samachara
www.samachara.com
'ಅವರದ್ದು ಮನ್ ಕಿ ಬಾತ್; ನಮ್ಮದು ವಾಂಗೀಬಾತ್': ರಾಜಧಾನಿಯ ಬಡವರ ಪಾಲಿನ 'ಅನ್ನ ಭಾಗ್ಯ' ಇಂದಿರಾ ಕ್ಯಾಂಟೀನ್
ಸುದ್ದಿ ಸಾರ

'ಅವರದ್ದು ಮನ್ ಕಿ ಬಾತ್; ನಮ್ಮದು ವಾಂಗೀಬಾತ್': ರಾಜಧಾನಿಯ ಬಡವರ ಪಾಲಿನ 'ಅನ್ನ ಭಾಗ್ಯ' ಇಂದಿರಾ ಕ್ಯಾಂಟೀನ್

samachara

samachara

ಅವರದ್ದು ಮೂರು ವರ್ಷಗಳಲ್ಲಿ 'ಮನ್ ಕಿ ಬಾತ್', ನಮ್ಮದು... ವಾಂಗೀಬಾತ್...

ಹೀಗಂತ ಹೇಳಿದ್ದು ಸಿಎಂ ಸಿದ್ದರಾಮಯ್ಯ. ಬೆಂಗಳೂರಿನ ಅಶೋಕ ಪಿಲ್ಲರ್ ಸಮೀಪದ 'ಇಂದಿರಾ ಕ್ಯಾಂಟೀನ್' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರನ್ನು ಮಾತುಗಳಲ್ಲಿ ಛೇಡಿಸಿದರು.

"ಇಂದಿರಾ ಗಾಂಧಿ ಬಡವರನ್ನು, ರೈತರನ್ನು ಬ್ಯಾಂಕ್ ಮೆಟ್ಟಿಲು ಹತ್ತುವಂತೆ ಮಾಡಿದ್ದರು. ಆದರೆ, ಡಿಮಾನಟೈಸೇಷನ್ ಹೆಸರಿನಲ್ಲಿ ಪ್ರಧಾನಿ ಮೋದಿ ಬ್ಯಾಂಕ್'ಗಳಿಂದ ಬಡವರನ್ನು, ರೈತರನ್ನು ದೂರ ಇಡಲು ಹೊರಟಿದ್ದಾರೆ. ಕಪ್ಪು ಹಣ ತರುತ್ತೇನೆ ಎಂದರು. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದರು. ಆದರೆ ಏನೂ ಆಗಲಿಲ್ಲ. ಎಷ್ಟು ಪ್ರಮಾಣದ ಕಪ್ಪು ಹಣ ಬ್ಯಾಂಕ್ಗಳಿಗೆ ಬಂದಿದೆ ಎಂಬ ಲೆಕ್ಕವೂ ಅವರ ಬಳಿ ಇಲ್ಲ. ಕಳೆದ ಮೂರು ವರ್ಷಗಳಲ್ಲಿ ಅವರದ್ದು ಬರೀ ಮನ್ ಕಿ ಬಾತ್ ಆಯಿತು. ನಮ್ಮದು ಈಗ ವಾಂಗೀಬಾತ್,'' ಎಂದರು.

"ದಕ್ಷಿಣ ಭಾರತದ ರಾಜ್ಯಗಳ ಪೈಕಿ ನಮ್ಮಲ್ಲಿ ಎರಡು ಹೊತ್ತಿನ ಊಟಕ್ಕೂ ಪರದಾಡುವ ಜನರ ಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ 1.08 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 7 ಕೆಜೆ ಅಕ್ಕಿಯನ್ನು ಉಚಿತವಾಗಿ ನೀಡಲು ಶುರುಮಾಡಿದೆವು. ಇದು ಚುನಾವಣೆ ಸಮಯದಲ್ಲಿ ಘೋಷಿಸಿದ ಯೋಜನೆ ಅಲ್ಲ. ಹಸಿವನ್ನು ತೊಡೆದು ಹಾಕುವ ನಿಟ್ಟನಲ್ಲಿ ನಮ್ಮ ಬದ್ಧತೆ ಇದು. ಇದರಿಂದಾಗಿ ರಾಜ್ಯದ 4 ಲಕ್ಷ ಜನ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ. ಇಂತಹ ಭೀಕರ ಬರಗಾಲದ ದಿನಗಳಲ್ಲಿಯೂ ಎಲ್ಲಿಯೂ ಹಸಿವಿನಿಂದ ಜನ ಸತ್ತ ಘಟನೆಗಳು ನಡೆದಿಲ್ಲ. ಅನ್ನಭಾಗ್ಯದಿಂದ ಗುಳೇ ಹೋಗುವುದು ಕಡಿಮೆಯಾಗಿದೆ,'' ಎಂದು ಸಿದ್ದರಾಮಯ್ಯ ಹೇಳಿದರು.

ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆಗೊಂಡ ನಂತರ ಅದರ ಹೆಸರು ಮತ್ತು ಅನುಷ್ಠಾನದ ವೇಳೆಯಲ್ಲಿ ವಿರೋಧಗಳು ಕೇಳಿಬಂದಿದ್ದವು. "70ರಲ್ಲಿ ಇಂದಿರಾ ಹಠಾವೋ ಎಂದು ವಿರೋಧ ಪಕ್ಷಗಳು ಘೋಷಣೆ ಮಾಡುತ್ತಿದ್ದಾಗ ಗರೀಭಿ ಹಠಾವೋ ಎಂದಿದ್ದವರು ಇಂದಿರಾ ಗಾಂಧಿ. ಅವರ ನೂರನೇ ಜನ್ಮಶತಮಾನೋತ್ಸವದ ವರ್ಷ ಇದು. ಅವರ ಬಡವರ ಬಗೆಗಿನ ಕಾಳಜಿಯನ್ನು ಸ್ಮರಿಸುವ ಕಾರಣಕ್ಕೆ ಕ್ಯಾಂಟೀನ್ಗೆ ಇಂದಿರಾ ಹೆಸರು ಇಡಲಾಗಿದೆ. ಇದಕ್ಕಾಗಿ ಸರಕಾರ ಆಟದ ಮೈದಾನ ಹಾಗೂ ಉದ್ಯಾನವನದ ಜಾಗಗಳನ್ನು ಆಕ್ರಮಿಸಿಕೊಳ್ಳುತ್ತಿದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಸರಕಾರ ಎಲ್ಲಿಯೂ ಉದ್ಯಾನವನ ಹಾಗೂ ಆಟದ ಮೈದಾನ ಎಂದು ಘೋಷಿಸಿದ ಜಾಗದಲ್ಲಿ ಕ್ಯಾಂಟೀನ್ಗಳನ್ನು ನಿರ್ಮಿಸಿಲ್ಲ,'' ಎಂದರು.

ಹಸಿವಿನ ಬಗ್ಗೆ ಅರಿವಿಲ್ಲದವರು ಇಲ್ಲಿಯೂ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ, "ಬಡವರ ಪರವಾದ ಯೋಜನೆಗಳನ್ನು ಆತುರವಾಗಿಯೇ ಜಾರಿಗೆ ತರಬೇಕಾಗುತ್ತದೆ. ಅದು ಬದ್ಧತೆ. ಅದರಲ್ಲಿ ವಿಳಂಬ ಮಾಡಬಾರದು. ತಮಿಳುನಾಡಿನ ಯೋಜನೆಯನ್ನು ನಕಲು ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಬಡವರ ಪರವಾದ ಯೋಜನೆಗಳು ಎಲ್ಲಿಯೇ ಬಂದರು ನಾವು ಕಾಪಿ ಮಾಡುತ್ತೇವೆ,'' ಎಂದರು. ಇದೇ ವೇಳೆ, ಬೆಂಗಳೂರಿನ ಉಳಿದ 97 ವಾರ್ಡ್ಗಳಲ್ಲಿ ಗಾಂಧಿ ಜಯಂತಿ ದಿನ ಕ್ಯಾಂಟೀನ್ಗಳು ಉದ್ಘಾಟನೆ ಮಾಡಲಾಗುವುದು ಹಾಗೂ ಇದೇ ಮಾದರಿಯ ಕಡಿಮೆ ಬೆಲೆಯ ಆಹಾರವನ್ನು ರಾಜ್ಯ ಜಿಲ್ಲಾ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದು ಘೋಷಿಸಿದರು.

ಇದಕ್ಕೂ ಮುಂಚೆ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, "ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಶುಚಿತ್ವ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಇದರಿಂದ ನಗರದ ಸಾಮಾನ್ಯ ಜನರಿಗೆ ಅನುಕೂಲವಾಗುತ್ತದೆ,'' ಎಂದರು.

ಸದ್ಯ ಬೆಂಗಳೂರಿನ 101 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ಗಳು ಆರಂಭಗೊಂಡಿವೆ. 5 ರೂಪಾಯಿಗೆ ಬೆಳಗ್ಗಿನ ಉಪಾಹಾರ ಹಾಗೂ 10 ರೂಪಾಯಿಗೆ ಮಧ್ಯಾಹ್ನದ ಹಾಗೂ ರಾತ್ರಿ ಊಟ ಸಿಗಲಿದೆ.