಿ ಗಮನ ಸೆಳೆದರು. ಮೊದಲು ಯುರೋಪಿಯನ್‌ ಯೂನಿಯನ್‌ ಒಳಗಿರುವ ದೇಶಗಳ ಗಡಿ ಭದ್ರಮಾಡಿಕೊಂಡು, ವಲಸೆ ಬರುವವರನ್ನು ಒಳಗೆ ಬಿಡಬಾರದು ಎಂದು ಗಟ್ಟಿ ದನಿಯಲ್ಲಿ ಹೇಳತೊಡಗಿದರು. ಜತೆಗೆ, ವಲಸೆ ಸಮಸ್ಯೆಯನ್ನು ತೊಡೆದುಹಾಕಲು 50 ಅಂಶಗಳ ಕಾರ್ಯಕ್ರಮವನ್ನು ಬಿಡುಗಡೆ ಮಾಡಿದರು. ಒಂದು ಹಂತದಲ್ಲಿ, ಯುರೋಪಿನಿಂದ ವಲಸೆ ಹೋಗುವವರಿಗೆ ಆಫ್ರಿಕಾದಲ್ಲಿ ನೆಲ ಕಲ್ಪಿಸಬೇಕು ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾದರು.

ಸೆಬಾಸ್ಟಿಯನ್‌ ಆಸ್ಟ್ರಿಯಾದ ಮಸೀದಿಗಳಿಗೆ ಹೊರಗಿನಿಂದ ಬರುವ ದೇಣಿಗೆ ತಡೆಯುವ ನಿಟ್ಟಿನಲ್ಲಿ ಹೊಸ ಕಾನೂನನ್ನೇ ಮುಂದಿಟ್ಟರು. ಇದರಲ್ಲಿ ದೇಶದ ಮಿಲಿಟರಿ ಸೇವೆಯಲ್ಲಿರುವ ಮುಸ್ಲಿಂರಿಗೆ ಹಲಾಲ್‌ ಮಾಡಲಾದ ಆಹಾರ ನೀಡಲು ಅನುವು ಮಾಡಿಕೊಡಲಾಯಿತು. ಜಗತ್ತಿನಲ್ಲಿ ಹೆಚ್ಚಿರುತ್ತಿರುವ ಮುಸ್ಲಿಂ ಭಯೋತ್ಪಾದನೆ ದೇಶದೊಳಗೆ ಕಾಲಿಡದಂತೆ ತಡೆಯಲು ಹೊಸ ಕಾನೂನು ಅಗತ್ಯ ಎಂದು ಸೆಬಾಸ್ಟಿಯನ್‌ ಸಮರ್ಥಿಸಿಕೊಂಡರು. 2015ರ ಫೆಬ್ರವರಿಯಲ್ಲಿ ಸೆಬಾಶ್ಟಿಯನ್‌ ಮುಂದಿಟ್ಟ ಕಾನೂನು ಅಲ್ಲಿನ ಪಾರ್ಲಿಮೆಂಟ್‌ನಲ್ಲಿ ಅಂಗೀಕಾರವೂ ಆಯಿತು. ಅದು ಸೆಬಾಸ್ಟಿಯನ್‌ ಜನಪ್ರಿಯತೆಯನ್ನು ಹೆಚ್ಚಿಸಿತು.

2017ರಲ್ಲಿ ಪೀಪಲ್ಸ್‌ ಪಾರ್ಟಿಯ ಅಧ್ಯಕ್ಷ ಸ್ಥಾನ ಖಾಲಿ ಆದಾಗ ಯುವ ಘಟಕದ ಅಧ್ಯಕ್ಷರಾಗಿದ್ದ ಸೆಬಾಸ್ಟಿಯನ್‌ರನ್ನೇ ಹಂಗಾಮಿಯಾಗಿ ನೇಮಕ ಮಾಡಲಾಯಿತು. ನಂತರ ನಡೆದ ಪಕ್ಷದ ಚುನಾವಣೆಯಲ್ಲಿ ಶೇ. 97ರಷ್ಟು ಪ್ರತಿನಿಧಿಗಳು ಸೆಬಾಸ್ಟಿಯನ್‌ ಪರ ನಿಲ್ಲುವ ಮೂಲಕ ಪೂರ್ಣಾವಧಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಜತೆಗೆ, ಪಕ್ಷದ ನಿಯಮಾವಳಿಗಳನ್ನು ಬದಲಾಯಿಸಿ, ಅಧ್ಯಕ್ಷರಿಗೆ ಪರಮಾಧಿಕಾರವನ್ನು ನೀಡಲು ಒಪ್ಪಿಗೆಯೂ ಸಿಕ್ಕಿತು.

ಭವಿಷ್ಯ ಬದಲಿಸುವ ಫಲಿತಾಂಶ: 

ಸದ್ಯ ಆಸ್ಟ್ರಿಯಾದಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಜನರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

2015ರಿಂದ ಇಲ್ಲಿ ಹೆಚ್ಚಿರುವ ಮುಸ್ಲಿಂ ವಲಸಿಗರ ವಿರುದ್ಧ ಕ್ರಿಶ್ಚಿಯನ್‌ ಬಾಹುಳ್ಯ ದೇಶದೊಳಗೆ ಅಸಮಾಧಾನದ ಹೊಗೆ ದಟ್ಟವಾಗಿದೆ. ಈಗಿರುವ ಚಾನ್ಸಲರ್‌ ಕ್ರಿಶ್ಚಿಯನ್‌ ಕೆರ್ನ್‌ ಸೋಷಿಯಲ್‌ ಡೆಮಾಕ್ರಾಟಿಕ್‌ ಪಕ್ಷಕ್ಕೆ ಸೇರಿದವರು. ಅವರ ಮೇಲೆ ಹಲವು ಆರೋಪಗಳಿವೆ. ಇತ್ತೀಚೆಗೆ ಅವರು ಆನ್‌ಲೈನ್‌ ಮೂಲಕ ವಿರೋಧಿಗಳ ತೇಜೋವಧೆಗೆ ಹೊರಟಿದ್ದು ದೊಡ್ಡ ವಿವಾದದ ಅಲೆಯನ್ನೇ ಎಬ್ಬಿಸಿತ್ತು.

ಇದರ ಜತೆಗೆ, ವಲಸೆ ವಿರೋಧಿ ನೀತಿಗಳ ಕಾರಣಕ್ಕೆ ಪೀಪಲ್ಸ್‌ ಪಾರ್ಟಿ ಜನಪ್ರಿಯತೆ ಹೆಚ್ಚಿದೆ ಸಮೀಕ್ಷೆಗಳು ಹೇಳುತ್ತಿವೆ. ಸೋಷಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ, ಪೀಪಲ್ಸ್‌ ಪಾರ್ಟಿ ಜತೆಗೆ ವಲಸೆಯ ಪರವಾಗಿರುವ ಗ್ರೀನ್‌ ಪಾರ್ಟಿಗಳೂ ಕೂಡ ಅಖಾಡದಲ್ಲಿವೆ. ಆದರೆ, ಜನ ಸೆಬಾಸ್ಟಿಯನ್‌ರತ್ತ ನೋಡುತ್ತಿದ್ದಾರೆ. ಪೀಪಲ್‌ ಪಾರ್ಟಿ ನಿಚ್ಚಳ ಬಹುಮತ ಗಳಿಸಲು ವಿಫಲವಾದರೂ, ಸಮ್ಮಿಶ್ರ ಸರಕಾರದ ರಚನೆ ಸಾಧ್ಯತೆಯೂ ಇರುವುದರಿಂದ ಸೆಬಾಸ್ಟಿಯನ್‌ ಆಸ್ಟ್ರಿಯಾದ ಹೊಸ ಚಾನ್ಸಲರ್‌ ಆಗುವುದು ಬಹುತೇಕ ಖಚಿತವಾಗಿದೆ. ಆ ಮೂಲಕ ಜಗತ್ತಿನ ಅತ್ಯಂತ ಕಿರಿಯ ನಾಯಕ ಅವರಾಗಲಿದ್ದಾರೆ. ಅಮೆರಿಕಾ ಅಧ್ಯಕ್ಷ ಟ್ರಂಪ್‌ ಹಾದಿಯಲ್ಲಿಯೇ ಹೊರಟಿರುವ ಸೆಬಾಸ್ಟಿಯನ್‌ ರಾಜಕೀಯ ಪುಟ್ಟ ದೇಶ ಆಸ್ಟ್ರಿಯಾ ಮಾತ್ರವಲ್ಲ, ಪ್ರಪಂಚದ ಹಲವು ದೇಶಗಳ ಬಲಪಂಥೀಯ ರಾಜಕೀಯ ಮೇಲೆ ಪರಿಣಾಮ ಬೀರಬಲ್ಲದು ಎಂದು ವಿಶ್ಲೇಷಣೆ ಜಾರಿಯಲ್ಲಿದೆ.